(ಅಲೆಮಾರಿ ಸಿದ್ದರ ಕೇರಿಯೇನು ಜನ-ವಸತಿಯೋ ಸುಡುಗಾಡೋ…!? ಎಂದು ಕೇಳುತ್ತಿರುವ ಸಿದ್ದ ಜನಾಂಗದ ಅಲೆಮಾರಿಗರು)
ಚಿಕ್ಕನಾಯಕನಹಳ್ಳಿ : ಪಟ್ಟಣದ ಕೇದಿಗೆಹಳ್ಳಿ ಪಾಳ್ಯದ ಗುಂಡುತೋಪಿನಲ್ಲಿ ಗುಡಿಸಲು-ಬಿಡಾರ ಹೂಡಿ ದಶಕಗಳಿಂದ ಹೇಗೋ ಬದುಕಿಕೊಂಡಿದ್ದ ಸಿದ್ಧ ಜನಾಂಗದ ಅಲೆಮಾರಿ ಕುಟುಂಬಗಳನ್ನು ಅಲ್ಲಿಂದ ತೆರವುಗೊಳಿಸಿ, ಕಸಬಾ ಹೋಬಳಿ ದಬ್ಬೇಘಟ್ಟ ಸರ್ವೆ ನಂಬರ್ 122’ರಲ್ಲಿನ 02ಎಕರೆ/20 ಗುಂಟೆ ಜಮೀನಿನಲ್ಲಿ 2019-2020’ರ ಸಾಲಿನಲ್ಲಿ ನಿವೇಶನ ಹಂಚಿಕೆ ಮಾಡಿಕೊಟ್ಟ ಕರ್ನಾಟಕ ಸರ್ಕಾರದ ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ತುಮಕೂರು ಜಿಲ್ಲೆ, ತುಮಕೂರು ನಿರ್ಮಿತಿ ಕೇಂದ್ರ, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಸೇರಿದಂತೆ ಎಲ್ಲ ಸರ್ಕಾರಿ ಯಂತ್ರಾಂಗವೂ, ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಅಲೆಮಾರಿಗಳ ಹಣೆಪಾಡನ್ನು ಮತ್ತೆ ಸುಡುಗಾಡಿಗೆ ಬಿಟ್ಟು ಕೈ-ತೊಳೆದುಕೊಂಡಿವೆ.
ಎಂದು ಸರ್ವೆ ನಂಬರ್-122’ರಲ್ಲಿನ ಸಿದ್ದರ ಬಿಡಾರದಲ್ಲಿ ವಾಸಿಸುತ್ತಿರುವ ಸಿದ್ದ ಜನಾಂಗದ ಅಲೆಮಾರಿಗಳು ನೊಂದು ನಿರ್ವಿವಾದ ನುಡಿಯುತ್ತಾರೆ.
ನಿವೇಶನ ಹಂಚಿಕೆಯಾದರೂ ಮನೆ ಕಟ್ಟಿಕೊಳ್ಳಲು ಧನಸಹಾಯ ಬಿಡುಗಡೆಯಾಗುತ್ತಿಲ್ಲ. ನಿವೇಶನದ ಹಂಚಿಕೆಯಲ್ಲಿ ಆಗಿರುವ ನಿವೇಶನ-ಅಳತೆಯ ಲೋಪದೋಷಗಳನ್ನು ಸರಿಪಡಿಸುವುದರಲ್ಲೇ ಎರಡು-ಮೂರು ವರ್ಷಗಳನ್ನು ತಳ್ಳಿ ಹಾಕಲಾಗಿದೆ.
ಹಕ್ಕುಪತ್ರದಲ್ಲಿ ಬದಲಾಗಲಿರುವ ನಿವೇಶನ ಅಳತೆಗೂ ಮಂಜೂರಾಗಿರುವ ನಿವೇಶನದ ಅಳತೆಗೂ ಎತ್ತಣಿಂದೆತ್ತ ಸಂಬಂಧವನ್ನೂ ಕಲ್ಪಿಸಲಾಗುತ್ತಿಲ್ಲ. ಊರಮಧ್ಯದಲ್ಲಿ ಎಲ್ಲರೊಳಗೆ ತಾವೂ ಒಬ್ಬರು ಎಂಬಂತೆ ಬಾಳಿಕೊಂಡಿದ್ದ ತಮ್ಮನ್ನು, ನಿವೇಶನ ಮತ್ತು ಸ್ವಂತ ಮನೆಯ ಆಸೆಯಲ್ಲಿ ಊರ ಮಧ್ಯದಿಂದ ನಿರ್ಜನ ಬೆಟ್ಟದ ಮೇಲಿನ ಜಾಗಕ್ಕೆ ಸಾಗಹಾಕಿರುವ ಸರ್ಕಾರೀ ಯಂತ್ರದ ನಿರಚನವ ಬಿಡಿಸುತ್ತಾ ತಮ್ಮ ವ್ಯಥೆಯನ್ನು ಕಥಿಸುತ್ತಾರೆ ಇಲ್ಲಿನ ಸಿದ್ದರು.
ಸರ್ಕಾರ ಇದನ್ನೇ ಮಾಡುವುದಿದ್ದರೆ, ಇದರ ಬದಲು ನಮ್ಮನ್ನೇ ಮುಗಿಸಿ ದಫನು ಮಾಡುವ ರುದ್ರಭೂಮಿಯನ್ನಾಗಿ ಇದನ್ನು ಮಾರ್ಪಡಿಸಬಹುದಿತ್ತು. ಬಡಾವಣೆಯ ಹೆಸರಲ್ಲಿ ಮತ್ತೆ ನಮ್ಮನ್ನು ನಿರ್ಜನ ಸುಡುಗಾಡಿಗೇ ಹಾಕಿ ದಿನನಿತ್ಯ ಇಷ್ಟಿಷ್ಟೇ ಬೆಂಕಿಯಿಕ್ಕುವ ಬದಲು, ಒಂದೇ ಸಾರಿ ಸುಟ್ಟೇಬಿಟ್ಡಿದ್ದರೆ ಚೆನ್ನಾಗಿತ್ತು ಎಂದು ಇಲ್ಲಿನ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಅಲೆಮಾರಿ ಮಹಿಳೆಯರ ಪರಿಸ್ಥಿತಿ ::
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಿಂದ ಸುಮಾರು ಐದಾರು ಕಿಲೋಮೀಟರುಗಳ ದೂರದಲ್ಲಿರುವ ಸಿದ್ದರ ಈ ಬಡಾವಣೆಯಲ್ಲಿ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು, ಮಕ್ಕಳು, ಶಾಲೆ ಬಿಟ್ಟ ಮಕ್ಕಳು, ಹಿರಿಯರು, ನಾನಾ ಕಾಯಿಲೆಗಳಿಗೆ ತುತ್ತಾದ ವಯೋವೃದ್ಧರು, ಇತರರು ಸಣ್ಣಸಣ್ಣ ಗುಡಿಸಲುಗಳಲ್ಲಿ ವಾಸವಾಗಿದ್ದಾರೆ.
ಅಕಸ್ಮಾತ್ ಇಲ್ಲಿ ಯಾರಿಗಾದರೂ ಏನಾದರೂ ತುರ್ತು ಚಿಕಿತ್ಸೆಯ ಅಗತ್ಯ ಒದಗಿಬಂದರೆ ಇಲ್ಲಿಂದ ಮುಖ್ಯರಸ್ತೆಯ ಕಡೆಗೆ ಹೋಗಿ ತಲುಪಲು ಬಡಾವಣೆಯಿಂದ ಸಮರ್ಪಕ ರಸ್ತೆಯೇ ಇಲ್ಲ. ಇಲ್ಲಿಂದ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅಸ್ವಸ್ಥರ ಪ್ರಾಣ ಉಳಿಯುವ ಯಾವ ಖಾತ್ರಿಯೂ ಇಲ್ಲ. ಯಾಕೆಂದರೆ, ಬೇಗನೇ ಪ್ರಯಾಣಿಸಲು ದುರ್ಲಭವಾದ ದುರ್ಗಮ ಕಚ್ಛಾರಸ್ತೆ ಇಲ್ಲಿರುವಂಥದ್ದು.
ಬಂಡಿಖರಾಬ್ ತರಹದ್ದು. ತೀರಾ ಕಿರಿದಾದ್ದು. ವಿಪರೀತ ಆಳದ ಮತ್ತು ಎತ್ತರದ ತಗ್ಗು-ದಿಣ್ಣೆಗಳಿಂದ ಕೂಡಿದಂಥ ರಸ್ತೆ. ನಿಧಾನ ಚಲಿಸಿದರೂ ವಾಹನಗಳ ಚಕ್ರಜಾರುವ ಕಂಕ್ರಿಮಣ್ಣಿನ ರಸ್ತೆಯಂಥದ್ದು.
ತುರ್ತು ಸಂದರ್ಭದಲ್ಲಿ 108-ಆ್ಯಂಬ್ಯುಲೆನ್ಸ್ ವಾಹನ ಕೂಡಾ ತಲುಪಲು ಕಷ್ಟಸಾಧ್ಯದ ಕಡುದಾರಿಯ ಜನ-ವಸತಿಯಿದು. ಇಂಥ ಪರಿಸ್ಥಿತಿಯಲ್ಲಿ ನಿತ್ಯದ ಜೀವನ ಸಾಗಿಸುತ್ತಿರುವ ಅಲೆಮಾರಿಗಳು, ಅಲೆಮಾರಿ ಮಹಿಳೆಯರು ಅದಿನ್ನ್ಯಾವ ಸಂಸ್ಕಾರಿ ಭಾಷೆಯಲ್ಲಿ ತಮ್ಮ ಅಸಹನೆ ವ್ಯಕ್ತಪಡಿಸಲು ಸಾಧ್ಯ ಊಹಿಸಿನೋಡಿ.
ಮನೆ ನಿರ್ಮಿಸಿಕೊಳ್ಳಲು ಇನ್ನೂ ನಿವೇಶನಗಳ ಅಳತೆ ಮತ್ತು ಹಂಚಿಕೆ ಬಗೆಹರಿಯುತ್ತಿಲ್ಲ. ಇದರಿಂದಾಗಿ ಧನಸಹಾಯ ಬಿಡುಗಡೆ ಆಗುತ್ತಿಲ್ಲ. ಇದೆಲ್ಲದರ ಪರಿಣಾಮ ಇಲ್ಲಿ ಗುಂಡುತೋಪಿಗಿಂತಲೂ ದುಃಸ್ತರದ ಪರಿಸ್ಥಿತಿಯಿದೆ. ತಾತ್ಕಾಲಿಕವಾಗಿಯಾದರೂ ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ ಕನಿಷ್ಠ ಶೌಚಾಲಯ ವ್ಯವಸ್ಥೆಯಿಲ್ಲ. ಕಾಡುಪ್ರಾಣಿಗಳ ಭೀತಿಯ ನಡುವಲ್ಲೇ ಬಯಲ ಶೌಚಾಲಯದಲ್ಲೇ ಇಲ್ಲಿನವರು ಬಹಿರ್ದೆಸೆಗೆ ಹೋಗಿಬರಬೇಕು.
ತಾತ್ಕಾಲಿಕವಾದ ಸ್ನಾನಗೃಹಗಳ ವ್ಯವಸ್ಥೆಯೂ ಇಲ್ಲಿಲ್ಲ. ಇಲ್ಲಿರುವ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಪರಿಸ್ಥಿತಿಯನ್ನು ಊಹಿಸಲೂ ಆಗದು. ಇಂಥ ದ್ವಾಸೊತ್ತಿಗೆ ನಿರ್ಜನ ಗುಡ್ಡದ ಮ್ಯಾಲೆ ನಿವೇಶನ ಮಾಡಿ, ಆ ಗುಡ್ಡಕ್ಕೆ ಸಿದ್ದ ಜನಾಂಗದ ಅಲೆಮಾರಿಗಳನ್ನು ತಂದು ಗುಡ್ಡೆಹಾಕುವ ಅಗತ್ಯವೇನಿತ್ತು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಅಧ್ಯಕ್ಷ ರಂಗನಾಥ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಚಿರತೆ, ಕಾಡುಪ್ರಾಣಿಗಳ ಕಾಟ ::
ಇದು ವಸತಿ ಪ್ರದೇಶದಿಂದ ದೂರವಿರುವ ನಿರ್ಜನ ಗುಡ್ಡದ ಮೇಲಿರುವ ಬಡಾವಣೆ ಆಗಿರುವುದರಿಂದ, ರಾತ್ರಿವೇಳೆಯಲ್ಲಿ ಕರಡಿ, ಚಿರತೆ ಮತ್ತು ಮುಳ್ಳುಹಂದಿ, ಕಂಕನರಿ’ಯಂತಹ ಅರೆ ಅರಣ್ಯ ಪ್ರದೇಶದ ಕಾಡುಪ್ರಾಣಿಗಳ ಹಾವಳಿ ಇಲ್ಲಿದೆ. ಇಲ್ಲಿನ ಅಲೆಮಾರಿಗಳು ಪ್ರತಿರಾತ್ರಿ ಇಲ್ಲಿ ಬೃಹದಾಕಾರದ ಜ್ವಾಲೆ ಬೆಳಗುವಷ್ಟು ಬೃಹತ್ತಾದ ಬೆಂಕಿಯನ್ನು ಹಾಕಿ, ಕಾಡುಪ್ರಾಣಿಗಳನ್ನು ಹೆದರಿಸಿ ಹಿಮ್ಮೆಟ್ಟಿಸಿ ಓಡಿಸುತ್ತಾರೆ. ಹೀಗೆ ನಿತ್ಯ ಆಗುವ ನಿದ್ರಾಭಂಗದಿಂದಾಗಿ ಮಾರನೇ ಬೆಳಗ್ಗೆ ತಾವು ಊರೂರು ಅಲೆದು ಮಾಡುವ ಪ್ಲಾಸ್ಟಿಕ್ಕು, ಪಾತ್ರೆ, ಹೇರ್ಪಿನ್ನ, ಮಕ್ಕಳಾಟಿಕೆ, ತಲೆಗೂದಲಿನ ಸಣ್ಣಪುಟ್ಟ ವ್ಯಾಪಾರಕ್ಕೆ ಬೆಳಗ್ಗೆದ್ದು ಹೋಗುವಾಗ ಆಗುವ ತೊಂದರೆ ತೊಡಕುಗಳನ್ನು ವಿವರಿಸುತ್ತಾ, ಬೆನ್ನುಹೊಕ್ಕಿರುವ ಹೊಟ್ಟೆಗೆ ಉಸಿರು ತುಂಬಿಕೊಂಡು ಉಡುದಾರ ಸಡಿಲಿಸಿಕೊಳ್ಳುತ್ತಾರೆ ಇಲ್ಲಿನ ಸಿದ್ದರು.
ಇಲ್ಲಿ ಚಿರತೆ ಬೋನನ್ನು ಇಟ್ಟು ಚಿರತೆ ಹಿಡಿಯಲು ಎಲ್ಲ ಕ್ರಮಗಳನ್ನೂ ಕೈಗೊಂಡಿರುವ ವಲಯ ಅರಣ್ಯಾಧಿಕಾರಿ ಅರುಣ್ ವಿವರಿಸುವುದು ಹೀಗೆ, ಮೂಲತಃ ಈ ಗುಡ್ಡ ಕಾಡುಪ್ರಾಣಿಗಳ ಆವಾಸ ಸ್ಥಾನ. ಅಲ್ಲೀಗ ಮನುಷ್ಯ ತನ್ನ ಬಡಾವಣೆಗಳನ್ನು ವಿಸ್ತರಿಸಿಕೊಂಡಿದ್ದಾನೆ. ಹೀಗಾಗಿ, ಕಂಗೆಟ್ಟು ದಿಕ್ಕಾಪಾಲಾಗಿ ಅಲ್ಲಿಂದ ವಕ್ಕಲೆದ್ದು ಹೋಗುವ ಆಯೆಲ್ಲ ಕಾಡುಪ್ರಾಣಿಗಳು, ಎಂದೋ ಒಮ್ಮೆ ತಮ್ಮ ಮೂಲ ತವರಿಗೆ ಮರಳುತ್ತವೆ. ಅಲ್ಲಿ ಮನುಷ್ಯನ ಆಕ್ರಾಮಕತೆಗೆ ಹೆದರಿ ಮತ್ತೆ ಹೊರಟುಹೋಗುತ್ತವೆ.
ಇನ್ನು ಕೆಲವೆಡೆ ಈ ಕೋಳಿಫಾರ್ಮ್ ಮತ್ತು ಕುರಿಫಾರ್ಮ್’ಗಳ ತ್ಯಾಜ್ಯದ ಸಮರ್ಪಕ ವಿಲೇವಾರಿ ಆಗದಿದ್ದಾಗ, ಗ್ರಾಮದ ಸನಿಹದಲ್ಲೇ ಅಂತಹ ಫಾರ್ಮ್’ಗಳಿದ್ದಾಗ, ಚಿರತೆಯಂತಹ ಕಾಡುಪ್ರಾಣಿಗಳಿಗೆ ನೇರ ಆಹ್ವಾನ ಸಿಕ್ಕಂತಾಗುತ್ತದೆ. ಆಗ ಮಾನವ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ ಉದ್ಭವವಾಗುತ್ತದೆ. ಆದರೆ, ಇದು ಪರಸ್ಪರ ಸರಹದ್ದುಗಳನ್ನು ಗುರ್ತಿಸಿಕೊಂಡು ಶಾಂತಿಪಾಲನೆ ಮಾಡಿಕೊಳ್ಳುವುದರ ಮೂಲಕ ಬಗೆಯಹರಿಯಬೇಕಾದ ಸಮಸ್ಯೆ ಎಂದು ಅವರು ಸ್ಪಷ್ಟ ವಿವರಿಸುತ್ತಾರೆ.
ಸಂಚಲನ
ಚಿಕ್ಕನಾಯಕನ ಸೀಮೆಯಿಂದ