Publicstory/prajayoga
ತುಮಕೂರು: ಕೇಂದ್ರ ಸರ್ಕಾರ ಖಾದಿ ಧ್ವಜಗಳನ್ನು ಬದಿಗೆ ಸರಿಸಿ ಪ್ಲಾಸ್ಟಿಕ್ ಮತ್ತು ಪಾಲಿಯಸ್ಟರ್ ಧ್ವಜಗಳನ್ನು ಬಳಸುವಂತೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಹಾಗೂ ಖಾದಿ ಬಾವುಟ ಬಳಸಲು ಒತ್ತಾಯಿಸಿ ಇದೇ ಆ.12 ರಂದು (ಶುಕ್ರವಾರ) ಧ್ವಜ ಸತ್ಯಾಗ್ರಹ ನಡೆಯಲಿದೆ.
ಗ್ರಾಮ ಸೇವಾ ಸಂಘ, ಜನ ಸಂಗ್ರಾಮ ಪರಿಷತ್, ಸರ್ವೋದಯ ಮಂಡಳಿ, ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ವಿವಿಧ ಸಂಘಟನೆಗಳೊಂದಿಗೆ ಈ ನೀತಿಯ ವಿರುದ್ಧ ಪ್ರತಿಭಟಿಸಲು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ತುಮಕೂರಿನ ಮಂಡಿಪೇಟೆ ಸಮೀಪದ ಸ್ವಾತಂತ್ರ್ಯ ಚೌಕದಲ್ಲಿ ಧ್ವಜ ಸತ್ಯಾಗ್ರಹವನ್ನು ಆಯೋಜಿಸಲಾಗಿದೆ.
ಸ್ವತಂತ್ರ ಚೌಕದಿಂದ ಸತ್ಯಾಗ್ರಹಿಗಳು ಕೋತಿ ತೋಪಿನಲ್ಲಿರುವ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾನಿಕೇತನದವರೆಗೆ ಪಾದಯಾತ್ರೆ ನಡೆಸಿ ಅಲ್ಲಿ ಸತ್ಯಾಗ್ರವನ್ನ ಅಂತಿಮಗೊಳಿಸಲಿದ್ದಾರೆ.
ಸತ್ಯಾಗ್ರಹದಲ್ಲಿ ಹಿರಿಯ ರಂಗಕರ್ಮಿ ಚರಕ ಖ್ಯಾತಿಯ ಪ್ರಸನ್ನ ಹೆಗ್ಗೋಡು ಮತ್ತು ಅನೇಕ ಗಾಂಧಿವಾದಿಗಳು, ಸಹಜ ಬೇಸಾಯಗಾರರು, ಪ್ರಗತಿಪರರು, ಪರಿಸರ ಪ್ರೇಮಿಗಳು ಹಾಗೂ ಅನೇಕ ಆಸಕ್ತ ಸಂಸ್ಥೆಗಳ ಮುಖಂಡರು ಈ ಸತ್ಯಾಗ್ರದಲ್ಲಿ ಪೂರ್ಣವಾಗಿ ಭಾಗವಹಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಬಾವುಟ ಸಂಹಿತೆಗೆ ತಿದ್ದುಪಡಿ ತಂದು ರಾಷ್ಟ್ರೀಯ ಧ್ವಜದ ಘನತೆಗೆ ಮತ್ತು ಮಹತ್ವಕ್ಕೆ ಧಕ್ಕೆ ತಂದಿದೆ. ಎಲ್ಲರ ಮನೆಗಳ ಮೇಲೆ ತಿರಂಗ ಧ್ವಜ ಹಾರಿಸುವ ನೆಪದಲ್ಲಿ ಪ್ಲಾಸ್ಟಿಕ್ ಮತ್ತು ಪಾಲಿಯಸ್ಟರ್ ನಿಂದ ಯಂತ್ರ ತಯಾರಿಸಿದ ಬಾವುಟಗಳನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಇಲ್ಲಿಯವರೆಗೆ ಬಡ ನೇಕಾರರಿಂದ ತಯಾರಾಗುತ್ತಿದ್ದ ಖಾದಿ ಬಾವುಟಗಳನ್ನು ಕೇಳುವವರಿಲ್ಲದಂತಾಗಿದೆ. ಪ್ರದರ್ಶಕ ರಾಷ್ಟ್ರೀಯತೆಯ ನೆಪದಲ್ಲಿ ಪರಿಸರ ಮಾಲಿನ್ಯ ಮಾಡುವ ಯಂತ್ರ ತಯಾರಿತ ಪ್ಲಾಸ್ಟಿಕ್ ಮತ್ತು ಪಾಲಿಯಸ್ಟರ್ ತಯಾರಿತ ಬಾವುಟಗಳನ್ನು ಬಳಸಿ ಖಾದಿ ಧ್ವಜಗಳನ್ನು ಬದಿಗೆ ಸರಿಸಲಾಗಿದೆ. ಇದನ್ನು ವಿರೋಧಿಸಿ ನಡೆಯುವ ಸತ್ಯಾಗ್ರಹದಲ್ಲಿ ಸಹಮತ ಉಳ್ಳ ಆಸಕ್ತರು , ಸಾಹಿತಿ ಕಲಾವಿದರು, ಸಂಗೀತಗಾರರು, ಹಾಡುಗಾರರು, ರೈತರು, ವಿದ್ಯಾರ್ಥಿ ಯುವ ಜನ ಗುಂಪುಗಳು, ನಗರದ ನಾಗರಿಕ ಬಂಧುಗಳು ಭಾಗವಹಿಸಬೇಕು. ಈ ಮೂಲಕ ರಾಷ್ಟ್ರೀಯ ಧ್ವಜದ ಪರಂಪರೆ ಪ್ರಾಮುಖ್ಯತೆ ಮತ್ತು ಮಹತ್ವವನ್ನ ಎತ್ತಿ ಹಿಡಿಯೋಣ ಎಂದು ಚಿಂತಕರಾದ ಸಿ.ಯತಿರಾಜು, ಎನ್ ಎಸ್ ಪಂಡಿತ್ ಜವಾಹರ್, ಆರ್ ವಿ ಪುಟ್ಟ ಕಾಮಣ್ಣ ತಿಳಿಸಿದ್ದಾರೆ.