ತುಮಕೂರು : ರಾಜ್ಯ ಸಚಿವ ಸಂಪುಟಕ್ಕೆ 10 ಜನ ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬೆಂಗಳೂರಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ನೂತನ ಶಾಸಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 18 ಮಂದಿ ಸಚಿವರಿದ್ದ ರಾಜ್ಯ ಸರ್ಕಾರಕ್ಕೆ 10 ನೂತನ ಶಾಸಕರು ಸೇರ್ಪಡೆಯಾಗಿ ಸಚಿವರ ಸಂಖ್ಯಾಬಲ 28ಕ್ಕೆ ಏರಿಕೆಯಾಗಿದೆ.
ಯಾರಿಗೆ ಯಾವ ಖಾತೆ..?
10 ಜನ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಯಾರಿಗೆ ಯಾವ ಖಾತೆ ಎಂಬುದು ಈಗ ಪ್ರಶ್ನೆಯಾಗಿದೆ. ಶನಿವಾರದ ಒಳಗೆ ಖಾತೆ ಹಂಚಿಕೆ ಮಾಡುತ್ತೇನೆ ಸಾಧ್ಯವಾದರೆ ನಾಳೆ ಅಥವಾ ನಾಡಿದ್ದು ದೆಹಲಿಗೆ ತೆರಳಿ ಮಾತುಕತೆ ನಡೆಸಲಾಗುತ್ತೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದರು.
ಮೊದಲ ಬಾರಿಗೆ ಸಂಪುಟ ದರ್ಜೆಗೆ ಏರಿದ ನೂತನ ಶಾಸಕರು
ರಾಜ್ಯ ಸಚಿವ ಸಂಪುಟಕ್ಕೆ ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ಬೈರತಿ ಬಸವರಾಜು, ಶಿವರಾಮ ಹೆಬ್ಬರ್, ಬಿ.ಸಿ ಪಾಟೀಲ್, ಗೋಪಾಲಯ್ಯ, ನಾರಾಯಣ ಗೌಡ. ಮೊದಲ ಬಾರಿಗೆ ಸಚಿವ ಸಂಪುಟ ದರ್ಜೆಗೆ ಆಯ್ಕೆಯಾಗಿದ್ದಾರೆ. ಮೊದಲ ಪ್ರಯತ್ನದಲ್ಲೇ ಸಚಿವರಾದ ಶ್ರೀಮಂತ ಪಾಟೀಲ್ ಹಾಗು ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿ.ಸಿ ಪಾಟೀಲ್ ಅವರು ಸಚಿವರಾಗುವ ಮೂಲಕ 37 ವರ್ಷಗಳ ಬಳಿಕ ಈ ಕ್ಷೇತ್ರಕ್ಕೆ ಸಚಿವ ಸ್ಥಾನ ಒಲಿದು ಬಂದಿದೆ.
ಮೂಲ ಬಿಜೆಪಿಗರಲ್ಲಿ ಭಿನ್ನಮತ ಸ್ಫೋಟ, ಸಂಪುಟ ವಿಸ್ತರಣೆಗೆ ಗೈರು..?
ಸಚಿವ ಸಂಪುಟ ದರ್ಜೆಗೆ ಮೂವರು ಮೂಲ ಬಿಜೆಪಿಗರಿಗೆ ಅವಕಾಶ ನೀಡಲಾಗಿತ್ತು. ಅದರಂತೆ ಉಮೇಶ್ ಕತ್ತಿ, ಸಿ.ಪಿ ಯೋಗೇಶ್ವರ್, ದಕ್ಷಿಣ ಕನ್ನಡ ಜಿಲ್ಲೆಯ ಅಂಗಾರ, ಚಿತ್ರದುರ್ಗ ತಿಪ್ಪಾರೆಡ್ಡಿ, ಹಾಲಪ್ಪ ಆಚಾರ್, ಅರವಿಂದ್ ಲಿಂಬಾವಳಿ ಹೆಸರು ರೇಸ್‌ನಲ್ಲಿ ಇತ್ತು. ಆದರೆ ಸ್ವಪಕ್ಷದಲ್ಲೇ ಭಿನ್ನಮತ ಸ್ಫೋಟಗೊಂಡ ಹಿನ್ನೆಲೆ ಮೂಲ ಬಿಜೆಪಿಗರಿಗೆ ತಾತ್ಕಾಲಿಕವಾಗಿ ಸಚಿವ ಸ್ಥಾನ ಬೇಡ ಎಂದು ಹೈಕಮಾಂಡ್ ಸೂಚನೆ ನೀಡಿತ್ತು. ಅದರಂತೆ ಇಂದು ನಡೆದ ಪ್ರಮಾಣವಚನದಲ್ಲಿ 10 ಜನ ಅರ್ಹ ಶಾಸಕರು ಮಾತ್ರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸಮಾರಂಭಕ್ಕೆ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಹಾಗು ಸಿ.ಪಿ ಯೋಗೇಶ್ವರ್ ಗೈರಾಗುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
Comment here