ಡಾ. ರಜನಿ
ಬೆಟ್ಟ ಕೊರಕಲು
ಗುಡ್ಡ ಹತ್ತಿ ಇಳಿದು
ಊರು ಕಾಡು
ಮೇಡು ಅಲೆದು
ಕಲ್ಲು ಹುಲ್ಲು..ಹೂವು ಹೊಲಸು ತೊಳೆದು
ಹೆಣ ಹಣ ಎಲ್ಲ ನುಂಗಿ ನೀರಾಗಿ
ತಿರುಗಿ ನೋಡಲಾರೆ
ಬಂದ ದಾರಿ
ನಾನೇ ? ಬಂದಿದ್ದು ಆ ಬೆಟ್ಟದಿಂದ?
ಯಾರು ಯಾರು ನನ್ನ ಸೇರಿದರು?
ಬಿಟ್ಟು ದೂರಾದರು?
ಊಹೂ…
ನೆನಪಿಲ್ಲ
ದಡದಲ್ಲಿ ಕೈಕೈ ಹಿಡಿದ ಪ್ರೀತಿ ಹುಡುಗರು
ಬಕರೆ ಬಿಸಾಕಿದ ಚಡ್ಡಿ ಹೈಕಳು
ಜೊತೆಯಾಗಿ ನೆಗೆದ ಪ್ರಣಯ ಪಕ್ಷಿಗಳು
ಆದರೂ ಅಗಾಧ
ಕಡಲನ್ನು ಹೇಗೆ ಸೇರಲೀ ? ಏಕೆ ಭಯ
ಮತ್ತೆ ತಿಟ್ಟು ಹತ್ತಿ ತಿರುಗಿ ಹೋಗಲೇ?
ಆಗದು…
ಬಿಡು ಭಯ
ನೆಗೆ ಸಮುದ್ರಕ್ಕೆ
ಅದೇ ರೀತಿ ..ಆ ಜೋಡಿ ಬಿಡದೆ ಜೊತೆಗೆ ನೆಗೆದ ರೀತಿ
ನೆಗೆದು…. ಬೇರೆ ಹರಿಯಬೇಡ
ಒಂದಾಗು
ಆಗ ನೋಡು
ಕಡಲೇ ನೀನು
ನೀನು ಯಾವಾಗ
ನದಿಯಾಗಿದ್ದೆ?
ಇದು ಖಲೀಲ್ ಗಿಬ್ರಾನ್ ಅವರ fear ಕವನ ಪ್ರೇರಿತವಾಗಿದೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ. ರಜನಿ ಅವರ ಈ ಕವನ ಕೊರೊನಾ ಪೀಡಿತರಷ್ಟೇ ಅಲ್ಲ ಬದುಕಿನಲ್ಲಿ ಸೋತು ವಿಶ್ವಾಸವನ್ನೇ ಕೈ ಚೆಲ್ಲಿ ಕೂತಿರುವ ಎಲ್ಲರಿಗೂ ಉತ್ಸಾಹ ತುಂಬಲಿದೆ.
ಅವರ ಮಾತುಗಳಲ್ಲಿ ಹೇಳಬೇಕೆಂದರೆ, ಕೋರೋನಾ.. ನನಗೇ ಏಕೆ ?ಎಂಬ ಪ್ರಶ್ನೆ ಕೇಳ ಬೇಡಿ… ಎದುರಿಸಿ.. ಮುಂಜಾಗ್ರತೆ ಅವಶ್ಯಕ. ಆದರೆ ನನಗೆ ಕೋರನಾ ಬರಲ್ಲ ಎಂಬ ವಿಚಿತ್ರ ಭಾವನೆ ಬಿಡಿ. ಪ್ರಪಂಚದಲ್ಲಿ ನಾವು ಒಂದು ಬಿಂದು. ಬಂದರೆ ಎದುರಿಸಿ )
ಕವನ ತುಂಬಾ ಚೆನ್ನಾಗಿದೆ ಮೇಡಮ್. ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ನಿಮ್ಮ ಆತ್ಮವಿಶ್ವಾಸದ ಮಾತುಗಳು ಆಂಟಿಬಯೋಟಿಕ್ ತರಹ ಕೆಲಸ ಮಾಡುತ್ತಿದೆ. ಹ್ಯಾಟ್ಸ್ ಆಫ್ ಮೇಡಮ್….