ತುಮಕೂರ್ ಲೈವ್

ಇಂದು ಕುಣಿಗಲ್ ಬಂದ್

ಮಾರ್ಕೋನಹಳ್ಳಿ ಜಲಾಶಯದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವುದನ್ನು ಖಂಡಿಸಿ ಅಕ್ಟೋಬರ್ 30ರಂದು ಕುಣಿಗಲ್ ಬಂದ್ ಗೆ ಕರೆ ನೀಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ನಡೆಯಲಿರುವ ಬಂದ್ ಗೆ ಪಕ್ಷತೀತವಾಗಿ ಬೆಂಬಲ ವ್ಯಕ್ತವಾಗಿದೆ.ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲಕ್ಕೆ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಡ್ಯಾಂನ ಕೋಡಿ ಭಾಗದಲ್ಲಿರುವ ಸೈಫನ್ ಸ್ಥಳದಲ್ಲಿ 80 ಅಡಿ ಜಾಕ್ ವೆಲ್ ನಿರ್ಮಿಸಿ ಪಂಪ್ ಮಾಡುವ ಕಾಮಗಾರಿಗೆ ನಮ್ಮ ವಿರೋಧವಿದೆ. 80 ಅಡಿ ಆಳದಲ್ಲಿ ಜಾಕ್ ವೆಲ್ ನಿರ್ಮಿಸಿದರೆ ಡ್ಯಾಂಗೆ ಧಕ್ಕೆಯಾಗಲಿದೆ.ಇದರ ಜೊತೆಗೆ ರಾಷ್ಟ್ರೀಯ ಹಸಿರು ಪೀಠದ ಆದೇಶವನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ. ಡ್ಯಾಂ ಹಿನ್ನೀರಿನ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡಬಾರದು ಎಂಬ ನಿಯಮವಿದೆ. ಇದನ್ನು ಉಲ್ಲಂಘಿಸಿ ಡ್ಯಾಂ ಒಳಗೆ ಕಾಮಗಾರಿ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅನಂದ್ ಪಟೇಲ್ ಕಿಡಿ ಕಾರಿದ್ದಾರೆ.ಮಾರ್ಕೋನಹಳ್ಳಿ ಜಲಾಶಯವನ್ನು ನೀರಾವರಿ ಉಪಯೋಗಕ್ಕೆಂದೇ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಯಾವುದೇ ನದಿಗಳ ಸಂಪರ್ಕವೂ ಇಲ್ಲ. ಯಾವುದೇ ಅಲೋಕೇಶನ್ ಕೂಡ ಇಲ್ಲ. ಕುಣಿಗಲ್ ನ ಅಮೃತೂರು, ಎಡೆಯೂರು ಮತ್ತು ಹುಲಿಯೂರುದುರ್ಗ ಮತ್ತು ನಾಗಮಂಗಲದ ಕೆಲವು ಭಾಗಗಳಲ್ಲಿ ಕೈಗೊಂಡಿರುವ ನೀರಾವರಿಗೆ ಈ ಡ್ಯಾಂನಿಂದ ನೀರುಣಿಸಲಾಗುತ್ತಿತ್ತು. ಹೀಗಾಗಿ ಈಗಿನ ಅವೈಜ್ಞಾನಿಕ ಕಾಮಗಾರಿಯಿಂದ ರೈತರಿಗೆ ತೊಂದರೆಯಾಗಲಿದೆ ಎಂದರು.ನಾಗಮಂಗಲಕ್ಕೆ ಶ್ರವಣಬೆಳಗೊಳ ಬ್ಯಾಂಕ್ ಕೆನಾಲ್, ನಾಗಮಂಗಲ ಬ್ಯಾಂಕ್ ಕೆನಾಲ್ ನಿಂದ ನೀರು ಪಡೆಯಲಾಗುತ್ತಿದೆ. ಹೇಮಾವತಿಯಿಂದಲೂ ಮತ್ತಷ್ಟು ನೀರು ಪಡೆಯಲು ಅವಕಾಶವಿದೆ. ಆದರೆ ಮಾರ್ಕೋನಹಳ್ಳಿ ಡ್ಯಾನಿಂದ ಅವೈಜ್ಞಾನಿಕ ಕಾಮಗಾರಿ ಮೂಲಕ ನೀರು ತೆಗೆದುಕೊಂಡು ಹೋಗುವುದು ಸರಿಯಲ್ಲ ಎಂದು ಹೇಳಿದರು.

Comment here