ಜನಮನ

ಎಲ್ಲಿ ಹೋದಳು ಅಮ್ಮ?

ಇಂದು ತಾಯಂದಿರ‌‌‌ ದಿನ. ಅಮ್ಮನೊಟ್ಟಿಗಿನ ಸೆಲ್ಫಿ,‌‌ಅಮ್ಮನ ಚಿತ್ರ ಕಳುಹಿಸಿ, ಒಂದೆರಡು‌‌ ನೆನಪಿನ ಸಾಲು ಬರೆಯಿರಿ: ವಾಟ್ಸಾಪ್ ಮಾಡಿ ;9844817737

ತುರುವೇಕೆರೆ ಪ್ರಸಾದ್


ಎಲ್ಲಿ ಹೋದಳು ಅಮ್ಮ?
ಹಿಟ್ಟು ತಿರುವಿದ ಕೋಲು
ನಾಯಿ ನೆಕ್ಕುತ್ತಿದೆಯಲ್ಲ
ಎಸರಿಗಿಟ್ಟ ಪಾತ್ರೆ
ಬೋರಲಾಗಿದೆಯಲ್ಲ
ಮನೆ ತುಂಬಾ ಹೊಗೆ
ಅಮ್ಮ ಕಾಣುತ್ತಿಲ್ಲ !

ಹೀಗೆಂದೂ ಹೋದವಳಲ್ಲ
ಅರ್ಧ ಸಾರಿಸಿಟ್ಟು
ಕೊಚ್ಚೆ ಮಾಡಿದವಳಲ್ಲ
ಹೆಜ್ಜೆ ಗುರುತು ಮನೆ ತುಂಬಾ
ಎತ್ತ ಹೋದಳೋ ಕಾಣುತ್ತಿಲ್ಲ .

ನಡುಮನೆಯಲ್ಲಿ ಹೂ, ಹಣ್ಣು, ಬಾಗಿನ
ಅಣಿಮಾಡಿಟ್ಟ ಅರಸಿನ ಕುಂಕುಮ
ಹೊಸ ಹೆಣ್ಣು ಮನೆ ತುಂಬುವ ಹೊತ್ತಿನಲ್ಲಿ
ಅಮ್ಮ ಕಾಣುತ್ತಿಲ್ಲ ತಲೆ ಬಾಗಿಲಲ್ಲಿ .

ಮಗಳು ಹಡೆಯುವ ಹೊತ್ತು
ಸೂರಿಗೆ ಮುಚ್ಚಿದ ತಗಡು ಕಿತ್ತು
ಕಾಗೆ ಹದ್ದುಗಳು ರಾಪಾಡುತ್ತಿದ್ದರೂ
ಅಮ್ಮ ಕಾಣುತ್ತಿಲ್ಲ ಯಾಕಿವತ್ತು?

ಹೊಕ್ಕುಗಟ್ಟಿ ನಿಂತ ನಂದಾದೀಪ
ಯಾರೋ ಹೋದ ಹಾಗೆ
ಯಾರೋ ಬಂದ ಹಾಗೆ
ನೆರಳುಗಳ ಮಧ್ಯೆ
ಕಾಣುತ್ತಿಲ್ಲ ಅಮ್ಮನ ಮುಖ .

ಕಾದು ಕಾದು ಸಾಕಾಗಿ
ಮಂಡಪರಿ ಮಲಗಿದಾಗ
ಕನ್ನಡಿಯಲ್ಲಿ ನಕ್ಕಳು ಅಮ್ಮ
ಎದ್ದು ಹೋಗಿ ನೋಡಿದರೆ
ಖಾಲಿ ಗಾಜಿನ ಮಧ್ಯೆ ಕಾಸಗಲ ಕುಂಕುಮ
ಅಮ್ಮನ ಕನ್ನಡಿ ಸವೆದು ಹೋದ ಗಾಜು
ಆಚೀಚೆ ಏಕ; ಇಲ್ಲ ಬಿಂಬ
ತನ್ನನ್ನೆಂದೂ ನೋಡಿಕೊಳ್ಳದೆ
ನಮ್ಮನ್ನಷ್ಟೇ ನೋಡಿದ್ದಾಳೆಂಬ
ಸತ್ಯವ ತೆರೆದಿಟ್ಟು
ಎತ್ತಲೋ ಹೊರಟು ಹೋಗಿದ್ದಾಳೆ ಅಮ್ಮ
ಋಣ ತೀರುವ ಮುನ್ನ !
~ತುರುವೇಕೆರೆ ಪ್ರಸಾದ್

Comment here