ಗಂಡಾತರಕಾರಿ ಕುಲಾಂತರಿ(ಜಿಎಂ) ವಿರುದ್ಧ
ಗಾಂಧಿ ಬೇಸಾಯಾಶ್ರಮದ ದೊಡ್ಡಹೊಸೂರು ಸತ್ಯಾಗ್ರಹ
ಚಿಕ್ಕನಾಯಕನಹಳ್ಳಿ : ದೇಶದ ಮೇಲೆ ಎರಗುವ ಎಲ್ಲ ಗಂಡಾಂತರಗಳಿಗೂ ಸದಾಕಾಲ ರೈತ ಮತ್ತು ಸೈನಿಕನೇ ತಕ್ಕ ಉತ್ತರದಂತೆ ಎದುರಾಗಿ ಹೋರಾಡುವುದು. ಎಲ್ಲ ಅರ್ಥದಲ್ಲೂ ರೈತ ದೇಶದ ಬೆನ್ನೆಲುಬೇ ಹೌದು ಎಂದು ರೈತ-ಸಹಜಕೃಷಿ ಕಾರ್ಯಕರ್ತ ಮಲ್ಲಿಕಾರ್ಜುನ ಭಟ್ರಳ್ಳಿ ವಿಶ್ಲೇಷಿಸುತ್ತಾರೆ. ಗುರುವಾರ ಚಿಕ್ಕನಾಯಕನಹಳ್ಳಿ ತಾಪಂ ಸಭಾಂಗಣದಲ್ಲಿ ನಡೆದ ಸಭೆಯೊಂದರಲ್ಲಿ ದೊಡ್ಡಹೊಸೂರಿನ ಸತ್ಯಾಗ್ರಹ ಬೆಂಬಲಿಸುವ ಅಗತ್ಯತೆಯ ಕುರಿತು ಮಲ್ಲಿಕಾರ್ಜುನ ಭಟ್ರಳ್ಳಿ ಮುಖೇನ ಆಸಕ್ತಿಯ ಬಹಳಷ್ಟು ಮಾತುಕತೆಗಳು ನಡೆದವು.
ಪ್ರಸ್ತುತ ಕಾಲದಲ್ಲಿ ಹಿಂದೆಂದೂ ಕಂಡಿಲ್ಲದಷ್ಟು ವ್ಯಾಪಕವಾಗಿ ನಮ್ಮ ಮಾರುಕಟ್ಟೆಯನ್ನು ಆಕ್ರಮಿಸಿರುವ ಕುಲಾಂತರಿ ತಳಿಯ (ಜಿಎಂ) ಆಹಾರವು, ನಮ್ಮ ಆರೋಗ್ಯ, ನಮ್ಮ ಪರಿಸರ ಹಾಗೂ ನಮ್ಮ ಕೃಷಿ ಭದ್ರತೆಗೆ ಸವಾಲುಗಳನ್ನು ಒಡ್ಡುತ್ತಿದೆ. ಈಯೆಲ್ಲ ಸವಾಲು ಮತ್ತು ಬೆದರಿಕೆಗಳನ್ನು ಇದಿರುಗೊಳ್ಳಲು ದೊಡ್ಡಹೊಸೂರು ಸತ್ಯಾಗ್ರಹ ಒಂದು ಪರ್ಯಾಯವಾಗಿ ಕಂಡಿದೆ. ಈ ಸತ್ಯಾಗ್ರಹ ಚಳವಳಿಯ ಮೂಲಕ ಕುಲಾಂತರಿ ತಳಿಯ(ಜಿಎಂ) ಆಹಾರಗಳನ್ನು ಧಿಕ್ಕರಿಸುವುದಷ್ಟೇ ಅಲ್ಲದೆ, ಹವಾಮಾನ ವೈಪರೀತ್ಯಗಳಿಗೆ ಹೊಂದಿಕೊಳ್ಳುವ ಗುಣವುಳ್ಳ ಸುಸ್ಥಿರ ಮತ್ತು ಸಮರ್ಥವಾದ ಸಹಜ ಬೇಸಾಯ ಪದ್ಧತಿ ಹಾಗೂ ಸಾವಯವ ಕೃಷಿ ಪದ್ಧತಿಗಳ ಮೂಲಕ ನಮ್ಮ ಭವಿಷ್ಯವನ್ನು ಸದೃಢದಾಯವಾಗಿ ಕಾಪಾಡಿಕೊಳ್ಳುವುದೂ ಆಗಿದೆ. ಆಶಾವಾದ ಮತ್ತು ನೈಸರ್ಗಿಕ ಅಪಾಯಗಳ ನಡುವಿನ ಜಗ್ಗಾಟದಲ್ಲಿ ಜನಸತ್ಯಾಗ್ರಹದ ಇಂತಹ ಶಾಂತಿಯುತ ಹೋರಾಟ ಉತ್ತರವಾಗಿ ಜಗತ್ತಿಗೆ ಕಾಣ್ಕೆ ನೀಡಬೇಕಿದೆ ಎಂದು ಗಾಂಧಿ ಸಹಜ ಬೇಸಾಯ ಆಶ್ರಮದ ಡಾ.ಮಂಜುನಾಥ್ ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಹಜಕೃಷಿ ಅನುಷ್ಠಾನ’ ಯೋಜನೆಯ ಪ್ರಗತಿಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದ ಮಂಜುನಾಥ್ ಮಾತನಾಡುತ್ತಾ, ಸೆಪ್ಟೆಂಬರ್ 29, 30 ಮತ್ತು ಅಕ್ಟೋಬರ್ 1 ಹಾಗೂ 2 ರವರೆಗೆ ತುಮಕೂರಿನ ದೊಡ್ಡಹೊಸೂರಿನಲ್ಲಿ ನಡೆಯಲಿರುವ ದೊಡ್ಡಹೊಸೂರು ಸತ್ಯಾಗ್ರಹದ ವಿವರಗಳನ್ನು ಹಂಚಿಕೊಂಡರು.
ಪ್ರಕೃತಿ ಮತ್ತು ಮಾನವತೆಯ ಪರವಾದ ಸಹಜ ಕಾಳಜಿಯುಳ್ಳ ರೈತರು, ರೈತ ಮುಖಂಡರು, ಧಾರ್ಮಿಕ ಮುಖಂಡರು, ಸಂವೇದನಾಶೀಲರು, ಬುದ್ಧಿಜೀವಿಗಳು, ನಿಷ್ಠಾವಂತ ಅಧಿಕಾರಿಗಳು, ಮಹಿಳಾ ಗುಂಪುಗಳು, ಕಾರ್ಮಿಕರು, ಕಾರ್ಮಿಕ ಒಕ್ಕೂಟಗಳು, ಕಾರ್ಮಿಕ ಮುಖಂಡರು, ಗ್ರಾಹಕರು ಹಾಗೂ ಸಹಜ ಮತ್ತು ಸಾವಯವ ಕೃಷಿಯ ಪ್ರತಿಪಾದಕರು, ವಿದ್ಯಾರ್ಥಿಗಳು ಹಾಗೂ ಪ್ರತಿಯೊಬ್ಬ ಭಾರತೀಯ ನಾಗರೀಕರು ಒಗ್ಗೂಡಿ ದೊಡ್ಡಹೊಸೂರು ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ, ತಾಲ್ಲೂಕಿನ ರೈತ ಮತ್ತು ಸಹಜಕೃಷಿ ಕಾರ್ಯಕರ್ತರಾದ ಮಲ್ಲಿಕಾರ್ಜುನ ಭಟ್ರಳ್ಳಿ ಮಾತನಾಡಿ,
ಸಹಜಕೃಷಿ ಹೇಗೆ ಕುಲಾಂತರಿ (ಜಿಎಂ) ತಳಿಗಳ ಆಹಾರೋತ್ಪನ್ನಗಳಿಗೆ ಸವಾಲೊಡ್ಡಬೇಕು ಮತ್ತು ಸುಸ್ಥಿರವಾದ ಜನ-ಜಾನುವಾರು ಹಾಗೂ ಜೀವಪರ ಕೃಷಿಯೇ ದೇಶದ ರೈತನ ಧ್ಯೇಯವಾಗಬೇಕು ಎಂಬುದನ್ನು ವಿವರಿಸಿದರು.
ದೊಡ್ಡಹೊಸೂರು ಸತ್ಯಾಗ್ರಹ ಕಾರ್ಯಕ್ರಮಗಳು ::
ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಜಿಎಂ ಆಹಾರಗಳ ಪ್ರತಿಕೂಲ ಪರಿಣಾಮಗಳು ಹಾಗೂ ಪಂಚಾಯತಿ ಮಟ್ಟದಲ್ಲಿ ನೈಸರ್ಗಿಕ ಕೃಷಿಯನ್ನು ಮುಂದುವರೆಸುವ ತಂತ್ರಗಳ ಕುರಿತ ಚರ್ಚಾ ಅಧಿವೇಶನವನ್ನು ಆಯಾಯಾ ದಿನದ ಮುಖ್ಯ ಅತಿಥಿಗಳು ನಡೆಸಿಕೊಡುತ್ತಾರೆ.
ಸತ್ಯಾಗ್ರಹಿ ಗುಡಿಸಲುಗಳ ಕಾರ್ಯಾಗಾರದಲ್ಲಿ, ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳ ವೈಜ್ಞಾನಿಕ ಅರಿವು, ಗಿಡಗಳ ಕಸಿ ಮಾಡುವ ಮತ್ತು ಕಟ್ಟುವ ತಂತ್ರಗಳ ತರಬೇತಿ, ಕುಡಗೋಲು-ಗುದ್ದಲಿ ಇತ್ಯಾದಿ ಕೃಷಿ ಉಪಕರಣಗಳನ್ನು ತಯಾರಿಸುವ ತರಬೇತಿ, ನೈಸರ್ಗಿಕ ಕೃಷಿಯಲ್ಲಿ ಸಂಪನ್ಮೂಲಗಳು ಮತ್ತು ಮಾಹಿತಿ ಪುಸ್ತಕಗಳ ಲಭ್ಯ, ಸ್ಥಳೀಯ ಬೀಜಗಳ ತಯಾರಿ ಮತ್ತು ಅವುಗಳ ಅನುವಂಶಿಕ ಶಕ್ತಿಯ ನಿರ್ವಹಣೆ ಬಗೆಗಿನ ತರಬೇತಿ ಜೊತೆಗೆ,
ಕೊಂಬುಜಾ, ಕುನಾಪಜಲ, ಮಜ್ಜಿಗೆ ಪಂಚಗವ್ಯ, ಮೊಟ್ಟೆ ಮತ್ತು ಮೀನಿನ ಅಮೈನೋ ಆಮ್ಲಗಳು, ಹಾಲಿನ ಸೂಕ್ಷ್ಮಜೀವಿಗಳು, ಜೈವಿಕ ಕಿಣ್ವಗಳು ಸೇರಿದಂತೆ ಇತ್ಯಾದಿ ಸಾವಯವ ಒಳಸುರಿಗಳ ತಯಾರಿಕೆಯ ತರಬೇತಿಯನ್ನು ನೀಡಲಾಗುವುದು. ಅಲ್ಲದೇ ಸತ್ಯಾಗ್ರಹದಲ್ಲಿ ಪಾಲ್ಗೊಂಡವರು ಜಿಎಂ ಆಹಾರಗಳನ್ನು ಬಹಿಷ್ಕರಿಸಬೇಕಾದ ತಮ್ಮ ವಿಚಾರ ಮತ್ತು ನಿಲುವು ವ್ಯಕ್ತಪಡಿಸಲು ಒಂದು ನಿಮಿಷದ ವಿಡಿಯೋ ಚಿತ್ರಿಸಲು ವಿಡಿಯೋ ಪಾಯಿಂಟ್ ಕೂಡ ಲಭ್ಯ ಇರುತ್ತದೆ.
ಕಾರ್ಯಕ್ರಮದಲ್ಲಿ ಸಹಜಕೃಷಿ ಕಾರ್ಯಕರ್ತ ಮತ್ತು ರೈತ ಮಲ್ಲಿಕಾರ್ಜುನ ಭಟ್ರಳ್ಳಿ ಹಾಗೂ ಕೆಲವು ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ರೈತರು ಉಪಸ್ಥಿತರಿದ್ದರು.
__ಸಂಚಲನ
ಚಿಕ್ಕನಾಯಕನ ಸೀಮೆಯಿಂದ