ತುಮಕೂರು : ಚೆನ್ನೈ ಮತ್ತು ಬೆಂಗಳೂರಿನಂತೆ ತುಮಕೂರು ಸಹ ದೇಶದ ದೊಡ್ಡ ಕೈಗಾರಿಕಾ ವಲಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಯುವಕರು, ಮಹಿಳೆಯರಿಗೆ ಈ ಬಜೆಟ್ ಅನುಕೂಲ ಆಗಲಿದೆ. ಮಹಿಳೆಯರನ್ನು ಸಶಕ್ತೀಕರಣ ಗೊಳಿಸುವ ಯೋಜನೆಯನ್ನು ಮುಂದಿಟ್ಟುಕೊಂಡು ಬಜೆಟ್ ಘೋಷಣೆ ಮಾಡಿದ್ದು, ನಾವು ಅವಶ್ಯಕತೆ, ಆಧಾರ ಮತ್ತು ಆದಾಯವನ್ನ ಗಮನದಲ್ಲಿಟ್ಟುಕೊಂಡಿದ್ದೇವೆ. ಸಮಾಜದ ಎಲ್ಲ ವರ್ಗವನ್ನ ಸಶಕ್ತೀಕರಣ ಗೊಳಿಸುವುದು ಬಜೆಟ್‍ನ ಗುರಿಯಾಗಿದೆ ಎಂದು ಹೇಳಿದರು.
ತುಮಕೂರು ಜಿಲ್ಲೆಯ ಗುಬ್ಬಿಯ ಬಿದರೆಹಳ್ಳ ಕಾವಲ್ ನಲ್ಲಿ ನಿರ್ಮಾಣಗೊಂಡಿರುವ ಲಘು ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 6ರಂದು ಉದ್ಘಾಟಿಸಿ ಮಾತನಾಡಿದರು.
ಹೆಲಿಕಾಪ್ಟರ್ ತಯಾರಿಕಾ ಘಟಕದಿಂದ ಸಾವಿರಾರು ಯುವಕರಿಗೆ ಉದ್ಯೋಗ ಸಿಗುವ ಜೊತೆಗೆ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಪ್ರಧಾನಿಯವರಿಗೆ ಅಡಿಕೆ ಪೇಟ, ಹಾರ ಮತ್ತು ಸಿದ್ಧಗಂಗಾ ಶ್ರೀಗಳ ಫಲಕವನ್ನು ನೀಡಲಾಯಿತು.
ಪ್ರಧಾನಿಯವರು ತುಮಕೂರು ಆಧ್ಯಾತ್ಮಿಕ ನೆಲೆಯಾಗಿದ್ದು, ಸಿದ್ಧಗಂಗ ಮಠ ಮತ್ತು ಗುಬ್ಬಿಯ ಚಿದಂಬರ ಆಶ್ರಮಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಮುರುಗೇಶ್ ನಿರಾಣಿ, ಬಿ.ಸಿ.ನಾಗೇಶ್, ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಕೇಂದ್ರ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯ ಜಗ್ಗೇಶ್ ಮೊದಲಾದವರು ಉಪಸ್ಥಿತರಿದ್ದರು.