ಚಿಕ್ಕನಾಯಕನಹಳ್ಳಿ : ಶಾಸಕಾಂಗ ಮತ್ತು ಕಾರ್ಯಾಂಗದ ಸಾಂವಿಧಾನಿಕ ಹುದ್ದೆಗಳಲ್ಲಿರುವ ವ್ಯಕ್ತಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಸಭಾ ಮರ್ಯಾದೆ ಮತ್ತು ಪರಸ್ಪರ ಗೌರವ ಭಾವನೆಯಿಂದ ವರ್ತಿಸುವ ಸಾಮಾನ್ಯ ಜ್ಞಾನವನ್ನು ರೂಢಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಮತ್ತು ಜಿಲ್ಲೆಯ ಅಹಿಂದ ವರ್ಗಗಳ ದಿಟ್ಟನಾಯಕ ಡಾ. ಸಾಸಲು ಸತೀಶ್ ಹೇಳಿದರು. ಇದೇ ಅಕ್ಟೋಬರ್ ತಿಂಗಳ 15’ನೇ ತಾರೀಕಿನ ಸೋಮವಾರದಂದು, ಪಟ್ಟಣದಲ್ಲಿ ಒಂದು ಖಾಸಗಿ ನೇತ್ರ ಚಿಕಿತ್ಸಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕ್ಷೇತ್ರದ ಶಾಸಕ ಹಾಗೂ ಜೆಡಿ(ಎಸ್) ಪಕ್ಷದ ಶಾಸಕಾಂಗ ನಾಯಕರೂ ಆಗಿರುವ ಸಿ ಬಿ ಸುರೇಶ್ ಬಾಬುರವರು, ಪತ್ರಕರ್ತರ ಸಮ್ಮುಖದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಗ್ಗೆ ಆಡಿದ ಮಾತುಗಳಿಗೆ ಪ್ರತಿಯಾಗಿ ಡಾ. ಸತೀಶ್ ಸಾಸಲು ಹೀಗೆ ಉತ್ತರಿಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ ಪುರಂದರ್ ಹಾಗೂ ಆರಕ್ಷಕ ವೃತ್ತ ನಿರೀಕ್ಷಕ ಎಫ್ ಕೆ ನದಾಫ್ ಕೂಡಾ ಭಾಗಿಯಾಗಿದ್ದರು. ಉದ್ಘಾಟನೆ ಮತ್ತು ಇತರೆ ಕಾರ್ಯಕ್ರಮಗಳೆಲ್ಲ ಮುಗಿದ ಮೇಲೆ ಎಲ್ಲರೂ ಒಟ್ಟಾಗಿ ಕೂತು ಚಹಾ ಸೇವಿಸುತ್ತಿದ್ದ ಸಂದರ್ಭದಲ್ಲಿ, ಪತ್ರಿಕಾ ವರದಿಗಾರರೊಬ್ಬರು ಎಡಿಜಿಪಿ ಚಂದ್ರಶೇಖರ್’ರವರು ದಾಖಲಿಸಿರುವ ಎಫ್ ಐ ಆರ್ ಹಾಗೂ ಮುಡಾ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಶಾಸಕರು ಥಟ್ಟನೆ ಪ್ರತಿಕ್ರಿಯಿಸಿದ್ದರು. ಆಗ ಅವರ ಪಕ್ಕದಲ್ಲಿ ತಹಸೀಲ್ದಾರರು ಮತ್ತು ಆರಕ್ಷಕ ವೃತ್ತ ನಿರೀಕ್ಷಕರು ಉಪಸ್ಥಿತರಿದ್ದರು. ಇದರ ಅನೌಚಿತ್ಯವನ್ನು ಉಲ್ಲೇಖಿಸಿದ ಕಾಂಗ್ರೆಸ್ ಮುಖಂಡ ಡಾ.ಸತೀಶ್ ಸಾಸಲು, ಸರ್ಕಾರಿ ಅಧಿಕಾರಿಗಳ ಜೊತೆ ಶಾಸಕರು ಸಾರ್ವಜನಿಕ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದಾಗ, ತಮ್ಮ ವೈಯಕ್ತಿಕ ಅಥವಾ ತಮ್ಮ ಪಕ್ಷದ ಅಜೆಂಡಾಗಳಿಗನುಸಾರ ಸರ್ಕಾರದ ವಿರುದ್ಧ ಅಥವಾ ರಾಜ್ಯದ ಮುಖ್ಯಮಂತ್ರಿಯ ವಿರುದ್ಧ ಮಾತನಾಡುವುದು ನ್ಯಾಯೋಚಿತವೇ ಎಂದು ಕೇಳಿದ್ದಾರೆ.
ಸಭಾ ಮರ್ಯಾದೆ ಮತ್ತು ಪರಸ್ಪರ ಗೌರವ ಮುಖ್ಯ ::
ಸಂವಿಧಾನದ ಆಶಯಗಳ ಕುರಿತು ಮಾತಾಡುವ ಕ್ಷೇತ್ರದ ಶಾಸಕ ಮತ್ತು ಜೆಡಿ(ಎಸ್) ಪಕ್ಷದ ಶಾಸಕಾಂಗ ನಾಯಕ ಸಿ ಬಿ ಸುರೇಶ್ ಬಾಬುರವರು, ಬಂದೀಖಾನೆಯಿಂದ ಸರ್ಕಾರ ನಡೆಸಬೇಕಾದ ಸಮಯ ಬರಲಿದೆ ಎನ್ನುವ ಮೂಲಕ ಮತ್ತು ಮುಖ್ಯಮಂತ್ರಿಯವರ ಕುರಿತು ಲಘುಶಬ್ಧಗಳನ್ನು ಬಳಸಿ ಮಾತಾಡುವುದರ ಮೂಲಕ ತಾವು ಸಂವಿಧಾನದ ಯಾವ ಬಗೆಯ ಆಶಯಗಳನ್ನು ಎತ್ತಿಹಿಡಿಯುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಕಾರ್ಯಕ್ರಮವೊಂದರಲ್ಲಿ ವಿರಾಮವಾಗಿ ಕೂತು ಚಹಾ ಹೀರುವ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳು ಪಕ್ಕದಲ್ಲೇ ಉಪಸ್ಥಿತರಿದ್ದಾಗ, ಸಭಾ ಮರ್ಯಾದೆ ಮತ್ತು ಪರಸ್ಪರ ಅಧಿಕಾರ ವ್ಯಾಪ್ತಿಯ ಗೌರವಾದರಗಳನ್ನು ಮರೆತು, ಸರ್ಕಾರ ಮತ್ತು ಸರ್ಕಾರದ ಮುಖ್ಯಮಂತ್ರಿಯ ವಿರುದ್ಧ ಪತ್ರಕರ್ತರ ಜೊತೆ ಮಾತಾಡಿರುವುದು ಒಂದು ಪಕ್ಷದ ಶಾಸಕಾಂಗ ನಾಯಕರಿಗೆ ಶೋಭೆ ತರುವಂಥದ್ದಲ್ಲ. ಡೆಕೋರಮ್ ಮತ್ತು ಪ್ರೊಟೊಕಾಲ್ ಸಂಬಂಧಿತ ಸಾಮಾನ್ಯ ಜ್ಞಾನ ಜನಪ್ರತಿನಿಧಿಗಳಲ್ಲಿ ಇರಬೇಕು. ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಅಲ್ಲೇ ಕೂರುವುದು ಸಮಂಜಸವಾದುದಲ್ಲ. ತಕ್ಷಣ ಅವರು ಅಲ್ಲಿಂದ ನಿರ್ಗಮಿಸಬೇಕಿತ್ತು. ಇದು ಅಚಾತುರ್ಯದ ಘಟನೆ. ತಾಲ್ಲೂಕಿನ ಶಾಸಕಾಂಗ ಮತ್ತು ನ್ಯಾಯಾಂಗ ಇದು ಮರುಕಳಿಸದಂತೆ ಎಚ್ಚರ ವಹಿಸುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.
ಹಗರಣವಲ್ಲ ಅದು ಪ್ರಕರಣ, ಅಷ್ಟೆ ::
ಮುಡಾ ಪ್ರಕರಣವನ್ನು ಹಗರಣ ಎಂಬಂತೆ ಬಿಂಬಿಸಲು ಯತ್ನಿಸುತ್ತಿರುವ ಜೆಡಿ(ಎಸ್) ಶಾಸಕಾಂಗ ನಾಯಕ ಹಾಗೂ ಕ್ಷೇತ್ರದ ಶಾಸಕ ಸುರೇಶ್ ಬಾಬುರವರು, ಅದೊಂದು ಪ್ರಕರಣವಷ್ಟೇ, ಹಗರಣವಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಲಿ. ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಟೀಕಿಸುವ ಭರದಲ್ಲಿ ಸ್ವಪಕ್ಷೀಯ ವರಿಷ್ಠರ ಮೇಲೆ ದಾಖಲಾಗಿರುವ ಕೇಸುಗಳನ್ನು ಮರೆತು ಏಕಪಕ್ಷೀಯವಾಗಿ ಮಾತನಾಡಬಾರದು. ಪೂರ್ವಾಗ್ರಹಪೀಡಿತ ಬಾಧೆಯಿಂದ ಯಾರೊಬ್ಬರ ಮೇಲೆಯೂ ಆರೋಪಗಳನ್ನು ಅಂಟಿಸಬಾರದು.
ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಹಾಗೂ ಪುನಶ್ಚೇತನ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕಾದ ಹಣ, ತಾಲ್ಲೂಕಿನಲ್ಲಿ ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ನಿಯೋಜಿತ ಕಾಮಗಾರಿಗಳು, ಉದ್ದೇಶಿತ ಕಾಮಗಾರಿಗಳು ಮತ್ತು ನಿಯತವಾದ ಘಟಕ ಯೋಜನೆಗಳಿಗೆ ಸರ್ಕಾರದ ಪ್ರತ್ಯೇಕ ಅನುದಾನವಿದ್ದೇ ಇರುತ್ತದೆ. ಅದರಂತೇ ಗಣಿ ಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದ ಬಳಕೆಗಾಗಿ ನಿಗದಿಯಾಗಿರುವ ಉದ್ದೇಶಗಳು ನಿಯಮಗಳು ಮತ್ತು ಸ್ಪಷ್ಟವಾದ ನಿಗದಿತ ಕಾಮಗಾರಿಗಳ ಅನುಷ್ಠಾನದ ಪ್ರಗತಿಯನ್ನು ಸಾರ್ವಜನಿಕಗೊಳಿಸಬೇಕು. ಬಳಕೆಯಾದ ಹಣ, ಬಳಕೆಗೆ ಬಿಡುಗಡೆಯಾಗಿರುವ ಹಣ ಹಾಗೂ ಇನ್ನೂ ಬಿಡುಗಡೆಯಾಗಲಿರುವ ಹಣ ಸೇರಿದಂತೆ ಎಲ್ಲದರ ಪಾರದರ್ಶಕವಾದ ಸಾರ್ವಜನಿಕ ಪರಿಶೀಲನೆ ನಡೆಯಲಿ. ಇದೂ ಸೇರಿದಂತೆ ಇನ್ನೂ ಅನೇಕ ರೀತಿಯ ಭಾನಗಡಿಗಳು ನಡೆಯುತ್ತಿರುವುದರ ಬಗ್ಗೆ ಮಾಹಿತಿಯಿದೆ. ಮುಂದಿನ ದಿನಗಳಲ್ಲಿ ಇದೆಲ್ಲದರ ಲೆಕ್ಕ. ಸಾರ್ವಜನಿಕವಾಗಿ ಕೇಳಲಾಗುವುದು ಎಂದು ಎಚ್ಚರಿಸುತ್ತಾ, ಗಾಜಿನ ಮನೆಯಲ್ಲಿರುವವರು ಗಾಜಿಗೆ ಕಲ್ಲು ಹೊಡೆಯಲು ಹೋಗಬಾರದು ಎಂಬ ಗಾದೆಯನ್ನು ಇಲ್ಲಿ ಡಾ.ಸತೀಶ್ ಸಾಸಲು ನೆನಪಿಸಿದರು.