ತುಮಕೂರು ಲೈವ್

ಕೊರೊನಾ: 1 ಕೋಟಿ‌ ಜನರು ತಟ್ಟೆ, ಲೋಟ ಬಡಿದರು ಏಕೆ?

Publicstory. in


Tumkuru: ಕೊರೊನಾ ವಿರುದ್ಧ‌‌ ಸೆಣಸಾಡುತ್ತಿರುವ ವೈದ್ಯರು, ವೈದ್ಯ ಸಿಬ್ಬಂದಿಗೆ ಬೇಧಭಾವ ಇಲ್ಲದೇ ಎಲ್ಲರೂ ಚಪ್ಪಾಳೆ ತಟ್ಟಿದ್ದು ಎಲ್ಲರಿಗೂ ಗೊತ್ತು.

ಈಗ ರಾಜ್ಯದಲ್ಲಿ ಸದ್ದಿಲ್ಲದೇ ತಟ್ಟೆ, ಲೋಟ ಬಡಿಯುವ ಚಳವಳಿ ರಾಜ್ಯದ ಎಲ್ಲ ಕೊಳೆಗೇರಿಗಳಲ್ಲಿ ನಡೆದಿದೆ.

ಕೊರೊನಾ ಪ್ಯಾಕೆಜ್ ನಲ್ಲಿ ರಾಜ್ಯ ಸರ್ಕಾರ ಸ್ಲಂ ಜನರನ್ನು ಕಡೆಗಣಿಸಿರುವುದೇ ಇದಕ್ಕೆ ಕಾರಣ. ಸರ್ಕಾರದ ತಾರತಮ್ಯದ ವಿರುದ್ಧ ಕೆಂಡ ಕಾರುತ್ತಿರುವ ಕೊಳೆಗೇರಿ ಜನರು ರಾಜ್ಯ ಕೊಳೆಗೇರಿ ಹಿತಾ ರಕ್ಷಣಾ ಸಮಿತಿ ನೇತೃತ್ವದ ಲ್ಲಿ ಮಂಗಳವಾರ ತಟ್ಟೆ, ಲೋಟ ಬಡಿಯುವ ಚಳವಳಿಗೆ ಚಾಲನೆ ನೀಡಿದ್ದಾರೆ.

ರಾಜ್ಯದಲ್ಲಿ ಘೋಷಿತ, ಘೋಷಿತವಲ್ಲದ ಕೊಳೆಗೇರಿಗಳಲ್ಲಿ 1 ಕೋಟಿ ಜನರು ವಾಸವಿದ್ದಾರೆ. ರಾಜ್ಯ ಸರ್ಕಾರ ಎಲ್ಲ ಜನರಿಗೂ ಕೋವಿಡ್ ಪರಿಹಾರ ನೀಡಿ, ಕೊಳೆಗೇರಿ ಜನರನ್ನು ಉದಾಸೀನ ಮಾಡಿದೆ ಎಂದು ಸಮಿತಿ ಸಂಚಾಲಕ ಎ.ನರಸಿಂಹಮೂರ್ತಿ ಹೇಳಿದರು.

ಅಟೊ ಚಾಲಕರು,‌ನೇಕಾರರು, ಕೃಷಿಕರು‌ ಹೀಗೆ ನಾನಾ ರಂಗದ ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ಪರಿಹಾರ ನೀಡಿದೆ.‌ ನಮಗೂ ಕೂಲಿ ನಷ್ಟ ಪರಿಹಾರ ಭತ್ಯೆಯಾಗಿ 9600 ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದರು.

ತುಮಕೂರಿನ ದೇವರಾಜ ಅರಸ್ ಬಡಾವಣೆಯಲ್ಲಿ ತಟ್ಟೆ, ಲೋಟ ಬಡಿಯುವ ಮೂಲಕ ಸ್ಲಂ‌ ನಿವಾಸಿಗಳು ಪ್ರತಿಭಟಿಸಿದರು.

ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಎ.ನರಸಿಂಹಮೂರ್ತಿ ಮನವಿ ಸಲ್ಲಿಸಿದರು.

Comment here