Monday, December 23, 2024
Google search engine
HomeUncategorizedಸಮಾಜದ ಢೋಂಗಿ ರಾಜಕಾರಣಿಗಳಿಂದಾಗಿ ಅಂಬೇಡ್ಕರರಿಗೆ ಅವಮಾನ ; ಮುಖಂಡ ಹೆಸ್ರಳ್ಳಿ ಗೋಪಾಲ್

ಸಮಾಜದ ಢೋಂಗಿ ರಾಜಕಾರಣಿಗಳಿಂದಾಗಿ ಅಂಬೇಡ್ಕರರಿಗೆ ಅವಮಾನ ; ಮುಖಂಡ ಹೆಸ್ರಳ್ಳಿ ಗೋಪಾಲ್

(ಅಮಿತ್ ಶಾ ವಜಾಗೊಳಿಸುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳ ಪ್ರತಿಭಟನೆ)

ಚಿಕ್ಕನಾಯಕನಹಳ್ಳಿ : ಕರ್ನಾಟಕ ಮಾದಿಗ ದಂಡೋರ ಸಮಿತಿ,
ಜೈಭೀಮ್ ಛಲವಾದಿ ಮಹಾಸಭಾ, ಕರ್ನಾಟಕ ಛಲವಾದಿ ಮಹಾಸಭಾ, ಅಲೆಮಾರಿ ಬುಡಕಟ್ಟು ಮಹಾಸಭಾ ಮತ್ತು ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಸೋಮವಾರ ಪಟ್ಟಣದ ನೆಹರೂ ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಲೋಕಸಭೆಯಲ್ಲಿ ಅಮಿತ್ ಶಾ ಮಾತನಾಡುತ್ತಾ, ಕೇವಲವಾಗಿ ವ್ಯಂಗ್ಯ ಮಾಡುತ್ತಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಈಯೆಲ್ಲ ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತಾ, ನೆಹರೂ ವೃತ್ತದಲ್ಲಿ ಅಮಿತ್ ಶಾ ಪ್ರತಿಕೃತಿಯನ್ನು ದಹನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತಪರ ಹೋರಾಟಗಾರ ಹೆಸ್ರಳ್ಳಿ ಗೋಪಾಲ್, ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ನಾರಾಯಣಸ್ವಾಮಿ ಹೆಸರಿನ ದಲಿತ ಸಮಾಜದ ಮುಖಂಡರಿಬ್ಬರು ಅಮಿತ್ ಶಾ ಪಕ್ಷದಲ್ಲೇ ಇದ್ದೂ ಕೂಡ, ಅಮಿತ್ ಶಾ’ರವರು ಬಾಬಾಸಾಹೇಬರ ಬಗ್ಗೆ ಆಡಿದ ಮಾತಿಗೆ ಕ್ಷಮೆ ಕೋರುವಂತೆ ಒತ್ತಾಯಿಸಲಿಲ್ಲ. ಅಮಿತ್ ಶಾ ಹೇಳಿಕೆಯನ್ನು ವಿರೋಧಿಸಿ ಅದನ್ನು ಖಂಡಿಸಲಿಲ್ಲ. ಬಾಬಾಸಾಹೇಬರ ಬಗ್ಗೆ ಅವರಿಗೆ ಸರಿಯಾದ ತಿಳುವಳಿಕೆ ಹೇಳಿಕೊಡಲಿಲ್ಲ. ಪದೇ ಪದೇ ಹೀಗೆ ಬಾಬಾ ಸಾಹೇಬರಿಗೇ ಅವಮಾನ ಮಾಡುತ್ತಿದ್ದರೂ ಇವರುಗಳು ಕನಿಷ್ಠ ತುಟಿಪಿಟಿಕ್ ಎನ್ನುತ್ತಿಲ್ಲ. ಮಹಾರಾಷ್ಟ್ರದ ಆ ರಾಮದಾಸ್ ಅಠಾವಳೆ, ಬಿಹಾರದ ಆ ಪಾಸ್ವಾನ್’ಗಳು, ಕರ್ನಾಟಕದ ಈ ನಾರಾಯಣಸ್ವಾಮಿಗಳು ಈ ಇಂಥ ಢೋಂಗಿ ಮತ್ತು ಅವಕಾಶವಾದಿ ಬಕೀಟು ರಾಜಕಾರಣಿಗಳಿಂದಲೇ ಈಗ ಅಂಬೇಡ್ಕರರನ್ನು ಯಾರು ಬೇಕಾದರೂ ಎಲ್ಲೆಂದರಲ್ಲಿ ಅವಮಾನಿಸುವ ಸ್ಥಿತಿ ಬಂದೊದಗಿದೆ. ಇಂತಹ ಢೋಂಗಿ ರಾಜಕಾರಣಿಗಳನ್ನು ತಮ್ಮ ನಾಯಕರು ಎಂದು ಒಪ್ಪಿಕೊಂಡು, ಅವರನ್ನು ಪೋಷಿಸುತ್ತಿರುವ ದೇಶದ ದಲಿತ ಸಮಾಜ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ, ಹಿಂದುತ್ವದ ವಿರಾಟ್ ವಾತಾಪಿ ಗರ್ಭದಲ್ಲಿ ಅಂಬೇಡ್ಕರರನ್ನೂ ಜೀರ್ಣಿಸಿಕೊಂಡುಬಿಡಲು ಇವರು ಹವಣಿಸುತ್ತಾರೆ. ಇಲ್ಲೇ ಈಗಲೇ ಇವರ ದುಷ್ಟ ಹುನ್ನಾರಗಳಿಗೆ ನಿರ್ಬಂಧ ‌ಹಾಕಿ ನಿಲ್ಲಿಸಿ, ಶಾಶ್ವತವಾದ ತಡೆಗೋಡೆ ಹಾಕಿಬಿಡಬೇಕು ಎಂದು ಅಮಿತ್ ಶಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಮಾದಿಗ ದಂಡೋರ ಸಮಿತಿ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ, ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಅಧ್ಯಕ್ಷ ರಂಗನಾಥ್, ಜೈಭೀಮ್ ಛಲವಾದಿ ಮಹಾಸಭಾದ ಆನಂದ್ ಆಶ್ರಿಹಾಲ್, ಮುಖಂಡರ ಅಗಸರಹಳ್ಳಿ ನರಸಿಂಹಮೂರ್ತಿ, ಮುಖಂಡ ಚಿದಾನಂದ್ ಮತ್ತಿತರ ಮಾತನಾಡಿ, ಸಂವಿಧಾನ ವಿರೋಧಿ ಹಾಗೂ ಅಂಬೇಡ್ಕರ್ ವಿರೋಧಿ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿದರು.

ನಂತರ ತಾಲ್ಲೂಕು ಆಡಳಿತ ಸೌಧದವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಮಿತ್ ಶಾ’ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂಬ ಮನವಿ ಪತ್ರವನ್ನು ತಹಸೀಲ್ದಾರ್’ರವರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.

ಮುಂದಿನ ಕ್ರಮ ವಹಿಸುವುದಾಗಿ ತಹಸೀಲ್ದಾರ್ ಕೆ ಪುರಂದರ್ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

*ಸಂಚಲನ*
ಚಿಕ್ಕನಾಯಕನಹಳ್ಳಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?