Sunday, September 8, 2024
Google search engine
HomeUncategorizedಸೌಹಾರ್ದ ಪರಂಪರೆಯ ಅಪರೂಪದ ಮಾದರಿಗಳು...

ಸೌಹಾರ್ದ ಪರಂಪರೆಯ ಅಪರೂಪದ ಮಾದರಿಗಳು…

ಚಿಕ್ಕನಾಯಕನಹಳ್ಳಿಯು ಅವಧೂತ, ಸೂಫಿ ಪಂಥದ ತವರೂರು ಎನ್ನಬಹುದು. ಇಲ್ಲಿಯ ಬಾಬಯ್ಯ ಸೌಹಾರ್ಧ, ಸೂಫಿ ಪರಂಪರೆಗೆ ನಾಡಿಗೆ ಅಗ್ರ ಪಂಕ್ತಿ ಹಾಕಿಕೊಟ್ಟವರು. ಈ ಸೌಹಾರ್ಧತೆ ಉಳಿಸಲು ಇಲ್ಲಿನ ಜನರು ಈಗಲೂ ಟೊಂಕಕಟ್ಟಿ ನಿಂತಿರುವುದನ್ನು ಸಂಚಲನ ಅವರು.

ಚಿಕ್ಕನಾಯಕನಹಳ್ಳಿ : ನಾಡಿನುದ್ದಕ್ಕೂ ಹಾಸುಹೊಕ್ಕಾಗಿರುವ ಹತ್ತಾರು ಬಗೆಯ ಸೌಹಾರ್ದ ಪರಂಪರೆಗಳು ಈಗಲೂ ರೂಢಿಯಲ್ಲಿರುವುದು ಕೆಲವು ವಿಶೇಷ ಸಂದರ್ಭಗಳಲ್ಲಿ ಕಾಣಸಿಗುತ್ತದೆ.

ಆದಿಯಿಂದಲೂ ವಿಶ್ವಬಂಧುತ್ವದ ಕಳಕಳಿಯಿರುವ ಭಾರತೀಯ ಸಮಾಜದ ಬಹುಮುಖ್ಯ ಆಶಯಗಳನ್ನೇ ಇಂಥ ಸೌಹಾರ್ದ ಪರಂಪರೆಗಳು ಪ್ರತಿಧ್ವನಿಸುತ್ತಿವೆ. ಇಂಥ ಆಶಯ‌ದ ಅಪರೂಪದ ಎರಡು ಎರಡು ಮಾದರಿಗಳು ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿವೆ.

ಪಟ್ಟಣದ ಹಿರಿಯ ನಿವಾಸಿಗಳಾದ ಶ್ರೀ ‌ಸಿ ಎಸ್ ದೊಡ್ಡಯ್ಯನವರು ಮತ್ತು ದಿವಂಗತ ‌ಕೆ. ರಾಮಯ್ಯರ ಧರ್ಮಪತ್ನಿ ದುರ್ಗಮ್ಮಜ್ಜಿಯವರು ಊರಿನ ಸೌಹಾರ್ದ ಪರಂಪರೆಗೆ ಕಾಣ್ಕೆ ನೀಡುತ್ತಿರುವ ಶಾಂತಿಪ್ರಿಯರು.

ಶ್ರೀ ಸಿ ಎಸ್ ದೊಡ್ಡಯ್ಯ ::
ಪಟ್ಟಣದ ಕೆ‌ ಆರ್ ಮಾರುಕಟ್ಟೆ ಬಳಿ ವಾಸವಿರುವ ಶ್ರೀ ಸಿ ಎಸ್ ದೊಡ್ಡಯ್ಯನವರು ಮಾನವೀಯ ಹಿರಿತನದ ಅನುಭಾವಿ ಜೀವ. ಇವರು ಫ್ಲೋರ್’ಮಿಲ್ ನಡೆಸುತ್ತಾ, ಟೆಂಟು-ಶಾಮಿಯಾನ ಸೇವೆ ಒದಗಿಸುತ್ತಾ ಬಾಳಿ ಬದುಕಿದವರು. ಭಾವೈಕ್ಯತೆ-ಸೌಹಾರ್ದತೆಗೆ ಇವರು ಹೆಸರುವಾಸಿ.

ರಂಜ಼ಾನ್ ಮತ್ತು ಬಕ್ರೀದ್ ಹಬ್ಬಗಳ ಸಂದರ್ಭದಲ್ಲಿ ನಮಾಜ಼್-ಪ್ರಾರ್ಥನೆ ಸಲ್ಲಿಸಲು ಈದ್ಗಾ ಮೈದಾನಕ್ಕೆ ಬರುವ ಮುಸಲ್ಮಾನ ಅಣ್ಣ-ತಮ್ಮಂದಿರಿಗಾಗಿ ಪ್ರತಿವರ್ಷವೂ ತಪ್ಪದಂತೆ ನೆಲಹಾಸು ಹಾಸಿಕೊಡುವ, ಜಮಖಾನ ಒದಗಿಸಿಕೊಡುವ, ಶಾಮಿಯಾನ ಕಟ್ಟಿಕೊಡುವ ಸೇವೆಗಳನ್ನು ಉಚಿತ ಸೇವಾರ್ಥರೂಪದಲ್ಲಿ ಮಾಡುತ್ತಾ ಬಂದಿದ್ದಾರೆ.

ಇಂಥ ಈ ಸೇವಾಕಾರ್ಯವನ್ನು ಇವರು ಕಳೆದ ಐವತ್ತು ವರ್ಷಗಳಿಂದಲೂ ನಿರಂತರವಾಗಿ ನಡೆಸುತ್ತಿದ್ದಾರೆ. ಜೊತೆಗೆ ನಮಾಜ಼್ ಮಾಡುವಾಗ ಕಲ್ಮಾ, ಸೂರಾ (ಅರೇಬಿಕ್ ಶ್ಲೋಕ-ಮಂತ್ರೋಚ್ಛಾರ) ಗಳನ್ನು ಪಠಿಸಲು ಮೌಲಾನಾಗಳಿಗೆ ಅಗತ್ಯಬರುವ ಮೈಕು, ಸ್ಪೀಕರ್ರುಗಳನ್ನು ಇವರು ಉಚಿತ ಸೇವಾರ್ಥವಾಗಿ ನಿರಂತರ ಒದಗಿಸುತ್ತಾ, ಹಿಂದೂ-ಮುಸ್ಲಿಮ್ ಶಾಂತಿ-ಸೌಹಾರ್ದತೆಯ ಭಾವೈಕ್ಯತೆಗೆ ಕಾಣ್ಕೆ ನೀಡುತ್ತಿದ್ದಾರೆ.

ದುರ್ಗಮ್ಮಜ್ಜಿ ::
ದಿವಂಗತ ಕೆ ರಾಮಯ್ಯನವರ ಧರ್ಮಪತ್ನಿಯಾದ ದುರ್ಗಮ್ಮಜ್ಜಿಗೀಗ ಅರವತ್ತು ದಾಟಿದ ವಯಸ್ಸು. ಆದರೆ, ತನ್ನ ಪತಿ ನಡೆಸಿಕೊಂಡು ಬಂದ ಸೌಹಾರ್ದ ಪರಂಪರೆಯ ಸೇವೆಯನ್ನು ಇಂದಿಗೂ ಚೂರೂತಪ್ಪದೆ ನಡೆಸುತ್ತಿದ್ದಾರೆ.

ಇವರು ಹಾಗೂ ಇವರ ಮಕ್ಕಳು ಸೇರಿ ಪ್ರತಿವರ್ಷದ ರಂಜ಼ಾನ್ ಹಾಗೂ ಬಕ್ರೀದ್ ‌ಹಬ್ಬಗಳಂದು ನಮಾಜ಼್ ಸಲ್ಲಿಸಲು ಈದ್ಗಾ ಮೈದಾನಕ್ಕೆ ಬರುವ ಮುಸ್ಲಿಮ್ ಬಾಂಧವರಿಗೆ ಕುಡಿಯುವ ನೀರು ಮತ್ತು ವಜ಼ೂ (ಕೈ-ಕಾಲು ಶುದ್ಧಿ) ಮಾಡಲು ಬೇಕಾದ ನೀರನ್ನು ಪೂರೈಸುವ ಉಚಿತ ಸೇವೆಯನ್ನು ಒದಗಿಸುತ್ತಾ ಬಂದಿದ್ದಾರೆ.

ಇವರ ಪತಿಯ ಮರಣಾನಂತರವೂ ಇದನ್ನು ಮುಂದುವರಿಸಿದ ದುರ್ಗಮ್ಮಜ್ಜಿ, ಇವರ ಮಗನಾದ ಪಂಪ್’ಹೌಸ್ ಗೋವಿಂದಣ್ಣನ ಸಹಕಾರದೊಂದಿಗೆ ಕಳೆದ ಐವತ್ತು ವರ್ಷಗಳಿಂದಲೂ ನಮಾಜ಼ಿಗಳಿಗೆ ನೀರು ಒದಗಿಸುವ ಈ ಸೇವೆಯನ್ನು ನಿರಂತರ ನಡೆಸುತ್ತಲೇ ಬಂದಿದ್ದಾರೆ. ಹೀಗೆ ತಮ್ಮ ಪತಿ ಹೇಳಿಟ್ಟುಹೋದ ಸೌಹಾರ್ದತೆಯ ಪರಂಪರೆಯನ್ನು ಮುಂದುವರೆಸುವುದರ ಮೂಲಕ ದುರ್ಗಮ್ಮಜ್ಜಿ ಮಾದರಿ ಮಹಿಳೆಯಾಗಿದ್ದಾರೆ.

ಕೋಮು, ಜಾತಿ, ಧರ್ಮಗಳ ಅಕಾರಣ ನಂಜಿಗೆ ನಿತ್ಯ ಬಲಿಯಾಗುತ್ತಿರುವ ಸಮಾಜದಲ್ಲಿ ಇಂಥ ಅಪರೂಪದ ಹಿರಿಯ ಜೀವಗಳು ಇನ್ನೂ ನಮ್ಮ ನಡುವೆ ನೆಲೆ ನಿಂತಿರುವುದು ಭಾರತೀಯ ಸೌಹಾರ್ದ ಪರಂಪರೆಯ ಜೀವ-ಕಾರುಣ್ಯದ ಹೆಗ್ಗರುತುಗಳಿದ್ದಂತೆ.

__

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?