ಹೆಬ್ಬೂರು: ಸುರೇಶಗೌಡರು ಇಡೀ ರಾಜ್ಯದಲ್ಲೇ ಮಾದರಿ ಶಾಸಕರಂತೆ ಕೆಲಸ ಮಾಡಿದ್ದರು. ಸುರೇಶಗೌಡರು ದ್ರೋಹದಿಂದ, ಮೋಸದಿಂದ ಸೋಲಿಸುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ನಾನು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಿದ ಸುರೇಶಗೌಡರನ್ನು ಈ ಸಲ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಡಬೇಕು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗ್ರಾಮಾಂತರದ ಜನರಿಗೆ ಮನವಿ ಮಾಡಿದರು.
ಇಲ್ಲಿ ಸುರೇಶಗೌಡರ ಪರ ಪ್ರಚಾರ ನಡೆಸಿದರು.
ಸುರೇಶ ಗೌಡರನ್ನು ಕಳೆದ ಸಲ ಮೋಸದಿಂದ ಸೋಲಿಸಿದ್ದಾರೆ. ಈ ಸಲ ಅವರನ್ನು ಹಿಂದೂ, ಮುಸ್ಲಿಂ ಬಾಂಧವರು ಎಲ್ಲರೂ ಸೇರಿ ಗೆಲ್ಲಿಸಬೇಕು. ಎಲ್ಲರೂ ಸೇರಿಕೊಂಡು ಅವರ ಗೆಲುವಿಗೆ ಕೆಲಸ ಮಾಡಬೇಕು. ಅವರಿಗೆ ಮೋಸ ಮಾಡದಂತೆ ನೋಡಿಕೊಳ್ಳಬೇಕು ಎಂದರು.
ಸುರೇಶಗೌಡರು ದೇಶಕ್ಕೆ ಮಾದರಿಯಾದ ಶಾಸಕರು. ಅವರಿಗೆ ಯಾವತ್ತೂ ಮೋಸವಾಗದಂತೆ ಇಲ್ಲಿನ ಜನರೇ ನೋಡಿಕೊಳ್ಳಬೇಕು ಎಂದರು. ಸೇರಿದ್ದ ಸಹಸ್ರಾರು ಜನರು ಸಿಳ್ಳೆ, ಕೇಕೆ ಹೊಡೆದರು.
ಜಿಲ್ಲೆಯ ಅಭಿವೃದ್ಧಿ ಗೆ ಬಿಜೆಪಿ ಸರ್ಕಾರ ಕೊಡುಗೆ ನೀಡಿದೆ. ಮಾಜಿ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡರು, ಸಂಸದ ಜಿ.ಎಸ್.ಬಸವರಾಜ್ ಸಾಕಷ್ಟು ಕೆಲಸ ಮಾಡಿದ್ದಾರೆ. ಇವರೆಲ್ಲರ ಆರ್ಶೀವಾದದಿಂದ ಸುರೇಶಗೌಡರನ್ನು ಭಾರೀ ಅಂತರದಿಂದ ಗೆಲ್ಲಿಸಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಕರ್ನಾಟಕವನ್ನು ಅಭಿವೃದ್ಧಿಗೊಳಿಸುತ್ತೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೆ ತರುತ್ತೇವೆ ವಾಗ್ದಾನ ಮಾಡಿದರು.
ಮಾಜಿ ಶಾಸಕ ಸುರೇಶಗೌಡರು ಮಾತನಾಡಿ, ಹೊನ್ನುಡಿಕೆ ರಸ್ತೆಗೆ, ನಾಗವಲ್ಲಿ- ಸಿ.ಎಸ್ .ಪುರ ರಸ್ತೆ, ನಾಗವಲ್ಲಿ,ಹೊನ್ನುಡಿಕೆ ಸೇರಿದಂತೆ ಹನ್ನೊಂದು ಪಂಚಾಯತಿಗಳಿಗೆ ನೂರು ಕೋಟಿ ಅನುದಾನದಲ್ಲಿ ಕುಡಿಯುವ ನೀರು ಕೊಟ್ಟಿದ್ದು ಯಡಿಯೂರಪ್ಪನವರು. ಅವರ ಕಾಲದಲ್ಲಿ 2500 ಕೋಟಿ ರೂಪಾಯಿ ಅನುದಾನವನ್ನು ಕ್ಷೇತ್ರಕ್ಕೆ ಕೊಟ್ಟರು ಎಂದು ಸ್ಮರಿಸಿದರು.
ಈ ಸಲ ನಮ್ಮದೇ ಸರ್ಕಾರ ಬರಲಿದೆ. ಅತಿ ಹೆಚ್ಚು ಅನುದಾನ ತಂದು ಅಭಿವೃದ್ಧಿ ಪಡಿಸುವೆ. ಹತ್ತು ವರ್ಷದ ಅವಧಿಯಲ್ಲಿ ನಾನೇದರೂ ತಪ್ಪು ಮಾಡಿದ್ರೆ ನಿಮ್ಮ ಕಾಲಿಗೆ ಬೀಳುತ್ತೇನೆ. ನನ್ನನ್ನು ಕ್ಷಮಿಸಿ. ಇಡೀ ಕ್ಷೇತ್ರವನ್ನು ದೇಶವೇ ತಿರುಗಿ ನೋಡುವಂತೆ ಅಭಿವೃದ್ಧಿಪಡಿಸುವೆ ಎಂದು ಭರವಸೆ ನೀಡಿದರು.
ಲಕ್ಷಕ್ಜೂ ಅಧಿಕ ಜನರು ಸೇರಿದ್ದರು. ರಸ್ತೆಯ ಉದ್ದಗಲಕ್ಕೂ ಜನರು ಕಿಕ್ಕಿರಿದು ಸೇರಿದ್ದರು. ಜಾಗ ಸಾಲದೇ ಸಿಕ್ಕಸಿಕ್ಕ ಕಟ್ಟಡ, ಮರಗಳನ್ನು ಏರಿ ಯಡಿಯೂರಪ್ಪ ಅವರತ್ತ ಕೈ ಬೀಸಿದರು.