ತುಮಕೂರ್ ಲೈವ್

ಕೊರೊನಾ: ಇಂಥ ಸೌಭಾಗ್ಯ ನಮ್ಗೂ ಕೊಡಿ ಡಾಕ್ಟರ್ ಸಚಿವರೇ

Publicstory


ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಕೋವಿಡ್ ರೋಗಿಗಳಿಗೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡುವಂತೆ ಹೊರಡಿಸಿರುವ ಆದೇಶವನ್ನು ಇತರೆ ಸೆಟಲೈಟ್ ಸಿಟಿಗಳಿಗೂ ವಿಸ್ತರಿಸುವ ಕೆಲಸವನ್ನು ಆರೋಗ್ಯ ಸಚಿವ (ಡಾಕ್ಟರ್ ಸಚಿವ) ಡಾ. ಸುಧಾಕರ್ ಮಾಡುವ ಧೈರ್ಯ ತೋರಬೇಕಾಗಿದೆ.

ಬೆಂಗಳೂರಿನ ಕೊಲಂಬಿಯಾ ಏಷ್ಯಾ, ಸಿಎಂಐ, ಬ್ಯಾಪಿಸ್ಟ್ ಆಸ್ಪತ್ರೆಗಳ ಶೇ 15 ರಷ್ಟು ಹಾಸಿಗೆಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕೋವಿಡ್ ರೋಗಿಗಳಿಗೆ ಮೀಸಲಿಟ್ಟುಕೊಂಡಿರಬೇಕು ಎಂದು ಆರೋಗ್ಯ ಸಚಿವರ ಮೌಖಿಕ ಸೂಚನೆ ಮೇರೆಗೆ ಆದೇಶ ಹೊರಡಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಗೆ ನೀಡಿರುವ ಈ ಸೌಲಭ್ಯವನ್ನು ಬೆಂಗಳೂರು ಸುತ್ತಮುತ್ತಲಿನ ಎಲ್ಲ ಸೆಟಲೈಟ್ ಸಿಟಿಗಳಿಗೂ ವಿಸ್ತರಿಸಿ ಸಚಿವರು ಪುಣ್ಯ ಕಟ್ಟಿ ಕೊಳ್ಳಬೇಕಾಗಿದೆ‌.

ಬೆಂಗಳೂರಿನ ಜನಸಂಖ್ಯೆಗೆ ಹೋಲಿಸಿಕೊಂಡರೆ ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚಾಗಿದೆ. ಶೇ 17 ರಷ್ಟು ಇಲ್ಲಿ ಹೆಚ್ಚಾಗುತ್ತಿದೆ.

ತುಮಕೂರು ರಾಜ್ಯದ 21 ಜಿಲ್ಲೆಗಳ ಹೆಬ್ಬಾಗಿಲು. ಬೆಂಗಳೂರಿನ ಜತೆ ನಿಕಟ ಸಂಪರ್ಕ ಹೊಂದಿರುವ ಬೆಂಗಳೂರಿ‌ನ ಸೆಟಲೈಟ್ ಸಿಟಿ. ಇಲ್ಲೂ ಸೌಲಭ್ಯಗಳಿಲ್ಲದೇ ಜನರು ಒದ್ದಾಡುತ್ತಿದ್ದಾರೆ. ಸಾವು ನೋವು ಹೆಚ್ಚಾಗುತ್ತಿದೆ.

ತುಮಕೂರಿನಿಂದ ಬೆಂಗಳೂರಿಗೆ ಹೋಗುವಾಗ ಮಾರ್ಗಮಧ್ಯೆ ಸಿಗುವ ಎಂ.ಎಸ್.ರಾಮಯ್ಯ-ಹರ್ಷ ಆಸ್ಪತ್ರೆ, ಪೀಪಲ್ ಟ್ರೀ, ಪ್ರೊಕ್ರಿಯಾ, ಸ್ಪರ್ಷ ಆಸ್ಪತ್ರೆಗಳಲ್ಲಿ ತುಮಕೂರಿನ ರೋಗಿಗಳಿಗಾಗಿ ಶೇ 15 ರಷ್ಟು ಹಾಸಿಗೆ ಮೀಸಲಿಡುವಂತೆ ಸಚಿವರು ಆದೇಶ ಹೊರಡಿಸಲಿ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೂಡಲೇ ಗಮನ ಹರಿಸಬೇಕಾಗಿದೆ.

ಇನ್ನೂ, ಬೆಂಗಳೂರಿಗೆ ಹತ್ತಿರದಲ್ಲಿರುವ ಕೆಂಗೇರಿ, ರಾಮನಗರ, ಗೌರಿಬಿದನೂರು, ದೊಡ್ಡಬಳ್ಳಾಪುರ, ದಾಬಸಪೇಟೆ, ನೆಲಮಂಗಲದ ರೋಗಿಗಳಿಗೂ ಅನುಕೂಲವಾಗುವಂತೆ ಆಯಾ ಪಟ್ಟಣಗಳಿಂದ ಬೆಂಗಳೂರಿಗೆ ಬರುವಾಗ ಸಿಗುವ ಎಲ್ಲ ಆಸ್ಪತ್ರಗಳಲ್ಲು ಶೇ 15 ರಷ್ಟು ಹಾಸಿಗೆ ಮೀಸಲಿಡುವ ಆದೇಶಕ್ಕೆ ಸಚಿವರು ಮುಂದಾಗಬೇಕಾಗಿದೆ.

ಚಿಕ್ಕಬಳ್ಳಾಪುರದ ಜನರಷ್ಟೇ ಅಲ್ಲ ಈ ಎಲ್ಲ ನಗರಗಳ ಜ‌ನರ ಜೀವ ಉಳಿಸಿದ ಪುಣ್ಯ ಸಚಿವರಿಗೆ ಸಿಗಲಿದೆ. ಆದರೆ ಅವರು ಈ ಪುಣ್ಯಕ್ಕೆ ಬೇಕಾಗುವಷ್ಟು ಧೈರ್ಯ ತೋರಿಸುವವರೇ ಎಂಬುದನ್ನು ಕಾದುನೋಡಬೇಕಾಗಿದೆ.

Comment here