ಸಿನಿಮಾ

ಕವಿತಾ ಗೌಡ ‘ಗೋವಿಂದ ಗೋವಿಂದ’ ನಾಯಕಿ

Public Story:
ತಿಲಕ್ ನಿರ್ದೇಶನದ ‘ಗೋವಿಂದ ಗೋವಿಂದ’ ಚಿತ್ರದ ನಾಯಕಿಯಾಗಿ ಕವಿತಾ ಗೌಡ ನಟಿಸಿದ್ದಾರೆ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ತಿಲಕ್ ಅವರಿಗೆ ಹಿರಿತೆರೆಯ ನಿರ್ದೇಶನ ಇದೇ ಮೊದಲು. ಸುಮಂತ್ ಶೈಲೇಂದ್ರ ಇದರ ನಾಯಕ. ಹೀರೊ ಆಗಿ ಅವರಿಗೆ ಇದು ಏಳನೇ ಚಿತ್ರ. ಈ ಸಿನಿಮಾದಲ್ಲಿ ಅವರದ್ದು ಅನುತ್ತೀರ್ಣಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿಯ ಪಾತ್ರವಂತೆ.
ಸಿನಿಮಾದ ಮುಕ್ಕಾಲು ಭಾಗದಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ವಿಜಯಪುರ, ಚಿಂತಾಮಣಿ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ನಡೆಸಲಾಗಿದೆ. ಎರಡು ಹಾಡುಗಳ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದೆ.
ನಾಲ್ಕು ಹಾಡುಗಳಿಗೆ ಹಿತನ್ ಹಾಸನ್ ಸಂಗೀತ ಸಂಯೋಜಿಸಿದ್ದಾರೆ. ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಸಂಕಲನ ಸಿ. ರವಿಚಂದ್ರನ್ ಅವರದು. ಥ್ರಿಲ್ಲರ್ ಮಂಜು ಸಾಹಸ ಸಂಯೋಜಿಸಿದ್ದಾರೆ. ಮೊದಲ ಬಾರಿಗೆ ಎಸ್. ಶೈಲೇಂದ್ರಬಾಬು ಪಾಲುದಾರಿಕೆಯಲ್ಲಿ ಬಂಡವಾಳ ಹೂಡಿದ್ದಾರೆ. ಅವರೊಟ್ಟಿಗೆ ರವಿ ಆರ್. ಗರಣಿ ಮತ್ತು ಕಿಶೋರ್ ಎಂ.ಕೆ. ಮಧುಗಿರಿ ಕೈಜೋಡಿಸಿದ್ದಾರೆ.
‘ಹುಂಡಿ ನಮ್ದು ಕಾಸು ನಿಮ್ದು’ ಎಂಬ ಅಡಿಬರಹದ ಮೂಲಕ ಚಿತ್ರತಂಡ ಕಾಮಿಡಿ ಕಥೆ ಹೇಳಲು ಹೊರಟಿದೆ. ಅದು ಹುಡುಗರ ಗುಂಪು. ಜೀವನದಲ್ಲಿ ಅವರಿಗೆ ಗುರಿ ಎಂಬುದೇ ಇರುವುದಿಲ್ಲ. ನಾಯಕಿಯನ್ನು ಡ್ಯಾನ್ಸರ್ ಮಾಡಬೇಕೆಂಬುದು ಅವರ ಕನಸು. ಆಕೆಯನ್ನು ಅಪಹರಿಸಿ ಅವಳ ತಂದೆಯಿಂದ ಹಣ ಪಡೆದು ನಗರಕ್ಕೆ ಕಳುಹಿಸುವ ಯೋಜನೆ ಅವರದು. ಆದರೆ, ದುಷ್ಕರ್ಮಿಗಳು ಆಕೆಯನ್ನು ಅಪಹರಿಸುತ್ತಾರೆ. ಆಕೆಯ ಬಿಡುಗಡೆಗೆ ಹೇಗೆಲ್ಲಾ ಹಣ ಹೊಂದಿಸುತ್ತಾರೆ ಎನ್ನುವುದು ಈ ಚಿತ್ರದ ಪ್ರಮುಖ ಕಥೆ.
ಉಡಾಳ ಸ್ನೇಹಿತರಾಗಿ ವಿಜಯ್ ಚೆಂಡೂರ್, ಪವನ್ಕುಮಾರ್ ನಟಿಸಿದ್ದಾರೆ. ಭಾವನಾ ಮೆನನ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೂಪೇಶ್ ಶೆಟ್ಟಿ, ಅಚ್ಯುತ್ಕುಮಾರ್, ಶೋಭರಾಜ್, ಪದ್ಮಾ ವಾಸಂತಿ, ಗೋವಿಂದೇಗೌಡ, ಶ್ರೀನಿವಾಸಪ್ರಭು, ಸುನೇತ್ರ ಪಂಡಿತ್ ತಾರಾಗಣದಲ್ಲಿದ್ದಾರೆ.

Comment here