ತುಮಕೂರು: ನನ್ನ ಇದುವರೆಗಿನ ರಾಜಕೀಯ ಜೀವನದಲ್ಲಿ ತಿಗಳ ಸಮುದಾಯ ಆರಂಭದಿಂದಲೂ ಜೊತೆಗಿದ್ದು ಸಹಕಾರ ನೀಡುತ್ತಾ ಬಂದಿದ್ದು,ನನ್ನನ್ನು ಶಾಸಕನಾಗಿ ನೋಡದೆ, ಓರ್ವ ಮನೆ ಮಗನಂತೆ ಪರಿಗಣಿಸಿದ್ದು, ನಿಮ್ಮ ಪ್ರೀತಿಗೆ ನಾನು ಚಿರಋಣಿ ಎಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ತಿಳಿಸಿದ್ದಾರೆ.
ತುಮಕೂರು ಗ್ರಾಮಾಂತರ ಬಿಜೆಪಿ ಕಚೇರಿ ಶಕ್ತಿ ಸೌಧದಲ್ಲಿಂದು ತಿಗಳ ಸಮುದಾಯಕ್ಕೆ ಸೇರಿದ ಯಜಮಾನರು, ಅಣೆಕಾರರು, ಮುದ್ರೆಯವರ ಸಭೆ ನಡೆಸಿ ಮಾತನಾಡಿದ ಅವರು, ನಿಮ್ಮೆಲ್ಲರ ಆಶೀರ್ವಾದಿಂದ ಶಾಸಕನಾಗಿ ಮತ್ತೊಮ್ಮೆ ಆಯ್ಕೆಯಾಗುವುದು ಖಚಿತ.ತುಮಕೂರು ಗ್ರಾಮಾಂತರ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ನೆನೆಗುದಿಗೆ ಬಿದ್ದಿರುವ ತಿಗಳ ಸಮಾಜದ ಸಮುದಾಯ ಭವನಗಳನ್ನು ಪೂರ್ಣಗೊಳಿಸಿಕೊಡುವ ಭರವಸೆ ನೀಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ತಿಗಳ ಸಮುದಾಯ ರಾಜಕೀಯವಾಗಿ ಬೆಳೆಯಲು ಅಗತ್ಯವಿರುವ ಎಲ್ಲಾ ಅವಕಾಶಗಳನ್ನು ಕಲ್ಪಿಸಿದ್ದೇನೆ.ಅಲ್ಲದೆ ಶೈಕ್ಷಣಿಕ ಅಭಿವೃದ್ದಿಗಾಗಿ ಬುಗಡನಹಳ್ಳಿ, ಪಾಲಸಂದ್ರಗಳಲ್ಲಿ ಹೈಟೆಕ್ ಶಾಲೆ ನಿರ್ಮಾಣ ಮಾಡಿ ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದು, ಮುಂದಿನ ದಿನಗಳಲ್ಲಿ ಗ್ರಾಮಾಂತರದಲ್ಲಿ ಒಂದು ಎಕರೆ ಜಾಗ ಗುರುತಿಸಿ, ಬೃಹತ್ ಸಮುದಾಯಭವನ ನಿರ್ಮಿಸುವ ಗುರಿ ಹೊಂದಿದ್ದೇನೆ.ಇದರ ಜೊತೆಗೆ ದೇವಸ್ಥಾನಗಳ ಅಭಿವೃದ್ದಿಗೂ ಅದ್ಯತೆ ನೀಡುವುದಾಗಿ ಬಿ.ಸುರೇಶಗೌಡ ನುಡಿದರು.
ಶಾಸಕನಾಗಿರಲಿ, ಇಲ್ಲದಿರಲಿ ಕೇವಲ ಶಾಲು, ಹಾರಕ್ಕೆ ಸಿಮೀತವಾಗಿಲ್ಲ.ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದ ತಿಗಳ ಸಮುದಾಯದ ಕುಲದೈವ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಆಚರಣೆಯನ್ನು ಸರಕಾರದ ಕಾರ್ಯಕ್ರಮವನ್ನಾಗಿಸಿ, ಗೌರವ ಸಲ್ಲಿಸಿದೆ. ಇದರ ಜೊತೆಗೆ ಸಮಸ್ತ ತಿಗಳ ಅಭಿವೃದ್ದಿ ನಿಗಮ ಸ್ಥಾಪನೆಗೆ ನನ್ನ ಶಕ್ತಿ ಮೀರಿ ಶ್ರಮಿಸಿದ್ದೇನೆ. ಈ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದ್ದು, ಅದು ಮುಗಿದು ವರದಿ ಬಂದ ತಕ್ಷಣ.ಕೇಂದ್ರದೊಂದಿಗೆ ಮಾತನಾಡಿ ಎಸ್ಟಿ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶಗೌಡ ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಹೆಚ್.ಕೃಷ್ಣಪ್ಪ ಮಾತನಾಡಿ,ಕೃಷಿಯೇ ಮೂಲ ಕಸುಬಾಗಿರುವ ತಿಗಳ ಸಮುದಾಯದ ಅರ್ಥಿಕ,ಸಾಮಾಜಿಕ,ಶೈಕ್ಷಣಿಕ,ರಾಜಕೀಯ ಅಭಿವೃದ್ದಿಗಾಗಿ ಸುರೇಶಗೌಡರು ಶಾಸಕರಾಗಿದ್ದಾಗ ಸಾಕಷ್ಟು ಅನುದಾನ ನೀಡಿದ್ದಾರೆ. ರಾಜಕೀಯವಾಗಿ ಮೂರು ಜನರಿಗೆ ತಾಲೂಕು ಪಂಚಾಯಿತಿ ಸದಸ್ಯರಾಗಲು, ಐದಕ್ಕೂ ಹೆಚ್ಚು ಗ್ರಾ.ಪಂ.ಗಳ ಅಧ್ಯಕ್ಷರಾಗಿ ಇಂದು ತಿಗಳ ಸಮುದಾಯದ ಜನರಿದ್ದರೆ, ಅದಕ್ಕೆ ಕಾರಣ ಸುರೇಶಗೌಡ.ಇವರ ಕಾರ್ಯವೈಖರಿಯನ್ನು ಮೆಚ್ಚಿಯೇ ನಾನು ಸೇರಿದಂತೆ ನನ್ನಂತಹ ಅನೇಕರು ಜೆಡಿಎಸ್ ತೊರೆದು ಬಿಜೆಪಿ ಸೇರಿ,ಸುರೇಶಗೌಡರ ಪರವಾಗಿ ಕೆಲಸ ಮಾಡುತಿದ್ದಾರೆ.ಸಮುದಾಯದ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡುವ ಸುರೇಶಗೌಡ ಅವರನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ ಎಂದರು.
ತುಮಕೂರು ನಗರಸಭೆ ಮಾಜಿ ಅಧ್ಯಕ್ಷೆ ಕಮಲಮ್ಮ ಮಾತನಾಡಿ,ಸುರೇಶಗೌಡರು ಗ್ರಾಮಾಂತರ ಕ್ಷೇತ್ರದಲ್ಲಿದ್ದರೂ ನಗರದಲ್ಲಿ ತಿಗಳ ಸಮುದಾಯ ರಾಜಕೀಯವಾಗಿ ಅಭಿವೃದ್ದಿ ಹೊಂದಲು ಅಗತ್ಯ ನೆರವು ನೀಡಿದ್ದಾರೆ. ಹಾಗಾಗಿಯೇ ನಾವು ಗ್ರಾಮಾಂತರದ ತಿಗಳ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿ, ಸುರೇಶಗೌಡರನ್ನು ಬೆಂಬಲಿಸುವಂತೆ ಕೋರುತ್ತಿದ್ದೇವೆ. ಜನಾಂಗದ ಕಷ್ಟ, ಸುಖಃಗಳಲ್ಲಿ ಭಾಗಿಯಾಗುವ ಸುರೇಶಗೌಡರು ಗೆಲ್ಲುವುದರಿಂದ ಮುಂದಿನ ದಿನಗಳಲ್ಲಿ ತಿಗಳ ಜನಾಂಗದ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದರು.
ವೇದಿಕೆಯಲ್ಲಿ ಜಿ.ಪಂ.ಮಾಜಿ ಸದಸ್ಯ ಪುಟ್ಟಲಕ್ಷ್ಮಮ್ಮ, ತುಮಕೂರು ಗ್ರಾಮಾಂತರದ ವಿವಿಧ ಗ್ರಾಮಗಳ ತಿಗಳ ಸಮಾಜದ ಯಜಮಾನರಾದ ಬುಗುಡನಹಳ್ಳಿ ಪುಟ್ಟಯ್ಯ, ಲಿಂಗರಾಜು, ಚಿಕ್ಕೀರಪ್ಪ, ಕೆಂಪಣ್ಣ, ರಾಜಣ್ಣ, ನಾಗರಾಜು, ಮುದ್ದರಂಗಯ್ಯ, ನಿಂಗೇಗೌಡ, ನಿಂಗೇಗೌಡ, ಸಿದ್ದಗಂಗಯ್ಯ, ನಾಗಪ್ಪ, ದೊಡ್ಡಯ್ಯ, ಗುರುರಾಜಪ್ಪ, ಕೃಷ್ಣಪ್ಪ, ರಂಗಯ್ಯ, ಧರ್ಮರಾಜು, ತಿಮ್ಮಯ್ಯ ಹಾಗೂ ಅಣೆಕಾರರು, ಮುದ್ರೆಯವರು ಉಪಸ್ಥಿತರಿದ್ದರು.