ತುಮಕೂರ್ ಲೈವ್

ಅಯೋಧ್ಯೆ ತೀರ್ಪು: ಕಾಗೆಯನ್ನು ಎಳೆದು ತಂದಿದ್ದೇಕೆ ಬರಗೂರು ರಾಮಚಂದ್ರಪ್ಪ

ತುಮಕೂರು: ಬಹುವರ್ಷಗಳ ವಿವಾದಿತ ರಾಮಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸುಪ್ರೀಂಕೋರ್ಟ್ ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ನೀಡಿರುವ ತೀರ್ಪ ಅನ್ನು ಎಲ್ಲರೂ ಒಪ್ಪಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಹೇಳಿದರು.

ನಗರದಲ್ಲಿ ಶನಿವಾರ ತುಮಕೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕಾವ್ಯೋತ್ಸವದಲ್ಲಿ ಅವರು ಮಾತನಾಡಿದರು.

1991ರಿಂದ ಈ ವಿವಾದದಿಂದಾಗಿ ಮುಸ್ಲಿಮರು ಹಾಗೂ ಹಿಂದೂಗಳ ನಡುವೆ ಸಂಘರ್ಷ ನಡೆದಿದೆ. ಈಗ ಈ ದೇಶದ ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಇದು ಸಂವಿಧಾನಕ್ಕೆ ನೀಡುವ ಗೌರವವಾಗಿದೆ, ತೀರ್ಪು ಇಷ್ಟ ಇರಲಿ, ಇಲ್ಲದಿರಲಿ ಎಲ್ಲರನ್ನೂ ಅದನ್ನು ಒಪ್ಪಬೇಕು ಎಂದು ಹೇಳಿದರು.

ಕಾಗೆಯ ಕಾರುಣ್ಯ ಬೆಳೆಸಿಕೊಳ್ಳಬೇಕು. ಕಾಗೆ ಕೋಗಿಲೆಯ ಮೊಟ್ಟೆಗಳಿಗೆ ಕಾವು ಇಟ್ಟು ಮರಿಗಳನ್ನಾಗಿ ಮಾಡುತ್ತದೆ. ಕಾಗೆಗೆ ಕಾರುಣ್ಯ  ಇರದಿದ್ದರೆ ಕೋಗಿಲೆಯನ್ನುನೋಡಲು ಸಾಧ್ಯವಿರುತ್ತಿರಲಿಲ್ಲ. ಕಾಗೆಯ ಕಾರುಣ್ಯ, ಸೌಹಾರ್ದತೆಯನ್ನು ನಾವು ಬೆಳೆಸಿಕೊಳ್ಳಬೇಕು. ಕಾಗೆಯೇ ಕಾರುಣ್ಯವೇ ನಮಗೆ ಆದರ್ಶವಾಗಬೇಕು ಎಂದು ಸಲಹೆ ನೀಡಿದರು.

ಈ ತೀರ್ಪ ಅನ್ನು ಮುಂದೆ ಇಟ್ಟುಕೊಂಡು ಹೊಸ ಹೊಸ ಸಂಘರ್ಷಗಳನ್ನು ಮುಂದು ಮಾಡಿಕೊಂಡು ನ್ಯಾಯಾಲಯಗಳಿಗೆ ಹೊಸ ಹೊಸ ದಾವೆಗಳನ್ನು ಹೂಡುವ ಮನಸ್ಸುಗಳು ಇನ್ನೂ ಇಲ್ಲವಾಗಬೇಕು. ಇತಿಹಾಸವನ್ನು ಇತಿಹಾಸದ ಸಂಶೋಧಕರಿಗೆ ಬಿಡಬೇಕು. ಅದನ್ನು ಅಧ್ಯಯನವಾಗಿ ನೋಡಬೇಕಷ್ಟೇ ಹೊರತು ಇತಿಹಾಸವನ್ನು ಇಟ್ಟುಕೊಂಡು ವರ್ತಮಾನದಲ್ಲಿ ಸಂಘರ್ಷ  ಹುಟ್ಟು ಹಾಕುವುದನ್ನು  ಇನ್ನಾದರೂ ನಿಲ್ಲಿಸಬೇಕು ಎಂದು ಹೇಳಿದರು.

ನಮ್ಮದು ಸರ್ವಜನಾಂಗದ ಜಾತಿಯ ತೋಟ. ಇಲ್ಲಿ ಶಾಂತಿಯ ಹೂವುಗಳು ಅರಳಬೇಕೇ ಹೊರತು ಸಂಘರ್ಷದ ಹೂವುಗಳಲ್ಲ. ಬುದ್ಧ, ಬಸವ, ಕಬೀರ, ಗಾಂಧಿ, ಅಂಬೇಡ್ಕರ್ ಎಲ್ಲರೂ ಅಂತಿಮವಾಗಿ ಹೇಳಿದ್ದು ಶಾಂತಿಯನ್ನೇ, ಆ ಶಾಂತಿ, ಸಾಮರಸ್ಯವೇ ನಮ್ಮ ಮಂತ್ರವಾಗಬೇಕು. ದೇಶ ಆರ್ಥಿಕವಾಗಿ ದುಸ್ಥಿತಿಯಲ್ಲಿದೆ. ಆರ್ಥಿಕ ಹಿಂಜರಿತ ಕಾಡುತ್ತಿದೆ, ಈ ಸಂದರ್ಭದಲ್ಲಿ ಎಲ್ಲರೂ ಸಾಮರಸ್ಯದಿಂದ ದೇಶವನ್ನು ಮುನ್ನೆತ್ತುವ ಕಡೆಗೆ ಸಾಗಬೇಕಾಗಿದೆ ಎಂದು ಸಲಹೆ ನೀಡಿದರು.

ಜಾತಿ. ಧರ್ಮದ ಸಂಘರ್ಷದಿಂದ ಮನಮೂಲ ಸಂಸ್ಕೃತಿ ಹಾಳಾಗಬಾರದು, ನಮ್ಮದು ನೆಲ ಮೂಲ ಸಂಸ್ಕೃತಿ ಮಾತ್ರವಲ್ಲ, ಮನಮೂಲ ಸಂಸ್ಕೃತಿಯು ಹೌದು ಎಂದರು.

Comment here