Publicstory/prajayoga
ತುಮಕೂರು: ನೇಕಾರರ ಸಮುದಾಯ ಶಿಕ್ಷಣ ಮತ್ತು ರಾಜಕಾರಣ ಕ್ಷೇತ್ರದಲ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದು, ನೇಕಾರರ ಒಕ್ಕೂಟದ ಹೆಸರಿನಲ್ಲಿ ಒಂದಾಗಿರುವ ನೇಕಾರ ಸಮುದಾಯಗಳು ಮುಂದಿನ ದಿನಗಳಲ್ಲಿ ತಮ್ಮ ರಾಜಕೀಯ ಶಕ್ತಿ ಏನು ಎಂಬುದನ್ನು ತೋರಿಸಬೇಕಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ತಿಳಿಸಿದರು.
ನಗರದ ಹೊರಪೇಟೆಯ ಶ್ರೀನೀಲಕಂಠೇಶ್ವರ ಸಮುದಾಯ ಭವನದಲ್ಲಿ ತುಮಕೂರು ಜಿಲ್ಲಾ ನೇಕಾರರ ಒಕ್ಕೂಟದಿಂದ ಬುಧವಾರ ಆಯೋಜಸಿದ್ದ ರಾಷ್ಟ್ರೀಯ ನೇಕಾರರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಸೇರಿದಂತೆ ನಾಲ್ಕು ಜನರಿಲ್ಲ. ಇಂತಹವರಿಗೆ ಅಧಿಕಾರ ನೀಡಲು ಸಾಧ್ಯವೇ ಎಂದು ಹೀಯಾಳಿಸುವವರಿಗೆ ಮುಂದಿನ ದಿನಗಳಲ್ಲಿ ನಮ್ಮ ಶಕ್ತಿ ಏನು ಎಂಬುದನ್ನು ತೋರ್ಪಡಿಸುವ ಗುರುತರ ಜವಾಬ್ದಾರಿ ಎಲ್ಲಾ ನೇಕಾರ ಬಂಧುಗಳ ಮೇಲಿದೆ ಎಂದರು.
ನೇಕಾರರು ತಮ್ಮ ಶ್ರಮವನ್ನೇ ನಂಬಿ ಬದುಕುತ್ತಿದ್ದಾರೆ. ಆದರೆ ಮಧ್ಯವರ್ತಿಗಳ ಹಾವಳಿಯಿಂದ ಅಂದಿನ ಕೂಲಿಯೂ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಕೋವಿಡ್ನಿಂದ ಆದ ಅರ್ಥಿಕ ನಷ್ಟದಿಂದ ಕಂಗಾಲಾಗಿದ್ದ ಸಮುದಾಯವನ್ನು, ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ನೈಲಾನ್ ಮತ್ತು ಪಾಲಿಸ್ಟರ್ನಿಂದ ತಯಾರಿಸಿ ವಿದೇಶದಲ್ಲಿ ತಯಾರಾದ ಬಾವುಟವನ್ನು ತರಿಸುವ ಮೂಲಕ ನಮ್ಮ ಹೊಟ್ಟೆಯ ಮೇಲೆ ಹೊಡೆದಿದ್ದಾರೆ. ನೆರೆಯ ತಮಿಳುನಾಡಿನಲ್ಲಿ ನೇಕಾರರಿಗೆ ಉಚಿತ ವಿದ್ಯುತ್, ಮಗ್ಗ ಹಾಗೂ ವಸತಿಯನ್ನು ನೀಡುವುದರ ಜೊತೆಗೆ, ನೇಕಾರರ ಮಕ್ಕಳಿಗೆ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಚುನಾವಣೆ ಸಮಯದಲ್ಲಿ ಮಾತ್ರ ನೇಕಾರರು ನೆನಪಾಗುತ್ತಾರೆ. ಯಾವುದೇ ಪಕ್ಷವಿರಲಿ, ನಮ್ಮ ಸಮುದಾಯಕ್ಕೆ ಅವಕಾಶ ಸಿಕ್ಕರೆ ಎಲ್ಲರೂ ಒಗ್ಗೂಡಿ ಅವರ ಗೆಲುವಿಗೆ ಶ್ರಮಿಸಿ. ನಮ್ಮ ರಾಜಕೀಯ ಪ್ರಾತಿನಿಧ್ಯ ಹೊಂದಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರು ಹೆಚ್ಚಿನ ಸಂಘಟನೆಯಲ್ಲಿ ತೊಡಗುವಂತೆ ಧನಿಯಕುಮಾರ್ ಸಲಹೆ ನೀಡಿದರು.
ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ನೇಕಾರರ ಸಮುದಾಯಕ್ಕೆ ಸುಮಾರು 4000 ವರ್ಷಗಳ ಇತಿಹಾಸವಿದೆ. ಸಿಂಧು ಕಣಿವೆ ಮತ್ತು ಹರಪ್ಪ, ಮಹೆಂಜೋದಾರೋ ನಾಗರಿಕತೆಯ ವೇಳೆಯಲ್ಲಿಯೇ ನೇಕಾರಿಕೆ ಇತ್ತು. ವಸ್ತೋದ್ಯಮ ಇಂದು ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ. ದೇಶದ 29 ರಾಜ್ಯಗಳಲ್ಲಿ 27 ವಿವಿಧ ರೀತಿಯ ಬಟ್ಟೆಗಳನ್ನು ನೇಯ್ಗೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಇಂದಿಗೂ 25 ಲಕ್ಷ ಮಗ್ಗಗಳಿದ್ದು, 45-50 ಲಕ್ಷ ಜನರಿಗೆ ನೇರವಾಗಿ, ಕೋಟ್ಯಾಂತರ ಜನರಿಗೆ ಪರೋಕ್ಷವಾಗಿ ಅನ್ನನೀಡುತ್ತಿದೆ. ಹಾಗಾಗಿ ಸರ್ಕಾರ ನೇಕಾರರಿಗೆ ರಿಯಾಯಿತಿ ದರದಲ್ಲಿ ಕಚ್ಚಾವಸ್ತು ನೀಡಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸಬೇಕು. ಹಾಗೆಯೇ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ನೇಕಾರರ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಜಯಜಯಲಕ್ಷ್ಮಿಸವರಾಜು ಮಾತನಾಡಿ, ರಾಜ್ಯದಲ್ಲಿ ನೇಕಾರರ ಸಮುದಾಯದ 27 ಉ ಪಂಗಡ ಹಾಗೂ 6ಪಪಂಗಡಗಳು ಸೇರಿ 70 ಲಕ್ಷ ಜನಸಂಖ್ಯೆ ಇದ್ದೇವೆ. ಇಷ್ಟು ದೊಡ್ಡ ಜನಸಂಖ್ಯೆ ಇದ್ದರೂ ಎಂಡಿಎಲ್ ಮತ್ತು ಕೆ.ಸಿ.ಕೊಂಡಯ್ಯ ಅವರುಗಳನ್ನು ಹೊರತು ಪಡಿಸಿದರೆ ಬೇರೆ ಜನಪ್ರತಿನಿಧಿಗಳಿಲ್ಲ. ಒಕ್ಕೂಟದ ರಾಜ್ಯಾಧ್ಯಕ್ಷರ ಮುಂದೆ ದೊಡ್ಡ ಸವಾಲಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿ, ಎಲ್ಲರಿಗೂ ನ್ಯಾಯ ದೊರಕಿಸಿಕೊಡಲಿ ಎಂದರು.
ರಾಜ್ಯ ನೇಕಾರರ ಒಕ್ಕೂಟದ ರಾಜ್ಯಾಧ್ಯಕ್ಷ ಸೋಮಶೇಖರ್ ಮಾತನಾಡಿ, ರಾಜ್ಯದಲ್ಲಿ ಉಪಪಂಗಡದ ಹೆಸರಿನಲ್ಲಿ ಹರಿದು ಹಂಚಿ ಹೋಗಿರುವ ನೇಕಾರರ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶದಿಂದ ನೇಕಾರರ ಸಮುದಾಯಗಳ ಒಕ್ಕೂಟವನ್ನು ರಚಿಸಲಾಗಿದೆ. ಇದನ್ನು ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಕ್ರಿಯವಾಗಿ ಕಟ್ಟುವ ಮೂಲಕ ನಮ್ಮ ಶಕ್ತಿಯನ್ನು ಆಳುವ ಸರ್ಕಾರಗಳಿಗೆ ತೋರಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳನ್ನು ಪುನರ್‌ರಚಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.70 ಲಕ್ಷ ದಷ್ಟು ಜನಸಂಖ್ಯೆ ಇರುವ ನೇಕಾರ ಸಮುದಾಯಕ್ಕೆ ಬೆಂಗಳೂರಿನಲ್ಲಿ ಒಂದು ಭವನ ಕಟ್ಟಬೇಕೆಂಬುದು ನಮ್ಮ ಮಹದಾಸೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ನಿವೇಶನ ಮತ್ತು ಅನುದಾನಕ್ಕೆ ಮನವಿ ಮಾಡಲಾಗಿದೆ. ನಿಮ್ಮೆಲ್ಲರ ಸಹಕಾರದಿಂದ ಬಹುದಿನದ ಕನಸು ನನಸಾಗಲಿದೆ ಎಂದರು.
ಇದೇ ವೇಳೆ ನೇಕಾರರ ಸಮುದಾಯದ ಅಭಿವೃದ್ದಿಗೆ ದುಡಿದ ಟಿ.ಬಿ.ಚೌಡೇಶ್, ಎಸ್.ಎನ್.ರಂಗಸ್ವಾಮಿ, ಪಿ.ರಾಮಕೃಷ್ಣ, ಶ್ರೀಮತಿ ಕಮಲಮ್ಮ ಅವರುಗಳನ್ನು ಸನ್ಮಾನಿಸಲಾಯಿತು.
ತುಮಕೂರು ಜಿಲ್ಲಾ ನೇಕಾರರ ಒಕ್ಕೂಟವನ್ನು ಪುನಃರಚಿಸಲಾಯಿತು.ಗೌರವ ಅಧ್ಯಕ್ಷರಾಗಿ ಟಿ.ಎಚ್.ಶಿವಾ ನಂದ್,ಅಧ್ಯಕ್ಷರಾಗಿ ಧನಿಯಕುಮಾರ್, ಉಪಾಧ್ಯಕ್ಷರುಗಳಾಗಿ ಕರಿಯಪ್ಪ, ಎನ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ಆರ್.ರಾಮಕೃಷ್ಣಯ್ಯ, ಸಂಘಟನಾ ಕಾರ್ಯದರ್ಶಿಯಾಗಿ ಅನಿಲ್ಕುಮಾರ್.ಆರ್, ಖಜಾಂಚಿಯಾಗಿ ಚೌಡಯ್ಯ ಅವರುಗಳನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಪಾಲಿಕೆ ಸದಸ್ಯೆ ಶ್ರೀಮತಿ ಗಿರಿಜಾ ಎಸ್.ವಿ.ವೆಂಕಟೇಶ್,ರವೀಂದ್ರಕುಮಾರ್,ಪಿ.ಶ್ರೀಧರ್, ಟಿ.ಆರ್.ಭಾಸ್ಕರ್, ಆರ್.ಅನಿಲ್ ಕುಮಾರ್, ಶ್ರೇಯಸ್ ಮಣಿಕಂಠ, ಟಿ.ಎನ್.ಕೇಶವ್, ಯೋಗಾನಂದ, ಲಿಂಗರಾಜು,ರಂಗಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.