Publicstory. in
ತುಮಕೂರು : ಜಿಲ್ಲೆಯಲ್ಲಿ ಈವರೆಗೂ ಯಾವುದೇ ನೋವಲ್ ಕರೋನಾ ವೈರಸ್ ಪ್ರಕರಣಗಳು ಧೃಢಪಟ್ಟಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಆರ್. ಚಂದ್ರಿಕಾ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಚೀನಾ ದೇಶದಿಂದ ಬಂದಿದ್ದ ಯುವಕನಿಗೆ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ)ಗೆ ಕಳುಹಿಸಲಾಗಿದ್ದು, ಸದರಿ ರಕ್ತದ ಮಾದರಿಯ ಫಲಿತಾಂಶದಲ್ಲಿ ಕರೋನಾ ವೈರಸ್ ಕಂಡುಬಂದಿರುವುದಿಲ್ಲ ಎಂದು ಬೆಂಗಳೂರಿನ ಎನ್‌ಐವಿ ಧೃಢಪಡಿಸಿದೆ. ಈ ಯುವಕನು ಜಿಲ್ಲಾ ಆಸ್ಪತ್ರೆಯಲ್ಲಾಗಲೀ, ಖಾಸಗಿ ಆಸ್ಪತ್ರೆಗಳಲ್ಲಾಗಲೀ ದಾಖಾಲಾಗಿರುವುದಿಲ್ಲ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಬೇರೆ ಯಾವುದೇ ಹೊಸ ಶಂಕಿತ ಕರೋನಾ ವೈರಸ್ ರೋಗಿಗಳು ಇರುವುದಿಲ್ಲ ಹಾಗೂ ಯಾವುದೇ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ಅನಾವಶ್ಯಕವಾಗಿ ಭಯ ಪಡುವ ಹಾಗೂ ಊಹಾಪೋಹಗಳಿಗೆ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಮನವಿ ಮಾಡಿದ್ದಾರೆ.
ಕರೋನಾ ವೈರಸ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ 5 ಕೊಠಡಿಗಳ ಹಾಸಿಗೆಗಳು ಹಾಗೂ 1 ವೆಂಟಿಲೇಟರ್ ಅನ್ನು ಮೀಸಲಿಟ್ಟು ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಲಾಗಿದೆ. ಜನ ಸಾಮಾನ್ಯರಿಗೆ ಮುಂಜಾಗೃತ ಕ್ರಮವಾಗಿ ತೆಗೆದು ಕೊಳ್ಳಬೇಕಾದ ಕ್ರಮಗಳ ಬಗ್ಗೆ ಐಇಸಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.