ತುಮಕೂರ್ ಲೈವ್

ಕೆರೆ ಮಾಯ…! ನಾಳೆ ನಾವು ಮಾಯ..!

ತುಳಸೀತನಯ

ತುಮಕೂರು:
ಇತ್ತೀಚಿನ ದಿನಗಳಲ್ಲಿ ಸಂಘ ಸಂಸ್ಥೆಗಳು ಸೇರಿದಂತೆ ಸರ್ಕಾರ ಜಲಸಂರಕ್ಷಣೆ ಮಾಡಬೇಕು ಎಂದು ಬೊಬ್ಬೆ ಹೊಡೆಯುತ್ತಿದೆ. ಇದಕ್ಕೆಂದೆ ಸಾಕಷ್ಟು ಹಣ ಕೂಡ ಪ್ರತೀ ವರ್ಷ ಖರ್ಚು ಮಾಡಲಾಗುತ್ತಿದೆ. ಆದರೆ ವಾಸ್ತವದಲ್ಲಿ ಮಾತ್ರ ಮಾಡಿದ ಉದ್ದೇಶ ಸಫಲವಾಗಿರುವುದಿಲ್ಲ. ಇದಕ್ಕೊಂದು ಜೀವಂತ ಉದಾಹರಣೆ ಜಿಲ್ಲೆ ಹಾಗೂ ತಾಲ್ಲೂಕು ಗಡಿಭಾಗದ ಅಕ್ಕಾಜಿಹಳ್ಳಿ ಕೆರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಫ್ತಿಗೆ ಬರುವ ಅಕ್ಕಾಜಿಹಳ್ಳಿ, ಗಡಿ ಗ್ರಾಮ. ಗ್ರಾಮದ ಸಮೀಪ ದೂರದಲ್ಲೆ ಚಿಕ್ಕಬಳ್ಳಾಪುರ, ಗೌರಿಬಿದನೂರು ತಾಲ್ಲೂಕಿನ ಗಡಿ ಇದೆ. ಅಕ್ಕಾಜಿಹಳ್ಳಿ ಗಡಿಗ್ರಾಮವಾಗಿರುವುದರಿಂದಲೋ ಏನೋ ಇಂದಿಗೂ ಯಾವುದೇ ಅಭಿವೃದ್ಧಿ ಕಾಣದೆ ಶಾಪಗ್ರಸ್ಥವಾಗಿಯೇ ಉಳಿದಿದೆ. ಗ್ರಾಮಕ್ಕೆ ಹೊಂದಿಕೊಂಡಂತೆ ನೀರಾವರಿ ಉದ್ದೇಶಕ್ಕಾಗಿ 1901ರಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ. ಪಂಚಾಯತ್ ರಾಜ್ ಇಲಾಖೆಗೆ ಒಳಪಟ್ಟಿರುವ, ನೂರು ವರ್ಷ ಪೂರೈಸಿರುವ ಕೆರೆ ನಿರ್ವಹಣೆ, ಪುನಶ್ಚೇತನ ಕಾಣದೆ ಇಂದು ಅಳಿವಿನಂಚಿಗೆ ತಲುಪಿದೆ. ಸುಮಾರು 12 ಎಕ್ಟೇರ್ ವಿಸ್ತೀರ್ಣ ಹೊಂದಿರುವ ಕೆರೆ ಭೂಗಳರ ಒತ್ತುವರಿಗೆ ಬಲಿಯಾಗಿದೆ. ಏರಿ ಮೇಲೆ ನಿಂತು ಒಂದು ಸಾರಿ ಕಣ್ಣಾಯಿಸಿದರೆ 12 ಎಕ್ಟೇರ್ ವಿಸ್ತೀರ್ಣ ಇರಬೇಕಿದ್ದ ಕೆರೆ ಒಂದಿಷ್ಟು ಪ್ರದೇಶ ಮಾತ್ರ ಕಣ್ಣಿಗೆ ಬೀಳುತ್ತದೆ. 4.8 ಎಂಟಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಕೆರೆಯ ತುಂಬೆಲ್ಲಾ ಬೃಹದಾಕಾರದ ಬೇಲಿ ಬೆಳೆದು ನಿಂತಿದೆ. ಈ ಹಿಂದೆ ಕೆರೆ ತುಂಬಿದಾಗ ಕೆರೆಯ ಹಿಂಭಾಗ ಸುಮಾರು 10 ಎಕ್ಟೇರಿಗೂ ಹೆಚ್ಚು ಅಚ್ಚುಕಟ್ಟು ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿತ್ತು. ಮಳೆ, ಬೇಸಿಗೆಗಾಲ ಎನ್ನದೇ ಸದಾ ಕಾಲ ರೈತರು ಈ ಭಾಗದಲ್ಲಿ ವ್ಯವಸಾಯ ಮಾಡುತ್ತಿದ್ದರು. ಭತ್ತದ ಗದ್ದೆ, ಜೋಳದ ಬೆಳೆಗಳು ಕಣ್ಣುಕೋರೈಸುವಂತೆ ಕಾಣುತ್ತಿದ್ದವು. ಆದರೀಗ ಕೆರೆಗೆ ನೀರಿಲ್ಲದೆ ಇಡೀ ಅಚ್ಚುಕಟ್ಟು ಪ್ರದೇಶ ಬರಡು ಭೂಮಿಯಂತಾಗಿದೆ.


ಕೆರೆ ಈ ರೀತಿ ದುಸ್ಥಿತಿ ತಲುಪಲು ನಿರ್ವಹಣೆ ಮಾಡದಿರುವುದೇ ಕಾರಣ ಎಂದು ಈ ಭಾಗದ ರೈತರು ಆರೋಪಿಸುತ್ತಾರೆ. ಆಗೋ, ಇಗೋ ಎಂಬಂತೆ ಯಾವಾಗಲೋ ಒಂದು ವರ್ಷ ಕೆರೆ ನಿರ್ವಹಣೆ ಹೆಸರಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ಬಿಲ್ ಮಾಡಿಕೊಂಡಿರುವುದು ಬಿಟ್ಟರೆ ಶಾಶ್ವತವಾದ ಒಂದೂ ಕೆಲಸ ಇಲ್ಲಿವರೆಗೆ ಮಾಡಿಲ್ಲ. ಕಳೆದ ಏಳೆಂಟು ವರ್ಷದಿಂದ ಯಾವುದೇ ನಿರ್ವಹಣೆ ಇಲ್ಲದಿದ್ದ ಕಾರಣಕ್ಕೆ ಕೆರೆ ಏರಿಯ ಮೇಲೆ ಬೃಹದಾಕಾರದ ಬೇಲಿಗಳು ಬೆಳಿದು ನಿಂತಿದ್ದವು. ಅವುಗಳನ್ನು ಈ ಬಾರಿ ಬೇಸಿಗೆಯಲ್ಲಿ ಕತ್ತರಿಸುವ ಕೆಲಸ ಹಾಗೂ ಏರಿಗೆ ಮಣ್ಣು ಹಾಕುವ ದೃಷ್ಟಿಯಿಂದ ರೂ. 1 ಲಕ್ಷ ಪಂಚಾಯತ್ ರಾಜ್ ಇಲಾಖೆ ಬಿಡುಗಡೆ ಮಾಡಿತ್ತು. ಅದರಂತೆ ಕೆಲಸ ಕಾಟಾಚಾರಕ್ಕೆ ಮಾಡಿ ಮುಗಿಸಿ ಬಿಲ್ ಮಾಡಿಕೊಳ್ಳಲಾಗಿದೆಯೇ ಹೊರತು, ಕಾಮಗಾರಿ ಒಂದೊಮ್ಮೆ ಈಗ ವೀಕ್ಷಿಸಿದವರಿಗೆ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇಲ್ಲಿ ಏನು ಕೆಲಸ ಮಾಡಿದ್ದಾರೆ ಎಂಬುದಕ್ಕೆ ಇಲ್ಲಿ ಈಗ ಯಾವುದೇ ಕುರುಹುಗಳು ಸಿಗುವುದಿಲ್ಲ. ಅಷ್ಟರ ಮಟ್ಟಿಗೆ ಕಳಪೆ ಕೆಲಸ ಮಾಡಿ ಮುಗಿಸಿದ್ದಾರೆ. ಅವೈಜ್ಞಾನಿಕವಾಗಿ ಏರಿಗೆ ಮಣ್ಣು ಹಾಕಿ ತೇಪೆ ಹಾಕಲಾಗಿದ್ದು, ಏರಿಯಮೇಲೆ ನೀರು ನಿಲ್ಲುತ್ತಿದೆ. ಜೊತೆಗೆ ಹಾಕಿರುವ ಮಣ್ಣು ಅಲ್ಲಲ್ಲಿ ಮಳೆ ನೀರಿಗೆ ಕೊರೆದು ಹೋಗಿದೆ. ಬೃಹದಾಕಾರದ ಬೇಲಿ ಸರಿಯಾಗಿ ತೆಗೆಯದ ಕಾರಣ ಮೂರೇ ತಿಂಗಳಲ್ಲಿ ಯಥಾ ಸ್ಥಿತಿಗೆ ಬೇಲಿ ಬೆಳೆದು ನಿಂತಿದೆ. ಇದರಿಂದಾಗಿ ಅಷ್ಟೋ ಇಷ್ಟೋ ಓಡಾಡಲು ಸುಗಮವಾಗಿದ್ದ ಏರಿ ಮೇಲಿನ ರಸ್ತೆ ಈಗ ಓಡಾಡಲೂ ಆಗದ ಸ್ಥಿತಿಗೆ ತಲುಪಿದೆ. ಇದೇ ಏರಿ ಮೇಲೆ ಅಕ್ಕಾಜಿಹಳ್ಳಿಯಿಂದ ಅವದಾರನಹಳ್ಳಿ, ದೊಡ್ಡಪಾಳ್ಯಕ್ಕೆ ಪ್ರತಿನಿತ್ಯ ಓಡಾಡುವವರು ಇದ್ದಾರೆ. ಏರಿಯ ಈ ದುಸ್ಥಿಯಿಂದ ಈಗ ದಾರಿಹೋಕರು ಪರದಾಡುವಂತಾಗಿದೆ ಎಂಬುದು ಈ ಭಾಗದ ಜನರ ಆಂಬೋಣ.
ಇನ್ನೂ ಕೆರೆಗೆ ನೀರು ತುಂಬುವ ಮೂಲಗಳೂ ಕೂಡ ಒತ್ತುವರಿಗೆ ಬಲಿಯಾಗಿರುವುದು ಒಂದೆಡೆಯಾದರೆ, ಇತ್ತೀಚೆಗೆ ಉತ್ತಮ ಮಳೆಯಾಗದಿರುವುದು ಕೆರೆ ತುಂಬುತ್ತಿಲ್ಲ. ಜೊತೆಗೆ ಕೆರೆಗೆ ನೀರೊದಗಿಸುವ ಹಳ್ಳಗಳಿಗೆ ಅಡ್ಡಲಾಗಿ ಚಕ್ ಡ್ಯಾಂಗಳ ನಿರ್ಮಾಣ ಕೆರೆ ತುಂಬಲು ತೊಡಕಾಗಿದೆ. ಆದರೆ ಕೆರೆ ಸರಿಯಾದ ರೀತಿಯಲ್ಲಿ ಆಗಿದ್ಹಾಗೆ ಪುನಶ್ಚೇತನ, ನಿರ್ವಹಣೆ ಮಾಡಿದ್ದರೆ ಈ ವರ್ಷ ಹಾಗೂ ಕಳೆದ ಮೂರು ವರ್ಷದ ಹಿಂದೆ ಉತ್ತಮ ಮಳೆಗೆ ಕೆರೆ ತುಂಬುತ್ತಿತ್ತು. ನೀರು ಸಂರಕ್ಷಣೆ ಮಾಡಲು ಸರ್ಕಾರ ಬೊಬ್ಬೆ ಹೊಡೆಯುತ್ತಿವೆ ಹೊರತು ವಾಸ್ತವದ ಚಿತ್ರಣ ಮಾತ್ರ ಬದಲಾಗುತ್ತಿಲ್ಲ. ಅಕ್ಕಾಜಿಹಳ್ಳಿ ಕೆರೆಗೆ ಕೂಗಳತೆ ದೂರದಲ್ಲಿರುವ ಬೊಮ್ಮಲದೇವಿಪುರ ಕೆರೆ ಕೂಡ ನೂರು ವರ್ಷಗಳು ಪೂರೈಸಿದೆಯಾದರೂ ಮೇಲ್ಕಾಣಿಸಿದ ಯಾವುದೇ ಸಮಸ್ಯೆಯಿಂದ ಹೊರತಾಗಿಲ್ಲ. ಏರಿ ಒಂದನ್ನು ಬಿಟ್ಟು ಇಲ್ಲಿ ಕೆರೆ ಇತ್ತೆಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲದಷ್ಟರ ಮಟ್ಟಿಗೆ ಒತ್ತುವರಿಗೆ ಬಲಿಯಾಗಿದೆ.

ಪಂಚಾಯತ್ ರಾಜ್ ಇಲಾಖೆಗೆ ತಾಲ್ಲೂಕಿನಲ್ಲಿ ಒಟ್ಟು 87 ಕರೆಗಳು ಒಳಪಡುತ್ತವೆ. ವರ್ಷಕ್ಕೆ 14 ರಿಂದ 15 ಲಕ್ಷ ಹಣ ಅನುದಾನ ಮಾತ್ರ ನಿರ್ವಹಣೆಗೆಂದು ನೀಡಲಾಗುತ್ತಿದೆ. ಸಮರ್ಪಕ ಅನುದಾನದ ಕೊರತೆಯಿಂದಾಗಿ ಕೆರೆಗಳ ನಿರ್ವಹಣೆ ಕಷ್ಟವಾಗುತ್ತಿದೆ. ಹಾಗಾಗಿ ಬಹಳಷ್ಟು ಕೆರೆಗಳು ನಿರ್ವಹಣೆ, ಪುನಶ್ಚೇತನ ಆಗದೇ ನೀರು ಸಂಗ್ರಹಣೆಯಾಗುತ್ತಿಲ್ಲ. ಪ್ರತೀ ವರ್ಷ ಮಳೆ ಸರಿಯಾಗಿ ಆಗುವುದಿಲ್ಲ. ಅಪರೂಪಕ್ಕೆ ಆಗುವ ಮಳೆ ನೀರು ಕೆರೆ ನಿರ್ವಹಣೆ ಇಲ್ಲದ ಕಾರಣಕ್ಕೆ ಸಂಗ್ರಹವಾಗದೇ ಕೆಲವೊಮ್ಮೆ ಪೋಲಾಗುತ್ತದೆ. ಸರ್ಕಾರ ಇಲಾಖಾ ಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಲ್ಲಿ ನಿರ್ವಹಣೆ ಸಾಧ್ಯ ಎನ್ನುತ್ತಾರೆ ಪಂಚಾಯತ್ ರಾಜ್ ಇಲಾಖೆ ಎಇಇ ಮಂಜುನಾಥ.

Comment here