ತುಮಕೂರು ಲೈವ್

‘ಕೊರೊನಾ ಖರೀದಿ’ ಕಿಕ್ ಬ್ಯಾಕ್ ಆರೋಪ: ತನಿಖೆ ಆರಂಭಿಸಿದ ACB

Publicstory. in


ತುಮಕೂರು: ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕೊರೊನಾ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರದ ಆರೋಪದ ತನಿಖೆಗೆ ಎಸಿಬಿ ಪೀಲ್ಡಿಗೆ‌ ಇಳಿದಿದೆ.

ಈ ಆರೋಪಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಡಿಎಚ್ಒ ಡಾ ಚಂದ್ರಿಕಾ ಅವರನ್ನು ಸರ್ಕಾರ ಈಗಾಗಲೇ ವರ್ಗಾವಣೆ ಮಾಡಿದೆ. ಅಲ್ಲದೆ ಪದೋನ್ನತಿ ನೀಡಿ ಉಪ ನಿರ್ದೇಶಕರ ಹುದ್ದೆಗೆ ಕೂರಿಸಿದೆ.

ಚಂದ್ರಿಕಾ ಅವರ ವರ್ಗಾವಣೆ ಜಾತಿ ಕೇಂದ್ರಿತ ಎಂಬ ಗಂಬೀರ ಆರೋಪವನ್ನು ಜಿಲ್ಲೆಯ ದಲಿತ ಸಮುದಾಯ ಈಗಾಗಲೇ ಮಾಡಿದೆ.‌

ವರ್ಗಾವಣೆ ಹಿಂದೆ ಪಟ್ಟಭಧ್ರ ಕೆಲವು ಅಧಿಕಾರಿಗಳು, ಕೆಲವು ರಾಜಕಾರಣಿಗಳು
ಚಿತಾವಣೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ದಲಿತ ಅಧಿಕಾರಿಗಳನ್ನು ಕೆಲಸ ಮಾಡಲು ಬಿಡುತ್ತಿಲ್ಲ. ದಕ್ಷ ದಲಿತ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ ಎಂಬ ದಲಿತ ಮುಖಂಡರ ಮತ್ತು ಸಂಘಟನೆಗಳ ಗಂಭೀರ ಆರೋಪದ ನಡುವೆಯೇ ಎಸಿಬಿ ತನ್ನ ತನಿಖೆಯನ್ನು ಚುರುಕುಗೊಳಿಸಿದೆ.

ಸರಕಾರ ಯಾವುದೇ ತನಿಖೆ ನಡೆಸದೆ ಅಧಿಕಾರಿಯನ್ನು ಏಕಾಏಕಿ ವರ್ಗಾವಣೆ ಮಾಡಿದ್ದು ತಪ್ಪು ಎಂದು ಅನೇಕರು ಹೇಳುತ್ತಿದ್ದಾರೆ.‌

ಇಲಾಖೆಯಲ್ಲಿ ಕೇಳಿ ಬಂದಿರುವ ಆರೋಪಗಳ ಕುರಿತು ತನಿಖೆ ನಡೆಸಬೇಕೆಂದು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಾದಿಕ್ ಪಾಷ‌ ದೂರಿನ ಹಿನ್ನೆಲೆಯಲ್ಲಿ ಜೂನ್ 5ರಂದು ತನಿಖೆಗೆ ಹಾಜರಾಗುವಂತೆ ಚಂದ್ರಿಕಾ ಅವರಿಗೆ ಎಸಿಬಿ ನೋಟಿಸ್ ನೀಡಿದೆ.

ಪಿಪಿಇ ಕಿಟ್ ಗಳು, ಸ್ಯಾನಿಟೈಸರ್ ಮತ್ತು ಜ್ವರ ಪರೀಕ್ಷೆ ಮಾಡುವ ಮಾಪನವನ್ನು ಕೇಂದ್ರೀಕೃತ ಖರೀದಿ ಮೂಲಕ ಖರೀದಿಸಲಾಗಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ.

ಈಗಿನ ವ್ಯವಸ್ಥೆಯಲ್ಲಿ ಕೇಂದ್ರೀಕೃತ ಖರೀದಿಗೆ ಅವಕಾಶ ಇಲ್ಲ. ಆಯಾ ಪ್ರಾಥಮಿಕ ಕೇಂದ್ರಗಳ ವೈದ್ಯಾಧಿಕಾರಿಗಳು ತಮಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಬೇಕಾಗಿದೆ.
ಆದರೆ ಅದಕ್ಕೆ ಅವಕಾಶ ನೀಡದೆ ಏಜೆನ್ಸಿಯೊಂದಕ್ಕೆ ಸರಬರಾಜು ಮಾಡಲು ಅವಕಾಶ ನೀಡಿದ್ದಾರೆ. ಸಾಕಷ್ಟು ಸಾಮಗ್ರಿಗಳು ಬರುವುದಕ್ಕೂ ಮುನ್ನವೇ ಬಿಲ್ ಪಾವತಿಸಲಾಗಿದೆ ಎಂದು ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಗಂಭೀರ ಆರೋಪ ಮಾಡಿದ್ದರು.

ಈ ಆರೋಪಗಳ ಹಿನ್ನೆಲೆಯಲ್ಲಿ ಡಾಕ್ಟರ್ ಚಂದ್ರಿಕಾ ಅವರನ್ನು ಹೊಸದುರ್ಗ ತಾಲ್ಲೂಕು ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು .ಆದರೆ ಅವರು ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಅವರನ್ನು ಆರೋಗ್ಯ ಇಲಾಖೆಯ ಉಪ ನಿರ್ದೇಶಕರನ್ನಾಗಿ ಮುಂಬಡ್ತಿ ನೀಡಿ ಸರ್ಕಾರ ಆದೇಶಿಸಿದ್ದು ಸಹ ಹಲವರು ಹುಬ್ಬೇರುವಂತೆ ಮಾಡಿತ್ತು.

ಚಂದ್ರಿಕಾ ಅವರ ವರ್ಗಾವಣೆ ವಿಷಯ ಜಾತಿ ಕೇಂದ್ರಿತ ವಾಗುತ್ತಿದ್ದಂತೆ ಆ ವಿಚಾರದಿಂದ ರಾಜಕಾರಣಿಗಳು ದೂರ ಉಳಿಯುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ‌ ಹಾಗೂ ಸಂಸದರೊಬ್ಬರ ಕೊರಳಿಗೆ ಈ ಆರೋಪ ಸಿಲಿಕಿದೆ.

ಒಕ್ಕಲಿಗ ಅಧಿಕಾರಿಗಳಿಗೂ ಕಿರುಕುಳ ನೀಡಿ ಜಿಲ್ಲೆಯಿಂದ ಹೊರ ಹಾಕಲಾಗುತ್ತಿದೆ. ವರ್ಗಾವಣೆ ಆಗಿ ಬಂದವರನ್ನು ಅಧಿಕಾರ ವಹಿಸಿಕೊಳ್ಳಲು ಬಿಡುತ್ತಿಲ್ಲ ಎಂಬ ಆರೋಪವೂ ಗಟ್ಟಿಗೊಳ್ಳ ತೊಡಗಿದೆ. ಇದು‌ ಜಿಲ್ಲೆಯಲ್ಲಿ ಸರ್ಕಾರಿ ಸಿಬ್ಬಂದಿ ನಡುವೆ ಕೆಟ್ಟ ಪರಿಣಾಮವನ್ನೇ ಬೀರತೊಡಗಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಚಂದ್ರಿಕಾ ಅವರ ಮೇಲೆ ಕೇಳಿ ಬಂದ ಆರೋಪ ಕುರಿತು ಕೆಟಿಪಿಪಿ ಕಾಯ್ದೆ ಅನುಸಾರ ತನಿಖೆ ಕೈಗೊಂಡು ಅದರ ವರದಿ ಬರುವವರೆಗೂ ಏನನ್ನು ಹೇಳುವುದು ಸರಿ‌ ಅಲ್ಲ.‌ ಪ್ರಾಮಾಣಿಕ ಅಥವಾ ಅಪ್ರಾಮಾಣಿಕ ಅಧಿಕಾರಿಗಳ ವಿಷಯದಲ್ಲಿ‌ ಪದೇ ಪದೇ ಜಾತಿ ಕೇಂದ್ರಿತವಾಗಿ ನೋಡುವುದನ್ನು ರಾಜಕಾರಣಿಗಳು ಸಹಿತ ಎಲ್ಲರೂ ಬಿಡಬೇಕಾಗಿದೆ.

ಒಂದು ಸಮುದಾಯದ ಸರ್ಕಾರಿ ನೌಕರರು, ಅಧಿಕಾರಿಗಳನ್ನು ಮೂಲೆ ಗುಂಪು ಮಾಡುವುದು‌ ಅಥವಾ ವರ್ಗಾವಣೆ‌ ಶಿಕ್ಷೆ ಅಥವಾ ಆರೋಪ ಮಾಡಿಸುವುದನ್ನು ಸಹ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೈ ಬಿಡಬೇಕು.


ಎಲ್ಲ ಜಾತಿಗಳಲ್ಲೂ ಪ್ರಾಮಾಣಿಕ, ಅಪ್ರಾಮಾಣಿಕ ಅಧಿಕಾರಿಗಳು ಇರುತ್ತಾರೆ ಎಂಬುದನ್ನು ಯಾರೂ ಮರೆಯಬಾರದು. ಇದನ್ನು ಜಿಲ್ಲೆಯ ಬೆವರು ಹನಿ ಪತ್ರಿಕೆಯ ಸಂಪಾದಕರಾದ ಕುಚ್ಚಂಗಿ ಪ್ರಸನ್ನ ತುಂಬಾ ಚೆನ್ನಾಗಿ ಬರೆದಿದ್ದಾರೆ.


ಚಂದ್ರಿಕಾ ಅವರ‌ ಮೇಲೆ ಆರೋಪ ಕೇಳಿ ಬಂದ ಕ್ಷಣವೇ ವರ್ಗಾವಣೆ ಮಾಡಿದ್ದು ಸಹ ತಪ್ಪೇ. ಆದರೆ ಈ ಸಂದರ್ಭದಲ್ಲಿ ಶೀಘ್ರದಲ್ಲೇ ತನಿಖೆಗೆ ಆದೇಶಿಸಿ ಕೆಟಿಪಿಪಿ ಕಾಯ್ದೆಯಂತೆ ನಡೆದುಕೊಂಡಿದ್ದರೆ ಸರ್ಕಾರದ ಮೇಲೆ ವಿಶ್ವಾಸ ಹೆಚ್ಚುತ್ತಿತ್ತು.

ಮೇಲ್ನೋಟದ ಪ್ರಾಥಮಿಕ ತನಿಖೆಯನ್ನು ಸಹ ನಡೆಸದೆ ಅಧಿಕಾರಿಯನ್ನು ವರ್ಗ ಮಾಡಿದ್ದು ಏಕೆ ಎಂದು ದಲಿತ ಮುಖಂಡರು ಪ್ರಶ್ನಿಸುತ್ತಿದ್ದಾರೆ.ಇನ್ನೊಂದೆಡೆ ಚಂದ್ರಿಕಾ ಅವರು ವರ್ಗಾವಣೆಯಾದ ಸ್ಥಾನಕ್ಕೆ ಯಾವುದೇ ಆಡಳಿತದ ಹೆಚ್ಚು ಅನುಭವ ಇಲ್ಲದ ಡಾಕ್ಟರ್ ನಾಗೇಂದ್ರಪ್ಪ ಅವರನ್ನು ಡಿಎಚ್ಒ ಸ್ಥಾನಕ್ಕೆ ಕೂರಿಸಿದ್ದು ಸಹ ವರ್ಗಾವಣೆ ಹಿಂದೆ ಜಾತಿ ವಾಸನೆ ಹೆಚ್ಚು ಮಾಡಲು ಕಾರಣವಾಯಿತು.

Comment here