Wednesday, November 20, 2024
Google search engine
Homeಕ್ರೈಂಅಪಘಾತ, ಅವಘಡ, ಆಕಸ್ಮಿಕಅಯ್ಯೋ; ಮತ್ತೊಬ್ಬ ತುಂಬುಗರ್ಭಿಣಿ ಸಾವು

ಅಯ್ಯೋ; ಮತ್ತೊಬ್ಬ ತುಂಬುಗರ್ಭಿಣಿ ಸಾವು

ಸಕಾಲಕ್ಕೆ ಸ್ಪಂದಿಸದ 108 ; ಆರೋಪ- ಪ್ರತ್ಯಾರೋಪ

ಚಿಕ್ಕನಾಯಕನಹಳ್ಳಿ : ಜಿಲ್ಲೆಯಲ್ಲಿ ಗರ್ಭಿಣಿಯರ ಸಾವು ನಿಂತಂತೆ ಕಾಣುತ್ತಿಲ್ಲ.

ಚಿಕ್ಕನಾಯಕನಹಳ್ಳಿ-ಗುಬ್ಬಿ ತಾಲ್ಲೂಕುಗಳ ಗಡಿ ಪ್ರದೇಶವಾದ ಗುಡ್ಡದ’ಓಬಳಾಪುರ-ಗುಡ್ಡದಟ್ಟಿಯಲ್ಲಿ ಸುಮಾರು 30 ವರ್ಷ ವಯಸ್ಸಿನ ತುಂಬುಗರ್ಭಿಣಿ ಶಾರದಮ್ಮ ಎಂಬುವವರು ಶುಕ್ರವಾರ ಅಚಾನಕ್ಕಾಗಿ ತಲೆಸುತ್ತು ಬಂದು ಮನೆಯಲ್ಲೇ ಕುಸಿದುಬಿದ್ದಿದ್ದಾರೆ. ತಕ್ಷಣವೇ ಕುಟುಂಬಸ್ಥರು 108 ಆ್ಯಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದ್ದಾರೆ.

ಸಕಾಲಕ್ಕೆ ಸ್ಪಂದಿಸದೆ ಕಾಲ ವಿಳಂಬ ಮಾಡಿದ 108 ಆ್ಯಂಬ್ಯುಲೆನ್ಸ್ ಸೇವೆಯಿಂದ ಬೇಸತ್ತು, ಕುಟುಂಬದವರೇ ಹುಳಿಯಾರಿನಿಂದ ಖಾಸಗಿ ಆ್ಯಂಬ್ಯುಲೆನ್ಸ್’ನ್ನು ಕರೆಸಿಕೊಂಡು, ಚಿಕ್ಕನಾಯಕನಹಳ್ಳಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಯಲ್ಲಿ ಗರ್ಭಿಣಿ ಶಾರದಮ್ಮನವರ ಪರೀಕ್ಷೆ ನಡೆಸಿ ಶಾರದಮ್ಮ ಹಾಗೂ ಆಕೆಯ ಗರ್ಭದಲ್ಲಿದ್ದ ಶಿಶು ಮರಣ ಹೊಂದಿರುವ ಬಗ್ಗೆ ದೃಢಪಡಿಸಲಾಗಿದೆ.

ಶಾರದಮ್ಮನವರಿಗೆ ಈಗಾಗಲೇ ಎರಡೂವರೆ ವರ್ಷದ ಎಳೆಯ ಹೆಣ್ಣು ಮಗುವಿದೆ. ಎರಡನೆಯ ಮಗುವಿಗೆ ಅವರು ಜನ್ಮ ನೀಡುವವರಿದ್ದರು. ಅವರು ಎರಡೂವರೆ ವರ್ಷದ ತಮ್ಮ ಮಗು ಮತ್ತು ಪತಿಯನ್ನು ಅಗಲಿದ್ದಾರೆ.

ಶಾರದಮ್ಮನ ತವರುಮನೆ ಗುಬ್ಬಿ ತಾಲ್ಲೂಕಿನ ಗುಡ್ಡದ ಓಬಳಾಪುರದ ಗುಡ್ಡದಟ್ಟಿ ಆಗಿತ್ತು. ಅವರು ಕಳೆದ ಎರಡು ತಿಂಗಳಿನಿಂದ ಅಲ್ಲಿ ತಂಗಿದ್ದರು. ಅದು ಚಿಕ್ಕನಾಯಕನಹಳ್ಳಿ-ಗುಬ್ಬಿ ತಾಲ್ಲೂಕಿನ ನಡುವಿನ ಸರಹದ್ದಿನಲ್ಲಿರುವ ಗಡಿ ಗ್ರಾಮ.

ಚಿಕ್ಕನಾಯಕನಹಳ್ಳಿ ಗಡಿ ಪ್ರದೇಶದ ಗುಬ್ಬಿ ತಾಲ್ಲೂಕಿನಲ್ಲಿ ತವರು ಮನೆ ಹೊಂದಿದ್ದ ಶಾರದಮ್ಮನವರ ಗಂಡನ ಮನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ‌ಆಶ್ರಿಹಾಲ್ ಬಳಿಯ ಹೊಸಟ್ಟಿ-ದೊಡ್ಡೀಹಟ್ಟಿ. ಗರ್ಭಿಣಿಯಾಗಿದ್ದ ಆಕೆ ಚಿಕ್ಕನಾಯಕನಹಳ್ಳಿಯ ಆಸ್ಪತ್ರೆ ಹಾಗೂ ಕೆಲವೊಮ್ಮೆ ಗುಬ್ಬಿಯ ಆಸ್ಪತ್ರೆ ಎರಡೂ ಕಡೆ ನಿಯಮಿತವಾದ ಚಿಕಿತ್ಸೆ ಮತ್ತು ಶುಶ್ರೂಷೆ ಪಡೆಯುತ್ತಿದ್ದರಂತೆ. ಮೂರು ದಿನಗಳ ಹಿಂದಷ್ಟೇ ಗುಬ್ಬಿಯ ಖಾಸಗಿ ಆಸ್ಪತ್ರೆಗೂ ಹೋಗಿ ಪರೀಕ್ಷೆ ಮಾಡಿಸಿ, ಹೆರಿಗೆಗಾಗಿ ಎರಡು ದಿನಗಳ ನಂತರದ ದಿನ ಗುರುತು ಮಾಡಿಸಿಕೊಂಡು ಬಂದಿದ್ದರಂತೆ. ಶಾರದಮ್ಮ ಬದುಕಿದ್ದಿದ್ದರೆ ಇಷ್ಟೊತ್ತಿಗೆ ಅವರ ಹೆರಿಗೆಯಾಗಿರುತ್ತಿತ್ತು. ನವಜಾತವೊಂದು ಜೀವ ಜಗತ್ತಿಗೆ ಬಂದಿರುತ್ತಿತ್ತು.

ಶುಕ್ರವಾರ ತೀರಿಹೋದ ಶಾರದಮ್ಮನವರ ಅಂತ್ಯಕ್ರಿಯೆಯನ್ನು ಶನಿವಾರ ನಡೆಸಲಾಯ್ತು.

ಪಬ್ಲಿಕ್ ಸ್ಟೋರಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕೇಂದ್ರದಿಂದ ಹಿಡಿದು ತಹಸೀಲ್ದಾರ್’ರವರುಗಳವರೆಗೂ ಶಾರದಮ್ಮನವರ ಸಾವಿನ ಕಾರಣಗಳನ್ನು ವಿಚಾರಿಸಿದ ನಂತರ, ಎರಡೂ ತಾಲ್ಲೂಕಿನ ಸಿಡಿಪಿಒಗಳು, ಡಿಸಿಪಿಒ ಹಾಗೂ ತಾಲ್ಲೂಕು ಮಟ್ಟದ ಇನ್ನಿತರೆ ಅಧಿಕಾರಿಗಳು ಶಾರದಮ್ಮನವರ ಮನೆಗೆ ಭೇಟಿ ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇಲ್ಲವಾದಲ್ಲಿ ಈ ಪ್ರಕರಣ ಹಾಗೇ ಮುಚ್ಚಿಹೋಗುತ್ತಿತ್ತೋ ಏನೋ….


ವಿಳಾಸ ಹಾಗೂ ಮಾಹಿತಿ ಗೊಂದಲ

ಪ್ರಕರಣ ಕುರಿತು ಪಬ್ಲಿಕ್ ಸ್ಟೋರಿಗೆ ಪ್ರತಿಕ್ರಿಯಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಯಶ್ವಂತ್,
ಶಾರದಮ್ಮನವರು ಗುಡ್ಡದಟ್ಟಿಯ ತಮ್ಮ ತವರು ಮನೆಯಲ್ಲಿ ಸುಮಾರು 12.30ರ ವೇಳೆಗೆ ತಲೆಸುತ್ತು ಎಂದು ಅಸ್ವಸ್ಥಗೊಂಡು ಕುಸಿದುಬಿದ್ದರು. ತಕ್ಷಣವೇ ಕುಟುಂಬದವರು 108 ಆ್ಯಂಬ್ಯುಲೆನ್ಸ್’ಗೆ ಕರೆ ಮಾಡಿದ್ದಾರೆ. ಗಾಬರಿ ಮತ್ತು ಅವಸರದಲ್ಲಿ ಊರು, ಹೋಬಳಿ, ತಾಲ್ಲೂಕು ಮತ್ತು ಮನೆಯ ವಿಳಾಸವನ್ನು ಕುಟುಂಬದವರು ಸರಿಯಾಗಿ ನೀಡಿರಲಿಲ್ಲ. ಹಾಗಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಬಳಿಯಿರುವ ಗುಡ್ಡದಟ್ಟಿ ಎಂಬ ಊರಿರಬಹುದು ಎಂದು ಊಹಿಸಿದ 108 ಆ್ಯಂಬ್ಯುಲೆನ್ಸ್’ನವರು ನೇರ ಅಲ್ಲಿಗೆ ಹೋಗಿದ್ದಾರೆ. ಹೋಗುವಾಗ ಶಾರದಮ್ಮನ ಕುಟುಂಬಸ್ಥರ ಮೊಬೈಲ್ ಸಂಖ್ಯೆಗೆ ಆ್ಯಂಬ್ಯುಲೆನ್ಸ್ ನವರು ಹಲವು ಬಾರಿ ಕರೆ ಮಾಡಲು ಯತ್ನಿಸಿದ್ದಾರೆ. ಆದರೆ ಆ ಸಂಖ್ಯೆ ನೆಟವರ್ಕ್ ಸಮಸ್ಯೆಯಿಂದ ಕನೆಕ್ಟ್ ಆಗಲಿಲ್ಲ.

ವಿಳಾಸ ಮತ್ತು ಮಾಹಿತಿ ಗೊಂದಲದಿಂದಾಗಿ ಕುಪ್ಪೂರಿಗೆ ತೆರಳಿದ್ದ ಆ್ಯಂಬ್ಯುಲೆನ್ಸ್ ಮತ್ತೆ ಮರಳಿ ಬಂದು ಗುಬ್ಬಿ ತಾಲ್ಲೂಕಿನ ಗುಡ್ಡದಟ್ಟಿಗೆ ಹೋಗುವಷ್ಟರಲ್ಲಿ ತೀರಾ ತಡವಾಗಿದೆ. ತದ್ವಿರುದ್ಧ ದಿಕ್ಕುಗಳಲ್ಲಿರುವ ಇಪ್ಪತ್ತು ಇಪ್ಪತ್ತು ಕಿ.ಮೀ.ಗಳ ಅಂತರದಲ್ಲಿರುವ ಎರಡು ಊರುಗಳಿಗೆ ಆಗಮನ ಮತ್ತು ನಿರ್ಗಮನದ ಪ್ರಯಾಣ ಮಾಡುವಷ್ಟರಲ್ಲಿ ಗಂಟೆಗಳ ಕಾಲ ಸಮಯ ದುಂದು ವ್ಯಯವಾಗಿದೆ. ಗಾಬರಿಯಲ್ಲಿದ್ದ ಕುಟುಂಬಸ್ಥರು ಸರಿಯಾದ ಮಾಹಿತಿ ಮತ್ತು ವಿಳಾಸ ನೀಡದಿದ್ದುದೇ ಇದಕ್ಕೆ ಪ್ರಮುಖ ಕಾರಣ ಎಂದು ಅವರು ತಿಳಿಸಿದರು.

ಬಾಕ್ಸ್ ಐಟಮ್ ::
ಸರಹದ್ದಿನಲ್ಲಿರುವ ಗಡಿ ಗ್ರಾಮಗಳ ಜನರ ಆರೋಗ್ಯ ಸುರಕ್ಷೆಯ ಕತೆ…!?

ಸರ್ಕಾರಿ ಸೇವೆ ಒದಗಿಸುವಾಗ ಅದು ಯಾರ ವ್ಯಾಪ್ತಿಗೆ ಸೇರಿದ್ದು ಎಂಬುದರ ಬಗ್ಗೆ ಚಿಕ್ಕನಾಯಕನಹಳ್ಳಿ ಮತ್ತು ಗುಬ್ಬಿ ತಾಲ್ಲೂಕಿನ ಸರ್ಕಾರಿ ಅಧಿಕಾರಿಗಳ ನಡುವೆ ಒಂದು ರೀತಿಯ ಹಗ್ಗ-ಜಗ್ಗಾಟ ನಡೆಯುತ್ತಿರುತ್ತದೆ ಎಂಬುದು ಮೇಲ್ನೋಟಕ್ಕೇ ಕಂಡುಬಂತು.

ಈ ಪ್ರಕರಣದಲ್ಲೂ ಬಹುತೇಕ ಅದೇ ಆಗಿದೆ. 108 ಆ್ಯಂಬ್ಯುಲೆನ್ಸ್ ಸೇವೆಯ ಕುರಿತಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ ಅದು ನಮ್ಮ ವ್ಯಾಪ್ತಿಗೆ ಸೇರುವುದಿಲ್ಲ ಎಂಬ ಸಿದ್ಧ ಉತ್ತರ ಬರುತ್ತದೆ.

ಮತ್ತು 108 ಆ್ಯಂಬ್ಯುಲೆನ್ಸ್ ಸೇವೆಯ ಕುರಿತಾದ ಯಾವ ಅಧಿಕಾರವೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಕೈಯ್ಯಲ್ಲಿಲ್ಲ. ಅದು ಜಿಲ್ಲಾಮಟ್ಟದ ಅಥವಾ ರಾಜ್ಯಮಟ್ಟದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೇಳಿ ಅಧಿಕಾರಿಗಳು ಜಾರಿಕೊಳ್ಳುತ್ತಾರೆ. ಮತ್ತೆ, ತಾಲ್ಲೂಕು ‌ಗುಬ್ಬಿ ಆಗಿರುವುದರಿಂದ ಅಲ್ಲಿನ 108 ಆ್ಯಂಬ್ಯುಲೆನ್ಸ್ ಸ್ಪಂದಿಸಬೇಕು ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಧಿಕಾರಿಗಳು ಬಯಸಿದರೆ, ಹತ್ತಿರದ ತಾಲ್ಲೂಕು ಪಟ್ಟಣ ಚಿಕ್ಕನಾಯಕನಹಳ್ಳಿಯೇ ಆಗಿರುವುದರಿಂದ ಅಲ್ಲಿನ 108 ಆ್ಯಂಬ್ಯುಲೆನ್ಸ್ ಬಂದು ಸೇವೆ ಒದಗಿಸಲಿ ಎಂದು ಗುಬ್ಬಿ ತಾಲ್ಲೂಕಿನ ಅಧಿಕಾರಿಗಳು ಬಯಸಿದಂತಿದೆ. ಇಡೀ ರಾಜ್ಯದಲ್ಲಿರುವ ತಾಲ್ಲೂಕು ತಾಲ್ಲೂಕುಗಳ ಸರಹದ್ದಿನ ಗಡಿ ಗ್ರಾಮಗಳ ಜನರ ಆರೋಗ್ಯ ಸುರಕ್ಷೆಯ ಬಗ್ಗೆ ಅಧಿಕಾರಿಗಳು ಹೀಗೆ ಹಗ್ಗ-ಜಗ್ಗಾಟದ ಆಟ ಆಡುತ್ತಿದ್ದರೆ, ಆ ಜನರ ಪ್ರಾಣದ ಹೊಣೆ ಯಾರದು….!?

ಇಂತಹ ಹಗ್ಗ-ಜಗ್ಗಾಟಗಳ ನಡುವೆ ಎಲ್ಲರ ಎದುರೇ ಒಬ್ಬ ತುಂಬುಗರ್ಭಿಣಿ, ಜಗತ್ತಿಗೇ ಬಾರದ ತನ್ನ ಶಿಶುವಿನೊಂದಿಗೆ ಇಹಲೋಕ ತ್ಯಜಿಸಿ ತೀರಿಹೋಗಿದ್ದಾರೆ. ಇದು ನಾಗರಿಕ ಲೋಕಕ್ಕೆ ನಾಚಿಕೆಯಾಗಬೇಕಾದ ಘಟನೆ ಅಲ್ಲವೇ?.


_ಸಂಚಲನ
ಚಿಕ್ಕನಾಯಕನ ಸೀಮೆಯಿಂದ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?