ತುರುವೇಕೆರೆ: ಗಣಪತಿವಿಸರ್ಜನೆ ಮಾಡಲು ಹೋಗಿ ಅಪ್ಪ, ಮಗ ಮತ್ತು ಒರ್ವ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಮಾರಸಂದ್ರ ಸಮೀಪದ ರಂಗನಹಟ್ಟಿ ಕಟ್ಟೆಯಲ್ಲಿ ಭಾನುವಾರ ನಡೆದಿದೆ.
ರಂಗನಹಟ್ಟಿ ಗ್ರಾಮದ ನಿವಾಸಿಗಳಾದ ರೇವಣ್ಣ(50) ಆತನ ಮಗ ಶರತ್(26), ದಯಾನಂದ್(22), ಮೃತರು. ಗ್ರಾಮದಲ್ಲಿ ಪ್ರತಿಷ್ಟಾಪಿಸಿದ್ದ ಗಣೇಶನನ್ನು ಊರಿನ ಯುವಕರು ಬೆಳಗಿನಿಂದ ಮೆರವಣಿಗೆ, ಉತ್ಸವ ನಡೆಸಿ 3 ಗಂಟೆಯ ನಂತರ ರಂಗನಕಟ್ಟೆಯಲ್ಲಿ ಗಣೇಶನ ವಿಸರ್ಜನೆ ಮಾಡಲು ಬಂದಿದ್ದಾರೆ. ನಂತರ ಗಣೇಶನನ್ನು ಹಿಡಿದು ಶರತ್ ಮತ್ತು ದಯಾನಂದ್ ನೀರಿಗೆ ಇಳಿದಿದ್ದಾರೆ.
ಈ ವೇಳೆ ಕಟ್ಟೆಯಲ್ಲಿನ ಕೆಸರಿನಿಂದ ಕಾಲುಗಳು ಹೂತುಕೊಂಡು ಈಜಲು ಸಾದ್ಯವಾಗದೆ ಕಟ್ಟೆಯ ದಡದಲ್ಲಿದ್ದವರ ಸಹಾಯಕ್ಕೆ ಕೂಗಿಕೊಂಡಿದ್ದಾರೆ. ತಕ್ಷಣ ಮಗ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಶರತ್ ಅವರ ತಂದೆ ರೇವಣ್ಣನೂ ನೀರಿಗೆ ದುಮಿಕಿದ್ದಾನೆ. ಆತನೂ ಈಜಲು ಆಗದೆ ನೀರಿನಲ್ಲಿ ಮುಳುಗಿದ್ದಾನೆ.
ವಿಷಯ ತಿಳಿದು ರಂಗನಹಟ್ಟಿ ಸುತ್ತಮುತ್ತಲಿನ ಜನ ಧಾವಿಸಿ, ಜಮಾಯಿಸಿದ್ದರು. ಮೃತರ ಎರಡೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಿಪಿಐ ಲೋಹಿತ್, ದಂಡಿನಶಿವರ ಪಿಎಸ್.ಐ ಚಿತ್ತರಂಜನ್, ಎಸ್ಪಿ ಅವರು ಸ್ಥಳಕ್ಕೆ ಬೇಟಿ ನೀಡಿ ತುರುವೇಕೆರೆ ಪಟ್ಟಣದ ಅಗ್ನಿ ಶಾಮಕ ದಳದ ಸಿಬ್ಬಂದಿಗಳನ್ನು ಶವ ಪತ್ತೆ ಕಾರ್ಯಕ್ಕೆ ಕರೆಯಿಸಿಕೊಂಡಿದ್ದಾರೆ.
‘ಐದಾರು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಟ್ಟಿಗೆ ಇಳಿದು ಹಗ್ಗ, ಕಬ್ಬಣಿದ ಕೊಕ್ಕೆ, ಬಲೂನ್ ಬಳಸಿ ಶವಗಳ ಶೋಧ ನಡೆಸುತ್ತಿದ್ದು ಆಗಲೂ ಪತ್ತೆಯಾಗದಿದ್ದರೆ ಬೋಟ್ ಬಳಸಿ ಶೋಧ ಕಾರ್ಯ ನಡೆಸಲಾಗುವುದು ಜೊತೆಗೆ ಕತ್ತಲೆಯಾಗುತ್ತಿರುವುದರಿಂದ ಶವ ಹುಡುಕುವ ಕೆಲಸವೂ ವಿಳಂಭವಾಗುವ ಸಾದ್ಯತೆ ಇದೆ ಎನ್ನುತ್ತಾರೆ ಅಗ್ನಿ ಶಾಮಕ ಠಾಣಾಧಿಕಾರಿ ಚನ್ನಾಚಾರಿ.’
ಈ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಂದು ಪೊಲೀಸರು ತಿಳಿಸಿದ್ದಾರೆ.