ತುಮಕೂರು ಲೈವ್

ಏತನೀರಾವರಿ ಪೈಪ್ ಲೈನ್ ಕಾಮಗಾರಿ ಸ್ಥಳಾಂತರಿಸುವಂತೆ ತಹಶೀಲ್ದಾರ್ ಗೆ ಮನವಿ

Publicstory. in


ತುರುವೇಕೆರೆ: ತಾಲ್ಲೂಕಿನ ಎ.ಹೊಸಹಳ್ಳಿ ಕಾಲೋನಿ ಮೂಲಕ ಹಾಯ್ದು ಹೋಗುವ ಏತನೀರಾವರಿ ಪೈಪ್ ಲೈನ್ ಅಳವಡಿಸುವ ಕಾಮಗಾರಿಯನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಎ.ಹೊಸಹಳ್ಳಿ ಕಾಲೋನಿಯ ಗ್ರಾಮಸ್ಥರು ತಹಶೀಲ್ದಾರ್ ಆರ್.ನಯಿಂಉನ್ನೀಸಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಗ್ರಾಮಸ್ಥ ಮೈಲಾರಯ್ಯ ಮಾತನಾಡಿ, ತಿಪಟೂರು ತಾಲ್ಲೂಕಿನ ಭದ್ರಾಪುರ ಏತನೀರಾವರಿ ಕುಡಿಯುವ ನೀರಿನ ಯೋಜನೆಯಡಿಯ 4 ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಕಾಮಗಾರಿಯನ್ನು ಮಾಡಲಾಗುತ್ತಿದೆ.

ತಾಲ್ಲೂಕಿನ ಎ.ಹೊಸಹಳ್ಳಿ ಸಮೀಪದ ಮುಖ್ಯ ಹೇಮಾವತಿ ನಾಲೆಯ ಬಳಿ ಪಂಪ್ಹೌಸ್ ನಿಂದ ಪೈಪ್ಗಳ ಮೂಲಕ ಎ.ಹೊಸಹಳ್ಳಿ ಕಾಲೋನಿ ಮುಖಾಂತರ ಭದ್ರಾಪುರ ಕೆರೆಗೆ ನೀರನ್ನು ಲಿಪ್ಟ್ ಮಾಡುವ ಕಾಮಗಾರಿಯು ಕಿಬ್ಬನಹಳ್ಳಿ ಹೇಮಾವತಿ ಶಾಖಾ ನಾಲಾ ವ್ಯಾಪ್ತಿಗೆ ಒಳಪಟ್ಟಿದೆ.

ಪೈಪ್ ಅಳವಡಿಸಲು ಊರಿನೊಳಗೆ ಜೆಸಿಬಿ ಮೂಲಕ ಭೂಮಿ ಅಗೆಯಲಾಗುತ್ತದೆ. ಆದರೆ ಈಗಾಗಲೇ ಊರಿನ ರಸ್ತೆಯು ಕಿರಿದಾಗಿದ್ದು ಮನೆಗಳ ಪಕ್ಕದಲ್ಲಿ ಚರಂಡಿ ಇದೆ.

ಅದರ ಪಕ್ಕದಲ್ಲಿ ಕುಡಿಯುವ ನೀರಿನ ಪೈಪ್ಗಳಿವೆ ಇವುಗಳೆಲ್ಲಾ ಹಾಳಾಗುವುದರ ಜೊತೆಗೆ ಇಲ್ಲಿ ದೊಡ್ಡ ಪೈಪ್ಗಳನ್ನು ಹಾಕುವುದಕ್ಕೆ ಜಾಗವೂ ಸಹ ಇಲ್ಲ ಜೊತೆಗೆ ಪೈಪ್ ನಿಂದ ನೀರು ನಿತ್ಯವೂ ಜಿನುಗಿ ವಾಸದ ಮನೆಗಳ ಗೋಡೆ ನೆನೆದು ಬಿದ್ದರೆ ಇದಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದರು.

ಈ ಯೋಜನೆಯಿಂದ ನಮ್ಮ ಗ್ರಾಮಕ್ಕೆ ನಯಾಪೈಸೆ ಉಪಯೋಗವಿಲ್ಲ. ಹೀಗಿರುವಾಗ ನಾವೇಕೆ ಊರಿಗೆ ತೊಂದರೆ ಮಾಡಿಕೊಳ್ಳಲಿ ಎಂದು ಅಸಮಧಾನ ವ್ಯಕ್ತಪಡಿಸದರು.

ಗ್ರಾಮದ ಮುಖಂಡ ಚಂದ್ರಯ್ಯ ಮಾತನಾಡಿ, ಊರಿನ ರಸ್ತೆ ಪಕ್ಕದಲ್ಲಿಯೇ ಕುಡಿಯುವ ನೀರಿನ ಹ್ಯಾಂಡ್ ಜಗ್ ಮತ್ತು ಸಿಸ್ಟಮ್ ಗಳಿವೆ ಪೈಪ್ ಲೈನ್ ನಿಂದ ತೊಂದರೆಯಾಗುವುದಿಲ್ಲವೆ. ಒಂದು ವೇಳೆ ಪೈಪ್ ಹೊಡೆದು ಮನೆಗಳಿಗೆ ನೀರು ನುಗ್ಗಿದರೆ ನಾವೆಲ್ಲಿಗೆ ಹೋಗ ಬೇಕು. ಗ್ರಾಮಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಹಾಗು ಹೇಮಾವತಿ ಇಲಾಖಾ ಅಧಿಕಾರಿಗಳಿಗೆ ಪತ್ರಬರೆಯಲಾಗುತ್ತಿದ್ದು ನಾವು ಯಾವುದೇ ಕಾರಣಕ್ಕೂ ಇಲ್ಲಿ ಕೆಲಸ ಮಾಡಲು ಅವಕಾಶ ನೀಡುವುದಿಲ್ಲವೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರುಗಳಾದ ಗಿರಿಯಣ್ಣ, ರಮೇಶ್, ಲಕ್ಷ್ಮಮ್ಮ, ಭಾಗ್ಯಮ್ಮ, ಪ್ರಾರ್ಥನ, ಸೌಭಾಗ್ಯ, ಜಯಮ್ಮ, ಗಂಗಮ್ಮ, ಅಮ್ಮಯ್ಯ, ತಿಮ್ಮಕ್ಕ, ಉಗ್ರಣ್ಣ, ತಿಮ್ಮಯ್ಯ, ಉಪಸ್ಥಿತರಿದ್ದರು.

Comment here