ಜನಮನ

ಕನ್ನಡ ಪತ್ರಿಕೆಗಳು ಮುಂದೇನು?

Publicstory. in


ಕೊರೊನಾ ಸೋಂಕಿನ ಕಾರಣ ಪತ್ರಿಕೆಗಳ ಪ್ರಸರಣ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಇದೇ ಮೊದಲ ಸಲ ಕೆಲವು ರಾಜ್ಯಮಟ್ಟದ ಪತ್ರಿಕೆಗಳು ಸಹ ಜಾಹೀರಾತು ಇಲ್ಲದೇ ಪತ್ರಿಕೆ ಹೊರತರುವಂತಾಗಿದೆ. ಕೊರೊನಾ ಸೋಂಕು ಹರಡುವ ಮೊದಲೇ ಪತ್ರಿಕೆಗಳು ಸಿಬ್ಬಂದಿ ಕಡಿತ ಆರಂಭಿಸಿದ್ದವು. ಲಾಕ್ ಡೌನ್ ಮುಗಿದ ಬಳಿಕ ಕೆಲಸ ಕಳೆದುಕೊಳ್ಳುವ ಪತ್ರಕರ್ತರ ಸಂಖ್ಯೆ ಹೆಚ್ವಬಹುದೆಂಬ ಆತಂಕ ಹೆಚ್ಚಿದೆ. ಈ ಬಗ್ಗೆ ಪ್ರಜಾವಾಣಿಯಲ್ಲಿ ಮುಖ್ಯ ಉಪ ಸಂಪಾದಕರಾಗಿದ್ದ ಸುರೇಶ್ ಬೆಳಗಜೆ ಬರೆದಿದ್ದಾರೆ.


ಸುರೇಶ್ ಬೆಳಗಜೆ


ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಆರಂಭವಾಗಿ ಎರಡು ಶತಮಾನಗಳತ್ತ ನಾವೀಗ ನಡೆಯುತ್ತಿದ್ದೇವೆ. ಈ ನಡಿಗೆ ಇಲ್ಲಿಗೇ ನಿಂತೀತೇ ಎಂಬ ಪ್ರಶ್ನೆ ಈಗೀಗ ಪತ್ರಕರ್ತರನ್ನೂ ಕಾಡಲಾರಂಭಿಸಿದೆ. ಕಾರಣ ನ್ಯೂಸ್ ಪ್ರಿಂಟ್ ದರ ಏರಿಕೆ…ಕಚ್ಚಾವಸ್ತುಗಳ ದರ ಹೆಚ್ಚಳ. ಮಾನವ ಸಂಪನ್ಮೂಲಕ್ಕೆ ಆಗುವ ವೆಚ್ಚ ಸರಿದೂಗಿಸಲು ಕಷ್ಟ ಆಗುತ್ತಿರುವುದು ಎಂಬ ಸಬೂಬು ಮಾಲೀಕ ವರ್ಗದ್ದು.


ನಿಮ್ಮ ಸುದ್ದಿ, ಬರಹಗಳನ್ನು ಇಲ್ಲಿಗೆ ಕಳುಹಿಸಿ: ವಾಟ್ಸಾಪ್: _9844817737


ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಸಂಸ್ಥೆಯಿಂದ ಕನ್ನಡ ಪತ್ರಿಕೋದ್ಯಮದ ಪ್ರಾರಂಭವಾಯಿತು. ಮಂಗಳೂರು ಸಮಾಚಾರ ವಾರಪತ್ರಿಕೆಯು 1843ರ ಜುಲೈ 1ರಂದು ಮೊದಲಿಗೆ ಪ್ರಕಟಗೊಂಡದ್ದು‌ ಈಗ ಚರಿತ್ರೆಯ ಭಾಗವಾಗಿದೆ. ಇದರ ಸಂಪಾದಕ ಹರ್ಮನ್ ಮೋಗ್ಲಿಂಗ್. ಎರಡನೇ ಶತಮಾನದತ್ತ ಸಾಗುತ್ತಿರುವ ಕನ್ನಡ ಪತ್ರಿಕೋದ್ಯಮಕ್ಕೆ ಈಗ ಸಂಕಷ್ಟದ ಕಾಲಘಟ್ಟ.‌‌

ಕನ್ನಡದ ಪ್ರಮುಖ ಪತ್ರಿಕೆಗಳನ್ನೇ ಗಮನಿಸಿದರೆ ಅವುಗಳ ದರದಲ್ಲಿ‌ ಗಮನಾರ್ಹ ವ್ಯತ್ಯಾಸ ಕಾಣುತ್ತದೆ. ಒಂದೆರಡು ಪತ್ರಿಕೆಗಳಿಗೆ ₹ 6. ಇನ್ನೊಂದು ₹5 ಮತ್ತೊಂದು ₹ 4. ₹ 4 ದರ ವಿಧಿಸುವ ಪತ್ರಿಕೆ ನಷ್ಟ ಕಾಣುತ್ತಿದೆಯೇ? ₹6 ದರ ಇಟ್ಟಿರುವ ಪತ್ರಿಕೆಗಳು ಲಾಭ ಪಡೆಯುತ್ತಿವೆಯೇ ಎಂಬ ಪ್ರಶ್ನೆಗಳಿಗೆ ಮಾಲೀಕರ್ಯಾರೂ ಉತ್ತರ ಕೊಡುವುದಿಲ್ಲ. ಆದರೆ, ಉದ್ಯೋಗ ರಂಗದಲ್ಲಿ‌ ಕಡಿತ- ಉದ್ಯೋಗಕ್ಕೆ ವಿದಾಯ ಹೇಳದಿದ್ದರೆ ದೂರದ ಊರಿಗೆ ವರ್ಗಾವಣೆ ಮಾಡುವ ಅಸ್ತ್ರಗಳನ್ನು ಸಂಸ್ಥೆಗಳು ವಿಭಾಗ ಮುಖ್ಯಸ್ಥರು- ಮಾನವ ಸಂಪನ್ಮೂಲ ವಿಭಾಗದ ಮೂಲಕ ಕೈಗೆತ್ತಿಕೊಳ್ಳುತ್ತಿವೆ.

ಪತ್ರಿಕಾ ಉದ್ಯೋಗ ಸೇಫ್ ಎಂಬ ಸ್ಥಿತಿ ಈಗಿಲ್ಲ.‌ ಗುತ್ತಿಗೆ ಪದ್ಧತಿ ಅಲ್ಲಿಗೂ ಪದಾರ್ಪಣೆ ಮಾಡಿದೆ. ವೇಜ್ ಬೋರ್ಡ್ ಬೇಡ; ನಾವು ಗುತ್ತಿಗೆ ಪದ್ಧತಿಗೆ ಸ್ವ ಇಚ್ಛೆಯಿಂದ ಬರೆಸಿಕೊಂಡು ಬಳಿಕ ಯಾವಾಗ ಬೇಕೋ ಆಗ ಮನೆಗೆ ಕಳುಹಿಸುವ ಚಾಲಾಕಿ ಸಿಇಒ, ಎಚ್ಚಾರ್ ಗಳು ಹೆಚ್ಚಾಗಿದ್ದಾರೆ ಎಂಬುದು ಹಿರಿಯ ಪತ್ರಕರ್ತರೊಬ್ಬರ ಅಭಿಮತ.

ಮುದ್ರಣ ಕ್ಷೇತ್ರದಲ್ಲಿ ಹೊಸತನ- ಆವಿಷ್ಕಾರ ನಡೆಯುತ್ತಾ ಸಾಗಿದೆ. ಪತ್ರಕರ್ತರ ಜತೆಗಿದ್ದ ಪ್ರೂಫ್ ರೀಡರ್ ಗಳ ಹುದ್ದೆ ಬೇಡ ಎಂಬ ನಿರ್ಧಾರ ಬಂತು. ಬಳಿಕ ಪತ್ರಕರ್ತ- ವರದಿಗಾರರ ಮೇಲಿನ ಹೊಣೆ- ಹೊರೆಯೂ ಹೆಚ್ಚಾಗಿದೆ. ಅದನ್ನೇ ನೆಪವಾಗಿಸಿ ‘ಗ್ರೇಡಿಂಗ್’, ಪರ್ಫಾರ್ಮಿಂಗ್- ನಾನ್ ಪರ್ಫಾರ್ಮಿಂಗ್ ಪತ್ರಕರ್ತರ ಪಟ್ಟಿ ತಯಾರಿಸಿ ಅಥವಾ ತಯಾರಿಸದೇ ಪತ್ರಕರ್ತ- ಪತ್ರಕರ್ತೇತರ ವರ್ಗವನ್ನು ಬೀದಿಗೆ ಕಳುಹಿಸುವ ಪ್ರವೃತ್ತಿಯೂ ಹೆಚ್ಚಾಗಿದೆ.

ಒಂದೆಡೆ ಪತ್ರಿಕೆ ಕೊಂಡು ಓದುವ ಚಿಂತನೆ ಬೆಳೆಯುತ್ತಿಲ್ಲ. ಬಿಟ್ಟಿ ಆನ್ ಲೈನ್ ಓದುಗರೇನೋ ಇದ್ದಾರೆ. ಆದರೆ ಜಾಹೀರಾತು ಬರುತ್ತಿಲ್ಲ.‌.‌‌..ಇದು ಮಾಲೀಕರ ಚಿಂತೆ.

ಕೊರೊನಾ ಪಸರಿಸದಂತೆ ಗರಿಷ್ಠ ಯತ್ನ ಸಾಗಿದೆ…‌ಓದುಗರು ಚಿಂತಿತರಾಗಬೇಕಿಲ್ಲ ಎಂದು ಜಗಜ್ಜಾಹೀರು ಮಾಡಿದರೂ ಪತ್ರಿಕೆ ತಲುಪಿಸುವ ಏಜೆಂಟರು, ಪತ್ರಿಕೆ ಮನೆಗೆ ಒಯ್ಯುವ ಹುಡುಗರು ಮೊದಲಿನ‌ ಉತ್ಸಾಹ ತೋರುತ್ತಿಲ್ಲ ಎಂಬುದೂ ಅಷ್ಟೇ ಸತ್ಯ.

ಕೆಲವು ಬೃಹತ್ ನಗರಗಳು ಕೊರೊನಾ ಕಾರಣವನ್ನೇ ಮುಂದಿಟ್ಟು ಮುದ್ರಣ ನಿಲ್ಲಿಸಿವೆ. ಕನ್ನಡದ ಪ್ರಮುಖ ಪತ್ರಿಕೆಗಳೂ ಮುದ್ರಿಸುವ ಕಾಪಿಗಳ ಸಂಖ್ಯೆ, ಪುಟಗಳ ಸಂಖ್ಯೆಯಲ್ಲಿ ಕಡಿತ ಮಾಡಿವೆ..‌

‘ಕೊರೊನಾ’ ಎಂಬುದು ಪತ್ರಿಕಾ ಉದ್ಯಮಿಗಳಿಗೆ ಅಧ್ಯಯನದ ಕಾಲಘಟ್ಟ. ವೆಚ್ಚ ಕಡಿತ, ಸಿಬ್ಬಂದಿ ಕಡಿತ, ಮನೆಯಿಂದ ಕೆಲಸ ಇತ್ಯಾದಿ ಮಾಡುತ್ತಾ ಸುದ್ದಿಗಳ ರೀತಿಯಲ್ಲಿ ವ್ಯವಸ್ಥೆಯನ್ನು ಸಂಕ್ಷಿಪ್ತಗೊಳಿಸುವ ಪ್ರಯತ್ನ ನಡೆಯುತ್ತಿದೆ.

ಅಷ್ಟ ಪುಟಾಧೀಶರಷ್ಟೇ ಸಾಕು….


ಹೌದು ಪತ್ರಿಕೆಗಳ ಪುಟ (ಪೇಜು) ಎಂಟಕ್ಕಿಳಿದಿದೆ. ಎಲ್ಲ ಸರಿಹೋದ ಮೇಲೆ ಇನ್ನೊಂದೆರಡು ಹೆಚ್ಚಾಗಬಹುದು. ಇಷ್ಟು ಪುಟ ಮಾಡಲು ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲ ಬೇಕೇ? ಪುಟ ಮಾಡುವವರೇ ಭಾಷಾಂತರ ಮಾಡಿ ವಿಷಯವನ್ನು ಪುಟಕ್ಕಿಳಿಸಿ ವಿನ್ಯಾಸ ಮಾಡಬಹುದಲ್ಲವೇ? ಇವರಿಂದಲೇ ಬಿಡುವಿನ ವೇಳೆಯಲ್ಲಿ ಬೇರೆಲೇಖನ ಬರೆಸುವುದು ತಿದ್ದುವುದು ಮಾಡಬಹುದಲ್ಲವೇ? ಕಾಲೇಜು ಮೇಷ್ಟ್ರು ಗಳಿಗೊಂದಿಷ್ಟು ಪ್ರಾಜೆಕ್ಟ್ ಕೊಟ್ಟು ಪುರವಣಿ ರೂಪಿಸಬಹುದು, ಫ್ರೀಲಾನ್ಸರ್ ಗಳಿಂದ ಬರೆಸಬಹುದು…

ಹೀಗೆಯೂ ತರ್ಕ ಸಾಗಿದೆ


ಬೆಂಗಳೂರಿನಂಥ ಕೇಂದ್ರ ಸ್ಥಾನದಲ್ಲಿ ಐದಾರು ವರದಿಗಾರರು ಆಯ್ದ ಸುದ್ದಿಗಳನ್ನಷ್ಟೇ ಕೊಟ್ಟರೆ ಸಾಕು. ಕಸ ಕಡ್ಡಿಗೆ ಆಸ್ಪದ ಇಲ್ಲ. ಹೀಗಾದಾಗ ಇಲ್ಲೂ ಸಂಖ್ಯೆ ಕಡಿತ ಸಾಧ್ಯ ಎಂಬ ತರ್ಕವೂ ಮುಂದಿಡುತ್ತದೆ ಆಡಳಿತ.

ಏಕೆಂದರೆ ಗುಣಮಟ್ಟ, ವಿಷಯದ ಆಳ ಇತ್ಯಾದಿ ಬಗ್ಗೆ ದೊಡ್ಡ ಸಂಖ್ಯೆಯ ಓದುಗರು ಆಸಕ್ತಿಯೇ ವಹಿಸುವುದಿಲ್ಲ. ಇವರೆಲ್ಲಾ ಹೆಡ್ ಲೈನ್ ಓದುಗರಷ್ಟೇ. ಇವರನ್ನು ನಂಬಿಕೊಂಡು ಪತ್ರಿಕೆ ಮಾಡುವುದು ಕಷ್ಟ. ಮಾರುಕಟ್ಟೆ ವೃದ್ಧಿಯಂತೂ ದೂರದ‌ಮಾತು. ಹೊಸ ಪೀಳಿಗೆಯ ಕೈಗೆ ಸ್ಮಾರ್ಟ್ ಫೋನ್ ಬಂದ ಮೇಲೆ ಯಾವುದೇ ನಿರ್ದಿಷ್ಟ ಮಾಧ್ಯಮ ವೇದಿಕೆಗಳ ಮೇಲೆ ಅವರು ಕೇಂದ್ರೀಕೃತರಾಗಿಲ್ಲ. ಇನ್ನು 10 ವರ್ಷಗಳಲ್ಲಿ ಸಾಂಪ್ರದಾಯಿಕ ಓದುಗರ ತಲೆಮಾರು ಕಳಚಿಕೊಳ್ಳುತ್ತಾ ಸಾಗುತ್ತದೆ. ಆಗ ಪತ್ರಿಕೆಯ ಭೌತಿಕ ಸ್ವರೂಪ, ಆಕಾರ, ವಿಷಯವಸ್ತುವನ್ನು ಪೂರ್ಣ ಬದಲಾಗಲೇಬೇಕು. ಉದಾಃ ಸುಮಾರು 10 ವರ್ಷಗಳ ಹಿಂದೆ ಮಿಡ್ ಡೇ ಮತ್ತು ಮುಂಬೈ ಮಿರರ್ ದ ಸುದ್ದಿ ಸ್ವರೂಪ‌, ಪತ್ರಿಕೆಯ ಆಕಾರ ನೆನಪಿಸಿಕೊಳ್ಳಿ. ಹಾಗಿದ್ದರೂ ‘ಮಿಡ್ ಡೇ’ ಉಳಿಯಲಿಲ್ಲ.

ಹೊಸ ವ್ಯವಸ್ಥೆಗೆ ಈಗಿನ ಪತ್ರಿಕಾ ಉದ್ಯೋಗಿಗಳು ಹೇಗೆ ತೆರೆದುಕೊಳ್ಳುತ್ತಾರೆ ಎಂಬುದರ ಮೇಲೆ ಉದ್ಯೋಗದ ಭವಿಷ್ಯ ನಿಂತಿದೆ. ಆದರೆ ಬಹುತೇಕರು ಕ್ಷೇತ್ರದ ಮೇಲೆ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ. ಹೊಟ್ಟೆಪಾಡಿಗಾಗಿ‌ ಮಾತ್ರ ಉದ್ಯೋಗಿಗಳಾಗಿದ್ದಾರೆ. ವ್ಯವಸ್ಥೆ ಹಾಗೆ‌ ಮಾಡಿಬಿಟ್ಟಿದೆ. ಕಾಲ ಮತ್ತು ಓದುಗರೂ ಇದಕ್ಕೆ ಕಾರಣ.

ಸದ್ಯ ಪತ್ರಕರ್ತರೂ ಸೇರಿ ಎಲ್ಲರನ್ನೂ ಕಾಡುವ ಪ್ರಶ್ನೆ ಒಂದೇ.‌‌….ಈ ಹೊಡೆತಗಳಿಂದ ಇನ್ನೆಷ್ಟು ಪತ್ರಕರ್ತರು- ಪತ್ರಕರ್ತೇತರರು ಬೀದಿಗೆ ಬರಬಹುದು? ಅವರಿಗೆ ಪರ್ಯಾಯ ಏನು? ಕನ್ನಡ ಪತ್ರಿಕಾ ಕ್ಷೇತ್ರ ಇನ್ನೆಷ್ಟು ವರ್ಷ ಸಾಗಬಹುದು?. ಸದ್ಯ ಇವು ಉತ್ತರ ಸಿಗದ ಪ್ರಶ್ನೆಗಳು. ಕಾಲವೇ ಇವುಗಳಿಗೆ ಉತ್ತರ ಕೊಡಬೇಕಿದೆ.

Comments (1)

  1. ನೀವು ಹೇಳಿರುವ ವಿಷಯಗಳು ಮುಂದಿನ ದಿನಗಳ ಬಗ್ಗೆ ಆತಂಕ ತರಿಸುತ್ತದೆ

Comment here