(*ಪಬ್ಲಿಕ್ ಸ್ಟೋರಿ ಫಲಶೃತಿ*)
ಚಿಕ್ಕನಾಯಕನಹಳ್ಳಿ : ಕಸಬಾ ಹೋಬಳಿ ಹೊನ್ನೆಬಾಗಿ ಗ್ರಾಮ ಪಂಚಾಯತಿಯ ದಬ್ಬೇಘಟ್ಟ ಗ್ರಾಮದ ಸರ್ವೆ ನಂಬರ್-122’ರಲ್ಲಿ ಸುಡುಗಾಡು ಸಿದ್ಧ ಜನಾಂಗದ ಅಲೆಮಾರಿ ಸಮುದಾಯದವರಿಗೆ ನಿವೇಶನ ಹಂಚಿಕೆ ಮಾಡಿ ಆರೇಳು ವರ್ಷಗಳೇ ಕಳೆದುಹೋಗಿವೆ. ಆದರೆ, ಅಲ್ಲಿಗೆ ಸಮರ್ಪಕವಾದ ಒಂದು ಸುರಕ್ಷಿತ ರಸ್ತೆಯನ್ನು ಇದುವರೆಗೂ ಕಲ್ಪಿಸಲಾಗಿರಲಿಲ್ಲ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ಗ್ರಾಮ ಪಂಚಾಯತಿ ಇತ್ಯಾದಿ ಇಲಾಖೆಗಳ ಹಗ್ಗ-ಜಗ್ಗಾಟದಿಂದ ರಸ್ತೆ ನಿರ್ಮಾಣ ಕಾರ್ಯ ಕೇವಲ ಪತ್ರ ವ್ಯವಹಾರದಲ್ಲೇ ಏದುಸಿರು ಬಿಡುತ್ತಾ ಕುಂತಿತ್ತು.
ಕಳೆದ ಅಕ್ಟೋಬರ್ 20’ನೇ ತಾರೀಕಿನಲ್ಲಿ ಪಬ್ಲಿಕ್ ಸ್ಟೋರಿ (ಸುಡುಗಾಡಿಗೆ ರಸ್ತೆ ಯಾವುದಯ್ಯಾ ಸರ್ಕಾರವೇ….!? ಶೀರ್ಷಿಕೆಯಲ್ಲಿ) ಇಲ್ಲಿನ ಈಯೆಲ್ಲ ಕುಂದು-ಕೊರತೆಗಳ ಬಗ್ಗೆ ವಿವರವಾದ ವರದಿ ಪ್ರಕಟಿಸಿತ್ತು. ಕೂಡಲೇ ಕಾರ್ಯಪ್ರವೃತ್ತಗೊಂಡ ತಾಲ್ಲೂಕು ಆಡಳಿತ, ಅಕ್ಟೋಬರ್ 21’ನೇ ತಾರೀಕಿನಂದೇ ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡಿಕೊಡಲು ಕಾಮಗಾರಿ ಪ್ರಾರಂಭಿಸಿತ್ತು.
ಆದರೆ, ಅಕ್ಕಪಕ್ಕದ ಜಮೀನಿನವರು ರಸ್ತೆಗೆ ಜಾಗ ಬಿಟ್ಟುಕೊಡಲು ತಕರಾರು ತೆಗೆದು ಅಂದಿನ ಕಾಮಗಾರಿಯನ್ನು ತಡೆದು, ಅಧಿಕಾರಿಗಳು ಹಾಗೂ ನಿರ್ಮಾಣ ಕಾರ್ಮಿಕರನ್ನು ವಾಪಸ್ಸು ಕಳಿಸಿದ್ದರು.
ಜಮೀನಿನ ಮೂಲ ದಾಖಲೆ, ಜಮೀನಿನ ಸರ್ವೆ, ರಸ್ತೆ ಯೋಜನೆ, ವಸತಿ ಪ್ರದೇಶ ಬಡಾವಣೆಯ ನಕ್ಷೆ, ಲೇಔಟ್ ಪ್ಲಾನಿಂಗ್ ಮತ್ತಿತ್ಯಾದಿ ಮೂಲ ದಾಖಲೆಗಳನ್ನು ಪರಿಶೀಲಿಸಿ, ಮತ್ತೊಮ್ಮೆ ಖಾತ್ರಿ ಮಾಡಿಕೊಂಡಿರುವ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ಹೊನ್ನೆಬಾಗಿ ಗ್ರಾಮ ಪಂಚಾಯತಿಯ ಅಧಿಕಾರಿಗಳು, ಈ ಬಾರಿ ಸೂಕ್ತ ತಯಾರಿ ಹಾಗೂ ಭದ್ರತೆಯ ಜೊತೆಗೆ ದಿನಾಂಕ.27.11.2024’ನೇ ಬುಧವಾರದಂದು ಮತ್ತೆ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದಾರೆ.
ಅಕ್ಕಪಕ್ಕದ ಜಮೀನು ಮಾಲೀಕರು ದಾಖಲೆ ಪತ್ರಗಳನ್ನು ಪರಿಶೀಲಿಸಿ, ಬೇರಿನ್ನೇನೂ ತಕರಾರು ತೆಗೆಯಲಾಗದೆ ಸುಮ್ಮನಾಗಿದ್ದಾರೆ. ಬಹುತೇಕ ಇನ್ನೊಂದೆರಡು ವಾರಗಳಲ್ಲಿ ಸುಡುಗಾಡು ಸಿದ್ಧರ ಅಲೆಮಾರಿ ವಸತಿ ಪ್ರದೇಶಕ್ಕೆ ಸಮರ್ಪಕವಾದ ಸುರಕ್ಷಿತ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.
ಪ್ರತಿಬಾರಿ ಒಂದಿಲ್ಲೊಂದು ಕಾರಣದಿಂದ ಸ್ಥಗಿತಗೊಳ್ಳುತ್ತಿದ್ದ ರಸ್ತೆ ನಿರ್ಮಾಣ ಕಾಮಗಾರಿಯಿಂದ ಬೇಸತ್ತಿದ್ದ ಸುಡುಗಾಡು ಸಿದ್ಧರ ಪಾಲಿಗೆ ಸಮರ್ಪಕವಾದ ಒಂದು ಸುರಕ್ಷಿತ ರಸ್ತೆ ಎಂಬುದು, ದೂರದ ಕನಸಿನಂತೆ ಭಾಸವಾಗಿತ್ತು.
ಆದರೀಗ,
ರಸ್ತೆ ನಿರ್ಮಾಣಗೊಳ್ಳುತ್ತಿದೆ….!
*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ