ತುಮಕೂರು ಲೈವ್

ಗೊಂದಲ ಮೂಡಿಸುತ್ತಿರುವ ಬೆಮೆಲ್ ಕಾಂತರಾಜ್ ಕಚೇರಿ ಉದ್ಘಾಟನೆಗೆ ತೆರಳಬೇಡಿ: ಎಂ.ಟಿ.ಕೃಷ್ಣಪ್ಪ

Public story.in


ತುರುವೇಕೆರೆ: ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಪಟ್ಟಣದಲ್ಲಿ ತಮ್ಮ ಕಚೇರಿ ಉದ್ಘಾಟಿಸುವ ವಿಚಾರವಾಗಿ ಕಾಂಗ್ರೆಸ್ ಮುಖಂಡರ ಬಳಿ ಕಾಂಗ್ರೆಸ್ ಕಚೇರಿ ಎಂತಲೂ, ಜೆಡಿಎಸ್ ನವರ ಬಳಿ ಜೆಡಿಎಸ್ ಕಚೇರಿ ಎಂದು ಹೇಳಿಕೊಂಡು ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದು ಇದ್ದಕ್ಕೆ ಕ್ಷೇತ್ರದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ಬಾರದೆಂದು ಮಾಜಿ ಶಾಸಕ ಎಂ.ಟಿ.ಕಷ್ಣಪ್ಪ ಕಿವಿ ಮಾತು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಬೆಮೆಲ್ ಕಾಂತರಾಜು ಅವರು ಜೆಡಿಎಸ್ ನಿಂದ ಗೆದ್ದು ಎಂಎಲ್ಸಿ ಆಗಿದ್ದಾರೆ. ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಪಕ್ಷವನ್ನು ತಾಯಿ ಸಮನಾಗಿ ಕಾಣದೆ ಇವರು ತಾಲ್ಲೂಕಿನ ಕಾಂಗ್ರೆಸ್ ಜೊತೆಗೆ ಕೈಜೋಡಿಸಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಹೇಳಿದರು.

ಇವರು ಪಕ್ಷ ವಿರೋಧಿ ಚಟುವಟಿಕೆ ಮಾಡುವ ಬದಲು ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಹೋಗಿ ಸೇರಲಿ ನಮ್ಮದೇನೂ ಅಭ್ಯಂತರವಿಲ್ಲ. ಇವರು ಎಂಎಲ್ಸಿ ಆಗಲು ಜಿಲ್ಲೆಯ ಹತ್ತು ತಾಲ್ಲೂಕಿನ ಜನರು ವೋಟ್ ಹಾಕಿದ್ದಾರೆ. ಆದರೆ ಬೆಮೆಲ್ ಕಾಂತರಾಜ್ ಅವರು ಬೇರೆ ತಾಲ್ಲೂಕಿನಲ್ಲಿ ಇಲ್ಲದ ಕಚೇರಿ ಉದ್ಘಾಟನೆ ಈ ತಾಲ್ಲೂಕಿನಲ್ಲಿ ಏಕೆ ಬೇಕಿತ್ತು. ಅದರಲ್ಲೂ ಬೆಮೆಲ್ ಕಾಂತರಾಜ್ ಅವರ ಕೊಡುಗೆ ಏನಿದೆ ಈ ತಾಲ್ಲೂಕಿಗೆ, ಯಾವ ಅಭಿವೃದ್ದಿ ಕೆಲಸ ಮಾಡಿದ್ದಾರೆ. ನಮ್ಮ ತಾಲ್ಲೂಕಿನ ಬಗ್ಗೆ ಅವರಿಗೇನು ಗೊತ್ತು ಎಂಬುದರ ಬಗ್ಗೆ ತಾಲ್ಲೂಕಿನ ಜನತೆಗೆ ಚನ್ನಾಗಿ ಅರಿವಿದೆ ಎಂದರು.

ಪ್ರಜಾಪ್ರಭುತ್ವ ಗೊತ್ತಿಲ್ಲದ ಶಾಸಕ: ಶಾಸಕ ಮಸಾಲ ಜಯರಾಂ ಪೊಲೀಸ್ ದುರ್ಬಳಕೆ ಮಾಡಿಕೊಂಡಿದ್ದು ತಾಲ್ಲೂಕಿನಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಸಿದರು. ವಿರೋಧ ಪಕ್ಷದ ಸ್ಥಾನದಲ್ಲಿರುವ ನಾನು ತಾಲ್ಲೂಕಿನಲ್ಲಿನ ದುರಾಡಳಿವನ್ನು ಖಂಡಿಸಿ ಗುಡ್ಡೇನಹಳ್ಳಿ ತೆಂಗಿನ ಸಸಿ ಕೀಳಿಸಿದ ಪ್ರಕರಣ, ಕೆಎಸ್ಆರ್ಟಿಸಿ ಸಿಬ್ಬಂದಿಗಳ ಪ್ರತಿಭಟನೆಗೆ ಸಾಥ್ ನೀಡಿ ನ್ಯಾಯಕ್ಕಾಗಿ ಪ್ರತಿಭಟನೆ, ಹೋರಾಟ ಮಾಡಿರುವುದು ಸಹಜ.
ಇದನ್ನೇ ಮಹಾ ಅಪರಾಧವೆಂದು ಭಾವಿಸಿರುವ ಅವರೊಬ್ಬ ಪ್ರಜಾಪ್ರಭುತ್ವ ಗೊತ್ತಿಲ್ಲದ ಶಾಸಕ ಎಂದು ಲೇವಡಿಗೈದರು.

ಪಿಎಸ್ಐ ಪ್ರೀತಂ ಬಳಸಿಕೊಂಡು ಶಾಸಕರು ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ. ಕೇಸ್ ಹಾಕುವ ಮೂಲಕ ನನ್ನ ಹೋರಾಟವನ್ನು ದಮನಿಸಬಹುದು ಅಂದುಕೊಂಡಿದ್ದರೆ ಅದು ಶಾಸಕರ ದಡ್ಡತನ. ಇವಕ್ಕೆಲ್ಲ ನಾನು ಸೊಪ್ಪು ಹಾಕುವನಲ್ಲವೆಂದು ತರಾಟೆಗೆ ತೆಗೆದುಕೊಂಡರು.

2018ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ತಮ್ಮ ಬೇಡಿಕೆಗಾಗಿ ಧರಣಿ ಮಾಡಿದ್ದಕ್ಕಾಗಿ 14 ಮಂದಿ ಮೇಲೆ ಕೇಸ್ ಹಾಕಿಸಿ ಅವರನ್ನು ಕೋರ್ಟ್ಗೆ ಅಲೆಯುವಂತೆ ಮಾಡಿದ್ದಾರೆ. ಸಿಎಸ್ಪುರದಲ್ಲಿ ಶಾಸಕರ ಹಿಂಬಾಲಕರು ಮಹಿಳೆಯನ್ನು ನಡುಬೀದಿಯಲ್ಲಿ ಅರೆಬೆತ್ತಲುಗೊಳಿಸಿ ಹಲ್ಲೆಮಾಡಿದ ಪ್ರಮುಖ ಆರೋಪಿಯ ಮೇಲೆ 307 ಪ್ರಕರಣದಡಿಯಲ್ಲಿ ಕೇಸ್ ದಾಖಲಾಗಿದ್ದು ಇದುವರೆಗೂ ಆರೋಪಿಯನ್ನು ಬಂದಿಸಿಲ್ಲ ಕೂಡಲೇ ಬಂಧಿಸಿಬೇಕೆಂದು ಎಸ್ಪಿಯವರನ್ನು ಒತ್ತಾಯಿಸಿದರು.

ಸುದ್ದಿ ಗೋಷ್ಠಿಯಲ್ಲಿ ಮುಖಂಡರುಗಳಾದ ವಿಜಯೇಂದ್ರ, ಕೊಳಾಲ್ ಗಂಗಾಧರ್, ವೆಂಕಟಾಪುರ ಯೋಗೀಶ್ ಮತ್ತಿತರರು ಇದ್ದರು.

Comment here