ಜನಮನ

ಗುಬ್ಬಿ ತಹಶೀಲ್ದಾರ್ ಸಂದರ್ಶನ: ಜನರ ಸಮಸ್ಯೆ ನೀಗಿಸುವ ಆಡಳಿತಕ್ಕೆ ಒತ್ತು

🖋 ಲಕ್ಷ್ಮೀಕಾಂತರಾಜು ಎಂ.ಜಿ


ಗುಬ್ಬಿ ತಾಲ್ಲೂಕಿನ ತಿಪ್ಪೂರಿನಲ್ಲಿ ರೈತನ ಮರಕಡಿದ ಪ್ರಕರಣದ ವಿವಾದದಲ್ಲಿ ಇಲ್ಲಿನ ತಹಶೀಲ್ದಾರ್ ಅವರನ್ನ ಸರ್ಕಾರ ಸೇವೆಯಿಂದ ಹಿಂಪಡೆದ ಪರಿಣಾಮ ತಹಶೀಲ್ದಾರ್ ಹುದ್ದೆ ಖಾಲಿ ಇತ್ತು. ಆ ಸ್ಥಾನಕ್ಕೆ ಡಾ// ಪ್ರದೀಪ್ ಕುಮಾರ್ ಅವರನ್ನ ತಹಶೀಲ್ದಾರ್ ಗ್ರೇಡ್ 1 ಹುದ್ದೆಗೆ ನೇಮಿಸಿದ್ದು, ಪ್ರದೀಪ್ ಕುಮಾರ್ ಅವರು ಗುಬ್ಬಿ ತಹಸೀಲ್ದಾರ್ ಆಗಿ ಅಧಿಕಾರವಹಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಜನರು ಸದಾ ಆತಂಕದಲ್ಲಿಯೇ ಕಾಲ‌ ದೂಡುವಂತಾಗಿದೆ. ರೈತನ ಬೆಳೆಗೂ ಮಾರುಕಟ್ಟೆ ಸಿಗದಂತಾಗಿದೆ. ಇಂಥಹ ಕ್ಲಿಷ್ಟಕರ ಸವಾಲುಗಳು ಇರುವ ಸಮಯದಲ್ಲಿ ಗುಬ್ಬಿ ತಹಶೀಲ್ದಾರ್ ಆಗಿ ಅಧಿಕಾರಿವಹಿಸಿಕೊಂಡಿರುವ ಡಾ.ಪ್ರದೀಪ್ ಕುಮಾರ್ ಅವರನ್ನು “ಪಬ್ಲಿಕ್ ಸ್ಟೋರಿ” ವೆಬ್ ಪತ್ರಿಕೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿ‌ದೆ.


ಲೇಖನ, ವರದಿ, ಬರಹಗಳನ್ನು ನೀವು ವಾಟ್ಸಾಪ್ ಮಾಡಬಹುದು:9844817737


ಪ್ರಶ್ನೆ:: ನಿಮ್ಮ ಮೂಲ‌ಸ್ಥಳ ಹಾಗೂ ಹಿನ್ನೆಲೆ ಹಾಗೂ ವಿದ್ಯಾರ್ಹತೆ ಏನು?

ನನ್ನದು ಬೀದರ್ ಜಿಲ್ಲೆಯ ಬಸವಕಲ್ಯಾಣ. ಪಶುವೈದ್ಯಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರ. ಸರ್ಕಾರಿ ಪಶುವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಾ 2014 ಬ್ಯಾಚಿನ ಕೆಎಎಸ್ ಅಧಿಕಾರಿಯಾಗಿ ನೇಮಕವಾಗಿದ್ದೇನೆ.

ಪ್ರಶ್ನೆ:: ರಾಜ್ಯವ್ಯಾಪಿ ಕರೋನಾ ಹರಡುತ್ತಾ ಆತಂಕದಲ್ಲಿರುವ ಸಮಯದಲ್ಲಿ ಗುಬ್ಬಿ ತಹಶೀಲ್ದಾರ್ ಆಗಿ ನೇಮಕವಾಗಿ ಬಂದಿದ್ದೀರಾ. ನಿಮ್ಮ ಮುಂದೆ ಸವಾಲುಗಳ ರಾಶಿಯೇ ಇದೆ ಹೇಗೆ ನಿಭಾಯಿಸುತ್ತೀರಾ?

ದೇಶವ್ಯಾಪಿ ಕರೋನಾ ವ್ಯಾಪಿಸಿದೆ. ಆದರೆ,ನಮ್ಮ ತಾಲ್ಲೂಕಿನಲ್ಲಿ ಇದುವರೆಗೂ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ತಾಲ್ಲೂಕಿನಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು ಜನರಿಗೆ ಹೊರಬಾರದಂತೆ ಮನವಿ ಮಾಡಲಿದ್ದು ಕೊರೋನಾ ಹರಡದಂತೆ ತಡೆಗಟ್ಟಲು ಸರ್ಕಾರದ ಎಲ್ಲ ನಿಯಮಗಳನ್ನ ಕಡ್ಡಾಯವಾಗಿ ಅನುಷ್ಠಾನ ಮಾಡಲಾಗುವುದು.

ಪ್ರಶ್ನೆ:ನೆರೆಯ ಶಿರಾ ಪಟ್ಟಣದಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಗುಬ್ಬಿಯು ಶಿರಾದೊಂದಿಗೆ ಗಡಿ ಹಂಚಿಕೊಂಡಿದ್ದು ಆ ಭಾಗದಿಂದ ಕೊರೋನಾ ತಡೆಗಟ್ಟಲು ಯಾವ ಕ್ರಮ ಕೈಗೊಂಡಿದ್ದೀರಿ?

ನಮ್ಮ ತಾಲ್ಲೂಕಿಗೆ ಹೊಂದಿಕೊಂಡಿರುವ ಶಿರಾದಿಂದ ಗುಬ್ಬಿ ತಾಲ್ಲೂಕಿ ಪ್ರವೇಶ ಪಡೆಯುವ ಶಿರಾ-ನಂಜನಗೂಡು ರಸ್ತೆಯ ದೇವರಹಳ್ಳಿಯ ಬಳಿ ಚೆಕ್ ಪೋಸ್ಟ್ ಹಾಕಿ ಪರಿಶೀಲಿಸಿ ಬಿಡಲಾಗುತ್ತಿದೆ. ಬುಕ್ಕಾಪಟ್ಟಣ ಮಾರ್ಗದ ಶಿವರಾಂಪುರದ ಬಳಿ ಚೆಕ್ ಪೋಸ್ಟ್ ಹಾಕಿದ್ದು ಅಲ್ಲಿಯೂ ಪರಿಶೀಲಿಸಿ ಬಿಡಲಾಗುತ್ತಿದೆ. ಹಾಗೂ ಕಾಳಿಂಗನಹಳ್ಳಿಯಲ್ಲಿ ಮತ್ತೊಂದು ಚೆಕ್ ಪೋಸ್ಟ್ ನಾಳೆ ತೆರೆಯಲಾಗುವುದು.

ಪ್ರಶ್ನೆ:: ಗುಬ್ಬಿಯಲ್ಲಿ ನಿಷೇದಾಜ್ಞೆ ಇದ್ದರೂ ಅಲ್ಲಲ್ಲಿ ಜನಸಂದಣಿ ಇದೆ. ನಿಮ್ಮ ಪ್ರತಿಕ್ರಿಯೆ?

ಹೌದು. ಅಲ್ಲಲ್ಲಿ ಜನ ಗುಂಪುಗೂಡುತ್ತಾರೆ. ಪೊಲೀಸ್ ಇನ್ಸ್ ಪೆಕ್ಟರ್ ಜೊತೆ ಮಾತನಾಡಿ ನಿಷೇದಾಜ್ಞೆಯನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸುತ್ತೇನೆ.

ಪ್ರಶ್ನೆ: ಈಗ ಬೇಸಿಗೆ ಇದೆ. ಈ ಲಾಕ್ ಡೌನ್ ಅಂಥ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದರೆ ಯಾವ ಕ್ರಮ ವಹಿಸುತ್ತೀರಾ?

ಇದುವರೆಗೆ ತಾಲ್ಲೂಕಿನಲ್ಲಿ ಕುಡಿಯುವ ‌ನೀರಿನ ಸಮಸ್ಯೆ ವರದಿಯಾಗಿಲ್ಲ. ಆದಲ್ಲಿ ಟ್ಯಾಂಕರ್ ಮೂಲಕ ನೀರನ್ನ ಸರಬರಾಜು ಮಾಡಲಾಗುವುದು.

ಪ್ರಶ್ನೆ:: ಪೌತಿ ಖಾತೆ ಅಂದೋಲನದಲ್ಲಿ ತಾಲ್ಲೂಕಿನಾದ್ಯಂತ ಖಾತೆ ಬದಲಾವಣೆಗೆ ಅರ್ಜಿ ಸ್ವೀಕರಿಸಲಾಗಿದೆ. ಸ್ವೀಕರಿಸಿದ ಅರ್ಜಿಗಳಲ್ಲಿ ಶೇ 50 ರಷ್ಟು ಮಾತ್ರ ಹಕ್ಕು ಬದಲಾವಣೆಯಾಗಿವೆ. ಉಳಿದ ಅರ್ಜಿಗಳ ಖಾತೆಬದಲಾವಣೆ ಯಾವಾಗ?

ಸಲ್ಲಿಸಿರುವ ದಾಖಲೆಗಳಲ್ಲಿ ಪೂರಕವಾಗಿರದ ದಾಖಲೆಗಳು ಹಾಗೂ ನಮ್ಮ ಭೂಮಿ ವೆಬ್ ಸೈಟ್ ನ ತಾಂತ್ರಿಕ ದೋಷದಿಂದ ವಿಳಂಬವಾಗಿದೆ.ಸಾಧ್ಯವಾದಷ್ಟು ಈ ಸಮಸ್ಯೆ ಪರಿಹರಿಸುತ್ತೇನೆ.

ಪ್ರಶ್ನೆ: 2019 ರ ಕಡತ ವಿಲೇವಾರಿ ಸಪ್ತಾಹದಲ್ಲಿ ತಮ್ಮ ಕಚೇರಿಯಲ್ಲಿ ಕಡತ ವಿಲೇವಾರಿ ನಿರೀಕ್ಷಿತ ಪ್ರಗತಿಕಂಡಿಲ್ಲ. ಇದರ ಕುರಿತು ತಾವು ತಗೆದುಕೊಳ್ಳುವ ಕ್ರಮಗಳೇನು?.

ಜಲಾಕ್ ಡೌನ್ ತೆರವು ಬಳಿಕ ತಾಲ್ಲೂಕು ಕಚೇರಿಯಲ್ಲಿನ ಕಡತ ವಿಲೇವಾರಿ ಕೆಲಸಕ್ಕೆ ವೇಗ ನೀಡಲಾಗುವುದು. ವಿಶೇಷ ಮುತುವರ್ಜಿ ವಹಿಸುತ್ತೇನೆ.

Comment here