Wednesday, October 23, 2024
Google search engine
HomeUncategorizedಕಲುಷಿತ ನೀರು‌ ಸೇವನೆ ; ಒಂದೇ ವಾರದಲ್ಲಿ ಎರಡು ಸಾವು

ಕಲುಷಿತ ನೀರು‌ ಸೇವನೆ ; ಒಂದೇ ವಾರದಲ್ಲಿ ಎರಡು ಸಾವು

ಸ್ವತಃ ನೀರು ಕುಡಿದು ಪರಿಶೀಲಿಸಿದ ತಹಶೀಲ್ದಾರ್

(ಶಿಥಿಲಗೊಂಡಿರುವ ಟ್ಯಾಂಕು ; ನಿದ್ರಾವಸ್ಥೆಯಲ್ಲಿರುವ ಗ್ರಾಮ ಆಡಳಿತ)

(ಗ್ರಾಮಕ್ಕೆ ಜೆಜೆಎಂ ಕಾಮಗಾರಿ ತಂದಿಟ್ಟ ಕುತ್ತು)

(ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರ)

(ವಯೋವೃದ್ಧರಿಗೂ ಬೆಲೆಯಿಲ್ಲ ; ಮಕ್ಕಳ ಹಕ್ಕುಗಳ ರಕ್ಷಣೆಗೂ ಕಿಮ್ಮತ್ತಿಲ್ಲ)

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಹಂದನಕೆರೆ ಹೋಬಳಿಯ ಸೋರಲಮಾವು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಒಂದೇ ವಾರದಲ್ಲಿ ಎರಡು ಸಾವು ಸಂಭವಿಸಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸ್ಥಳಕ್ಕೆ ಉಪ-ವಿಭಾಗಾಧಿಕಾರಿ ಸಪ್ತ ಶ್ರೀ ಹಾಗೂ ತಹಸೀಲ್ದಾರ್ ಕೆ ಪುರಂದರ್ ಸ್ಥಳಕ್ಕೆ ಭೇಟಿನೀಡಿ ಸಮಸ್ಯೆಯ ಮಾಹಿತಿ ಪಡೆದುಕೊಂಡರು. ಹಂದನಕೆರೆ ಪೊಲೀಸ್ ಠಾಣೆಯ ಪಿಎಸ್ಸೈ ರವೀಂದ್ರರವರು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮೃತ ದುರ್ದೈವಿಗಳು ರಂಗಮ್ಮ (55) ಹಾಗೂ ಭುವನೇಶ್ವರಿ (13) ಇಬ್ಬರೂ ಇದೇ ಗ್ರಾಮದ ಒಂದೇ ಟ್ಯಾಂಕ್’ನಿಂದ ನೀರು ಸೇವಿಸುತ್ತಿದ್ದವರು. ಮಂಗಳವಾರ ಅಸುನೀಗಿದ ರಂಗಮ್ಮ’ನವರು ಅವರ ಮಗ ರಮೇಶ ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಈಗ್ಗೆ ಎರಡು ವರ್ಷದ ಹಿಂದೆ ರಮೇಶ್’ರವರ ಪತ್ನಿ ಕೂಡ ಕಾಯಿಲೆಬಿದ್ದು ನಿಧನರಾಗಿದ್ದರು.

ಆ ಕುಟುಂಬದ ಗೃಹಕಾರ್ಯಗಳಿಗಿದ್ದ ಏಕೈಕ ಆಧಾರ ದಿವಂಗತ ರಂಗಮ್ಮನೇ ಆಗಿದ್ದರು. ಮೂರು ದಿನಗಳ ಹಿಂದೆ ಅಸುನೀಗಿದ ಭುವನೇಶ್ವರಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ. ಈಕೆಯ ಕುಟುಂಬವೂ ಅದೇ ಟ್ಯಾಂಕ್’ನಿಂದ ನೀರು ಕುಡಿಯುತ್ತಿದ್ದುದಾಗಿ ಅವರ ತಾಯಿ ತಿಳಿಸಿದರು. ಭುವನೇಶ್ವರಿ ತನ್ನ ತಮ್ಮ ಹಾಗೂ ತಂದೆ-ತಾಯಿಯನ್ನು ಅಗಲಿದ್ದಾರೆ.

ತಾಲ್ಲೂಕು ಆರೋಗ್ಯಾಧಿಕಾರಿ ಡಾ ಯಶ್ವಂತ್, ಆರಕ್ಷಕ ವೃತ್ತ ನಿರೀಕ್ಷಕ ಎಫ್ ಕೆ ನದಾಫ್ ಮತ್ತು ಪಂಚಾಯತ್ ಇಲಾಖೆಯ ಇತರೆ ಅಧಿಕಾರಿಗಳು ಮಂಗಳವಾರ ರಾತ್ರಿ ಭೇಟಿ ಕೊಟ್ಟು ತಡರಾತ್ರಿಯವರೆಗೂ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರು ಕುಡಿಯುವುದಕ್ಕಾಗಿ ಮತ್ತು ಅಡುಗೆ ಮಾಡುವುದಕ್ಕಾಗಿ ಬಳಸುತ್ತಿದ್ದ ನೀರಿನ ಸ್ಯಾಂಪಲ್’ಗಳನ್ನು ಸಂಗ್ರಹಿಸಿ, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತಿರುವುದಾಗಿ ಡಾ ಯಶ್ವಂತ್ ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ ಯಶ್ವಂತ್’ರವರ ಮಾಹಿತಿಪ್ರಕಾರ ಭುವನೇಶ್ವರಿಗೆ ಮೂರ್ಛೆರೋಗದ ಸಮಸ್ಯೆ ಇತ್ತಂತೆ. ಅವರು ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರಂತೆ. ಅದರ ಎಲ್ಲ ವಿವರಗಳನ್ನು ಅವರು ಗ್ರಾಮಸ್ಥರ ಎದುರೇ ಬಿಡಿಸಿ ವಿವರಿಸಿದರು. ಆದರೆ, ಗ್ರಾಮಸ್ಥರು ಅವರ ಮಾತನ್ನು ತಳ್ಳಿಹಾಕಿದರು. ರಂಗಮ್ಮನವರ ಸಾವಿಗೆ ವಯೋಸಹಜ ಕಾಯಿಲೆಗಳ ಅಡ್ಡಪರಿಣಾಮದ ಹಿನ್ನೆಲೆಯ ಆಯಾಮದಿಂದದ ಕೂಡ ಪರಿಶೀಲನೆ ನಡೆಸಲಾಗುತ್ತಿದೆ.

ಜೆಜೆಎಂ ಕಾಮಗಾರಿ ಗ್ರಾಮಕ್ಕೆ ತಂದಿಟ್ಟ ಅವಾಂತರ ::

ಊರಿಗೆ, ಜೆಜೆಎಂ ಯೋಜನೆಯಡಿ ಮನೆ ಮನೆ ಗಂಗೆ ಮೂಲಕ ಗ್ರಾಮದ ಮನೆ ಮನೆಗೂ ನೀರು ಕಲ್ಪಿಸುವ ಕಾಮಗಾರಿಯ ಎಡವಟ್ಟುಗಳೇ ಇಷ್ಟೆಲ್ಲಕ್ಕೂ ಕಾರಣ ಎಂದು ಗ್ರಾಮಸ್ಥರು ದೂರುತ್ತಾರೆ. ಜೆಜೆಎಂ ಕಾಮಗಾರಿಯ ಇಂಜಿನಿಯರ್ ಹಾಗೂ ಗುತ್ತಿಗೆದಾರ ಇಬ್ಬರೂ ಇಷ್ಟೆಲ್ಲ ದುರಂತಕ್ಕೆ ಕಾರಣ ಎಂದು ತಹಸೀಲ್ದಾರ್ ಹಾಗೂ ಉಪ-ವಿಭಾಗಾಧಿಕಾರಿಗಳ ಬಳಿ ಗ್ರಾಮಸ್ಥರು ನೇರವಾಗಿ ದೂರಿದರು. ಒಡೆದ ಪೈಪುಗಳು, ಬಾಯ್ತೆರೆದ ಗುಂಡಿಗಳು, ಒಡೆದ ಪೈಪುಗಳಿಂದ ಗ್ರಾಮದ ಗಲ್ಲಿಗಲ್ಲಿಯಲ್ಲೂ ಹರಿಯುತ್ತಿರುವ ನೀರು. ಇದು ಈಗ ಸೋರಲಮಾವು ಗ್ರಾಮದ ಚಿತ್ರಣ. ಸೀಪೇಜ್ ನಿಲ್ಲದ ರಸ್ತೆಗಳು ಹಾಗೂ ಪೈಪ್ ಅಳವಡಿಸಲು ಬಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಹಾಗೇ ಬಿಟ್ಟುಹೋದದ್ದರ ಪರಿಣಾಮ ಗ್ರಾಮದ ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಘಟಕಕ್ಕೆ ಪೈಪುಗಳ ಮೂಲಕ ಹರಿಯುವ ನೀರಿನಲ್ಲಿ ಉದ್ದಕ್ಕೂ ಕಲ್ಮಶ ಮಿಶ್ರಿತಗೊಂಡಿದೆ. ಉದ್ದಕ್ಕೂ ಕಲುಷಿತಗೊಂಡಿರುವ ಆ ನೀರನ್ನು ಸಂಸ್ಕರಣಾ ಘಟಕ ಇನ್ನೆಷ್ಟು ಶುದ್ಧಗೊಳಿಸೀತು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಘಟಕಕ್ಕೆ ತಹಸೀಲ್ದಾರ್ ಕೆ ಪುರಂದರ್’ರವರು ಭೇಟಿಕೊಟ್ಟು, ಗ್ರಾಮಸ್ಥರು ನಿತ್ಯ ಕುಡಿಯುತ್ತಿರುವ ಆ ನೀರನ್ನು ತಾವೇ ಕುಡಿದು ಪರಿಶೀಲಿಸಿದರು. ನಂತರ, ಈ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿ, ಪರೀಕ್ಷಿಸಿದ ನಂತರ ಇದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದರು.

ಮಕ್ಕಳ ಹಕ್ಕುಗಳು….!? ::

ಶುದ್ಧ ಗಾಳಿ, ಶುದ್ಧ ನೀರು, ಪೌಷ್ಠಿಕ ಆಹಾರ ಜೊತೆಗೆ ಸ್ವಚ್ಛಂದ ಬೆಳಕಿನ ಜೊತೆಗೆ ಕನಿಷ್ಠ ಬದುಕಿಕೊಳ್ಳುವ ಮಕ್ಕಳ ಹಕ್ಕನ್ನೂ ಸ್ಥಳೀಯ ಆಡಳಿತ ರಕ್ಷಿಸುತ್ತಿಲ್ಲ. ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಭುವನೇಶ್ವರಿಯ ಸಾವು ಇದನ್ನು ಮತ್ತೆ ಪುಷ್ಠೀಕರಿಸುತ್ತಿದೆ. ಆಕೆಯ ಅಸ್ವಸ್ಥತೆಯ ಬಗ್ಗೆ ಸಂಬಂಧಪ್ಟವರು ಇನ್ನಷ್ಟು ಜಾಗ್ರತೆ ವಹಿಸಬೇಕಿತ್ತು. ಸ್ಥಳೀಯ ಆಶಾ ಕಾರ್ಯಕರ್ತೆಯರು, ಸರ್ಕಾರಿ ದಾದಿಯರು ಹಾಗೂ ಕುಟುಂಬಸ್ಥರು ಇಲ್ಲಿ ತೀವ್ರ ನಿಗಾ ವಹಿಸಬೇಕಿತ್ತು.

ಆರೋಗ್ಯ ತಪಾಸಣಾ ಶಿಬಿರ ::

ಹಂದನಕೆರೆ ಹೋಬಳಿಗೇ ದೊಡ್ಡ ಊರಾಗಿರುವ ಸೋರಲಮಾವು ಗ್ರಾಮದಲ್ಲಿ ಸರಿಸುಮಾರು 900 ಕುಟುಂಬಗಳಿದ್ದು, ಸುಮಾರು 400 ಕುಟುಂಬಗಳ ಸದಸ್ಯರು ತೀವ್ರತರವಾದ ವಾಂತಿ-ಬೇಧಿಗೆ ತುತ್ತಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನೂ ಕೆಲವರು ಈಗಲೂ ವಾಂತಿ-ಬೇಧಿಯಿಂದ ಬಳಲುತ್ತಿದ್ದಾರೆ. ಕಲುಷಿತ ನೀರಿನ ಸೇವನೆಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು, ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕ ಮತ್ತು ಪಿಡಿಒ ನವೀನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ, ಪಬ್ಲಿಕ್ ಸ್ಟೋರಿಗೆ ಪ್ರತಿಕ್ರಿಯಿಸಿದ ಉಪ-ವಿಭಾಗಾಧಿಕಾರಿ ಸಪ್ತ ಶ್ರೀಯವರು, ಗ್ರಾಮದ ಎರಡೂ ಸಾವುಗಳಿಗೆ ಕಾರಣ ಕಲುಷಿತ ನೀರಿನ ಸೇವನೆ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ. ಆದರೆ, ಸೂಕ್ತ ಕಾರಣ ಇನ್ನೂ ಸಿಕ್ಕಿಲ್ಲ. ನಾವು ಆಸ್ಪತ್ರೆ ಮತ್ತು ಸಂಬಂಧಿಸಿದ ಎಲ್ಲ ಇಲಾಖೆಗಳಿಂದ ವರದಿ ಕೇಳಿದ್ದೇವೆ. ವರದಿ ಬಂದ ನಂತರ ಸ್ಪಷ್ಟ ಮಾಹಿತಿ ಕೊಡಲಾಗುವುದು. ಅದಕ್ಕೂ ಮೊದಲು ಕೂಡಲೇ ಗ್ರಾಮದ ಪ್ರತಿ ಸದಸ್ಯರ ಆರೋಗ್ಯ ತಪಾಸಣೆ ನಡೆಸುವುದು ಮತ್ತು ಸೂಕ್ತ ಚಿಕಿತ್ಸೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಆದ್ಯತೆಯಾಗಿದೆ. ತನಿಖೆ ಹಾಗೂ ವರದಿ ಬಂದ ನಂತರ ಸ್ಪಷ್ಟ ಮಾಹಿತಿ ಸಿಗಲಿದೆ ಎಂದರು.

ಪಿಡಿಒ ನವೀನ್’ರವರ ಅತಿಯಾದ ಸಜ್ಜನಿಕೆ ಹಾಗೂ ನಿಧಾನಗತಿಯ ಕಾರ್ಯವೈಖರಿಯಿಂದಾಗಿ ವರ್ಷಾವರ್ಷ ಕಳೆದರೂ ಗ್ರಾಮದ ನೀರಿನ ಟ್ಯಾಂಕುಗಳನ್ನು ಶುಚಿಗೊಳಿಸಲಾಗಿಲ್ಲ. ತಾತ್ಕಾಲಿಕ ನೀರುಗಂಟಿಗಳನ್ನು ಬಳಸಿಕೊಂಡು ಕೆಲಸ ಸಾಗಿಸಲಾಗುತ್ತಿದೆ. ಖಾಯಮ್ಮಾದ ನೀರುಗಂಟಿಗಳಿಲ್ಲ. ಊರಿನಲ್ಲಿರುವ ನಾಲ್ಕೈದು ಟ್ಯಾಂಕುಗಳೂ ವಿಪರೀತ ಪಾಚಿಗಟ್ಟಿ, ಒಳಭಾಗದಲ್ಲಿ ಕಿಲುಬುಗಟ್ಟಿ, ಕನಿಷ್ಠ ಮನೆಗೆಲಸಕ್ಕೆ, ಕನಿಷ್ಠ ಬಟ್ಟರ ತೊಳೆಯಲಿಕ್ಕೆ ಉಪಯೋಗಿಸಲೂ ಬಾರದಷ್ಟು ತೀವ್ರಪ್ರಮಾಣದಲ್ಲಿ ನೀರು ಕಲುಷಿತಗೊಂಡಿದೆ ಎಂದು ದಿವಂಗತ ರಂಗಮ್ಮ ಮತ್ತು ಭುವನೇಶ್ವರಿಯವರ ನೆರೆಹೊರೆಯ ಮನೆಗಳವರು ಹೇಳುತ್ತಾರೆ.

ಬುಧವಾರ ಬೆಳಗ್ಗಿನಿಂದಲೇ ಸೋರಲಮಾವು ಗ್ರಾಮದಲ್ಲಿ ಆರೋಗ್ಯ ತಪಾಸಣೆಯ ಶಿಬಿರ ನಡೆಸುವಂತೆ ಉಪ-ವಿಭಾಗಾಧಿಕಾರಿ ಸಪ್ತಶ್ರೀರವರು ಆರೋಗ್ಯಾಧಿಕಾರಿ ಡಾ ಯಶ್ವಂತ್’ರವರಿಗೆ ಸೂಚಿಸಿದರು. ಬುಧವಾರ ಬೆಳಗ್ಗಿನಿಂದಲೇ ಸೋರಲಮಾವು ಗ್ರಾಮದ ಪ್ರತಿಯೊಂದು ಕುಟುಂಬದ ಪ್ರತಿಯೊಬ್ಬ ಸದಸ್ಯರ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಗುವುದು.

ಗ್ರಾಮದಲ್ಲಿ ಮಂಗಳವಾರ ತಡರಾತ್ರಿಯವರೆಗೂ ಡಿಎಸ್ ಪಿ ವಿನಾಯಕ ಎಸ್ ಶೆಟಗೇರಿ, ಆರಕ್ಷಕ ವೃತ್ತ ನಿರೀಕ್ಷಕ ಎಫ್ ಕೆ ನದಾಫ್, ಪಿಎಸ್ಸೈ ರವೀಂದ್ರ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದರು.

ಸಂಚಲನ
ಚಿಕ್ಕನಾಯಕನ ಸೀಮೆಯಿಂದ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?