Publicstory/prajayoga
ತುರುವೇಕೆರೆ : ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್‌ನಲ್ಲಿ ಆಗಸ್ಟ್ 25 ರಂದು ಚುಂಚಾದ್ರಿ ರೈತ ಸಂತೆ ಉಧ್ಘಾಟನೆ, ಆದಿ ಚುಂಚನಗಿರಿ ಸಮುದಾಯ ಭವನದ ಶಂಕು ಸ್ಥಾಪನೆ, ಹಾಗೂ ಮಾಜಿ ಶಾಸಕ ದಿ.ಬಿ.ಭೈರಪ್ಪಾಜಿಯವರ ಕಂಚಿನ ಪುತ್ಥಳಿ ಪುನರ್ ಪ್ರತಿಷ್ಠಾಪನಾ ಸಮಾರಂಭವು ನಡೆಯಲಿದೆ ಎಂದು ರಾಜ್ಯ ರೈತ ಸಂಘದ ವರಿಷ್ಟ ಕೆ.ಟಿ.ಗಂಗಾಧರ್ ತಿಳಿಸಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಮಾಯಸಂದ್ರ ಶಾಖೆ ಹಾಗೂ ಬಿ.ಭೈರಪ್ಪಾಜಿ ಪ್ರತಿಷ್ಠಾನ ತುರುವೇಕೆರೆ ವತಿಯಿಂದ ಮಾಯಸಂದ್ರ ಟಿ.ಬಿ.ಕ್ರಾಸ್‌ನ ಕಾಲಭೈರವೇಶ್ವರ ಕಲ್ಪತರು ಆಶ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.25ರಂದು ಜೋಡುಗಟ್ಟೆಯಿಂದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರನ್ನು ಬೈಕ್ ರ‍್ಯಾಲಿಯ ಮೂಲಕ ತಾಲೂಕಿನ ಗಡಿ ಭಾಗದಲ್ಲಿ ಸ್ವಾಗತಿಸಲಾಗುವುದು. ಮಾಯಸಂದ್ರ ಟಿ.ಬಿ.ವೃತ್ತದಲ್ಲಿ ಮಾಜಿ ಶಾಸಕ ದಿ. ಬಿ.ಭೈರಪ್ಪಾಜಿಯವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸುವ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಚುಂಚಾದ್ರಿ ರೈತಸಂತೆಗೆ ಚಾಲನೆ ಹಾಗೂ ಆದಿಚುಂಚನಗಿರಿ ಸಮುದಾಯ ಭವನಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರೊ.ಪುಟ್ಟರಂಗಪ್ಪರವರು ರಚಿಸಿರುವ ರೈತಬಂಧು ಬೈರಪ್ಪಾಜಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಆದಿ ಚುಂಚನಗಿರಿ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿಗಳು, ಶಾಸಕ ಮಸಾಲಜಯರಾಮ್, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಮಾಜಿ ಶಾಸಕರುಗಳು, ರೈತರುಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಸಸ್ಯ ಸಂಜೀವಿನಿ ಪ್ರತಿಷ್ಠಾನದ ಶ್ರೀಕಂಠಯ್ಯ, ಪ್ರೊ.ಪುಟ್ಟರಂಗಪ್ಪ, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಜಿ.ಪಂ.ಮಾಜಿ ಸದಸ್ಯ ಎನ್.ಆರ್.ಜಯರಾಮ್,ಕುಶಾಲ್‌ಕುಮಾರ್, ಬಿ. ಬೆಟ್ಟಸ್ವಾಮಿ, ಮತ್ತಿತರಿದ್ದರು.