Publicstory. in
ತುಮಕೂರು: ಜಿಲ್ಲೆಯಲ್ಲಿ ಸುಮಾರು 563 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು ಎಂದು ಗುರುತಿಸಲಾಗಿದೆ. ತೀವ್ರ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೀರಿನ ಸಮಸ್ಯೆ ಕಂಡುಬರುವ ಮೊದಲೇ ಅಧಿಕಾರಿಗಳು ಆ ಗ್ರಾಮಗಳಿಗೆ ಭೇಟಿ ನೀಡಿ ನೀರಿನ ಮೂಲ ಇರುವ ಬೋರ್‍ವೆಲ್‍ಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು, ಖಾಸಗಿ ವ್ಯಕ್ತಿಗಳ ಬೋರ್‍ವೆಲ್‍ಗಳಿಂದಲೂ ನೀರು ಪಡೆಯುವ ಅವಕಾಶ ಕಲ್ಪಿಸಲಾಗಿದೆ.ಅದನ್ನು ಸಹ ಬಳಸಿಕೊಂಡು ತೀವ್ರವಾಗಿ ನೀರಿನ ಸಮಸ್ಯೆ ಕಂಡಿರುವ ತುಮಕೂರು, ಕುಣಿಗಲ್ ತಾಲ್ಲೂಕುಗಳ ಗ್ರಾಮಗಳಿಗೆ ಸಿ.ಆರ್. ಫಂಡ್‍ನಿಂದ ಹಣ ಬಳಸಿಕೊಂಡು ನೀರು ಸರಬರಾಜು ಮಾಡಬೇಕೆಂದು ತಿಳಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಜಿಲ್ಲೆಯಲ್ಲಿ ಕರೋನ ವೈರಸ್‍ಗಳ ಸೋಂಕಿನ ಬಗ್ಗೆ ಅಧ್ಯಕ್ಷರು ಮಾಹಿತಿ ಪಡೆದರು.
ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ. ಆರ್. ಚಂದ್ರಿಕಾ ಅವರು ಜಿಲ್ಲೆಯಲ್ಲಿ ಕರೋನ ವೈರಸ್‍ಗಳ ಸೋಂಕು ಎಲ್ಲಿಯೂ ಕಂಡುಬಂದಿರುವುದಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ 2 ಬಾರಿ ತರಬೇತಿ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.