Publicstory/prajayoga
-ವರದಿ, ರಂಗನಾಥ್ ಕೆ.ಆರ್. ಕುಣಿಗಲ್
ಕುಣಿಗಲ್ : ಯುವ ವಿದ್ಯಾರ್ಥಿಗಳ ಉತ್ತಮ ಆರೋಗ್ಯ, ದೈಹಿಕ ಬೆಳವಣಿಗೆಗೆ, ಕ್ರೀಡೆ ಅತ್ಯ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ, ಖುಷಿಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ತಿಳಿಸಿದರು.
ಶನಿವಾರ ಅಮೃತೂರು, ಹೊಸಕೆರೆ ಟಿ.ಮಠ ಸರ್ಕಾರಿ ಪದವಿ ಪೂರ್ವ ಕಾಲೇಜು, ಜ್ಞಾನಭಾರತಿ, ಎಡಿಯೂರು ಸಿದ್ದಲಿಂಗೇಶ್ವರ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಜ್ಞಾನ ಭಾರತಿ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಿದ್ದ 20222-23 ಸಾಲಿನ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಉಪನ್ಯಾಸಕರು ಹಾಗೂ ಪೋಷಕರು ಉತ್ತೇಜನ ನೀಡಬೇಕು. ಮಕ್ಕಳಿಗೆ ಆಸಕ್ತಿ ಇರುವ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ಹೇಳಿದರು.
ಈ ಹಿಂದೆ ವಾಹನಗಳ ಸೌಲಭ್ಯವಿಲ್ಲದೆ ಗ್ರಾಮೀಣ ಪ್ರದೇಶದ ಮಕ್ಕಳು ಹತ್ತಾರು ಕಿ.ಮೀ ದೂರ ನಡೆದು ವಿದ್ಯಾಭ್ಯಾಸ ಮಾಡಬೇಕಾಗಿತ್ತು. ಆದರೆ ಈ ಪರಿಸ್ಥಿತಿ ಈಗ ಇಲ್ಲ. ಎಲ್ಲಾ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಓದುವುದರ ಜತೆಗೆ ಕ್ರೀಡೆಯನ್ನು ಮೈಗೂಡಿಸಿಕೊಂಡು, ಉತ್ತಮ ತರಬೇತಿ ಪಡೆದು ಉತ್ತಮ ಕ್ರೀಡಾ ಪಟುಗಳು ಆಗುವ ಜತೆಗೆ ಶಿಸ್ತು, ಸಂಯಮ ಪರಿಪಾಲನೆಗೆ ಹೆಚ್ಚು ಒತ್ತು ನೀಡಬೇಕು. ಕಷ್ಟ ಏನೆಂಬುದನ್ನು ಅರಿತುಕೊಳ್ಳಬೇಕು. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ತಂದೆ, ತಾಯಂದಿರಿಗೆ ಮೋಸ ಮಾಡಬಾರದು. ಅವರ ಕನಸ್ಸನ್ನು ನನಸ್ಸಾಗಿ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಶಾಸಕರು ಸಲಹೆ ನೀಡಿದರು.
ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಪಟುಗಳು ತನ್ನದೆಯಾದ ಸಾಧನೆ ಮಾಡಿದ್ದಾರೆ, ಕ್ರಿಕೆಟ್, ಹಾಕಿ, ಅಥ್ಲೆಟೆಕ್ಸ್, ಬಾಕ್ಸಿಂಗ್, ಕಬ್ಬಡಿ ಸೇರಿದಂತೆ ಇನ್ನೂ ಹಲವಾರು ಕ್ರೀಡೆಯಲ್ಲಿ ಸಾಧನೆ ಮಾಡಿರುವ ಕ್ರೀಡಾ ಪಟುಗಳ ಸಾಧನೆಯನ್ನು ವಿದ್ಯಾರ್ಥಿಗಳು ಅನುಸಿರಿಸಿ ಅವರಂತೆ ಉತ್ತಮ ಕ್ರೀಡಾಪಟುಗಳಾಗಿ ರಾಜ್ಯಕ್ಕೆ ಒಳ್ಳೆಯ ಹೆಸರು ತರಬೇಕೆಂದು ತಿಳಿಸಿದರು.
ತಹಶೀಲ್ದಾರ್ ಮಹಬಲೇಶ್ವರ ಮಾತನಾಡಿ, ಇತ್ತೀಚಿಗೆ ಸರ್ಕಾರ ಆದೇಶ ಒಂದನ್ನು ಹೊರಡಿಸಿ ಉದ್ಯೋಗದಲ್ಲಿ ಕ್ರೀಡಾ ಪಟುಗಳಿಗೆ ಶೇ 2ರಷ್ಟು ಮೀಸಲಿಟ್ಟಿದೆ. ಹಾಗಾಗಿ ವಿದ್ಯಾರ್ಥಿಗಳು ಉತ್ತಮ ಕ್ರೀಡಾ ಪಟುಗಳಾಗಿ ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪದಕ ಪಡೆದು ತಾಲೂಕಿಗೆ ಕೀರ್ತಿ ತರಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಜಿ.ಆರ್.ರಮೇಶ್, ಪುರಸಭಾ ಅಧ್ಯಕ್ಷ ರಂಗಸ್ವಾಮಿ, ಗ್ರಾ.ಪಂ ಅಧ್ಯಕ್ಷ ಎಡಿಯೂರು ದೀಪು, ಒಕ್ಕಲಿಗ ಸಂಘದ ತಾಲೂಕು ಅಧ್ಯಕ್ಷ ರಾಜಣ್ಣ(ನಂಜುಡಯ್ಯ), ಕಾರ್ಯದರ್ಶಿ ಹುಚ್ಚೇಗೌಡ, ಕಾಲೇಜು ಪ್ರಾಚಾರ್ಯರಾದ ಡಾ.ಕಪನಿಪಾಳ್ಯರಮೇಶ್, ಗೋವಿಂದೇಗೌಡ, ಗೋಪಾಲ್ಮರಕಾಲ್, ಕೆ.ಆರ್.ಗೋವಿಂದರಾಜು, ಕೆ.ಪ್ರಭಾಕರ್ರೆಡ್ಡಿ, ಸಿ.ಸಿ.ಶಿವಣ್ಣ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗೋಪಾಲಕೃಷ್ಣ ಮತ್ತಿತರರು ಭಾಗವಹಿಸಿದರು.