ತುಮಕೂರು ಲೈವ್

ಕಾಯ್ದೆಗಳ ತಿದ್ದುಪಡಿ: ತುಮಕೂರಿನಲ್ಲಿ ದನಿ ಎತ್ತಿದ ದೇವೇಗೌಡರು

Publicstory


Tumkuru: ರೈತ ವಿರೋಧಿಯಾದ ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂಸುಧಾರಣ ಕಾಯ್ದೆ ತಿದ್ದುಪಡಿಯನ್ನು ಖಂಡಿಸಿ ಜಾತ್ಯತೀತ ಜನತಾ ದಳ ಕಾರ್ಯಕರ್ತರು ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ತಿದ್ದುಪಡಿ ಕಾಯ್ದೆಗಳಿಂದ ರೈತರು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ರೈತರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ ಎಂದು ಪ್ರತಿಭಟನಾಕಾರರು ದೂರಿದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾತನಾಡಿ ಭೂಸುಧಾರಣ ಕಾಯ್ದೆ ತಿದ್ದುಪಡಿಯಿಂದ ಬಂಡವಾಳಗಾರರು ಕೃಷಿ ಕ್ಷೇತ್ರಕ್ಕೆ ಕಾಲಿಡುತ್ತಾರೆ. ನಿಜವಾದ ರೈತರು ಅಂಚಿಗೆ ತಳ್ಳಲ್ಪಡುತ್ತಾರೆ. ಇದರಿಂದ ಕೃಷಿ ನಾಶವಾಗಲಿದೆ. ಕೃಷಿಕರು ಇನ್ನಿಲ್ಲವಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಭೂಸುಧಾರಣ ಕಾಯ್ದೆ ತಿದ್ದುಪಡಿಯಿಂದ ಬಂಡವಾಳಗಾರರು ಮತ್ತು ಕಾರ್ಪೋರೇಟ್ ಕುಳಗಳು ನೂರಾರು ಏಕರೆ ಭೂಮಿಯನ್ನು ಖರೀದಿಸಿ ರೈತರನ್ನು ಕೂಲಿಗಳನ್ನಾಗಿ ಇಟ್ಟುಕೊಳ್ಳುತ್ತಾರೆ. ಇದರಿಂದ ರೈತರು ತೀವ್ರ ಸಮಸ್ಯೆಗೆ ಗುರಿಯಾಗುತ್ತಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ಕಾಯ್ದೆಗಳನ್ನ ತರುತ್ತಿವೆ ಎಂದು ದೂರಿದರು.

ಎಪಿಎಂ ಕಾಯ್ದೆ ತಿದ್ದುಪಡಿಯೂ ಕೂಡ ಸಣ್ಣ, ಮಧ್ಯಮ ವರ್ತಕರು ಮತ್ತು ರೈತರಿಗೆ ಸಮಸ್ಯೆಯನ್ನು ತಂದೊಡ್ಡಲಿದೆ. ಈ ವಿಭಾಗ ಇಕ್ಕಟ್ಟಿಗೆ ಸಿಲುಕಲಿದೆ. ಇದನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ಕಾರ್ಮಿಕ ಕಾನೂನುಗಳನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಇದರಿಂದ ಕಾರ್ಮಿಕರಿಗೆ ಭದ್ರತೆ ಇಲ್ಲದಂತಾಗುತ್ತದೆ. ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಜೊತೆಗೆ ಮಾಲಿಕರ ಪರವಾದ ನೀತಿಗಳಿಂದಾಗಿ ಅವರ ಲಾಭ ಪಡೆಯುತ್ತಾರೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಶಾಸಕರಾದ ಗೌರಿಶಂಕರ್, ವೀರಭದ್ರಯ್ಯ, ಬೆಮೆಲ್ ಕಾಂತರಾಜು, ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತ ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Comment here