Publicstory/prajayoga
ತುಮಕೂರು: ಸರ್ಕಾರದ ಕೃಷಿ ಯಂತ್ರಧಾರೆ ಯೋಜನೆಯಡಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಸೇವೆ ಒದಗಿಸಬೇಕಾದ ಏಜನ್ಸಿಗಳು ರೈತರಿಂದ ದುಪ್ಪಟ್ಟು ದರ ವಸೂಲಿ ಮಾಡಿ ಮೋಸ ಮಾಡುತ್ತಿರುವುದಲ್ಲದೆ, ಕಡಿಮೆ ಗುಣಮಟ್ಟದ ಯಂತ್ರಗಳನ್ನು ಖರೀದಿ ಮಾಡಿ ಕೋಟ್ಯಾಂತರ ರೂ. ಅವ್ಯವಹಾರದಲ್ಲಿ ತೊಡಗಿದ್ದು, ಇದರ ಕುರಿತು ಉನ್ನತ ಮಟ್ಟದ ತನಿಖೆಗೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಭಾರತೀಯ ಕೃಷಿಕ ಸಮಾಜದ ಕೋಡಿಹಳ್ಳಿ ಜಗದೀಶ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲೆಯ 60 ಹೋಬಳಿಗಳಲ್ಲಿ ಕೃಷಿ ಯಂತ್ರಧಾರೆ ಏಜೆನ್ಸಿಗಳು ಕೆಲಸ ಮಾಡುತ್ತಿದ್ದು,ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲವಾಗುವಂತೆ ಸರ್ಕಾರ ನಿಗಧಿಪಡಿಸಿದ ರಿಯಾಯಿತಿ ದರದಲ್ಲಿ ರೈತರಿಗೆ ಸೇವೆ ಒದಗಿಸಬೇಕಾದ ಏಜೆನ್ಸಿಯವರು ಒಂದಕ್ಕೆ ಒಂದುವರೆ ಪಟ್ಟು ಬಾಡಿಗೆ ವಸೂಲಿ ಮಾಡಿ, ರಸೀದಿಯನ್ನು ನೀಡದೆ ರೈತರಿಗೆ ಜೊತೆಗೆ ಸರ್ಕಾರಕ್ಕೂ ಮೋಸ ಮಾಡುತ್ತಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ ಎಂದರು.
ಸರಕಾರ 70;30ರ ಅನುಪಾತದಲ್ಲಿ ಸುಮಾರು ೮ ಕೋಟಿ ರೂಗಳ ಯಂತ್ರೋಪರಣಗಳನ್ನು ಈ ಯೋಜನೆಯಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಗೆ 11 ಹೋಬಳಿ,ವಿ.ಎಸ್.ಟಿ ಟ್ರಾಕ್ಟರ್ ಮತ್ತು ಟಿಲ್ಲರ್ಗೆ 20 ಹೋಬಳಿ ಮತ್ತು ವರ್ಷ ಅಸೋಸಿಯೇಟ್ಸ್ಗೆ 18 ಹೋಬಳಿಗಳಲ್ಲಿ ಕೃಷಿ ಯಂತ್ರಧಾರೆ ನಿರ್ವಹಣೆಯ ಹೊಣೆ ನೀಡಿದೆ.ಅಲ್ಲದೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ಅಧ್ಯಕ್ಷತೆಯಲ್ಲಿ ಯಂತ್ರೋಪಕರಣಗಳ ಸ್ಥಳೀಯ ಬಾಡಿಗೆಯನ್ನು ಆಧರಿಸಿ, ಬಾಡಿಗೆ ದರವನ್ನು ನಿಗಧಿ ಮಾಡಿದೆ. ಹೀಗಿದ್ದರೂ ಹೆಬ್ಬೂರು ಹೋಬಳಿಯ ಧರ್ಮಸ್ಥಳ ಸಂಸ್ಥೆಯ ಕೃಷಿ ಯಂತ್ರಧಾರೆ ಏಜೆನ್ಸಿಯಿಂದ 42ಬ್ಲೆಡ್ನ ರೋಟೋ ವೆಟರ್ಗೆ ಒಂದು ಗಂಟೆಗೆ 700ರೂ ಬಾಡಿಗೆ ಬದಲು 1200 ರೂ ಪಡೆಯಲಾಗಿದೆ. ಕೆಲವು ಕಡೆಗಳಲ್ಲಿ ಕೃತಕ ಬೇಡಿಕೆ ಸೃಷ್ಟಿಸಿ 1500 ರೂ.ಗಳವರೆಗೆ ಬಾಡಿಗೆ ಪಡೆದು, ರಸೀದಿಯನ್ನು ನೀಡದೇ ವಂಚಿಸಲಾಗುತ್ತಿದೆ. ಇದ
ಹಿಂದೆ ಕೃಷಿ ಅಧಿಕಾರಿಗಳು ಮತ್ತು ಏಜೆನ್ಸಿಯವರ ಪಾತ್ರವಿದ್ದು, ಸಮಗ್ರ ತನಿಖೆಗೆ ನಡೆಸಿದರೆ ಸತ್ಯಾಂಶ ಹೊರಬರಲಿದೆ ಎಂದರು.
ರೈತರಿಗೆ ಕೃಷಿ ಯಂತ್ರಧಾರೆ ಏಜೆನ್ಸಿಗಳಿಂದ ಆಗುತ್ತಿರುವ ಅನ್ಯಾಯವನ್ನು ಗುರುತಿಸುವ ನಿಟ್ಟಿನಲ್ಲಿ ಭಾರತೀಯ ಕೃಷಿಕ ಸಮಾಜ ಕೆಲ ಏಜೆನ್ಸಿಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ಸರ್ಕಾರದಿಂದ ಮಾಡಿದ ಹೊಸ ಯಂತ್ರಗಳ ಬದಲು, ಐದಾರು ವರ್ಷಗಳ ಕಾಲ ಈಗಾಗಲೇ ಉಳುಮೆ ಮಾಡಿರುವ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಇನ್ನೂ ಕೆಲವು ಕಡೆ ಹೊಸ ಯಂತ್ರಗಳನ್ನು ರೈತರಿಗೆ ತಿಳಿಯದಂತೆ ಮುಚ್ಚಿಟ್ಟು, ಹಳೆಯ ಯಂತ್ರಗಳನ್ನು ದುಪ್ಪಟ್ಟು ಬಾಡಿಗೆ ಪಡೆದು ನೀಡಲಾಗುತ್ತಿದೆ. ಐದು ವರ್ಷಗಳ ನಂತರ ಹಾಲಿ ಯಂತ್ರಗಳ ಬದಲು ಹೊಸ ಯಂತ್ರ ಖರೀದಿ ನೆಪದಲ್ಲಿ ಈ ಹಿಂದೆ ಖರೀದ ಮಾಡಿದ್ದ ಯಂತ್ರಗಳನ್ನೇ ಪುನಃ ನಮೂದಿಸಿ, ಲಕ್ಷಾಂತರ ರೂ ಅವ್ಯವಹಾರ ನಡೆಸಿದ್ದಾರೆ. ಇದರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆದು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಆಗಬೇಕೆಂಬುದು ಭಾರತೀಯ ಕೃಷಿಕ ಸಮಾಜದ ಒತ್ತಾಯವಾಗಿದೆ ಎಂದು ಕೋಡಿಹಳ್ಳಿ ಜಗದೀಶ್ ತಿಳಿಸಿದರು.
ಭಾರತೀಯ ಕೃಷಿಕ ಸಮಾಜದ ಮಹಿಳಾ ಘಟಕದ ಅಧ್ಯಕ್ಷ ಸಂಧ್ಯ.ಸಿ.ಟಿ ಮಾತನಾಡಿ, ಸರ್ಕಾರ ನಿಗಧಿ ಪಡಿಸಿರುವ ಕೃಷಿ ಯಂತ್ರಧಾರೆಯ ಬಾಡಿಗೆ ದರವನ್ನು ಪ್ರತಿ ರೈತ ಸಂಪರ್ಕ ಕೇಂದ್ರ ಹಾಗೂ ಏಜೆನ್ಸಿಯ ಮುಂದೆ ಪ್ರದರ್ಶಿಸಬೇಕು ಎಂಬ ನಿಯಮವಿದೆ. ಆದರೆ ಇದುವರೆಗೂ ಒಂದು ಆರ್.ಎಸ್.ಕೆ. ಮುಂದೆಯೂ ದರ ಪಟ್ಟಿ ಪ್ರಕಟಿಸಿಲ್ಲ.ಇದರಿಂದ ರೈತರು ವಿಧಿಯಿಲ್ಲದೆ ಹೆಚ್ಚಿನ ದರ ನೀಡಿ ಮೋಸ ಹೋಗುತ್ತಿದ್ದಾರೆ. ದರ ಪಟ್ಟಿ ಪ್ರದರ್ಶನಕ್ಕೆ ಕೃಷಿ ಇಲಾಖೆ ಮುಂದಾಗಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಭಾರತೀಯ ಕೃಷಿಕ ಸಮಾಜದ ಗೌರವಾಧ್ಯಕ್ಷ ಪುಟ್ಟರಾಜು, ಉಪಾಧ್ಯಕ್ಷ ಶ್ರೀನಿವಾಸಮೂರ್ತಿ.ಎ.ಎಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್ ಬಿ.ಎಂ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.