ಚಿಕ್ಕನಾಯಕನಹಳ್ಳಿ : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಮಸ್ತ ಗ್ರಾಮ ಆಡಳಿತಾಧಿಕಾರಿಗಳು ಲೇಖನಿ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗುತ್ತಿರುವ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ತಹಸೀಲ್ದಾರ್ ಕೆ ಪುರಂದರ್ ಮುಖೇನ ಸೋಮವಾರ ಮನವಿ ಸಲ್ಲಿಸಲಾಯಿತು.
ಮೂಲಭೂತ ಸೌಕರ್ಯ ಮತ್ತು ಅಗತ್ಯ ಸಾಧನ-ಸಲಕರಣೆ ಸೇರಿದಂತೆ ಕರ್ತವ್ಯ ನಿರ್ವಹಿಸಲು ವೃತ್ತಕ್ಕೆ ಒಂದರಂತೆ ಒಂದು ಕಚೇರಿ ಅಥವಾ ಕೊಠಡಿ, ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ, ಜೊತೆಗೊಂದು ಆಲ್ಮೆರಾ, ಅತ್ತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್ ಹಾಗೂ ಡೇಟಾ ಸೌಲಭ್ಯ, ಗೂಗಲ್ ಖ್ರೋಮ್’ಬುಕ್, ಲ್ಯಾಪ್‌ಟಾಪ್, ಸ್ಕ್ಯಾನರ್, ಪ್ರಿಂಟರ್, ಅಗತ್ಯ ಸ್ಟೇಷನರಿ ವೆಚ್ಚ, ಹೆಚ್ಚುವರಿ ಪ್ರಯಾಣ ಭತ್ಯೆ, ಅಂತರ್ ಜಿಲ್ಕಾ ವರ್ಗಾವಣೆಗೆ ಅವಕಾಶ ಸೇರಿದಂತೆ ಒತ್ತಡ ರಹಿತವಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕಾಗಿತ್ತು. ಆದರೆ, ಈ ಯಾವ ಸೌಕರ್ಯವನ್ನೂ ಒದಗಿಸದೆ ಸಕಾಲದಲ್ಲಿ ಕೆಲಸ ಸಾಗಿಸಿ ಎಂದು ಒತ್ತಡ ಹೇರಲಾಗುತ್ತಿದೆ. ಗ್ರಾಮ ಆಡಳಿತ ಅಧಿಕಾರಿಗಳಿಗೆ ಒದಗಿರುವ ಈಯೆಲ್ಲ ಕಷ್ಟ-ನಷ್ಟಗಳನ್ನು ಪರಿಹರಿಸಿ, ರಾಜ್ಯದ ಕೇಂದ್ರ ಸಂಘದ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಇಲಾಖೆಯಿಂದ ಅಭಿವೃದ್ಧಿಪಡಿಸಲಾಗಿರುವ 17ಕ್ಕೂ ಹೆಚ್ಚಿನ ಮೊಬೈಲ್ ಆ್ಯಪ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈ ತಂತ್ರಾಂಶಗಳ ಸಮರ್ಪಕ ಬಳಕೆ ಮತ್ತು ನಿರ್ವಹಣೆಗೆ ಅವಶ್ಯವಿರುವ ಮೊಬೈಲ್ ಸಾಧನ, ಲ್ಯಾಪ್‌ಟಾಪ್ ಹಾಗೂ ಅದನ್ನು ಜೋಡಿಸಲು ಬೇಕಾದ ಇಂಟರ್’ನೆಟ್ ಮತ್ತು ಸ್ಕ್ಯಾನರ್, ಪ್ರಿಂಟರ್ ಯಾವುದನ್ನೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಒದಗಿಸದೆ, ತಮ್ಮ ಬಳಿಯಿರುವ ಮೊಬೈಲ್ ಮೂಲಕವೇ ಕರ್ತವ್ಯ ನಿರ್ವಹಿಸಲು ಒತ್ತಡ ಹೆಚ್ಚುತ್ತಿದೆ. ಇದರಿಂದಾಗಿ ಕ್ಷೇತ್ರಮಟ್ಟದಲ್ಲಿ ಒಡ್ಡುತ್ತಿರುವ ಅಧಿಕ ಒತ್ತಡ ಕಾರಣದಿಂದಾಗಿ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ತೀವ್ರ ಪರಿಣಾಮ ಬೀರಿ ಅದು ಸಾವು-ನೋವುಗಳಲಿ ಸಮಾಪ್ತಿಯಾಗುತ್ತಿದೆ. ವ್ಯವಸ್ಥಿತ ಸಾಧನ-ಸಲಕರಣೆಗಳಿಲ್ಲದ ಕಾರಣ ಸಕಾಲಕ್ಕೆ ಕೆಲಸ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ.
ಇದರಿಂದ ಆಕ್ರೋಶಿತರಾಗುವ ಜನ ಕರ್ತವ್ಯದಲ್ಲಿರುವ ಗ್ರಾಮ ಆಡಳಿತ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೆ ಕೆಲವೊಮ್ಮೆ ಮಾರಣಾಂತಿಕ ಹಲ್ಲೆಗಳಿಗೂ ಮುಂದಾಗುವ ಪ್ರಕರಣಗಳು ನಡೆಯುತ್ತಿವೆ.
ಎಲ್ಲಾ ಮೊಬೈಲ್ ಆ್ಯಪ್’ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿರುವುದರಿಂದ ಅಧಿಕಾರಿಗಳ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಿ ಅವರನ್ನು ರೋಗಗ್ರಸ್ತರನ್ನಾಗಿ ಮಾಡುತ್ತಿವೆ.
ಹೀಗಾಗಿ, ಎಲ್ಲ ಬೇಡಿಕೆಗಳು ಈಡೇರುವವರೆಗೂ ದಿನಾಂಕ.26.09.2024ರಿಂದ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ್ ಹುಕುಂ, ಹಕ್ಕುಪತ್ರ, ನಮೂನೆ 1-5 ರ ವೆಬ್ ಅಪ್ಲಿಕೇಶನ್, ಪೌತಿ ಆಂದೋಲನ ಆ್ಯಪ್ ಸೇರಿದಂತೆ ಮೊಬೈಲ್ ತಂತ್ರಾಂಶಗಳ ಯಾವುದೇ ಕೆಲಸವನ್ನು ನಿರ್ವಹಿಸದಂತೆ ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯಕಾರಿಣಿಯಲ್ಲಿ ತೀರ್ಮಾನಿಸಲಾಗಿದೆ.
ಸೇವೆ ಮತ್ತು ಪದೋನ್ನತಿ ::
ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳು ಕಳೆದ 30 ವರ್ಷಗಳಿಂದಲೂ ಪದೋನ್ನತಿಯಿಂದ ವಂಚಿತರಾಗಿದ್ದಾರೆ. ನಿವೃತ್ತಿಯ ಅಂಚಿನಲ್ಲಿ ಪದೋನ್ನತಿ ಸಿಗುತ್ತದಾದ್ದರಿಂದ ಅದರಿಂದ ಅಧಿಕಾರಿಗಳಿಗೆ ಯಾವುದೇ ಸೇವಾ ಪ್ರಯೋಜನ ಸಿಗುತ್ತಿಲ್ಲ. ಹಾಗಾಗಿ, ರಾಜ್ಯದ 1196 ಗ್ರೇಡ್–1 ಗ್ರಾಮ ಪಂಚಾಯತ್ ಹಾಗೂ 304 ಕಸಬಾ ಹೋಬಳಿ ವೃತ್ತಗಳನ್ನು ಗ್ರೇಡ್–1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಿ ಪದೋನ್ನತಿಯನ್ನು ನೀಡಬೇಕು. ಅದೇರೀತಿ ರಾಜಸ್ವ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು ಹಾಗೂ ಗ್ರೇಡ್–1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಪರಿಷ್ಕರಿಸುವುದರ ಮೂಲಕವೂ ಪದೋನ್ನತಿ ನೀಡಬಹುದು.
ವರ್ಗಾವಣೆ ಅವಕಾಶ ::
ಅಂತರ್ ಜಿಲ್ಲಾ ಪತಿ-ಪತ್ನಿ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿ, ಅಂತಿಮ ಆದೇಶಕ್ಕಾಗಿ ಬಾಕಿ ಉಳಿದಿರುವ ವರ್ಗಾವಣೆಗಳ ತ್ವರಿತ ಆದೇಶ ನೀಡಬೇಕು. ಕೆ.ಸಿ.ಎಸ್.ಆರ್.ನಿಯಮಾವಳಿಗಳಂತೆ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳಿಗೆ ಮೆಮೊ ಹಾಕಬಾರದು. ಹಾಗೆ ಮೆಮೊ ಹಾಕುವ ಮೇಲಧಿಕಾರಿಗಳ ಮೇಲೆ ಸೂಕ್ತವಾದ ಶಿಸ್ತುಕ್ರಮ ಜರುಗಿಸಲು ಆದೇಶ ಹೊರಡಿಸಬೇಕು. ಕಂದಾಯ ಇಲಾಖೆಯಲ್ಲಿನ 3 ವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಗೆ ಸೂಕ್ತ ಮಾರ್ಗಸೂಚಿಗಳನ್ನು ರಚಿಸಿ ನೌಕರರಿಗೆ ವರ್ಗಾವಣೆ ಅವಕಾಶ ಕಲ್ಪಿಸಬೇಕು.
ಈಯೆಲ್ಲ ಬೇಡಿಕೆಗಳು ಈಡೇರುವವರೆಗೂ ರಾಜ್ಯದ ಕೇಂದ್ರ ಸಂಘ ನಿರ್ಣಯಿಸಿರುವಂತೆ, ದಿನಾಂಕ.26.09.2024 ರಿಂದ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು, ಎಲ್ಲ ಬಗೆಯ ಮೊಬೈಲ್ ಆ್ಯಪ್ ಹಾಗೂ ವೆಬ್ ಅಪ್ಲಿಕೇಶನ್ ಕೆಲಸಗಳನ್ನು ಸ್ಥಗಿತಗೊಳಿಸಿ ತಮ್ಮ ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಲಿದ್ದಾರೆ ಎಂದು ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಮರುಳಸಿದ್ಧನಗೌಡ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ನವೀನ್, ಗೌರವಾಧ್ಯಕ್ಷ ಪ್ರಸನ್ನಕುಮಾರ್, ಕಾರ್ಯದರ್ಶಿ ಲತಾಮಣಿ, ಖಜಾಂಚಿ ಲಕ್ಷ್ಮಿಪತಿ ಹಾಗೂ ತಾಲ್ಲೂಕಿನ 47 ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 27 ಮಂದಿ ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.
_ಸಂಚಲನ
ಚಿಕ್ಕನಾಯಕನ ಸೀಮೆಯಿಂದ