ಜನಮನ

ಕಪ್ಪೆಚಿಪ್ಪಿನೊಳಗಣ ಬದುಕು ಕಂಡು…ಕ‌ನವರಿಸುತ್ತಾ…

ಧನಂಜಯ್ ಕುಚ್ಚಂಗಿಪಾಳ್ಯ


ಅಪ್ಪನ ಹುಟ್ಟು ಊರು ದೊಡ್ಡಬಳ್ಳಾಪುರ ತಾಲ್ಲೂಕಿನ ತಪಸ್ಸಿಹಳ್ಳಿ. ಅಪ್ಪನಿಗೆ ಗಂಡು ಮಕ್ಕಳಿಲ್ಲವೆಂಬುದೇ ಒಂದು ಕೊರಗು.

ಕುಲದ ಒಡೆಯರಾದ ಸಿರಿಯಪ್ಪ ಒಡೆಯರ್ ಹುಟ್ಟಿದ ಊರು ಬಿಟ್ಟರೆ ನಿನಗೆ ಗಂಡು ಮಕ್ಕಳ ಭಾಗ್ಯವೆಂದರಂತೆ, ಅಪ್ಪನಿಗೆ ಅದೇನೊ ಭರವಸೆ ಹುಟ್ಟಿತೋ ತಿಳಿಯದು ಅಪ್ಪ ಊರೇ ತೊರೆದು ತುಮಕೂರಿಗೆ ಸಮೀಪದ ಕುಚ್ಚಂಗಿಪಾಳ್ಯದಲ್ಲಿ ನೆಲೆಯೂರಿ, ಬೇರು ಬಿಟ್ಟ ಅಪ್ಪನಿಗೆ ಒಬ್ಬರಿಂದೊಬ್ಬರಂತೆ ನಾಲ್ಕು ಜನ ಗಂಡು ಮಕ್ಕಳು.ಅಪ್ಪನ ಸ್ವಾಭಿಮಾನಕ್ಕೆ ಪೂರಕವೆಂಬಂತೆ ಈ ನಾಲ್ಕು ಮಕ್ಕಳು ಕುಟುಂಬಕ್ಕೆ ನಾಲ್ಕು ಆಧಾರಸ್ತಂಭಗಳೆನಿಸಿದ್ದವು.

ಅಪ್ಪನಿಗೆ ಸಂಬಂಧಿಗಳಿಂದ ಸ್ವಾಭಿಮಾನಕ್ಕೆ ಧಕ್ಕೆಯಾದಾಗಗಲೆಲ್ಲಾ ನಾಲ್ಕು ಮಕ್ಕಳ ಕರೆದು ಹೇಳುತ್ತಿದ್ದ ಮಾತು ‘ನಾನು ಸತ್ತಾಗ ನನ್ನ ಹೆಣ ಹೊರುವುದಕ್ಕೂ ಯಾರನ್ನು ಅವಲಂಬಿಸಬೇಡಿ. ನೀವೇ ನಾಲ್ಕು ಜನ ಹೊತ್ತು ಸಾಗಿಸಿರೆಂದು’ ನಿರ್ಧಾಕ್ಷಣ್ಯವಾಗಿ ಹೇಳುತ್ತಿದ್ದ ಅಪ್ಪ ತನ್ನ ಕೊನೆಯ ಆಸೆಯನ್ನ ಈ ನಾಲ್ಕೇ ಮಕ್ಕಳು ಹೊರುವ ಮೂಲಕ ಈಡೇರಿಸಿಕೊಂಡು ಮಣ್ಣಲ್ಲಿ ಮಣ್ಣಾದ.

ಈ ನಾಲ್ಕು ಆಧಾರ ಸ್ತಂಭಗಳಲ್ಲಿ ಒಂದು ಸ್ತಂಭ ಮಳೆ-ಗಾಳಿ,ಮಿಂಚು-ಸಿಡಿಲಿನ ದಿಕ್ಕಿನೆಡೆಯಲ್ಲೇ ಸಾಗುತ್ತಾ ದಿನೇ ದಿನೇ ಶಿಥಿಲಗೊಳ್ಳುತ್ತಾ 8- 9-2020 ರಂದು ಧರೆಗುರುಳಿತು. ಈ ಆಧಾರಸ್ತಂಭ ಮತ್ಯಾರೂ ಅಲ್ಲ ನನ್ನ ಎರಡನೇಯ ಅಣ್ಣ ‘ಹೇಮರಾಜ’.

ಗಂಡು ಮಕ್ಕಳಲ್ಲಿ ಎರಡನೇಯವನಾದ ನನ್ನಣ್ಣನಿಗೆ ಹೇಮ’ರಾಜ’ ನೆಂದು ಹೆಸರಿಟ್ಟ ಹಿನ್ನೆಲೆಯನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕಿದೆ.ಅವತ್ತಿನ ಕಾಲಕ್ಕೆ ಅಪ್ಪನ ಹುಟ್ಟೂರಾದ ದೊಡ್ಡಬಳ್ಳಾಪುರ ಸೀಮೆಗೆ ಅತಿ ಶ್ರೀಮಂತ ‘ಹೇಮಣ್ಣ’ನೆಂಬ ವ್ಯಕ್ತಿ ಇದ್ದನಂತೆ. ಆಗಿನ ಕಾಲಕ್ಕೆ ಮೈಸೂರು ಮಹಾರಾಜರನ್ನ ಖುದ್ದಾಗಿ ಭೇಟಿ ಮಾಡಿ ಮೊದಲ ಬಾರಿಗೆ ಆ ಸೀಮೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ವ್ಯಕ್ತಿ.

ಅಂತಹ ವ್ಯಕ್ತಿ ಮೋಜಿಗಾಗಿ ಕುದುರೆಯೇರಿ ಹಳ್ಳಿಗಳ ಮಧ್ಯೆ ಹಾದು ಹೋಗುವಾಗ, ದುರದೃಷ್ಟವಶಾತ್ ಅಪ್ಪನಿದ್ದ ಊರಿನ ದಾರಿಯೇ ಅಂದು ಅವನ ಮೋಜಿನ ಆಡೊಂಬಲವಾಗಿತ್ತು.ಅಂದೇ ಅಪ್ಪನ ತಂದೆ ಅರ್ಥಾತ್ ನನ್ನ ತಾತ ದನದ ಸಗಣಿಯನ್ನ ತಿಪ್ಪೆಗೆ ಸುರಿಯಲೆಂದು, ಭಾರದ ಮಂಕರಿಯನ್ನ ತಲೆ ಮೇಲೆ ಹೊತ್ತು ಅದೇ ದಾರಿಯಲ್ಲಿ ಸಾಗುತ್ತಿದ್ದನಂತೆ.ಕುದುರೆಯೇರಿದ ಮತ್ತಿನಲ್ಲಿದ್ದ ಆತ ವಯೋವೃದ್ಧನಾದ ನನ್ನ ತಾತ ದಾರಿಯಿಂದ ಬದಿಗೆ ಸರಿಯಲಿಲ್ಲವೆಂದು, ವಯಸ್ಸನ್ನು ಲೆಕ್ಕಿಸದೇ ಕುದುರೆಗೆ ಹೊಡೆಯುವ ಚಾಟಿಯಿಂದ ನನ್ನ ತಾತನಿಗೆ ಹೊಡೆದು ನೆಲಕ್ಕುರುಳಿಸಿ ಹೋಗಿಯೇ ಬಿಟ್ಟನಂತೆ.

ಅಪ್ಪನಿಗೆ ಆ ಗಳಿಗೆಯೇ ವಿಷಯ ತಿಳಿದು, ಆತ ಹಿಂದಿರುಗಿ ಬರುವ ಅದೇ ದಾರಿಯಲ್ಲಿ ಕಾದು ಕುಳಿತು, ಕುದುರೆಯೇರಿ ಬರುತ್ತಿದ್ದ ಅವನನ್ನು ಒಂದೇ ಪಟ್ಟಿಗೆ ಕೆಡವಿಕೊಂಡು, ಅವನದೇ ಚಪ್ಪಲಿಯಿಂದ ಅವನ ಹಲ್ಲನ್ನೇ ಮುರಿದೇ ಬಿಟ್ಟನಂತೆ.ಅದರಿಂದ ಅಪ್ಪ ಹತ್ತಾರು ಕಷ್ಟಗಳಿಗೆ ತುತ್ತಾದಾರೂ ಅಂತಹ ಅಮಾನವೀಯತೆ ತೋರಿದವನ ಸೊಕ್ಕು ಮುರಿದಿದ್ದದ್ದಕ್ಕೆ ಸುತ್ತ ಮುತ್ತಲಿನ ಜನರ ಪ್ರಶಂಸೆಗೆ ಪಾತ್ರರಾದರಂತೆ.

ಆ ನೆನಪಿಗಾಗಿ ನನ್ನ ಮಗನೊಬ್ಬನಿಗೆ ಆತನ ಹೆಸರಿಡಬೇಕೆಂದು ತೀರ್ಮಾನಿಸಿ ರಾಜನ ಠೀವಿಯಲ್ಲಿ ಕುದುರೆಯೇರಿ ಬರುತ್ತಿದ್ದ ಆ ಹೇಮಣ್ಣನ ನೆನಪಿಗಾಗಿ ನನ್ನ ಎರಡನೇಯ ಅಣ್ಣನಿಗೆ ಹೇಮ’ರಾಜ’ ನೆಂದು ಹೆಸರಿಟ್ಟರಂತೆ.

ಅವನ ಬೆನ್ನಿಗೆ ಅಂಟಿಕೊಂಡಂತೆ ತದನಂತರ ತಮ್ಮನಾಗಿ ಹುಟ್ಟಿದವನು ನಾನು. ನಾನು ಕಂಡಂತೆ ಈ ಅಣ್ಣನದು ವರ್ಣರಂಜಿತ ವ್ಯಕ್ತಿತ್ವ.ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ವಿಶೇಷ ಆಸಕ್ತಿ.ಕ್ಷಣಾರ್ಧದಲ್ಲಿ ರೇಡಿಯೋ, ಟೆಪ್ ರೆಕಾರ್ಡರ್ ಸೈಕಲ್ ಡೈನೋಮೊ ಗಳನ್ನು ಬಿಚ್ಚಿ ಹೊಸದಾಗಿ ಏನೇನನ್ನೋ ಜೋಡಿಸುತ್ತಿದ್ದ. ಈ ಕಾರಣದಿಂದ ಇವನು ಮನೆಯಲ್ಲಿ ಮ್ಯಾಕ್ಯಾನಿಕ್ ಮುದ್ದನೆಂದೇ ಹೆಸರು ಪಡೆದಿದ್ದ. ಮಾತು ಮಾತಿಗೂ ನಗಿಸುವ ಹಾಸ್ಯ ಪ್ರವೃತ್ತಿಯುಳ್ಳವನು ಆಗಿದ್ದ.

ಯಾವುದೇ ವಸ್ತುವು ತನ್ನದೆಂದು ಗೊತ್ತಾದರೆ ಮುಗಿಯಿತು ಅದನ್ನು ಜತನದಿಂದ ಕಾಪಿಟ್ಟು ಕೊಳ್ಳುವುದಕ್ಕೆ ಇವನದು ಮೊದಲ ಆದ್ಯತೆ.

ದುರದೃಷ್ಟವಶಾತ್ ಇದೇ ಅವನ ಆರೋಗ್ಯ ಹದಗೆಡುವುದಕ್ಕೆ ಮೂಲವು ಆಯಿತು. ಒಂದೊಮ್ಮೆ ತೋಟದಲ್ಲಿ ಅಪ್ಪ ಬೆಳೆದ ಜೋಳದ ತೆನೆಯನ್ನು ಬೆಂಕಿಯಲ್ಲಿ ಸುಡುತ್ತಿದ್ದಾಗಲೇ ತೆನೆಗೆ ಅಂಟಿಕೊಂಡಿದ್ದ ಕೆಂಡವನ್ನು ಲೆಕ್ಕಿಸದೇ ತಾನು ಧರಿಸಿದ್ದ ಪಾಲಿಸ್ಟರ್ ಅಂಗಿಯೊಳಗೆ ಹಾಕಿಕೊಂಡು ಎದೆಯ ಭಾಗಕ್ಕೆ ಒತ್ತಿ ಹಿಡಿದು ಅವುಚಿಟ್ಟುಕೊಳ್ಳುವ ಆಸೆಯಲ್ಲಿ ಎಳೆಯ ಚರ್ಮಕ್ಕೆ ತಾಗಿ ಒಳಗಿನ ಶ್ವಾಸಕೋಶವೇ ಶಾಖಕ್ಕೆ ತುತ್ತಾಗಿ ಒಂದು ಶ್ವಾಸಕೋಶವೇ ಊನಾಯಿತು.

ಐದಾರು ವರ್ಷದವನಿದ್ದಾಗಲೇ ಈ ರೀತಿಯಿಂದ ಹದಗೆಟ್ಟ ಅನಾರೋಗ್ಯದಿಂದ ಅವನ ಬಹುಪಾಲು ಅರ್ಧ ಜೀವನ ಆಸ್ಪತ್ರೆಯಲ್ಲೇ ಕಳೆಯುವಂತಾಯಿತು.ನನಗೆ ತಿಳಿದ ಮಟ್ಟಿಗೆ ಅಪ್ಪ ಬೆಂಗಳೂರಿನ ಬಹುತೇಕ ಈ ಕಾಯಿಲೆಗೆ ಸಂಬಂಧಪಟ್ಟ ಎಲ್ಲ ಆಸ್ಪತ್ರೆಗಳನ್ನ ಸುತ್ತಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡಿಸಿದ್ದರಿಂದ ಸುಮಾರು ಸಾರಿ ಸಾವನ್ನ ಗೆದ್ದು ಬಂದಿದ್ದ.

ಪದವಿ ಮುಗಿಸುವ ಹೊತ್ತಿಗೆ ದೊಡ್ಡ ಯಶಸ್ವಿ ಶಸ್ತ್ರಚಿಕಿತ್ಸೆಯ ಫಲವಾಗಿ ನಂಜೇರಿ ಕಫ ತುಂಬಿದ್ದ ಆ ಒಂದು ಶ್ವಾಸಕೋಶವನ್ನ ದೇಹದಿಂದ ಹೊರತೆಗೆದು ಇನ್ನೂಳಿದ ಒಂದೇ ಶ್ವಾಸಕೋಶದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಆರೋಗ್ಯಪೂರ್ಣವಾಗಿ ಬದುಕುವಂತಾಗಿದ್ದ.

ಯಶಸ್ವಿ ಸಾಂಸಾರಿಕ ವ್ಯಕ್ತಿಯಾಗಿ, ಎರಡು ಆರೋಗ್ಯಪೂರ್ಣ ಗಂಡು ಮಕ್ಕಳ ತಂದೆಯೂ ಆದ.ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು, ಕೆಲ ವರ್ಷ ನಮ್ಮ ಕೂಡು ಕುಟುಂಬವನ್ನ ಮುನ್ನಡೆಸಿದ್ದ.

ನೇಮಕಾತಿ ಪ್ರಕ್ರಿಯೆಯಲ್ಲಿನ ದೋಷದಿಂದ ದುರದೃಷ್ಟವಶಾತ್ ಕೆಲಸವನ್ನು ಕಳೆದುಕೊಂಡ.ಆದರೂ ಎದೆಗುಂದದೇ ಬೇಸಾಯದಲ್ಲೂ ವಿಭಿನ್ನ ಪ್ರಯೋಗಗಳನ್ನ ಮಾಡಿ ಕೈ ಚಲ್ಲಿ ಕೂತ. ಅಣ್ಣ- ತಮ್ಮಂದಿರ ವಿಚಾರದಲ್ಲಿ ಊರೇ ಎದುರಾದರೂ ಬೆನ್ನಲುಬಾಗಿ ಸಹಾಯಕ್ಕೆ ನಿಲ್ಲುತ್ತಿದ್ದ.

ಪ್ರಾಣಿ ಪ್ರಿಯನಾಗಿದ್ದ ಈತನಿಗೆ ನಾಯಿ ಮತ್ತು ಬೆಕ್ಕುಗಳೆಂದರೆ ಎಲ್ಲಿಲ್ಲದ ಪ್ರೀತಿ.ನಮ್ಮ ಮನೆಯ ಬೆಕ್ಕೊಂದು ನಾವೆಲ್ಲರೂ ಐದಾರು ಹಾಸಿಗೆಗಳನ್ನ ಹಾಸಿ ಸಾಲಾಗಿ ಮಲಗಿದ್ದರೂ, ಇವನ ಹಾಸಿಗೆಯನ್ನೇ ಹುಡುಕಿ ಮರಿಗೆ ಜನ್ಮ ನೀಡುತ್ತಿದ್ದದ್ದು ನಿಜವಾಗಿಯೂ ಅಚ್ಚರಿ.

ಇನ್ನೊ ಅಚ್ಚರಿಯೆಂದರೆ ಅವನ ವಿಧಿವಶನಾದ ಮೂರನೇ ದಿನದ ಕೂಳು ಹಾಕುವ ಕಾರ್ಯದಲ್ಲಿ ಸಂಪ್ರದಾಯದಂತೆ ಕಾಗೆಗಿಂತ ಮೊದಲು ಅಚಾನಕ್ ಆಗಿ ಪ್ರತ್ಯಕ್ಷವಾದ ಬೆಕ್ಕು ಮೊದಲು,ನಂತರ ನಾಯಿ ಮುಟ್ಟಿದ್ದು. ನಮ್ಮೂರಲ್ಲಿ ಏನೇ ವಸ್ತು ತಂದರೂ ನಾವೇ ಮೊದಲು ತರಬೇಕೆಂದು ಹಠಕ್ಕೆ ಕೂರುವ ಕ್ರೇಜಿ ಮನುಷ್ಯ. ಪಿ ಯು ಸಿ ಓದುವಾಗಲೇ ಈತ ‘ಜೀವನ-ಸಂಜೀವನ’ ಕಿರು ನಾಟಕವನ್ನು ಬರೆದು ಸಾವಿರ ಪ್ರತಿಗಳನ್ನ ಮುದ್ರಣಗೊಳಿಸಿ ಸಾಹಿತ್ಯ ಪ್ರೀತಿಯನ್ನು ಮೆರೆದಿದ್ದ.

ನಾನು ಪಿ ಯು ಸಿ ಯಲ್ಲಿದ್ದಾಗ, ಉಪನ್ಯಾಸಕರು ಬರುವುದು ಮುಕ್ಕಾಲು ಗಂಟೆ ತಡವಾಗಿದ್ದಕ್ಕೆ,ಮನೆಗೆ ಹಿಂತಿರುಗಿ ಇವನಿಗೆ ರೇಷ್ಮೆ ಸಾಕಾಣಿಕೆಯ ಕೆಲಸಕ್ಕೆ ಸಾತ್ ನೀಡಿದ್ದೆ.ಮರುದಿನ ಕಾಲೇಜಿಗೆಂದು ಹೋದಾಗ ಆ ಉಪನ್ಯಾಸಕರೊಬ್ಬರು ನನಗೆ ಬೆಂಚ್ ಮೇಲೆ ನಿಲ್ಲುವ ಶಿಕ್ಷೆ ನೀಡಿದ್ದರು.ವಿಷಯ ತಿಳಿದ ಈತ ಧೈರ್ಯವಾಗಿ,ನೇರವಾಗಿ ಪ್ರಿನ್ಸಿಪಾಲರ ಛೇಂಬರ್ ಗೆ ಬಂದು, ನನ್ನ ತಮ್ಮ ಓದಿನೊಂದಿಗೆ ಬೇಸಾಯವನ್ನು ಕಲಿಯಲೆಂದೇ ಪಕ್ಕದೂರಿನ ಸರ್ಕಾರಿ ಕಾಲೇಜಿಗೆ ಸೇರಿಸಿದ್ದು, ಇಲ್ಲವಾಗಿದ್ದರೆ ಕರ್ನಾಟಕದ ಪ್ರತಿಷ್ಠಿತ ಖಾಸಗಿ ಕಾಲೇಜಿಗೆ ಸೇರಿಸುತ್ತಿದ್ದೆ.

ಮುಂದುವರಿದು ವಯಸ್ಸಿಗೆ ಬಂದ ಹುಡುಗನನ್ನ ಸಕಾರಣವಿಲ್ಲದೇ ಕ್ಷಮೆ ಕೋರಿದರೂ ಬೆಂಚಿನ ಮೇಲೆ ನಿಲ್ಲಿಸುವ ಅಗತ್ಯವಿತ್ತೆ? ಕ್ಷಮೆ ಕೇಳುವುದಕ್ಕಿಂತ ದೊಡ್ಡ ಶಬ್ದ ಮತ್ತೊಂದಿಯೇ? ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿ ಇಡೀ ಕಾಲೇಜಿನ ಸಿಬ್ಬಂದಿಗೆ ಬೆವರಿಳಿಯುವಂತ ವಿವೇಕದ ಮಾತಿನಿಂದ ಪ್ರಬುದ್ಧತೆಯನ್ನ ತೋರಿದ್ದ.

ಆತ ಕೆಲಸ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದಾಗ, ನನ್ನ ಮದುವೆಯ ವಿಚಾರವಾಗಿ ಇಡೀ ಕುಟುಂಬವೇ ಮುನ್ನುಗ್ಗಲು ಹಿಂಜರಿದಾಗ, ನಾನೇ ಸ್ವತಃ ಅವನನ್ನು ‘ನೀನು ಈ ವಿಚಾರದಲ್ಲಿ ನನ್ನ ಜೊತೆ ಕೈ ಜೋಡಿಸಿದರೆ ನಿನ್ನ ಭವಿಷ್ಯಕ್ಕೆ ಯಾರು ನಿಲ್ಲುವುದಿಲ್ಲ’ ನೀನು ಮತ್ತೊಂದು ತೊಂದರೆಗೆ ಸಿಲುಕುವೆ ಬೇಡವೆಂದರೂ,ನಾನು ಈಗಿರುವ ಸ್ಥಿತಿಗಿಂತ ಇನ್ನೂ ನನ್ನ ಕೆಳಗೆ ತುಳಿಯುವುದಕ್ಕೆ ಯಾರಿಂದಲಾದರೂ ಸಾಧ್ಯವಾ? ನೀನು ಸುಮ್ಮನೆ ಗಂಡಾಗಿ ರೆಡಿ ಆಗೋ ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತೆನೆಂದು ಅಂದದ್ದು ಅಲ್ಲದೇ ನನ್ನಿಷ್ಟದಂತೆ ಕುಟುಂಬದ ಯಾವ ಆಮಿಷಕ್ಕೂ ಒಳಗಾಗದೇ ಮದುವೆ ಮಾಡಿಸಿಯೇ ಬಿಟ್ಟ.

ನನ್ನ ಮತ್ತು ಅವನ ಸಾಕಿ ಸಲುಹಿ, ಓದಿ ಬೆಳೆಸಿದ ಸೋದರಮಾವನಿಗೆ ಕಿಡ್ನಿ ವೈಫಲ್ಯವಾದಾಗ,ಅವರ ಅನ್ನದ ಋಣ ತೀರಿಸಲು ಇದೇ ಸರಿಯಾದ ಸಮಯವೆಂದು ತಿಳಿದು, ನಮ್ಮ ಮನೆಯಲ್ಲಿ ಯಾರಿಗೂ ತಿಳಿಯದಂತೆ ನಾನು ಕಿಡ್ನಿ ಕೊಡುವೆನೆಂದು ಮಾತು ಕೊಟ್ಟಿದ್ದೆ.

ಈ ವಿಚಾರವಾಗಿ ನಾನು ಚಕಪ್ ಗೆಂದು ಆಸ್ಪತ್ರೆಗೆ ತೆರಳಿದ್ದ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ನನಗೆ ಕರೆ ಮಾಡಿ, ನಮಗೇಕೆ ತಿಳಿಸದ ಹಾಗೆ ಮಾತು ಕೊಟ್ಟೆ? ಮಾಮ ಮತ್ತು ನೀನು ಇಬ್ಬರೇ ನಮ್ಮ ಕುಟುಂಬಕ್ಕೆ ಆಧಾರ, ಆಶ್ರಯ. ನಿಮ್ಮಿಬ್ಬರಿಗೂ ಕಿಡ್ನಿಯನ್ನು ಕೊಡು-ತೆಗೆದುಕೊಳ್ಳುವ ಪ್ರಕ್ರಿಯೆಯಿಂದ ಮುಂದೊಂದು ದಿನ ಇಬ್ಬರಿಗೂ ತೊಂದರೆಯಾದರೆ ನಮ್ಮಗಳ ಗತಿ ಏನು?

ಈಗಾಗಲೇ ದಾರಿ ಬಿಟ್ಟ ಬೇಜವಾಬ್ದಾರಿಯ ಅಣ್ಣ, ಒಂದೇ ಶ್ವಾಸಕೋಶದಲ್ಲಿ ಉಸಿರು ಬಿಗಿ ಹಿಡಿದು ಬದುಕುತ್ತಿರುವ ನಾನು, ಅಷ್ಟೊಂದು ತಿಳಿವಳಿಕಸ್ಥನಲ್ಲದ ,ಚಿಕ್ಕ ವಯಸ್ಸಿಗೆ ಶುಗರ್ ಅಂಟಿಸಿಕೊಂಡ ತಮ್ಮ, ನಿನಗಿರುವ ಇನ್ನೊ ಐದಾರು ವರ್ಷ ತುಂಬದ ಮಕ್ಕಳು,ಎಳೆಯ ವಯಸ್ಸಿನ ನಿನ್ನ ಮಡದಿ ಹೀಗೆ ಇನ್ನೊ ಕೆಲ ಸತ್ಯಗಳನ್ನ ಬಿಚ್ಚಿಡುತ್ತಾ, ದುಃಖಿಸಿಕೊಂಡು ತನ್ನ ಅಳಲನ್ನ ತೋಡಿಕೊಂಡು ನನ್ನ ಮೇಲೆ ಎಷ್ಟು ಜನ ಅವಲಂಬಿತರಾಗಿದ್ದರೆಂಬುದನ್ನ ಪರೋಕ್ಷವಾಗಿ ಮೊಟ್ಟ ಮೊದಲ ಬಾರಿ ಅರಿವಿಗೆ ತಂದುಕೊಟ್ಟ.

ಇವೆಲ್ಲವನ್ನು ಮೀರಿಯೂ ನೀನು ಮಾತು ಕೊಟ್ಟ ಮೇಲೆ ಕೊಟ್ಟೆ ಕೊಡುವೆ, ಅದು ನನಗೆ ಚೆನ್ನಾಗಿ ಗೊತ್ತು,ಆದರೆ ನನ್ನದೊಂದು ಸಲಹೆಯಿದೆ ಕೇಳು, ಅದು ಯಶಸ್ವಿಯಾಗದಿದ್ದರೆ ನಿನ್ನಿಷ್ಟದಂತೆ ಕೊಡುವಿಯಂತೆ, ಆಗ ನಾವ್ಯಾರು ಅಡ್ಡಿಪಡಿಸೋಲ್ಲ, ಕೊಡುವುದು ಬೇಡವೇ ಬೇಡ ಅನ್ನಲು ಅವರು ಬರೀ ಸೋದರಮಾವ ಅಲ್ಲ ಸ್ವತಃ ನಿನ್ನ ಹಾಗೆ ನನ್ನ ಒಡಹುಟ್ಟಿದ ಅಕ್ಕನ ಗಂಡ ಆ ಅರಿವು ನಮಗೂ ಇದೆ.

ಈಗ ಸ್ವಲ್ಪ ಸಮಾಧಾನ ತಂದುಕೋ,ಎಂದು ತಾತ್ಕಾಲಿಕ ತಡೆಯೊಡ್ಡುವ ಮೂಲಕ ನನ್ನ ಅರ್ಧ ಜೀವದ ಭಾಗದ ಬಗ್ಗೆ ಕಾಳಜಿ ವಹಿಸಿದ್ದ. ಮುಂದೆ ಆದದ್ದೆಲ್ಲವೂ ಅವನ ಮನಸ್ಸಿನಲ್ಲಿದ್ದಂತೆಯೇ ಆಗಿ ಹೋಗಿತ್ತು. ದೇವರಾಣೇ ಅವನ ಮಾತು ಘಟನೆ ನೆಡದ ಒಂದು ವರ್ಷದ ತರುವಾಯ ಅಕ್ಷರಶಃ ಸತ್ಯವಾಯಿತು.

ಈಗ ಅದು ನನ್ನ ಕುಟುಂಬಕ್ಕೆ ಅನಿವಾರ್ಯವೂ ಆಗಿದೆ . ಅದೆಂತಹ ಮುಂದಾಲೋಚನೆಯಿತ್ತೋ ಅವನಿಗೆ ಆ ದೇವರೆ ಬಲ್ಲ.

ಹೀಗೆ ಪ್ರಮುಖ ಘಟ್ಟಗಳಲ್ಲಿ ವಿವೇಚನಾ ಸಹಿತವಾದ ಗಟ್ಟಿ ನಿರ್ಧಾರಗಳನ್ನ, ಸಲಹೆಗಳನ್ನ ನೀಡುತ್ತಿದ್ದ ಅಣ್ಣ,ಕಳೆದ ಡಿಸೆಂಬರನಲ್ಲಿ ಇನ್ನೇನೂ ಹೋಗಿಯೆ ಬಿಟ್ಟನೆಂದು ನಿರ್ಧರಿ ಕೊಳ್ಳುವಷ್ಟರಲ್ಲಿ ಮತ್ತೊಮ್ಮೆ ಸಾವನ್ನ ಗೆದ್ದು ಬಂದಿದ್ದ. ಸ್ವಾಭಿಮಾನದಿ ದುಡಿಯುವ ಛಲ ತೊಟ್ಟು ಮೋದಿ ಕೇರ್ ನಲ್ಲಿ ಡೈರೆಕ್ಟರ್ ಸ್ಥಾನದ ಹಂತಕ್ಕೆ ಬೆಳೆದಿದ್ದ.

ಧಿಡೀರನೆ ಉಸಿರಾಟದ ಕಷ್ಟಕ್ಕೆ ಸಿಲುಕಿ, ಕೊರೊನಾದಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಮನೆಯಲ್ಲೇ ಸೆಪ್ಟೆಂಬರ 8 ರ ನಸು ಬೆಳಗಿನ ಜಾವದ ಸಮಯದಲ್ಲಿ ಇಹಲೋಕ ತ್ಯಜಿಸಿದ್ದು ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿತ್ತು.

ಒಬ್ಬ ಇಲ್ಲವಾದರೆ ಇನ್ನೊಬ್ಬ ಗೆಳೆಯ ಸಿಗಬಹುದು, ಆದರೆ ಅದೇ ಅಪ್ಪನ ರಕ್ತ ಹಂಚಿಕೊಂಡು ಅದೇ ತಾಯ ಗರ್ಭದಲ್ಲಿ ಮತ್ತೊಮ್ಮೆ ಎಂದೆಂದಿಗೂ ಜನಿಸಲಾರೆವು. ಯಾವ ಜನ್ಮದ ಪುಣ್ಯದ ಫಲವೋ ಈ ಜನ್ಮದಲ್ಲಿ ಅಣ್ಣ- ತಮ್ಮಂದಿರಾಗಿ ಹುಟ್ಟಿದ್ದೆವು.

ಹಾಗೆಯೇ ಇರುವವರೆಗೂ ಬಾಳಿದೆವು. ಆದರೆ ದಾಯಾದಿಗಳಂತೆ ಕಚ್ಚಾಡಲು ನಮಗೆ ನಾವು ಎಂದು ಅಂಥ ಅವಕಾಶಕ್ಕೆ ಎಡೆ ಮಾಡಿಕೊಡಲೇ ಇಲ್ಲ. ಸಣ್ಣಪುಟ್ಟ ಕೋಳಿ ಜಗಳದಂತ ಜಗಳವೇ ಹೊರತು ಕೊಡಲಿಯಿಡಿದು ಕೊರ್ಟು ಮೆಟ್ಟಿಲೆರುವ ಮಟ್ಟಕ್ಕೆ ಇಳಿಯಲಿಲ್ಲ.ನನ್ನದೇ ನೆಡೆಯಬೇಕೆಂಬ ಕೆಟ್ಟ ಹಠಕ್ಕೆ ಬೀಳಲಿಲ್ಲ. ಸ್ವಾರ್ಥಕ್ಕಾಗಿ ಒಬ್ಬರು ಮತ್ತೊಬ್ಬರ ಸಾವನ್ನ ಕನಸಿನಲ್ಲಿಯೂ ಬಯಸಿಲಿಲ್ಲ.

ಅವಿದ್ಯಾವಂತ ಬೇಸಾಯಗಾರನ ಮಕ್ಕಳಾದ ನಾವು ಬುದ್ದಿವಂತರಾಗದೇ ಇರಬಹುದು ಆದರೆ ಮೋಸಗಾರರಾಗಿ ಬದುಕು ನೆಡೆಸಲಿಲ್ಲ. ಬದುಕಿರುವವರೆಗೂ ದಾಯಾದಿಗಳಂತೆ ದ್ವೇಷಕಾರಿ, ಸತ್ತಾಗ ಹೊರಗಿನವರ ಮೆಚ್ಚಿಸಲು ನಿನ್ನ ಮಣ್ಣಿಗೆ ಬರಲಿಲ್ಲ. ಮಣ್ಣಿನ ಮಕ್ಕಳಾದ ನಾವು ಮಣ್ಣಿನಲಿ ಆಟವಾಡುವಾಗಿನಿಂದ, ಭಾರ ಹೃದಯದಿಂದ ನಿನ್ನ ಹೂಳಲು ತೆಗೆದ ಗುಂಡಿಗೆ ಒಂದಿಡಿ ಮಣ್ಣು ಹಾಕುವವರೆಗೂ ಸಹೋದರತ್ವದಿ ಇದ್ದೆವು.

ಮಕ್ಕಳ ವಿಷಯವಲ್ಲೂ ಅಣ್ಣನ ಮಕ್ಕಳೇ ಬೇರೆ ನಮ್ಮ ಮಕ್ಕಳೇ ಬೇರೆ ಎಂಬುದನ್ನ ನಾಟಕೀಯವಾಗಿಯೂ ತೊರ್ಪಡಿಸಿಕೊಳ್ಳಲಿಲ್ಲ.ಭವಿಷ್ಯದ ದೃಷ್ಟಿಯಿಂದ ವಿಭಾಗವಾಗಿ ಬೇರೆ ಬೇರೆ ಇದ್ದರೂ ತೊಂಬತ್ತೊಂಬತ್ತು ಭಾಗ ಒಬ್ಬರನ್ನೊಬ್ಬರು ಬಿಟ್ಟು ಕೊಟ್ಟಿರಲಿಲ್ಲ.

ನಿನ್ನ ಬಗ್ಗೆ ಒಂದು ಬೇಸರದ ಸಂಗತಿಯೆಂದರೆ ಅದೆಕೋ ಸ್ನೇಹಿತರ ಆಯ್ಕೆಯ ವಿಚಾರದಲ್ಲಿ ವಿವೇಚನೆ ಬಳಸಿ ಆರಿಸಿಕೊಳ್ಳಲಿಲ್ಲ. ನಿನಗೆ ಒಳ್ಳೆಯದನ್ನ ಬಯಸಿದ್ದ ಸ್ನೇಹಿತರನ್ನ ದೂರವಿರಿಸಿ, ಗೊತ್ತಿದ್ದು ನಿನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸದ, ನಿನ್ನ ಎಳೆಯ ಕುಟುಂಬದ ಭವಿಷ್ಯದ ಬಗ್ಗೆ ಕಿಂಚಿತ್ತೂ ಯೋಚಿಸದವರ ಮಾತನ್ನ ನಮ್ಮೆಲ್ಲರ ಮರೆಮಾಚಿ ಸಾಯುವ ನಾಲ್ಕು ದಿನ ಮುಂಚಿನವರೆಗೂ ಆರೋಗ್ಯವನ್ನ ನಿರ್ಲಕ್ಷ್ಯಿಸಿ ಅವರ ಮಾತನ್ನೇ ವೇದವಾಕ್ಯದಂತೆ ಅನುಸರಿಸಿದೆ.

ಸ್ವಯಂಕೃತ ಅಪರಾಧಕ್ಕೆ ಮುನ್ನುಡಿಯ ಪಂಕ್ತಿ ಹಾಕಿಕೊಳ್ಳುತ್ತಾ ಸಾಗಿದೆ. ಯಾರೇ ಸ್ನೇಹಿತರಾಗಲಿ ನಂಬಿದ ಸ್ನೇಹಿತನ ಆರೋಗ್ಯ, ಅವನ ಕುಟುಂಬದ ಬಗ್ಗೆ ಗಮನಹರಿಸುವುದು ಕೇವಲ ಸ್ನೇಹಿತನಾದವನ ಕರ್ತವ್ಯವಲ್ಲದೆ ಸಾಮಾಜಿಕ ಜವಾಬ್ದಾರಿ ಕೂಡ.ದಿರ್ಘಾಯು ಆಗಬೇಕಿದ್ದ ನೀನು ಅಲ್ಪಾಯು ಆದದ್ದು ಮಾತ್ರ ನಿನ್ನ ಸ್ನೇಹಿತರಿಂದಲೇ ಎಂಬುದ ಸಾರಿ ಸಾರಿ ಹೇಳಬಲ್ಲೆ.

ಇಷ್ಟಿದ್ದರೂ ನನ್ನಣ್ಣನ ಕುಟುಂಬದಂತೆ ಅವರ ಕುಟುಂಬಗಳು ಬೀದಿಗೆ ಬರದಂತೆ ಆಗದಿರಲು ಆ ಮಹಾನ್ ಸ್ನೇಹಿತರಿಗೆ ದೇವರು ಬುದ್ದಿ ಕರುಣಿಸಲಿ.ನನ್ನ ಕಣ್ಣ ಮುಂದೆ ಹಾಯುವ ಬೇರಾವ ಸ್ನೇಹಿತನ ಕುಟುಂಬವನ್ನ ಅರ್ಧ ವಯಸ್ಸಿಗೆ ಬಿಟ್ಟು ಹೋಗದಿರುವಂತ ಪಾಠ ನನ್ನಣ್ಣನ ಸಾವಿನ ಮೂಲಕವೇ ಆಗಲಿ.

ಸ್ನೇಹ ಸಂಬಂಧವನ್ನ ಮೀರಿದ್ದು ಸೋದರ ಸಂಬಂಧ. ನನಗಿಂತ ಮೂರುವರೆ ವರ್ಷ ಮುಂಚೆ ಹುಟ್ಟಿದ ನೀನು, ಚಿಕ್ಕವನಾಗಿದ್ದ ನನ್ನನ್ನು ಎಷ್ಟು ಸಾರಿ ಎತ್ತಿ ಮುದ್ದಾಡಿರಬಹುದು, ಅಳುವಾಗ ಸಂತೈಸಿರಬಹುದು, ನೀನು ಧರಿಸಿದ್ದ ಎಷ್ಟೊ ಷರ್ಟುಗಳನ್ನು ನಾನು ಧರಿಸಿರುತ್ತೇನೆ.ಆದರೆ ತಮ್ಮನಾಗಿ ಹುಟ್ಟಿದ ನನಗೆ ಇವೆಲ್ಲವೂ ನಿನಗೆ ನೀಡಲು ಅಸಾಧ್ಯ.

ಯಾರೇ ಸ್ನೇಹಿತರು ಬಂದರೂ ಇದು ನನ್ನ ಅಣ್ಣಂದಿರ,ತಮ್ಮನ ಮನೆಯೆಂದು ನಿಮ್ಮ ಸಮ್ಮುಖದಲ್ಲಿ ಪರಿಚಯ ಮಾಡಿಕೊಟ್ಟು ನಾವೆಲ್ಲ ಇನ್ನೂ ಒಗ್ಗಟ್ಟಿನಿಂದ ಇದ್ದೇವೆಂದು ಸಮಾಧಾನ ತಂದು ಕೊಳ್ಳುತ್ತಿದ್ದೆ. ಆದರೆ ಇನ್ನೂ ಮುಂದೆ ನಿನ್ನ ಗೈರು ಹಾಜರಿಯಲ್ಲಿ ನಿನ್ನ ಮನೆ ಬಳಿ ಬಂದಾಗ ಇದು ನನ್ನ ಅಣ್ಣನ ಮನೆಯಂದಷ್ಟೇ ಪರಿಚಯ ಮಾಡಿಕೊಡಬೇಕಿದೆ.

ಆದರೂ ನಿನ್ನ ಜೇಷ್ಠ ಪುತ್ರ ಇಷ್ಟಾರ್ಥ ಯಥಾವತ್ ನಿನ್ನ ಹೋಲಿಕಯನ್ನೇ ಹೊಂದಿದ್ದಾನೆ. ಜೊತೆಗೆ ರಕ್ತಗತವಾಗಿ ಬಹುತೇಕ ನಿನ್ನ ಅಭಿರುಚಿಗಳೇ ಇರುವುದನ್ನ ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ.ಇನ್ನೊ ಮೇಲೆ ಅವನಲ್ಲಿ ನಿನ್ನ ಕಾಣಬೇಕು. ಅದೇನೇ ಇದ್ದರೂ ನಿನ್ನ ಕುಟುಂಬದ ಭವಿಷ್ಯದ ಜವಾಬ್ದಾರಿ ನಮ್ಮಗಳ ಮೇಲಿದೆ.

ನನ್ನ ಮಕ್ಕಳಂತೆ ನಿನ್ನ ಮಕ್ಕಳ ಶಿಕ್ಷಣಕ್ಕೂ ಮೊದಲ ಆದ್ಯತೆಯಾಗಬೇಕಿದೆ.ನಿನ್ನ ಕನಸುಗಳನ್ನ ನನಸಾಗಿಸುವ ಜರೂರತ್ತು ಇದೆ. ಎಷ್ಟೇ ಕಷ್ಟ ಬಂದರೂ ನಿನ್ನ ಮಕ್ಕಳ ಭವಿಷ್ಯ ರೂಪಿಸುವಲ್ಲಿ ನಿನ್ನ ಸ್ಥಾನದಲ್ಲಿ ನಿಂತು ಸಹಕರಿಸಿ ಅವರನ್ನು ಸಮಾಜದ ಮುಖ್ಯವಾಹಿನಿಯೊಳಗೆ ತರಲು ಪರಿಶ್ರಮ ಪಡುತ್ತೇನೆ.

ಮನುಷ್ಯ ಜನ್ಮದಲ್ಲೇ ನಿನ್ನ ಮುಂದಿನ ಜನ್ಮವನ್ನ ನಿನಗೆ ಆ ಭಗವಂತ ದಯಪಾಲಿಸಿದರೆ ನಮ್ಮ ವಂಶದ ರಕ್ತ ಹರಿಯುವ ಹೊಟ್ಟೆಯಲ್ಲಿ ಮತ್ತೇ ಹುಟ್ಟಿ ಬಾ ಅಣ್ಣಾ.ಇವತ್ತು ನಿನ್ನ ಹೆಸರಿನಲ್ಲಿ ಕರ್ಮದ ಕಾರ್ಯಗಳನ್ನ ಪೂರೈಸುವ ತಿಥಿ ಕಾರ್ಯ. ಇದೇ ಬಂಧು ಬಾಂಧವರು,ನೆರೆ- ಹೊರೆಯವರು ಸ್ನೇಹಿತರು ಸೇರಿ ಮಾಡುವ ಕೊನೆ ಕಾರ್ಯ.

ಇನ್ನೇನಿದ್ದರೂ ಇಂಥ ಕಾರ್ಯಗಳು ತಿಂಗಳಿಂದ ವರ್ಷಕ್ಕೆ ಸೀಮಿತಗೊಳ್ಳುತ್ತದೆ. ನಿನ್ನ ಜೊತೆ ಹಂಚಿಕೊಂಡ ಸಹೋದರತ್ವ, ಒಡನಾಡಿದ ಬದುಕಿನ ನೆನಪುಗಳು ಮಾತ್ರ ಅಮರ.. ಅಮರ.. ಅಮರ… ಮತ್ತೆ ಹುಟ್ಟಿ ಬರಲಾರೆವು ಅದೇ ತಂದೆಯ ರಕ್ತ ಹಂಚಿಕೊಂಡು ಅದೇ ತಾಯ ಗರ್ಭದಲ್ಲಿ.ನಾನೇನಾದರೂ ದುಡುಕಿ ಒಂದು ಬೈಗುಳದ ಮಾತಾಡಿದ್ದರೆ ಅದು ನಿನ್ನ ಆರೋಗ್ಯದ ಹಿತದೃಷ್ಟಿಯಿಂದ ಅಷ್ಟೇ ಅಣ್ಣ..ಆದರೂ ಕ್ಷಮೆಯಿರಲಿ.. ಹೋಗಿ ಬಾ ಅಣ್ಣಾ…. ಇಂತಿ ನಿನ್ನ ಪ್ರೀತಿಯ ತಮ್ಮ ಧನಂಜಯ

Comment here