Publicstory. in
Tumkuru: ಜಗತ್ತಿನ ಎಲ್ಲರಿಗೂ ಕೊರೊನಾ ಸೋಂಕು ದುಃಖದ ಮೂಟೆಯನ್ನೇ ತಂದು ಸುರಿಸಿದೆ.
ಪ್ರಾಣ ಕಳಕೊಂಡವರ ಕುಟುಂಬದವರ ನೋವು ಹೇಳತೀರದು. ಕೊರೊನಾ ತೊಲಗಲಿ ಎಂದು ದೇವರಿಗೆ ಮೊರೆ ಇಟ್ಟವರ ಸಂಖ್ಯೆಗೇನು ಕಡಿಮೆ ಇಲ್ಲ.
ಆದರೆ ಇಲ್ಲೊಂದು ಕುಟುಂಬಕ್ಕೆ ಕಳೆದು ಹೋಗಿದ್ದ ಮಗನನ್ನು ಕೊರೊನಾ ತಂದುಕೊಟ್ಟಿದೆ.
ಈ ಕುಟುಂಬದ ಸಂತಸಕ್ಕೀಗ ಪಾರವೇ ಇಲ್ಲ. ಜಗತ್ತಿನ, ದೇಶದ ಎಷ್ಟೋ ಮನೆಗಳಲ್ಲಿ ಇಂಥ ಘಟನೆಗಳು ನಡೆದಿರಬಹುದೇನೋ?
ಹಾರಿಹೋದ ಹಣತೆಯೀಗ ಬೆಳಗುತ್ತದೆ. ಮಗನ ನಿರೀಕ್ಷೆಯೇ ಬಿಟ್ಟಿದ್ದ ತಂದೆಗೆ ಮಗ ಮನೆಯ ಮುಂದೆ ನಿಂತಾಗ ಆದ ಸಂತಸ ಅಷ್ಟಿಷ್ಟಲ್ಲ.
ಆದರೆ ಈ ಸಂತಸದಲ್ಲಿ ಮಗನನ್ನು ತಬ್ಬಿಕೊಳ್ಳುವ ಸುಖ ಮಾತ್ರ ತಂದೆ ತಾಯಿಗೆ ಸಿಕ್ಕಿಲ್ಲ. ಮನೆ ಬಾಗಿಲಿಗೆ ಬಂದಿರುವ ಮಗ ಕೊರೊನಾ ಪರೀಕ್ಷೆ ಎದುರಿಸಿ ಮನೆಯೊಳಗೆ ಕಾಲಿಡಬೇಕಾಗಿದೆ. ಕೊರೊನಾ ಕ್ವಾರಂಟೈನ್ ನಲ್ಲಿ ಮಗ ಇದ್ದಾನೆ.

ಆಗಿದ್ದಿಷ್ಟೇ
ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಗುನ್ನಾಗರೆ ಗ್ರಾಮದ ಕೃಷ್ಣಪ್ಪ ಅವರ ಮಗ ರಂಗಸ್ವಾಮಿ 2011ರಲ್ಲಿ ಮನೆಯಿಂದ ನಿಗೂಢವಾಗಿ ಕಾಣೆಯಾಗಿದ್ದ.
ಪಟ್ಟಣದ ಜ್ಞಾನಭಾರತಿ ಶಾಲೆಯ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಆತ ಶಾಲೆಗೆ ಹೋದವನು ವಾಪಸ್ ಆಗಿರಲಿಲ್ಲ. ಪೊಲೀಸರಿಗೆ ದೂರು ನೀಡಿದ ಬಂತರವೂ ಮಗನನ್ನು ಹುಡುಕಲಾಗದೇ ದಂಪತಿ ಕೈ ಚೆಲ್ಲಿದ್ದರು.
ಇಷ್ಟು ವರ್ಷ ಕಾಲ ಸಣ್ಣ ಸುಳಿವು ಇಲ್ಲದ ಕಾರಣ ಮಗ ಬದುಕಿರುವ ಬಗ್ಗೆಯೂ ಅವರಿಗೆ ಅನುಮಾನ ಇತ್ತು.
ಶುಕ್ರವಾರ ರಾತ್ರಿ ರಂಗಸ್ವಾಮಿ ತನ್ನ ಅಜ್ಜಿಯಮನೆ ( ಶೆಟ್ಟಿಗೆರೆಗೆ) ಬಂದಾಗ ಅವರಿಗೂ ಅಚ್ಚರಿ.
ಯಾರಿವ, ಯಾರಿವ ಎಂದಾಗ, ನಾ ಅವನೇ, ನಾ ಅವನೇ ಎಂದು ಪರಿಚಯ ಹೇಳಿಕೊಂಡಿದ್ದಾನೆ ರಂಗಸ್ಚಾಮಿ.
ನಂತರ ಅಜ್ಜಿ ಮನೆಯವರು ಸೀದಾ ತಂದೆ ಮನೆಗೆ ವಿಷಯ ಮುಟ್ಟಿಸಿದ್ದಾರೆ.
ಬಾಲ್ಕಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ರಂಗಸ್ವಾಮಿ ಕೊರೊನಾದಿಂದ ಕೂಲಿ ಕೆಲಸ ಸಿಗದೇ ಕಂಗಾಲಾಗಿ ಊರಿಗೆ ಮರಳಿದ್ದಾಗಿ ಹೇಳಿದ್ದಾನೆ.
ಮರಳಿ ಮಣ್ಣಿಗೆ ಬಂದ ಮಗನ ಕಂಡು ಕುಟುಂಬ ಸಂತಸದಲ್ಲಿದೆ. ಎಸ್ ಎಸ್ ಎಲ್ ಸಿ ಓದುತ್ತಿದ್ದವನು ಸೀದಾ ಪಾದ ಎಲ್ಲೆಲ್ಲಿಗೋ ಹೋಗಿದ್ದೇಕೆ? ಇಷ್ಟು ವರ್ಷ ಇಲ್ಲದ ಪ್ರೀತಿ ಕೊರೊನಾ ಮೂಡಿಸಿದ್ದೇಗೆ ಎಂಬುದನ್ನು ಆತ ಕ್ವಾರಂಟೈನ್ ನಿಂದ ಬಂದ ಬಳಿಕವೇ ತಿಳಿದುಕೊಳ್ಳಬೇಕಿದೆ.
ಮಹಾರಾಷ್ಟ್ರ ಗಡಿ ಭಾಗದಿಂದ ಬಂದಿರುವ ಕಾರಣ ಪೋಷಕರೆ ಎಚ್ಚೆತ್ತು , ಹತ್ತು ವರ್ಷದ
ನಂತರ ಬಂದ ಮಗನನ್ನು ಮನೆಗೆ ಸೇರಿಸದೆ, ಕೊರೊನಾ ಭೀತಿಯಿಂದ ಆರೋಗ್ಯ ತಪಾಸಣೆಗೆ ವಹಿಸಿದ್ದಾರೆ.
ಹುಲಿಯೂರು ದುರ್ಗದ
ಹೇಮಗಿರಿಬೆಟ್ಟದ ಬಳಿಯ ವಸತಿ ಶಾಲೆಗೆ ಕ್ವಾರಂಟೈನ್ ಮಾಡಲಾಗಿದೆ.
Comment here