ಧನಂಜಯ ಕುಚ್ಚಂಗಿಪಾಳ್ಯ
ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ತಿಳಿಸಿದ ಸಂಗತಿ ಇದು. ಜಪಾನೀಯರಿಗೆ ತಾಜಾ ಮೀನೆಂದರೆ ಬಲು ಇಷ್ಟ. ಆದರೆ ಜಪಾನ್ ಕರಾವಳಿ ಪ್ರದೇಶದಲ್ಲಿ ಮೀನುಗಳು ಬಹಳ ಕಡಿಮೆ. ತುಂಬ ವರ್ಷಗಳಿಂದ ಅಲ್ಲಿ ಮೀನುಗಳನ್ನು ಹಿಡಿಯುತ್ತಿದ್ದರಿಂದ ಹೀಗಾಗಿರಬೇಕು.
ಆದ್ದರಿಂದ ಮೀನುಗಾರರು ಮೀನು ಹಿಡಿಯಲು ಸಮುದ್ರದ ಆಳಕ್ಕೆ ಹೋಗಬೇಕಾಗುತ್ತದೆ. ಅಷ್ಟು ದೂರ ಹೋಗಿ ಸ್ವಲ್ಪವೇ ಮೀನು ತಂದರೆ ಅದು ಹೆಚ್ಚು ಆದಾಯವನ್ನು ತರುವುದಿಲ್ಲ. ಅದಕ್ಕೆಂದೇ ಅವರು ದೊಡ್ಡ, ಅತಿ ದೊಡ್ಡ ನಾವೆಗಳನ್ನು ಮಾಡಿಕೊಂಡಿದ್ದಾರೆ.
ಈ ನಾವೆಗಳಲ್ಲಿ ಸಮುದ್ರದಲ್ಲಿ ಅತ್ಯಂತ ದೂರದವರೆಗೆ ಹೋಗಿ ರಾಶಿ ರಾಶಿ ಮೀನುಗಳನ್ನು ಹಿಡಿದು ತರುತ್ತಾರೆ. ಇವರು ದೂರ ಹೋದಷ್ಟು ಮರಳಿ ಬರುವುದರಲ್ಲಿ ತಡವಾಗುತ್ತಿತ್ತು. ಗ್ರಾಹಕರು ಮನೆ ಸೇರುವಷ್ಟರಲ್ಲಿ ಮೀನುಗಳು ತಾಜಾ ಆಗಿ ಉಳಿಯುತ್ತಿರಲಿಲ್ಲ.
ಈ ಸಮಸ್ಯೆಯನ್ನು ಪರಿಹರಿಸಲು ಮೀನುಗಾರರು ತಮ್ಮ ನಾವೆಗಳಲ್ಲಿ ದೊಡ್ಡ ದೊಡ್ಡ ಶೈತ್ಯಾಗಾರಗಳನ್ನು ನಿರ್ಮಿಸಿ ತಾವು ಹಿಡಿದ ಮೀನುಗಳನ್ನು ಅವುಗಳಲ್ಲಿ ಹಾಕಿಡುತ್ತಿದ್ದರು. ಹೀಗೆ ಮೀನುಗಳು ತಾಜಾ ಇರುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಜಪಾನೀಯರಿಗೆ ತಾಜಾ ಮೀನಿನ ಹಾಗೂ ಶೈತ್ಯಾಗಾರದ ಮೀನುಗಳ ವ್ಯತ್ಯಾಸ ಬೇಗನೇ ತಿಳಿಯುತ್ತಿತ್ತು. ಮರಗಟ್ಟಿಸಿದ ಮೀನುಗಳ ರುಚಿ ಕಡಿಮೆ. ಹೀಗಾಗಿ ಅವುಗಳ ಬೆಲೆಯೂ ಕಡಿಮೆಯಾಗುತ್ತಿತ್ತು.
ಇದಕ್ಕೂ ಒಂದು ಪರಿಹಾರವನ್ನು ಕಂಡುಕೊಳ್ಳಲು ಮೀನುಗಾರರು ಪ್ರಯತ್ನಿಸಿದರು. ಈ ಬಾರಿ ಅವರು ಶೈತ್ಯಾಗಾರದ ಬದಲಾಗಿ ದೊಡ್ಡ ನೀರಿನ ಟ್ಯಾಂಕುಗಳನ್ನು ಇರಿಸಿಕೊಂಡು ಹಿಡಿದ ಮೀನುಗಳನ್ನು ಜೀವಂತವಾಗಿಯೇ ಟ್ಯಾಂಕಿನಲ್ಲಿ ಇಟ್ಟು ದಡಕ್ಕೆ ತರುತ್ತಿದ್ದರು. ಆದರೆ ಈ ಮೀನುಗಳಿಗೂ ತಾಜಾ ಮೀನಿನ ದರವನ್ನು ಜನ ಕೊಡುತ್ತಿರಲಿಲ್ಲ. ಯಾಕೆಂದರೆ ಟ್ಯಾಂಕುಗಳಲ್ಲಿದ್ದ ಸಾವಿರಾರು ಮೀನುಗಳು ವಿಶಾಲವಾದ ಸಮುದ್ರದಿಂದ ಬಂದವುಗಳು. ಈ ಇಕ್ಕಟ್ಟಿನ ಸ್ಥಾನದಲ್ಲಿ ಅವುಗಳಿಗೆ ಉಸಿರುಕಟ್ಟಿದಂತಾಗುತ್ತಿತ್ತು. ಸ್ವಚ್ಛವಾಗಿ ಈಜಲಾರದೇ ಸ್ವಲ್ಪ ಹೊತ್ತಿಗೇ ಸುಸ್ತಾಗಿ ಬಿದ್ದು ಸತ್ತು ಹೋಗುತ್ತಿದ್ದವು. ಈ ಮೀನುಗಳ ರುಚಿಯೂ ಕಡಿಮೆಯೇ.
ಈ ಕಾರಣಗಳಿಂದಾಗಿ ತಮ್ಮ ಜನರಿಗೆ ತಾಜಾ ಮೀನುಗಳನ್ನು ನೀಡುವುದು ಹೇಗೆ ಎನ್ನುವುದೇ ಬಹುದೊಡ್ಡ ಸವಾಲಾಗಿತ್ತು. ಜಪಾನೀಯರು ಇದಕ್ಕೊಂದು ಪರಿಹಾರ ಕಂಡುಹಿಡಿದಿದ್ದಾರೆ. ಅದು ಹೇಗೆ ಗೊತ್ತೇ? ಹಡಗುಗಳಲ್ಲಿ ಈಗಲೂ ನೀರಿನ ಟ್ಯಾಂಕುಗಳಿವೆ.
ಹಿಡಿದ ಮೀನುಗಳನ್ನು ಅವುಗಳಲ್ಲಿಯೇ ಹಾಕುತ್ತಾರೆ. ಆದರೆ ಆ ಮೀನುಗಳ ಜೊತೆಯಲ್ಲಿ ಪ್ರತಿ ಟ್ಯಾಂಕಿನಲ್ಲೂ ಒಂದೆರಡು ಶಾರ್ಕ್ ಮೀನುಗಳನ್ನು ಹಾಕುತ್ತಾರೆ. ಈ ಶಾರ್ಕ್‌ಗಳು ಉಗ್ರವಾದವುಗಳು, ಮೀನುಗಳನ್ನು ಬೆನ್ನಟ್ಟಿ ಕೊಂದು ತಿನ್ನುತ್ತವೆ. ತಮ್ಮ ಟ್ಯಾಂಕಿನಲ್ಲಿದ್ದ ಶಾರ್ಕ್‌ಗಳಿಂದ ತಪ್ಪಿಸಿಕೊಳ್ಳಲು ಉಳಿದ ಮೀನುಗಳು ಚುರುಕಾಗಿರಬೇಕಾಗುತ್ತದೆ.
ಒಂದು ಕ್ಷಣ ಮೈಮರೆತರೂ ಪ್ರಾಣ ಹೋಗಿ ಬಿಡುತ್ತದೆ. ಸದಾ ಎಚ್ಚರಿಕೆಯ ಈ ಜೀವನ ಅವುಗಳನ್ನು ತಾಜಾ ಆಗಿಯೇ ಇಡುತ್ತದೆ, ಅಂದರೆ ಸವಾಲಿನ ಮುಖದಲ್ಲಿ ಮೀನುಗಳು ಸದಾ ಕಾಲ ಓಡಾಡುತ್ತ, ಚುರುಕಾಗಿದ್ದು ತಾಜಾ ಆಗಿ ಉಳಿದಿದ್ದವು. ನಾವೂ ನಮ್ಮ ನಮ್ಮ ಬದುಕಿನ ಟ್ಯಾಂಕ್‌ಗಳಲ್ಲಿ ಎಷ್ಟೋ ಬಾರಿ, ಸುಸ್ತಾಗಿ, ನಿರ್ವೀರ್ಯರಾಗಿ, ಕೈ ಚೆಲ್ಲಿ ಕುಳಿತುಕೊಳ್ಳುತ್ತೇವೆ.
ಸಾಕಪ್ಪ, ಇನ್ನೇಕೆ ಒದ್ದಾಟ ಎಂದುಕೊಂಡು ಹಳತಾಗುತ್ತೇವೆ. ಹಾಗಾದರೆ ನಾವು ತಾಜಾ ಆಗಿಯೇ ಇರಬೇಕಾದರೆ ಏನು ಮಾಡಬೇಕು? ಸವಾಲುಗಳನ್ನು ಎದುರಿಸಬೇಕು. ಸವಾಲುಗಳು ಇಲ್ಲದಿದ್ದರೆ ಸೃಷ್ಟಿಸಿಕೊಳ್ಳಬೇಕು. ಅವು ಇದ್ದಾಗ ನಾವು ಚುರುಕಾಗುತ್ತೇವೆ, ಹೊಸತಾಗುತ್ತೇವೆ, ಹಳಸುವುದಿಲ್ಲ, ಬದುಕು ರಸಹೀನವಾಗುವುದಿಲ್ಲ. ದಯವಿಟ್ಟು ನಿಮ್ಮ ಜೀವನದ ಕೊಳದಲ್ಲಿ ಒಂದು ಶಾರ್ಕ್ ಬಿಟ್ಟುಕೊಳ್ಳಿ, ಸದಾ ತಾಜಾ ಆಗಿ ಇರಿ.