ತುಮಕೂರು ಲೈವ್

ಕುಣಿಗಲ್ ಗೆ ಹೇಮಾವತಿ ಹರಿಸದಿದ್ದರೆ ಸುಮ್ಮನೆ ಬಿಡೆವು: ಶಾಸಕ ಗರಂ

ತುಮಕೂರು: ಹಿಂದಿನ ಸರ್ಕಾರ ಕುಣಿಗಲ್ ತಾಲೂಕು ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ 615 ಕೋಟಿ ರೂಪಾಯಿ ಹಣವನ್ನು ಬಿಜೆಪಿ ಸರ್ಕಾರ ತಡೆಹಿಡಿದಿದೆ ಎಂದು ಶಾಸಕ ಡಾ. ರಂಗನಾಥ್ ಆರೋಪಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಹಣವನ್ನು ಬಿಡುಗಡೆ ಮಾಡಿದ್ದರು. ಆದರೆ ಈ ಸರ್ಕಾರ ತಡೆಹಿಡಿದು ಅಭಿವೃದ್ದಿಯನ್ನು ಕಡೆಗಣಿಸಿದೆ ಎಂದರು.

ಕುಣಿಗಲ್ ತಾಲೂಕಿಗೆ ಹೇಮಾವತಿ ನೀರು ಹರಿಸುವಲ್ಲಿ ಅನ್ಯಾಯವಾಗಿದೆ. ಮಾರ್ಕೋನಹಳ್ಳಿ ಜಲಾಶಯಕ್ಕೆ 1 ಟಿಎಂಸಿ ಅಡಿ ನೀರು ಹರಿಸಬೇಕು. ಆದರೆ ಅದರ ಬಗ್ಗೆ ಸರ್ಕಾರ ಮೌನ ವಹಿಸಿದೆ ಎಂದು ದೂರಿದರು.

ತುಮಕೂರು ಜಿಲ್ಲೆಗೆ ಹೇಮಾವತಿಯಿಂದ 24.45 ಟಿಎಂಸಿ ನೀರು ಹರಿಸಬೇಕು. ಇದುವರೆಗೂ ಅಷ್ಟು ಪ್ರಮಾಣದ ನೀರು ಹರಿದುಬಂದಿಲ್ಲ. ಕುಣಿಗಲ್ ಗೆ ಸಿಗಬೇಕಾದ ನೀರನ್ನು ಹರಿಸಿಲ್ಲ ಎಂದು ಆಪಾದಿಸಿದರು.

ಮುಂದಿನ ದಿನಗಳಲ್ಲಿ ಹೇಮಾವತಿ ನೀರು ಹರಿಸದಿದ್ದರೆ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಸೇರಿ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು. ಕುಣಿಗಲ್ ಜನರಿಗೆ ನ್ಯಾಯವನ್ನು ಒದಗಿಸಲಾಗುವುದು ಎಂದರು.

Comment here