ಅಯ್ಯೋ ಅವನಿಗಿನ್ನೂ ಚಿಕ್ಕ ವಯಸ್ಸು, ರಾತ್ರಿ ಮಲಗಿದ್ದಲ್ಲೇ ಸತ್ತೋದಗಿದ್ನಂತೆ!, ಅಯ್ಯೋ, ಪ್ರೈವೆಟ್ ನನಗೇನು ಲಾಭ ಅಲ್ವಾ? ನಮ್ಮ ಕೊಳವೆಬಾವಿ ಮೋಟರ್ ಗೆ ಸ್ಮಾರ್ಟ್ ವಿದ್ಯುತ್ ಮೀಟರ್ ಹಾಕಲಿಕ್ಕೂ, ಅದಾನಿಗೋ, ಅಂಬಾನಿಗೂ, ಟಾಟಾಗೋ ಯಾರೊ ಕಂಪನಿಯನವರಿಗೇನು ಲಾಭ? ಅಯ್ಯೋ, ಇದೇನು ಈ ಮಾತ್ರೆ ಕೆಲ್ಸನೇ ಮಾಡಲ್ಲ?, ಬಿಡ್ಲೇ ಕೊಟ್ಟವರು ಕೋಡಂಗಿ, ಈಸ್ಕೋಂಡೋನು ಈರಭದ್ರ!
ಹಳ್ಳಿಕಟ್ಟೆಯ ಮೇಲೆ ಅಥವಾ ಸಿಟಿಯೊಳಗಿನ ಉಸಿರುಕಟ್ಟಿಸುವ ಮನೆಯೊಳಗೆ ಹೀಗೇ ಮಾತನಾಡಿಕೊಳ್ಳುವ, ಅಯ್ಯೋ ನಮ್ಮ ದೇಶ ಶ್ರೀಮಂತ ದೇಶ ಆಗೋದ್ಯಾವಾಗಾ? ದಿಲ್ಲಿಯಲ್ಲಿ ಬಿಸಿಲು ಹೆಚ್ಚಾದರೆ ನಮ್ಮೂರಲ್ಲಿ ಏಕೆ ಸೆಖೆ? ಇಂಥ ಪ್ರಶ್ನೆಗಳಿಗೆ ಸರಳ ಉತ್ತರ ಹೇಳಬೇಕೆನಿಸಿದರೆ ಅವರ ಕೈಗೆ ಪಿಟ್ಕಾಯಣ ಪುಸ್ತಕ ಕೊಟ್ಟರೆ ಸಾಕು.
ದೇಶಗಳನ್ನು ಸುಭದ್ರವಾಗಿ ಕಟ್ಟಬೇಕು. ನಮ್ಮ ಮುಂದಿನ ಮಕ್ಕಳು, ಮರಿಮಕ್ಕಳಾದರೂ ಸುಖವಾಗಿ (ಒಳ್ಳೆಯ ಭದ್ರತೆಯ ಉದ್ಯೋಗ, ಉತ್ತಮ ಮನೆ, ಖಚರ್ೆ ಇಲ್ಲದ ಉತ್ತಮ ಸಕರ್ಾರಿ ಆಸ್ಪತ್ರೆ, ಶಿಕ್ಷಣ, ಒಳ್ಳೆಯ ಪರಿಸರ) ಬದುಕಬೇಕೆಂದರೆ ಇಂಥ ಪಿಟ್ಕಾಯಣ ಪುಸ್ತಕಗಳು ಮನ, ಮನೆ ತಲುಪಬೇಕು. ಈ ಮೂಲಕ ಜನಸಾಮಾನ್ಯರಿಗೆ ನಮ್ಮ ಆಡಳಿತದ ನೀತಿಗಳು ಹೇಗೆ ನಮ್ಮನ್ನು ಕತ್ತು ಸೀಳುತ್ತಿವೆ, ರಾಜಕಾರಣಿಗಳು, ಮಧ್ಯವರ್ತಿಗಳು, ಕೆಲವೇ ಮಾಧ್ಯಮ ಸಂಸ್ಥೆಗಳು, ಕೆಲವೇ ಕಾರ್ಪೋರೇಟ್ ಕಂಪನಿಗಳು, ವಿದೇಶಿ ಸಖ್ಯದ ಕಂಪೆನಿಗಳು ಎಷ್ಟೆಷ್ಟು ಬೇಗ ಶ್ರೀಮಂತವಾಗುತ್ತವೆ ಎಂಬುದರ ರಹಸ್ಯ ತಿಳಿಸಲು ಯತ್ನಿಸುತ್ತವೆ ಇಲ್ಲಿನ ಲೇಖನಗಳು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆಡಳಿತದ ನೀತಿಗಳನ್ನು ಪ್ರಶ್ನೆ ಮಾಡುವುದು ಎಷ್ಟು ಮುಖ್ಯ ಎಂಬುದು ಅರಿವಾಗಲಿದೆ. ಪಿಟ್ಕಾಯಣ ಪುಸ್ತಕ ಓದುತ್ತಿದಂತೆ ಇಂಥ ಪುಸ್ತಕಗಳ್ಯಾಕೆ ವಿಶ್ವವಿದ್ಯಾನಿಲಯ, ಕಾಲೇಜುಗಳಿಗೆ ಪಠ್ಯವಾಗಬಾರದು ಎನಿಸಿದರೆ ಅದೇನು ಭಾವುಕ ಎನಿಸಲಾರದು.
ಹಲವು ಮಿತಿಗಳ ನಡುವೆ, ವಾರ್ತಾಭಾರತಿ ಪತ್ರಿಕೆಗೆ ಬರೆದಿರುವ ಅಂಕಣ ಬರಹಗಳ ಒಟ್ಟು ಸಂಕಲನವೇ ಈ ಪಿಟ್ಕಾಯಣ ಪುಸ್ತಕ. ಇಲ್ಲಿರುವ ಎಲ್ಲ ಅಂಕಣಗಳು ಸರ್ಕಾರದ ನೀತಿಗಳ ಬಗ್ಗೆ ಪ್ರಶ್ನೆ ಮಾಡುತ್ತವೆ. ಕೆಲವು ಬರಹಗಳು ಅಂಕಿ ಅಂಶಗಳನ್ನು ಮುಂದಿಡುತ್ತವೆ. ಕೆಲವು ಬರಹಗಳು ಅಚನಾಕಾಗಿ ಕೊನೆಗೊಂಡಂತಿವೆ. ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆಯಾದ ಬಹುರೂಪಿ ಈ ಪುಸ್ತಕವನ್ನು ಪ್ರಕಟಿಸಿದೆ.
ಮೊದಲೆಲ್ಲ ಸ್ವಾತಂತ್ರ್ಯ, ಸ್ವಾತಂತ್ರ್ಯ, ಯಾರಿಗೆ ಬಂತು ಸ್ವಾತಂತ್ರ್ಯ, ಟಾಟಾ, ಬಿರ್ಲಾರ ಜೇಬಿಗೆ ಬಂತು ಸ್ವಾತಂತ್ರ್ಯ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆಯ ವೇಳೆ ಕೂಗುತ್ತಿದ್ದರು. ಈಗ ಇದು ಹೇಗೆ ಬದಲಾಗಿದೆ, ಟಾಟಾ, ಬಿರ್ಲಾರ ಬದಲಿಗೆ ಯಾರ ಹೆಸರುಗಳು ಮುನ್ನೆಲೆಗೆ ಬಂದಿವೆ ಎಂಬುದನ್ನು ಹೇಳಬೇಕಾಗಿಲ್ಲ.
ಪಕ್ಷ ರಾಜಕೀಯವನ್ನು ಬದಿಗಿಟ್ಟು ಎಲ್ಲರೂ ಓದುವಂಥ, ಪ್ರಶ್ನೆ ಮಾಡುವಂಥ ಪುಸ್ತಕ ಇದಾಗಿದೆ. ಕಥೆ, ಕಾದಂಬರಿಯಂತೆ ಕುತೂಹಲಕಾರಿಯಾಗಿ ಎಲ್ಲೂ ನಿಲ್ಲಿಸದಂತೆ ಓದಿಸಿಕೊಂಡು ಹೋಗುತ್ತವೆ ಇಲ್ಲಿನ ಬರಹಗಳು.
ಈ ಬರಹಗಳನ್ನು ಬರೆಯಲು ಲೇಖಕರು ಯಾವ, ಯಾವ ಮೂಲಗಳಿಂದ ಮಾಹಿತಿಗಳನ್ನು ತೆಗೆದಿದ್ದಾರೆ, ಸಂಗ್ರಹಿಸಿದ್ದಾರೆ ಎಂಬುದನ್ನು ಅವರ ಮಾತುಗಳಲ್ಲೇ ಓದಿಕೊಳ್ಳಬಹುದಾಗಿದೆ.
ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಈ ಪುಸ್ತಕದ ಲೇಖಕರು. ಪಿಟ್ಕಾಯಣ ಹೆಸರು ಹೇಗೆ ಬಂತು ಎಂಬುದು ಪುಸ್ತಕದ ಆರಂಭದಲ್ಲೇ ರಾಮಾಯಣ ಕಾಲಕ್ಕೆ ಸಂಬಂಧಿಸಿದಂತೆ ರಾಜ್ಯದ ಕರಾವಳಿ ಭಾಗದಲ್ಲಿ ಚಾಲ್ತಿಯಲ್ಲಿದ್ದ ಕಥೆಯೊಂದರ ಹಿನ್ನೆಲೆಯಲ್ಲಿ ಈ ಪದದ ಅರ್ಥವನ್ನು ಲೇಖಕರೇ ವಿವರಿಸಿದ್ದಾರೆ. ಹೀಗಾಗಿ ಪುಸ್ತಕ ಕೊಂಡು ಓದಿದಾಗಲೇ ಅದು ನಿಮಗೆ ಗೊತ್ತಾದರೆ ಚೆನ್ನ.
ಸಂವಾದಕ್ಕೆ ಎಳೆಯುವ ಶಕ್ತಿಯೂ ಈ ಪುಸ್ತಕಕ್ಕೆ ಇದೆ. ಅದನ್ನು ಯಾರೂ ಬೇಕಾದರೂ ಮಾಡಬಹುದು. ಸಂವಾದಗಳೇ ಪ್ರಜಾಪ್ರಭುತ್ವದ ಶಕ್ತಿ. ಪುಸ್ತಕ ಎಲ್ಲರ ಮನೆ ತಲುಪಲಿ. ಎಲ್ಲ ದಿಕ್ಕುಗಳಿಂದಲೂ ಈ ಪುಸ್ತಕಕ್ಕೆ ಪ್ರಶ್ನೆಗಳು, ಉತ್ತರಗಳು ಬಂದ್ದಲ್ಲಿ ನಾಡುಕಟ್ಟುವ ಪ್ರಕ್ರಿಯೆಗೆ ಒಂದಿಷ್ಟು ಶಕ್ತಿ ತುಂಬಿದಂತಾಗುತ್ತದೆ.
ಬಹುರೂಪಿಯ ಆನ್ ಲೈನ್ ಜಾಲತಾಣದ ಮೂಲಕವು ಪುಸ್ತಕವನ್ನು ತರಿಸಿಕೊಳ್ಳಬಹುದಾಗಿದೆ. ಪುಸ್ತಕದ ಬೆಲೆ ರೂ.300.