Uncategorized

ಕ್ವಿಂಟಲ್ ರಾಗಿಗೆ ₹ 3377: ಶಾಸಕ ಮಸಾಲ ಜಯರಾಮ್

Publicstory


ತುರುವೇಕೆರೆ: ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ಮಧ್ಯವರ್ತಿಗಳ ಕಿಸೆಗೆ ಹಾಕದಂತೆ ಮನವೊಲಿಸಿ ರೈತರೇ ನೇರವಾಗಿ ಎಪಿಎಂಸಿಗೆ ರಾಗಿ ಖರೀದಿ ಕೇಂದ್ರದಲ್ಲಿ ವ್ಯವಹರಿಸುವಂತೆ ಮಾಡಿ ಎಂದು ಅಧಿಕಾರಿಗಳಿಗೆ ಶಾಸಕ ಮಸಾಲ ಜಯರಾಂ ತಾಕೀತು ಮಾಡಿದರು.

ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಬುಧುವಾರ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ವತಿಯಿಂದ ಸರ್ಕಾರಿ ಸಹಾಯ ಧನದೊಂದಿಗೆ 2021-22 ನೇ ಸಾಲಿಗೆ ಆರಂಭಗೊಂಡ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ರೈತರ ಹೆಸರಿನಲ್ಲಿ ದಳ್ಳಾಳಿಗಳು ರಾಗಿ ನೀಡಿ ಸರ್ಕಾರಕ್ಕೆ ಮೋಸ ಮಾಡುತ್ತಾರೆ. ದಳ್ಳಾಳಿಗಳ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಸರ್ಕಾರ ಬೆಂಬಲ ಬೆಲೆ ನಿಗಧಿ ಮಾಡಲಾಗಿದೆ. ಮಾ.31ರವರೆಗೆ ಎಫ್ಎಕ್ಯೂ ಗುಣಮಟ್ಟದ ರಾಗಿ ಖರೀದಿಸಲಿದ್ದು ಸರ್ಕಾರ ಪ್ರತಿ ಕ್ವಿಂಟಾಲ್ ರಾಗಿಗೆ 3377 ರೂಪಾಯಿಗಳನ್ನು ನೀಡಲಿದೆ.

ಈ ದಿಸೆಯಲ್ಲಿ ರಾಗಿ ಬೆಳೆದ ರೈತರು ಪಹಣಿ, ಹೆಸರು, ವಿಳಾಸದೊಂದಿಗೆ ಬೆಳೆದ ರಾಗಿಯ ಸ್ಯಾಂಪಲ್ ನೀಡಿ ಒಂದು ಚೀಲಕ್ಕೆ 50 ಕೆ.ಜಿ. ಸಾಮರ್ಥ್ಯದ ಗೋಣಿ ಚೀಲದಲ್ಲಿ ಮಾತ್ರ ನೀಡಬೇಕು. ತಾಲ್ಲೂಕಿನ ರೈತರು ನಿಗಧಿತ ದಿನಾಂಕವನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡು ಅಗತ್ಯ ದಾಖಲೆಗಳೊಂದಿಗೆ ಆ ದಿನ ರಾಗಿಯನ್ನು ನೀಡಬಹುದು.

ಕೋವಿಡ್ ಅಥವಾ ಲಾಕ್ಡೌನ್ ಎದುರಾದರೆ ರೈತರು ಆತಂಕಕ್ಕೆ ಒಳಗಾಗದೆ ರಾಗಿ ಕೊಳ್ಳುವ ಅವಧಿ ಮುಂದೂಡಲು ಸರ್ಕಾರಕ್ಕೆ ಒತ್ತಾಯಿಸುವೆ. ರೈತರ ಬೆಳೆ ಕಾಲಂ ಸಂಬಂದಿಸಿದಂತೆ ಶುಕ್ರವಾರ ತಹಶೀಲ್ದಾರ್ ಹಾಗೂ ಸಂಬಂದಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದರು.

ತಹಶೀಲ್ದಾರ್ ಆರ್.ನಯೀಂಉನ್ನಿಸಾ ಮಾತನಾಡಿ, ರೈತರ ಪಹಣಿಯಲ್ಲಿ ತೆಂಗು, ಅಡಿಕೆ, ಬಾಳೆ ಎಂದು ತಪ್ಪಾಗಿ ನೋಂದಣಿಯಾಗಿದ್ದಲ್ಲಿ ಅಂತಹ ರೈತರು ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸರಿಪಡಿಸಿಕೊಳ್ಳಿ ಎಂದರು.

ರಾಗಿ ಖರೀದಿ ಕೇಂದ್ರದ ಅಧಿಕಾರಿ ರವಿಕುಮಾರ್ ಮಾತನಾಡಿ, ರಾಗಿ ಖರೀದಿಗೆ ಮಾ.31ರ ತನಕ ನೋಂದಣಿಗೆ ಅವಕಾಶವಿದೆ. ರೈತರು ನೊಂದಣಿ ಮಾಡಿಸಲು ಕೃಷಿ ಇಲಾಖೆಯಿಂದ ನೀಡಿರುವ ಗುರುತಿನ ಚೀಟಿ ಖಡ್ಡಾಯವಾಗಿರುತ್ತದೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಟ 20 ಕ್ವಿಂಟಾಲ್ ರಾಗಿ ಖರೀದಿಸಲಾಗುವುದು ಎಂದರು.

ಸಮಾರಂಭದಲ್ಲಿ ಎಪಿಎಂಸಿ ಅಧ್ಯಕ್ಷ ನರಸಿಂಹ, ಉಪಾಧ್ಯಕ್ಷ ಪ್ರಸನ್ನ, ಸದಸ್ಯರಾದ ವಿ.ಟಿ.ವೆಂಕಟರಾಮು, ಮಧು, ವಿಜಿಯೇಂದ್ರ, ಕಾಂತರಾಜು, ನರಸಿಂಹರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಪೂಜಾ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಎ.ಪಿಎಂ.ಸಿ ಕಾರ್ಯದರ್ಶಿ ವೆಂಕಟೇಶ್ ಬಿ.ಆರ್, ರೈತರು ಪಾಲ್ಗೊಂಡಿದ್ದರು.

Comment here