ಚಿಕ್ಕನಾಯಕನಹಳ್ಳಿ : ತಾಲ್ಲೂಕು ಕಚೇರಿಯಲ್ಲಿ ವಿಶ್ವಕರ್ಮ ಚಿತ್ರಪಟಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ತಹಸೀಲ್ದಾರ್ ಕೆ ಪುರಂದರ್’ರವರು ವಿಶ್ವಕರ್ಮ ಜಯಂತಿಯನ್ನು ಆಚರಿಸಿದರು.
ತಾಲ್ಲೂಕು ಆಡಳಿತದ ಅಧಿಕಾರಿಗಳು, ವಿಶ್ವಕರ್ಮ ಸಮಾಜದವರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಆಸಕ್ತ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಮಾಜದ ಎಲ್ಲರಿಗೂ ಶುಭಾಶಯಗಳನ್ನು ಕೋರಿ ಮಾತನಾಡಿದ ತಹಸೀಲ್ದಾರ್ ಕೆ ಪುರಂದರ್, ಆಯಾಯಾ ಸಮಾಜದ ಸಾಂಸ್ಕೃತಿಕ ನಾಯಕರುಗಳ ಜಯಂತಿ ಆಚರಣೆಯಲ್ಲಿ ಕೇವಲ ಆಯಾಯಾ ಸಮುದಾಯದವರು ಮಾತ್ರವೇ ಭಾಗವಹಿಸುವುದು ಶೋಭೆಯಲ್ಲ . ಎಲ್ಲ ಸಮಾಜ, ಸಮುದಾಯದ ಜನರೂ ಇಂತಹ ಸಾಂಸ್ಕೃತಿಕ ನಾಯಕರುಗಳ ಜಯಂತಿಗಳಲ್ಲಿ ಭಾಗವಹಿಸುವಂತಾಗಬೇಕು. ಆಗ ಮಾತ್ರ ನಾವು ನಮ್ಮ ರಾಷ್ಟ್ರಕವಿಗಳ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಪರಿಕಲ್ಪನೆಯನ್ನು ಪಾಲಿಸಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ಜಾತಿ-ಮತದ ಹಂಗು ತೊರೆದು ಎಲ್ಲ ಸಮಾಜದವರು ಇಂತಹ ಸಾಂಸ್ಕೃತಿಕ ನಾಯಕರ ಜಯಂತಿಗಳಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಬಯಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡ, ದೇವರಾಜು ವಿಶ್ವಕರ್ಮ ಇಡೀ ಜಗತ್ತಿನ ಸೃಷ್ಟಿಕರ್ತ. ವಿಶ್ವಕರ್ಮನಿಗೆ ಐದು ಬಗೆಯ ವಿವಿಧ ವೃತ್ತಿಗಳಲ್ಲಿ ಪಾರಂಗತರಾದ ಐವರು ಮಕ್ಕಳಿದ್ದರು. ಅದರಲ್ಲಿ ಕಬ್ಬಿಣದ ಕುಲುಮೆ ಕೆಲಸ ಬಲ್ಲ ಒಬ್ಬ ಮಗ, ಮರಗೆಲಸ ಅಥವಾ ಬಡಗಿ ಕಸುಬುದಾರಿಕೆ ಬಲ್ಲ ಒಬ್ಬ ಮಗ, ತಾಮ್ರ ಮತ್ತು ಹಿತ್ತಾಳೆ ಕೆಲಸವನ್ನು ಬಲ್ಲ ಒಬ್ಬ ಮಗ, ಚಿನ್ನ-ಬೆಳ್ಳಿ ಕೆಲಸ ಬಲ್ಲಂಥ ಒಬ್ಬ ಮಗ, ಮಣ್ಣಿನ ಕೆಲಸ ಅಥವಾ ಕುಂಬಾರಿಕೆ ಕೆಲಸ ಬಲ್ಲಂಥ ಐದನೆಯ ಮಗನೂ ವಿಶ್ವಕರ್ಮನಿಗಿದ್ದರು.
ಹೀಗೆ, ಒಂದು ಸಮಾಜ ನಿರ್ಮಾಣಕ್ಕೆ ಪೂರಕವಾದ ಕಸುಬುದಾರಿಕೆಗಳನ್ನು ಬಲ್ಲ ಐವರು ಮಕ್ಕಳನ್ನು ಹೊಂದಿದ್ದ ವಿಶ್ವಕರ್ಮ ಇಡೀ ವಿಶ್ವಸಂಸಾರದ ಸೃಷ್ಟಿಕರ್ತ ಎಂದು ನಾವು ಗೌರವದಿಂದ ಕಾಣುತ್ತೇವೆ ಎಂದರು.
ಸಮಾಜದ ಮುಖಂಡ ಹಾಗೂ ನಿವೃತ್ತ ಶಿಕ್ಷಕ ಶ್ರೀಕಂಠಾಚಾರ್ ಮಾತನಾಡಿ, ಈ ಜಗತ್ತು ಪಂಚಭೂತಗಳಿಂದ ಕೂಡಿದೆ. ಅದೇರೀತಿ ಪಂಚ-ಪುತ್ರರತ್ನರನ್ನು ಹೊಂದಿದ್ದ ವಿಶ್ವಕರ್ಮ, ಪಂಚಲೋಹಗಳನ್ನು ಜನಕಲ್ಯಾಣಕ್ಕಾಗಿ ಬಾಗಿಸುವ ಕಸುಬುದಾರಿಕೆಗಳನ್ನು ತನ್ನ ಪುತ್ರರಿಗೆ ದಯಪಾಲಿಸಿ ಹರಸುವುದರ ಮೂಲಕ ವಿಶ್ವಸಂಸಾರದ ಸೃಷ್ಟಿಗೆ ಕಾರಣರಾದರು ಎಂದರು.
ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಸದಸ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.