ತುರುವೇಕೆರೆ, ಜ-೨೫
ಹಾಸ್ಯವೆಂದರೆ ನಕ್ಕು ಸುಮ್ಮನಾಗುವುದಲ್ಲ, ಅದೊಂದು ಸಂತೃಪ್ತ ಮನಸ್ಥಿತಿಯಾಗಿದ್ದು ಬದುಕನ್ನು ಹೆಚ್ಚು ಸಹನೀಯವಾಗಿಸುತ್ತದೆ ಎಂದು ಖ್ಯಾತ ಹಾಸ್ಯ ಸಾಹಿತಿ ಹಾಗೂ ನಗೆಗಾರ ಎಂ.ಎಸ್.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಉತ್ಸವದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ದೈನಂದಿನ ಬದುಕು ಹೆಚ್ಚು ಜಂಜಾಟಗಳಿಂದ ಕೂಡಿದ್ದು ಜನ ತೀವ್ರ ಒತ್ತಡದ ಪರಿಣಾಮ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಹಾಗೆಯೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೋಲೂ ಸಹಜವೇ ಆಗಿದೆ. ಮಾನಸಿಕ ಧೃಡತೆ, ಲವಲವಿಕೆ ಉಳಿಸಿಕೊಳ್ಳಲು ಹಾಗೂ ಆತ್ಮವಿಶ್ವಾಸದಿಂದ ಸೋಲುಗಳನ್ನು ಸ್ವೀಕರಿಸಲು ಹಾಸ್ಯಪ್ರಜ್ಞೆ ದಿವ್ಯೌ಼ಷಧ ಎಂದ ಅವರು ಹಲವಾರು ನಗೆಪ್ರಸಂಗಗಳನ್ನು ಹೇಳಿ ವಿದ್ಯಾರ್ಥಿಗಳನ್ನು ರಂಜಿಸಿದರು.
ತುಮಕೂರು ಜಿಲ್ಲಾ ಪ.ಪೂ.ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಾಧರ್ ಮಾತನಾಡಿ ಪರಂಪರವಾಗಿ ಬಂದ ಜ್ಞಾನ ಅತ್ಯಂತ ಶ್ರೇಷ್ಠವಾದದ್ದು ಮತ್ತು ಶಾಶ್ವತವಾದದ್ದು. ಕೃತಕವಾದ ಬುದ್ದಿಮತ್ತೆ ಮತ್ತು ಮಾಹಿತಿ ಕ್ಷಣಿಕವಾದದ್ದು. ಹಾಗಾಗಿ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು
ಬರಹಗಾರ ತುರುವೇಕೆರೆ ಪ್ರಸಾದ್ ಮಾತನಾಡಿ ಶಿಕ್ಷಣ ಸ್ವಾರ್ಥ ಸಾಧನೆ ಮತ್ತು ಐಶರಾಮಿ ಬದುಕಿನ ಸೋಪಾನವಲ್ಲ, ಬದಲಿಗೆ ಅದು ಜೀವನದಲ್ಲಿ ಕೃತಕೃತ್ಯತೆಯ ಭಾವ ಮೂಡಿಸಬೇಕು. ವಿದ್ಯಾರ್ಥಿಗಳು ತಾವು ಪಡೆದದ್ದನ್ನು ಸಮಾಜಕ್ಕೆ ವಾಪಸ್ ಕೊಡುವ ಋಣಸಂದಾಯದ ಉತ್ತರದಾಯಿತ್ವ ಹೊಂದಬೇಕು ಎಂದರು.
ಸಮಾರಂಭದಲ್ಲಿ ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ, ಹಾಗೂ ಶ್ರೀ ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್. ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಕೆ.ಎಲ್.ಅನಂತರಾಮು ಅಧ್ಯಕ್ಷತೆ ವಹಿಸಿದ್ದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ಕೆ. ಪ್ರಭಾಕರ್, ಉಪಾಧ್ಯಕ್ಷೆ ಶೀಲಾ, ಮಾಜಿ ಅಧ್ಯಕ್ಷ ಚಿದಾನಂದ್, ಉಪನ್ಯಾಸಕಿ ತಸ್ಲಿಮುನ್ನೀಸಾ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ನಿಜಗುಣ ಸ್ವಾಗತಿಸಿದರು, ವಿ.ಎನ್.ನಂಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಚಂದ್ರ ಮತ್ತು ಶಹನಾಜ್ ಬಾನು ನಿರೂಪಿಸಿದರು.