ತುಮಕೂರು ಲೈವ್

ಹಸಿದವರಿಗೆ ನೀಡಲು ವೃದ್ಧಾಪ್ಯವೇತನ, ಪಡಿತರವನ್ನೇ ನೀಡಿದ ಒಂಟಿ ಅಜ್ಜಿ!

ತುಳಸೀತನಯ


ತುಮಕೂರು: ಸುಮಾರು ಎಂಬತ್ತರ ಆಸುಪಾಸಿನ ವಯೋವೃದ್ಧೆ. ಮುಗದಲ್ಲಿ ಸದಾ ವಿಭೂತಿ, ಕುಂಕುಮ. ಕೈಲೊಂದು ಹಳೆಯದಾದ ಬ್ಯಾಗ್ ಹಿಡಿದು ದಾರಿಯಲ್ಲಿ ತನಗಿಷ್ಟವಾದವರು ಯಾರಾದರು ಸಿಕ್ಕರೆ ಸಾಕು ಅವರಿಗೊಂದಿಷ್ಟು ಹೂಪತ್ರೆ ಕೊಟ್ಟು ದೇವರ ಪ್ರಸಾದ ಇಟ್ಟುಕೊಳ್ಳಿ ಎಂದು ಮುಂದೆ ಹೋಗುತ್ತದೆ.

ದೇವರ ಹೂಪತ್ರೆ ಕೊಟ್ಟಾಕ್ಷಣ ಅಜ್ಜಿ ಏನನ್ನಾದರೂ ಆಪೇಕ್ಷಿಸಬಹುದು ಎಂದು ಅಂದಕೊಂಡೆ ಅದು ಸುಳ್ಳು. ಯಾರಿಂದಲೂ ಏನನ್ನೂ ಆಪೇಕ್ಷಿಸದ ಅಜ್ಜಿ ಒಂಟಿ ಜೀವಿ. ತನ್ನ ಒಂದು ತಿಂಗಳ ವೃದ್ಧಾಪ್ಯ ವೇತನ ಹಾಗೂ ಒಂದು ತಿಂಗಳ ಪಡಿತರ ದಿನಸಿಗಳನ್ನು ನಿರ್ಗತಿಕರ ತುತ್ತಿನ ತೀಲ ಚೀಲ ತುಂಬಲು ನೀಡಿ ಇಳಿವಯಸ್ಸಿನಲ್ಲೂ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲೆಯ ಕೊರಟಗೆರೆ ಪಟ್ಟಣದ ಒಂದು ಮೂಲೆಯ ಸಣ್ಣ ಮನೆಯೊಂದರಲ್ಲಿವ ಅಜ್ಜಿಯ ಹೆಸರು ಶಿವರುದ್ರಮ್ಮ. ಯಾರೊಬ್ಬರೂ ಆಸರೆ ಇಲ್ಲದ ಒಬ್ಬಂಟಿ ಜೀವ. ಆದರೂ ಅವರ ಮಾನವೀಯತೆಗೆ ಕೊರತೆ ಇಲ್ಲ.

ಕೊರೊನಾ ಲಾಕ್ ಡೌನ ಪರಿಸ್ಥಿತಿಯಲ್ಲಿ ಪ್ರತಿನಿತ್ಯ ಹಸಿದವರಿಗೆ ಅನ್ನ ನೀಡುವ ಕೊರಟಗೆರೆಯ ಫ್ರೆಂಡ್ಸ್ ಗ್ರೂಪ್ ಸದಸ್ಯರಿಗೆ ತನ್ನ ಪಡಿತರ ಹಾಗೂ ವೃದ್ಧಾಪ್ಯದ ಒಂದಿಷ್ಟು ಹಣ ನೀಡಿ ನಿರ್ಗತಿಕರ ಅನ್ನದಾನಕ್ಕೆ ತನ್ನದೂ ಒಂದಿಷ್ಟು ಅಳಿಲು ಸೇವೆ ಇರಲಿ ಎಂದು ಸಹಾಯ ಹಸ್ತ ಚಾಚಿದೆ.

ಕೊರಟಗೆರೆಯಲ್ಲಿ ಫ್ರೆಂಡ್ಸ್ ಗ್ರೂಪ್ ಹಾಗೂ ಜಗ್ಗೇಶ್ ಅಭಿಮಾನಿ ಬಳಗದ ವತಿಯಿಂದ ತಾಲ್ಲೂಕಿನ ಸಿದ್ದರಬೆಟ್ಟದ ವೀರಭದ್ರಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಲಾಖ್ ಡೌನ್ ಆದಾಗಿನಿಂದಲೂ ಪ್ರತಿನಿತ್ಯ ನಿರ್ಗತಿಕರಿಗೆ, ಹಸಿದವರಿಗೆ ಅನ್ನ ನೀಡುವ ಕೆಲಸವನ್ನು ಮಾಡುತ್ತಿದೆ.

ಸುಮಾರು 80 ವರ್ಷ ಇಳಿ ವಯಸ್ಸಿನ ಶಿವರುದ್ರಮ್ಮ ಕಳೆದ ವಾರ ತಮ್ಮ ಕುಟುಂಬಕ್ಕೆ ನೀಡಿದ್ದ ಪಡಿತರವನ್ನು ದಾಸೋಹಕ್ಕಾಗಿ ನೀಡಿತ್ತು. ಇಳಿವಯಸ್ಸಿನಲ್ಲಿ ಶಿವರುದ್ರಮ್ಮಳಿಗೆ ಯಾರೊಬ್ಬರ ಆಸರೆ ಇಲ್ಲ. ಅವರಿವರು ಕೊಟ್ಟ ಊಟ ಅಥವಾ ಪಡಿತರ ದಾನ್ಯ ಹಾಗೂ ವೃದ್ಧಾಪ್ಯ ವೇತನದಲ್ಲೆ ಆಕೆಯ ಜೀವನ ನಡೆಯಬೇಕು.

ದಿನ ನಿತ್ಯ ಅಲ್ಲಲ್ಲಿ ಸಿಗುವ ಬಿಳಿಎಕ್ಕದ ಹೂ, ಪತ್ರೆಗಳನ್ನು ಬಿಡಿಸಿ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿ ಕೈಮುಗಿಯುತ್ತದೆ. ಆನಂತರ ದೇವರಿಗೆ ಅರ್ಪಿಸಿದ ಹೂಪತ್ರೆಯನ್ನು ದಾರಿಯಲ್ಲಿ ಯಾರಾದರೂ ಸಿಕ್ಕರೆ ಅಂತವರಿಗೆ `ದೇವರ ಪ್ರಸಾದ’ ತೆಗೆದುಕೊಳ್ಳಿ ಎಂದು ಪ್ರೀತಿಯಿಂದ ಮಾತನಾಡಿಸಿ ಕೊಟ್ಟು ಮುಂದೆ ಹೋಗುತ್ತದೆ.

ಹೂ ಪ್ರಸಾದ ಅಜ್ಜಿ ದಿನ ಯಾರೆಂದರೆ ಅವರಿಗೆ ಕೊಡುವುದಿಲ್ಲ. ತನಗೆ ಇಷ್ಟ ಬಂದವರು ಹೊಸಬರಾದರೂ ಪರವಾಗಿಲ್ಲ ಅಂತವರಿಗೆ ಮಾತ್ರ ಕೊಡುತ್ತದೆ. ಆಗಂತ ಹೂ ತೆಗೆದುಕೊಂಡವರಿಂದ ಅಜ್ಜಿ ಏನನ್ನೂ ಪ್ರತಿಫಲ ಆಪೇಕ್ಷಿಸುವುದಿಲ್ಲ. ದೇವರ ಹೂ ಪ್ರಸಾದ ನೀಡುವ ಕಾಯಕವನ್ನು ಬಹಳ ವರ್ಷಗಳಿಂದ ಅಜ್ಜಿ ನಡೆಸಿಕೊಂಡು ಬಂದಿದೆ. ಲಾಖ್ ಡೌನ್ ಇರುವ ಕಾರಣ ಪಟ್ಟಣದಲ್ಲಿ ಇರುವ ನಿರ್ಗತಿಕರು, ಬಡವರು, ಹಸಿದವರಿಗೆ ನೀಡುವ ಊಟದಲ್ಲಿ ನನ್ನದು ಸ್ವಲ್ಪ ಸೇರಿಕೊಳ್ಳಲಿ ಎಂದು ಪಡಿತರ ಹಾಗೂ ತಾನು ಕೂಡಿಟ್ಟ ವೇತನವನ್ನು ತಂದುಕೊಟ್ಟಿದೆ.

ನನಗ್ಯಾರಾದ್ರು ಊಟ ಹಾಕ್ತಾರೆ. ಇದ್ಯಾವುದೋ ರೋಗ ಬಂದು ಜನಕ್ಕೆ ಊಟ ಇಲ್ದಂಗಾಗೈತೆ. ಇಂತಾ ಕಷ್ಟ ಕಾಲ್ದಾಗೆ ಹಸಿದೋರಿಗೆ ಅನ್ನ ಹಾಕುದ್ರೆ ಒಂದಿಷ್ಟು ಪುಣ್ಯ ಬರತ್ತೆ. ನನ್ನಂತ ಎಷ್ಟೋ ಜನರಿಗೆ ಅನ್ನ ಹಾಕ್ತಿರೋ ಇವರಿಗೆ ನನ್ನದು ಒಂದು ಅಳಿಲು ಸೇವೆ ಸೇರಿಕೊಳ್ಳಲಿ ಬುಡಿ.

ಶಿವರುದ್ರಮ್ಮ, ವೃದ್ಧೆ

ಅಜ್ಜಿಯ ಮಾನವೀಯ ಗುಣಕ್ಕೆ ನಾವು ಎಷ್ಟೇ ಕೃತಜ್ಞತೆ ಸಲ್ಲಿಸಿದ್ರೂ ಅದು ಕಡಿಮೆಯೇ. ನಿನ್ನ ಜೀವನ ನಿರ್ವಹಣೆಗೆ ಇಟ್ಟುಕೊಳ್ಳಿ ಎಂದು ನಾವು ಎಷ್ಟೇ ಹೇಳಿದರೂ ಅಜ್ಜಿ, ನನ್ನ ಜೀವ್ನ ಎಂಗೋ ಆಗುತ್ತೆ ನಾನು ಕೋಡೋದು ನಾಲ್ಕ ಜನರ ಹೊಟ್ಟೆನಾದ್ರು ತುಂಬುತ್ತೆ ತಗಳಿ ಎಂದು ಪಡಿತರ ದಿನಸಿ ಹಾಗೂ ತಾನು ಕೂಡಿಟ್ಟ ವೃದ್ಧಾಪ್ಯ ವೇತನ ಹಣ ತಂದು ಕೊಟ್ಟಿದೆ. ನಾವು ಅದನ್ನು ಬಡವರ ಹೊಟ್ಟೆ ತುಂಬಲು ವಿನಿಯೋಗಿಸುತ್ತೇವೆ.

ರವಿಕುಮಾರ್, ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ

Comment here