ಚಿಕ್ಕನಾಯಕನಹಳ್ಳಿ : ಅಲೆಮಾರಿ ಸಮುದಾಯದ ಸಮಸ್ಯೆಗಳ ಕುರಿತು ಸೋಮವಾರ ಬೆಳಗ್ಗೆ ತಾಲ್ಲೂಕಿನ ಅಲೆಮಾರಿಗಳು ತಾಲ್ಲೂಕು ಕಚೇರಿಗೆ ಆಗಮಿಸಿ ತಹಸೀಲ್ದಾರ್ ಕೆ.ಪುರಂದರ್’ರವರಿಗೆ ಮನವಿಪತ್ರ ನೀಡಿದರು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗೌಡಗೆರೆ ಸರ್ವೆ ನಂಬರ್ 20P-1’ನಲ್ಲಿ ಹೋಬಳಿಯ ಅಲೆಮಾರಿ ಜನಾಂಗದವರಿಗೆ 34 ನಿವೇಶನಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಆದರೆ, ಮನೆ ನಿರ್ಮಿಸಿಕೊಳ್ಳಲು ಅಲ್ಲಿ ಕೈಗೊಳ್ಳಬೇಕಾದ ಮೂಲಭೂತ ಸೌಕರ್ಯಗಳು ಮಾತ್ರ ನಾಪತ್ತೆಯಾಗಿವೆ. ಅದೇ ಗೌಡಗೆರೆ ಸರ್ವೆ ನಂಬರ್ 20P-1’ನಲ್ಲೇ ಬರುವ 30’ಗುಂಟೆ ಜಮೀನಿನಲ್ಲಿ ಇನ್ನೂ 27 ಅಲೆಮಾರಿ ಕುಟುಂಬಗಳಿಗಾಗಿ ನಿವೇಶನ ಮಾಡಿಕೊಡಲು ಅದರ ಫಾರ್ಮೇಶನ್ ಕೆಲಸಕಾರ್ಯಗಳು ಆಗಬೇಕಿತ್ತು. ಆದರೆ ಇನ್ನೂ ಆ ಕೆಲಸಗಳು ಪ್ರಾರಂಭವೇ ಆಗುತ್ತಿಲ್ಲ. ತಾಲ್ಲೂಕಿನಲ್ಲಿ ಅಲೆಮಾರಿ ಅಭಿವೃದ್ಧಿ ಕಾರ್ಯಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ.
ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್’ಗಳು ಶೀಘ್ರವೇ ಈ ಕೆಲಸಗಳನ್ನು ಕೈಗೆತ್ತಿಕೊಂಡು ವಸತಿ ವಂಚಿತ ಅಲೆಮಾರಿ ಸಮುದಾಯದ ಕುಟುಂಬಗಳು ಮನೆ ಕಟ್ಟಿಕೊಳ್ಳಲು ತ್ವರಿತವಾಗಿ ಅನುವು ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಂದಿಜೋಗಿ ರಾಜಣ್ಣ ತಿಳಿಸಿದರು.
ಕಳೆದ ಜುಲೈ ತಿಂಗಳಲ್ಲಿ ಹುಳಿಯಾರಿನಲ್ಲಿ ನಡೆದ ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮದ ಸಂದರ್ಭದಲ್ಲಿ, ತುಮಕೂರು ಜಿಲ್ಲೆಯ ಎಡಿಸಿ ಶಿವಾನಂದ ಕರಾಳೆ’ಯವರು ಗೌಡಗೆರೆ ಸರ್ವೆ ನಂಬರ್ 20P-1’ನಲ್ಲಿರುವ ಈ ಅಲೆಮಾರಿ ಬಿಡಾರಕ್ಕೆ ಭೇಟಿಕೊಟ್ಟು ವಾಸ್ತವಸ್ಥಿತಿ ಮನಗಂಡಿದ್ದರು. ಸ್ಥಳದಲ್ಲೇ ತಾಲ್ಲೂಕು ಮಟ್ಟದ ಹಿರಿಕಿರಿಯ ಅಧಿಕಾರಿಗಳಿಗೆ ಶೀಘ್ರವಾಗಿ ಇದರ ಕೆಲಸಕಾರ್ಯಗಳನ್ನು ಪ್ರಾರಂಭಿಸಬೇಕು ಎಂದು ಸೂಚನೆಗಳನ್ನು ನೀಡಿದ್ದರು. ಇದಾಗಿ ಎಡಿಸಿ’ಯವರು ಅಂದು ಅಲೆಮಾರಿ ಬಿಡಾರ’ದ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಕ್ಕೆ ಸಂಬಂಧಪಟ್ಟಂತೆ ಖುದ್ದು ಸ್ಥಳ ಪರಿಶೀಲನೆ ನಡೆಸಿದ ನಂತರ ನೀಡಿದ ಸೂಚನೆಗಳ ಅನುಪಾಲನೆ ಏನಾಯಿತು. ಅವು ಎಲ್ಲಿ ಅನುಷ್ಠಾನಗೊಳ್ಳುತ್ತಿವೆಯೇ ಇಲ್ಲವೇ ಎಂಬ ಸ್ಪಷ್ಟ ಮಾಹಿತಿಯೂ ತಿಳಿಯುತ್ತಿಲ್ಲ. ಆ ಅಲೆಮಾರಿ ಬಿಡಾರ ಮಾತ್ರ ಇಂದಿಗೂ ಯಥಾಸ್ಥಿತಿಯಲ್ಲೇ ಇದೆ. ಅದರ ಪ್ರಗತಿ ಯಾವಾಗ, ಹೇಗೆ,ಎಲ್ಲಿಯವರೆಗೆ ಎಂಬುದನ್ನು ನಾವು ಯಾರನ್ನು ಕೇಳಿ ತಿಳಿಯಬೇಕು ಎಂದು ಹಂದಿಜೋಗಿ ರಾಜಣ್ಣ ಪ್ರಶ್ನಿಸುತ್ತಾರೆ.
ಅಲೆಮಾರಿ ನಗರದಲ್ಲಿ ಈಗಾಗಲೇ ಹಂಚಿಕೆ ಮಾಡಿರುವ ನಿವೇಶನಗಳ ಅಭಿವೃಧ್ಧಿ ಎಲ್ಲಿಗೆ ಬಂತು, ಆಶ್ರಯ ಯೋಜನೆಯಡಿ ಮನೆ ನಿರ್ಮಾಣ ಮಾಡುವ ಬದಲು ಸಮಾಜ ಕಲ್ಯಾಣ ಇಲಾಖೆಯ ಅಲೆಮಾರಿ ಅಭಿವೃದ್ಧಿ ಕೋಶದಿಂದ ಈ ಮನೆಗಳ ನಿರ್ಮಾಣ ಆಗಬೇಕಿತ್ತು. ಆದರೆ, ಆ ಅನುಕೂಲವೂ ಈಗ ತಪ್ಪಿಹೋಗಿದೆ. ಅಲೆಮಾರಿ ಅಭಿವೃದ್ಧಿ ಕೋಶದಲ್ಲಿ ಈ ಹಿಂದೆ ಅಲೆಮಾರಿಗಳ ಮನೆ ನಿರ್ಮಾಣಕ್ಕೆಂದೇ 4’ಲಕ್ಷಗಳವರೆಗೆ ಅನುದಾನವಿತ್ತು. ಆದರೀಗ ಆಶ್ರಯ ಯೋಜನೆ ಅಡಿಯಲ್ಲಿ ಅಲೆಮಾರಿಗಳಿಗೆ ಸಿಗುವುದು 2′ ಲಕ್ಷ ರೂಪಾಯಿ ಮಾತ್ರ. ಈ ಎರಡು ಲಕ್ಷ ರೂಪಾಯಿ’ಯಲ್ಲಿ ಅಲೆಮಾರಿಗಳು ಹೇಗೆ ಮನೆ ಕಟ್ಟಿಕೊಳ್ಳಲು ಸಾಧ್ಯ ಎಂದು ಅವರು ತಮ್ಮ ಸಂಕಟ ತೋಡಿಕೊಂಡರು.
ಅದೇ ರೀತಿ ಅಲೆಮಾರಿ ಮಕ್ಕಳ ಹಕ್ಕುಗಳ ರಕ್ಷಣೆ, ಶೈಕ್ಷಣಿಕ ಅಭಿವೃದ್ಧಿ, ವ್ಯಸನಮುಕ್ತ ಹಾಗೂ ಸದೃಢವಾದ ಬೆಳವಣಿಗೆಗೆ ಸಂಬಂಧಿಸಿದಂತೆ ಇರುವ ಕಾರ್ಯಸೂಚಿಗಳು ಅಲೆಮಾರಿ ಬಿಡಾರಗಳಲ್ಲಿ ಅನುಷ್ಠಾನಗೊಳ್ಳಬೇಕು. ಆದರೆ ಇವ್ಯಾವು ನಿಯಮಿತವಾಗಿ ಅಲೆಮಾರಿಗಳಿಗೆ ಲಭಿಸುತ್ತಿಲ್ಲ ಎಂದು ಅಲೆಮಾರಿ ರೇಣುಕಮ್ಮ ತಮ್ಮ ಅಳಲು ತೋಡಿಕೊಂಡರು.
ತಾಲ್ಲೂಕಿನ ಇನ್ನಿತರೆ ಅಲೆಮಾರಿ ಜನಾಂಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಕಾರ್ಯಕ್ರಮಗಳ ಅನುಷ್ಠಾನ ಹೇಗಾಗುತ್ತಿದೆ ಎಂಬುದನ್ನು ತಾಲ್ಲೂಕು ದಂಡಾಧಿಕಾರಿಗಳಿಂದ ಮಾಹಿತಿ ಪಡೆಯುವ ಹಾಗೂ ತಮ್ಮ ಸಂಕಷ್ಟಗಳನ್ನು ಅವರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ತಾಲ್ಲೂಕಿನ ಅಲೆಮಾರಿಗಳು ತಹಸೀಲ್ದಾರ್’ರವರನ್ನು ಭೆಟ್ಟಿಮಾಡಿ ಮನವಿಪತ್ರ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು.
ಈಗಾಗಲೇ 77-78’ನೇ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಿಗೆ ಬಂದಿರುವ ವಂಚಿತ ಸಮುದಾಯಗಳಾದ ನಮಗೆ, ಕನಿಷ್ಠ ಹಕ್ಕು ಮತ್ತು ಮೂಲಭೂತ ಸೌಕರ್ಯಗಳನ್ನು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಒದಗಿಸಿಕೊಡಬೇಕು. ಬದುಕನ್ನೇ ನಿತ್ಯದ ಸಂಘರ್ಷದಂತೆ ಬಾಳುತ್ತಿರುವ ನಾವುಗಳು, ಅನಿವಾರ್ಯವಾಗಿ ಹೋರಾಟದ ದಾರಿಗಳನ್ನೇ ಆಯ್ದುಕೊಳ್ಳಬೇಕಾಗುತ್ತದೆ ಎಂದು ಹಂದಿಜೋಗಿ ರಾಜಣ್ಣ ಹೇಳಿದರು.
ಈ ಸಂದರ್ಭದಲ್ಲಿ ಹೊನ್ನಲಕ್ಷಮ್ಮ, ಕಮಲಮ್ಮ, ರೇಖಾ, ಜ್ಯೋತಿ, ದುರ್ಗಪ್ಪ, ವೆಂಕಟೇಶ್, ಪರಮೇಶ್, ಶಾಂತರಾಜ್, ಜಗದೀಶ ಸೇರಿದಂತೆ ಹಲವಾರು ಮಂದಿ ಅಲೆಮಾರಿಗಳು ಹಾಜರಿದ್ದರು.
ಬಾಕ್ಸ್ ಐಟಮ್ :
ಈಗಾಗಲೇ ತಾಲ್ಲೂಕು ಪಂಚಾಯತ್ ಇಲಾಖೆ, ಅಲೆಮಾರಿ ನಿವೇಶನ ಮತ್ತು ಮನೆ ನಿರ್ಮಾಣ ಕೆಲಸಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ತ್ವರಿತ ಕಾಮಗಾರಿಗಳನ್ನು ಪ್ರಾರಂಭಿಸಲಿದೆ. ಅಲೆಮಾರಿಗಳ ಕಷ್ಟಗಳ ಬಗ್ಗೆ ಬಹಳಷ್ಟು ತಿಳಿದಿರುವ ನನಗೆ ಅವರ ಅಭಿವೃದ್ಧಿ ಕೆಲಸಗಳು ಬೇಗನೆ ಅನುಷ್ಠಾನಗೊಳ್ಳುವ ಭರವಸೆಯಿದೆ ಎಂದು ತಹಸೀಲ್ದಾರ್ ಕೆ ಪುರಂದರ್’ರವರು ತಿಳಿಸಿದರು.
ಬಾಕ್ಸ್ ಐಟಮ್ :
ನಾವು ಈಗಾಗಲೇ ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮ ಪಂಚಾಯತಿಯ ಗೌಡಗೆರೆ ಸರ್ವೆ ನಂಬರ್ 20P-1’ರ ಅಲೆಮಾರಿ ನಿವೇಶನಗಳಿರುವ ಪ್ರದೇಶಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದೇವೆ. ಈಗಾಗಲೇ ಅಲ್ಲಿ ಮಂಜೂರಾಗಿರುವ ಜಾಗದ ಫಾರ್ಮೇಶನ್, ನಿವೇಶನ ಅಭಿವೃದ್ಧಿ ಮತ್ತು ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವ ಎಲ್ಲ ಪೂರ್ವ ತಯಾರಿಗಳನ್ನೂ ಮಾಡಿಕೊಳ್ಳಲಾಗುತ್ತಿದೆ ಎಂದು ತಾ.ಪಂ.ಇಒ ದೊಡ್ಡಸಿದ್ಧಯ್ಯ ತಿಳಿಸಿದರು.
__ವರದಿ, ಸಂಚಲನ
ಚಿಕ್ಕನಾಯಕನ ಸೀಮೆಯಿಂದ