ಚಿಕ್ಕನಾಯಕನಹಳ್ಳಿ : ಶಾಸಕ ಸಿ ಬಿ ಸುರೇಶ್ ಬಾಬು’ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ತಹಸೀಲ್ದಾರ್ ಕಚೇರಿಯಲ್ಲಿರುವ ನ್ಯಾಯಿಕ ಸಭಾಂಗಣದಲ್ಲಿ, ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ತಹಸೀಲ್ದಾರ್ ಕೆ ಪುರಂದರ್’ರವರು, ಮಹರ್ಷಿ ವಾಲ್ಮೀಕಿ’ಯವರು ರಚಿಸಿದ ಭಾರತದ ಮಹಾಕಾವ್ಯವನ್ನು ಸೋದಾಹರಿಸುತ್ತಾ, ಬೇಟೆಗೆ ತುತ್ತಾದ ಪಕ್ಷಿಗಳ ಆಕ್ರಂದನವನ್ನು ಕಂಡ ವಾಲ್ಮೀಕಿ, ತಮ್ಮ ನಿಸರ್ಗ ಸಹಜವಾದ ವಿವೇಕದಿಂದ ಸತ್ಯ, ನ್ಯಾಯ, ನೈತಿಕತೆ ಮತ್ತು ಮಾನವತೆಯ ಸಂದೇಶವನ್ನು ಸಾಕ್ಷಾತ್ಕರಿಸಿ, ತನ್ನ ಕಾವ್ಯ ರಚನೆಯಲ್ಲಿ ಪ್ರಸ್ತುತಪಡಿಸಿದ ರೀತಿಯನ್ನು ಸ್ಮರಿಸಿದರು.
ದೇಶಕಾಲ ಮತ್ತು ಸಮಕಾಲೀನ ಸಮಾಜ ಹೇಗೆ ತನ್ನ ಸಾಕ್ಷೀಪ್ರಜ್ಞೆಯ ನೈತಿಕ ಹೊಣೆಗಾರಿಕೆಯ ಜೊತೆಗೆ ಅಭಿವೃದ್ಧಿ ಹೊಂದಬೇಕು ಎಂಬುದನ್ನು ಕಲ್ಪಿಸಿ ರೂಪಿಸಿಕೊಟ್ಟ ಮಹಾನ್ ಮಹರ್ಷಿ ನಮ್ಮ ವಾಲ್ಮೀಕಿ. ವಾಲ್ಮೀಕಿ ಎಂದಿಗೂ ದರೋಡೆಕೋರನಲ್ಲ. ಇದೆಲ್ಲ ಕಟ್ಟುಕತೆ. ಹಿಂದುಳಿದ ವರ್ಗಗಳ ಮಹಾಪುರುಷರ ಬಗ್ಗೆ ಈ ಬಗೆಯ ತಪ್ಪು ಚರಿತ್ರೆಗಳನ್ನು ಕಟ್ಟಿ, ಅವರ ತೇಜೋವಧೆ ಮಾಡುವ ಹುನ್ನಾರ ಆದಿಯಿಂದಲೂ ನಡೆಯುತ್ತಾ ಬಂದಿದೆ. ಇದರ ಅರಿವಿಲ್ಲದೆ ಅನೇಕಮಂದಿ ನಮ್ಮ ರಾಜಕಾರಣಿಗಳು, ಅಧಿಕಾರಿಗಳು, ಸಾರ್ವಜನಿಕರು ಎಲ್ಲರೂ ತಪ್ಪುತಪ್ಪಾಗಿ ವಾಲ್ಮೀಕಿಯವರ ಜೀವನಚರಿತ್ರೆಯ ಸುಳ್ಳು ವ್ಯಾಖ್ಯಾನಗಳನ್ನೇ ಸತ್ಯ ಎಂದು ನಂಬಿ ವೇದಿಕೆಗಳಲ್ಲಿ ಮಾತಾಡಿಬಿಡುತ್ತಾರೆ ಎಂದು ವಾಲ್ಮೀಕಿ ಸಮಾಜದ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
2008-2010’ರ ಸುಮಾರಿನಲ್ಲಿ ಉತ್ತರಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಜೀವನಚರಿತ್ರೆ ಆಧಾರಿತ ಟಿವಿ ಧಾರಾವಾಹಿಯನ್ನು ಪ್ರಸಾರ ಮಾಡಲಾಗಿತ್ತು. ಆ ಧಾರಾವಾಹಿಯಲ್ಲಿ ವಾಲ್ಮೀಕಿ ತನ್ನ ಪೂರ್ವಾಶ್ರಮದಲ್ಲಿ ದರೋಡೆಕೋರನಾಗಿದ್ದ ಎಂದು ಬಿಂಬಿಸಲಾಗಿತ್ತು. ಇದನ್ನು ನೋಡಿದ ಅಲ್ಲಿನ ವಾಲ್ಮೀಕಿ ಸಮುದಾಯ ಬೇಸರದದ ಕುಗ್ಗಿಹೋಗಿತ್ತು. ಆಗ ನಾವಿಕಾಸನ್ ಎಂಬ ವಕೀಲ ಅಲ್ಲಿನ ಪಂಜಾಬ್ ಹೈಕೋರ್ಟಿನಲ್ಲಿ ‘ವಾಲ್ಮೀಕಿ ಮಹರ್ಷಿಯ ಬಗ್ಗೆ ಧಾರಾವಾಹಿಯಲ್ಲಿ ಬಿತ್ತರಿಸಿರುವ ಕಟ್ಟುಕತೆ’ಯ ವಿರುದ್ಧ ದಾವೆ ಹೂಡುತ್ತಾನೆ. ಆಗ ಹೈಕೋರ್ಟ್ ಆದೇಶದ ಮೇರೆಗೆ ಅಲ್ಲಿನ ವಿಶ್ವವಿದ್ಯಾಲಯದ ಮೂಲಕ ಮಹರ್ಷಿ ವಾಲ್ಮೀಕಿ ಜೀವನಚರಿತ್ರೆಯ ಸಮಗ್ರವಾದ ಆಧುನಿಕ ಅಧ್ಯಯನ ನಡೆಸಲಾಗುತ್ತದೆ. ಈ ಅಧ್ಯಯನದ ನೇತೃತ್ವವನ್ನು ರಾಜೀವಸುಲೋಚನ ಎಂಬ ವಿದ್ವಾಂಸರಿಗೆ ವಹಿಸಿಕೊಡಲಾಗುತ್ತದೆ. ಅವರ ಸುದೀರ್ಘ ಮತ್ತು ಸಮಗ್ರವಾದ ಅಧ್ಯಯನವನ್ನು ಆಧರಿಸಿ ಅಲ್ಲಿನ ಹೈಕೋರ್ಟ್, ಧಾರಾವಾಹಿಯಲ್ಲಿ ಬಿಂಬಿಸುತ್ತಿರುವ ವಾಲ್ಮೀಕಿ ಜೀವನಚರಿತ್ರೆಯ ಅಪವ್ಯಾಖ್ಯಾನದ ವಿರುದ್ಧ ತೀರ್ಪು ನೀಡಿ ಆ ಧಾರಾವಾಹಿ ಪ್ರಸಾರಕ್ಕೆ ತಡೆ ನೀಡುತ್ತದೆ.
ಮತ್ತೆ, ಮುಂದಿನ ದಿನಗಳಲ್ಲಿ ಯಾರೂ ಯಾವುದೇ ಕಾರಣಕ್ಕೂ ಮಹರ್ಷಿ ವಾಲ್ಮೀಕಿಯವರನ್ನು ದರೋಡೆಕೋರ ಎನ್ನುವಂತಿಲ್ಲ ಎಂದು ಆದೇಶ ಹೊರಡಿಸಲಾಗುತ್ತದೆ. ಆ ತೀರ್ಪಿನ ನಂತರ ಟಿವಿ ವಾಹುನಿ ಮತ್ತು ಧಾರಾವಾಹಿ ನಿರ್ಮಾಪಕರು ಬಹಿರಂಗ ಕ್ಷಮೆ ಯಾಚನೆ ಮಾಡಬೇಕಾಯಿತು. ಹಾಗಾಗಿ, ಯಾರೂ ಯಾವುದೇ ಕಾರಣಕ್ಕೂ ವಾಲ್ಮೀಕಿ’ಯವರನ್ನು ದರೋಡೆಕೋರ ದು ತಪ್ಪುತಪ್ಪಾಗಿ ಬಿಂಬಿಸಬಾರದು ಎಂದು ಅವರು ಕಿವಿಮಾತು ಹೇಳಿದರು.
ಸಮಾಜದ ಮುಖಂಡ ಶಶಿಶೇಖರ್ ಮಾತನಾಡಿ, ಪ್ರತಿವರ್ಷ ಅದ್ಧೂರಿ ಮೆತವಣಿಗೆ ಮತ್ತು ಜಯಘೋಷಗಳೊಂದಿಗೆ ಆಚರಿಸಲಾಗುತ್ತಿದ್ದ ವಾಲ್ಮೀಕಿ ಜಯಂತಿಯನ್ನು, ವಾಯುಭಾರ ಕುಸಿತದ ಕಾರಣದಿಂದಾಗಿ ಈ ಬಾರಿ ಕೇವಲ ಸಾಂಕೇತಿಕವಾಗಿ ಆಚರಿಸುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದರು.
ಸಾಂತ್ವನ ಕೇಂದ್ರದ ಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಮಹಾಶಯರು ನಮ್ಮ ಆದಿಮ ಗುರುಗಳು. ಅಕ್ಷರವನ್ನು ಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುತ್ತಿದ್ದವರ ಎದುರು ಮಹಾಕಾವ್ಯವನ್ನೇ ರಚಿಸಿ, ತಳ ಸಮುದಾಯಗಳ ಪ್ರತಿಭಾಕೌಶಲ್ಯವನ್ನು ಎತ್ತಿಹಿಡಿದ ಮೇರುಪ್ರತಿಭೆ. ಅವರ ಜಯಂತಿಯನ್ನು ನಾವು ಆಚರಿಸುತ್ತಿರುವುದು ನಮ್ಮೆಲ್ಲರ ಸುದೈವ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ ಬಿಸುರೇಶ್ ಬಾಬು ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಕಾವ್ಯ ಪ್ರತಿಭೆಯನ್ನು ಸ್ಮರಿಸುತ್ತಾ, ಅವರ ಬಗ್ಗೆ ಸಮಾಜದಲ್ಲಿ ಗೌರವಾದರಗಳು ಮೂಡುವಂತೆ ಮಾಡಬೇಕು ಎಂದು ಹೇಳಿದರು. ವಾಲ್ಮೀಕಿ ದರೋಡೆಕೋರ ಎಂಬ ಅಪವ್ಯಾಖ್ಯಾನವನ್ನು ಸಂಬಂಧಿಸಿದ ಎಲ್ಲಾ ಗ್ರಂಥಗಳಿಂದಲೂ ಅದನ್ನು ತೆಗೆದುಹಾಕಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ,
ಗ್ರೇಡ್-2 ತಹಸೀಲ್ದಾರ್ ಕೀರ್ತಿ, ಸಮಾಜ ಕಲ್ಯಾಣ ಅಧಿಕಾರಿ ಶ್ರೀಧರಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ ಹೊನ್ನಪ್ಪ, ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್, ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರರಾದ ತಿಮ್ಮಣ್ಣ, ಪಿಆರ್ ಡಿಒ ಎಇಇ ಮೋಹನ್ ಕುಮಾರ್, ಪಶು ಸಹಾಯಕ ನಿರ್ದೇಶಕ ಡಾ ರೆ ಮಾ ನಾಗಭೂಷಣ್, ಅಬಕಾರಿ ನಿರೀಕ್ಷಕ ಗಂಗರಾಜು, ಬೆಸ್ಕಾಂ ಎಇಇ ಗವಿರಂಗಯ್ಯ, ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಯ್ಯ,
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ ಡಿ ಚಂದ್ರಶೇಖರ್, ಮಾದಿಗ ದಂಡೋರದ ಬೇವಿನಹಳ್ಳಿ ಚನ್ನಬಸವಯ್ಯ, ರಾಷ್ಟ್ರೀಯ ಸೇವಾದಳದ ಕೃಷ್ಣೇಗೌಡ, ಮುಖಂಡ ಅಗಸರಹಳ್ಳಿ ನರಸಿಂಹಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ವರದಿ: ಸಂಚಲನ, ಚಿಕ್ಕನಾಯಕನಹಳ್ಳಿ ಸೀಮೆಯಿಂದ