ಜನಮನ

ಜನತಾ ಕರ್ಪ್ಯೂ: ಹೀಗೆ ಮಾಡಿ ನೋಡಿ…

ತುರುವೇಕೆರೆ ಪ್ರಸಾದ್


ಮಾರಕ ವೈರಸ್ ಕೊರೋನಾ ನಿಯಂತ್ರಣ ಹಾಗೂ ನಿರ್ಮೂಲನಕ್ಕಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 22ರಂದು ಭಾನುವಾರ ದೇಶಾದ್ಯಂತ ವಿಶೇಷವಾದ ಜನತಾ ಕಪ್ರ್ಯೂಗೆ ಮನವಿ ಮನವಿ ಮಾಡಿದ್ದಾರೆ.

ಇದು ಜನರು ತಮ್ಮನ್ನು ತಾವು ಇತರರ ಸಂಪರ್ಕದಿಂದ ಹಾಗೂ ತನ್ಮೂಲಕ ಕೊರೋನಾ ಸೋಂಕಿನಿಂದ ದೂರ ಉಳಿಯಲು ನಿರ್ಬಂಧಿಸಿಕೊಳ್ಳುವ ಒಂದು ಮಾರ್ಗವಾಗಿದೆ.

ಅಂದು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಇಡೀ ದಿನ ಸಾರ್ಥಕವೆನಿಸುವಂತೆ ಈ ಕಫ್ರ್ಯೂ ಸಮಯದಲ್ಲಿ ನಾವು ಏನೇನು ಮಾಡಬಹುದು ನೋಡೋಣ

ಬೆಳಿಗ್ಗೆ ಎದ್ದು ಜಾಗಿಂಗ್, ಆಫೀಸ್ ಎಂದು ಬಸ್ಸು, ಮೆಟ್ರೋ, ಊಬರ್ ಹಿಡಿದು ಎಲ್ಲೂ ಧಾವಂತದಲ್ಲಿ ಓಡಿ ಹೋಗುವ ಹಾಗಿಲ್ಲ. ವಾರಾಂತ್ಯದ ಪ್ರವಾಸವಂತೂ ಇಲ್ಲವೇ ಇಲ್ಲ, ಹಾಗಾಗಿ ಬೇಗನೆ ಎದ್ದು ಮಾಡಬೇಕಾದ ತುರ್ತು ಹಾಗೂ ಒತ್ತಡದ ಕೆಲಸಗಳೇನೂ ಇಲ್ಲದಿರುವುದರಿಂದ ಬೆಳಗಿನ ಸವಿನಿದ್ರೆ ಮಾಡಿ ನಿಧಾನವಾಗಿ ಏಳಿ.

ಇಂದು ವಿಶೇಷ ವ್ಯಾಯಾಮ ಮಾಡುವ ಅಗತ್ಯವಿರುವುದಿಲ್ಲ. ಏಕೆಂದರೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿದ ನಂತರ ನಿಮಗಾಗಿ ಪಾತ್ರೆ, ಬಟ್ಟೆಗಳ ರಾಶಿ ಕಾಯುತ್ತಿರಬಹುದು. ಏಕೆಂದರೆ ಜನತಾ ಕಫ್ರ್ಯೂ ಆದ್ದರಿಂದ ಕೆಲಸದ ಹೆಂಗಸು ಸಹ ಅಂದು ಬೆಳಿಗ್ಗೆ ಎದ್ದು ಡ್ಯೂಟಿಗೆ ಬಂದಿರುವುದಿಲ್ಲ. ನೀವೇ ಪಾತ್ರೆ ತೊಳೆದು, ಮನೆ ಸಾರಿಸಿ, ಬಟ್ಟೆ ಒಗೆಯಬೇಕಾಗುತ್ತದೆ. ಎಷ್ಟೋ ದಿನಗಳಿಂದ ಕಾರು,ಸ್ಕೂಟರ್ ಧೂಳು, ಕೊಚ್ಚೆ ಮೆತ್ತಿಕೊಂಡಿರುತ್ತದೆ. ಕಳೆದ ಆಯುಧಪೂಜೆಯ ನಂತರ ಅವು ನೀರಿನ ಮುಖ ನೋಡಿರುವುದೇ ಇಲ್ಲ. ಅವಕ್ಕೆ ಒಂದಿಷ್ಟು ನೀರು ಕಾಣಿಸಬಹುದು.

ನಾಯಿ, ಬೆಕ್ಕುಗಳನ್ನು ಲಾನ್‍ನಲ್ಲೇ ಸುತ್ತಾಡಿಸಿ ಅವಕ್ಕೂ ಸ್ನಾನ ಮಾಡಿಸಬಹುದು. ಅದಾದ ನಂತರ ರೂಮಿನ ಟೇಬಲ್, ಲಿವಿಂಗ್ ರೂಂನ ಟೀಪಾಯಿ, ಬೆಡ್‍ರೂಮಿನ ಹಾಸಿಗೆ ಮೇಲೆ ಅಸ್ತವ್ಯಸ್ಥವಾಗಿ ವಾರಗಳಿಂದ ಬಿದ್ದಿದ್ದ ವಸ್ತುಗಳನ್ನು ಜೋಡಿಸಿ ಅವುಗಳ ಜಾಗಕ್ಕೆ ಸೇರಿಸಬಹುದು.

ಕಾರ್‍ಶೆಡ್ಡು, ಸ್ಟೋರ್‍ರೂಂನಲ್ಲಿ ಇಳಿಬಿದ್ದ ಜೇಡರ ಬಲೆ, ಶಲಬೆಗಳನ್ನು ಕ್ಲೀನ್ ಮಾಡಬಹುದು. ಅಪರೂಪಕ್ಕೊಮ್ಮೆಯಾದರೂ ಗಾಂಧಿವಾದಿಗಳಾಗಿ ನಮ್ಮ ಮನೆ ಟಾಯ್ಲೆಟ್ಟನ್ನು ನಾವೇ ತೊಳೆದುಕೊಳ್ಳಬಹುದು. ಇದೇ ಸಾಕಷ್ಟು ವ್ಯಾಯಾಮವೆನಿಸುತ್ತದೆ.

ಆ ನಂತರ ಸ್ನಾನ ಪರ್ವ. ನಿಮಗೆ ನೆನಪಿರಬಹುದು..ಮೊದಲೆಲ್ಲ ಭಾನುವಾರ ಬಂತೆಂದರೆ ಅಜ್ಜಿಯೋ, ಅಮ್ಮನೋ ನಾವು ಮಲಗಿದ್ದಲ್ಲಿಗೆ, ಕೂತಿದ್ದಲ್ಲಿಗೇ ಬಂದು ತಲೆಗೆ ಹರಳೆಣ್ಣೆ ತಿಕ್ಕಿ ಮೈ ಕೈ ಎಲ್ಲಾ ಮಸಾಜ್ ಮಾಡಿ ಹೋಗುತ್ತಿದ್ದರು. ಆ ನಂತರ ಸುಡು ಸುಡು ನೀರಿನಲ್ಲಿ ಅಭ್ಯಂಜನ ನಡೆಯುತ್ತಿತ್ತು. ಈಗ ಈ ಅಭ್ಯಂಜನ ಕೇವಲ ಕನಸೋ,ನೆನಪೋ ಆಗಿದೆ. ಈಗ ಸರ ಸರ ಶಾಂಪೂ ತಿಕ್ಕಿಕೊಂಡು ನೀರು ಸುರಿದುಕೊಂಡು ಅರ್ಧಸ್ನಾನ ಮಾಡಿ ಬಂದ ಆರ್ಕಿಮಿಡೀಸನಂತಾಗಿದೆ ಹಲವು ನಗರವಾಸಿಗಳ ಸ್ಥಿತಿ. ಈ ಭಾನುವಾರ ನೀವು ಅಪರೂಪಕ್ಕೆ ಒಂದು ಎಣ್ಣೆ ಅಭ್ಯಂಜನ ಮಾಡಿ ಮೈ ಮನಸ್ಸನ್ನು ಹಗುರಾಗಿಸಿಕೊಳ್ಳಬಹುದು.

ಇದಾದ ನಂತರ ಮನೆ ಮಂದಿಯೆಲ್ಲಾ ಸೇರಿ ದೇವತಾಪ್ರಾರ್ಥನೆ ಕಾರ್ಯಕ್ರಮ ಇಟ್ಟುಕೊಳ್ಳಬಹುದು. ವೇದ,ಉಪನಿಷತ್ತುಗಳಲ್ಲಿರುವ ಪ್ರಕೃತಿಗೆ ಸಂಬಂಧಿಸಿದ ‘ ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ, ದೇಶೋಯಂ ಕ್ಷೋಭ ರಹಿತಃ ಸಜ್ಜನಾಃ ಸಂತು ನಿರ್ಭಯಾಃ” “ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ, ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿತ್ ದುಃಖ ಭಾಗ್ಭವೇತ್” ಎಂದು ಕೊರೋನಾ ವೈರಸ್ ನಿರ್ಮೂಲನೆಗೆ ಸಂಕಲ್ಪ ಮಾಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಬಹುದು.

ಎಷ್ಟೋ ದಿನ/ವರ್ಷಗಳ ನಂತರ ನಾವೆಲ್ಲಾ ಒಟ್ಟಿಗೆ ಸೇರಿರುತ್ತೇವೆ. ಮನೆಯಲ್ಲಿ ಒಟ್ಟಾಗಿ ಕುಳಿತು ತಿಂಡಿ ತಿಂದ,ಊಟ ಮಾಡಿದ ನೆನಪೇ ಇಲ್ಲದಿರಬಹುದು. ಭಾನುವಾರ ಬೆಳಿಗ್ಗೆ ಎದ್ದು ದರ್ಶಿನಿ, ಸುಖ ಸಾಗರ್‍ಗಳು, ರೆಸ್ಟೋರೆಂಟ್‍ಗಳನ್ನು ಹುಡುಕಿ ಹೋಗಿ, ಜನರ ಮಧ್ಯೆ ಕಾದು,ಆ ಸಂದಿಯಲ್ಲೇ ನಿಂತೇ ತಿಂಡಿ ಶಾಸ್ತ್ರ ಮಾಡಿ ಅಲ್ಲಿಂದ ಹಾಗೇ ಔಟಿಂಗ್ ಹೋಗಿ ಮಧ್ಯಾಹ್ನ ಮತ್ತೆ ದಾಬಾದಲ್ಲೋ, ರೆಸ್ಟೋರೆಂಟಲ್ಲೋ ದುಬಾರಿ ಭರ್ಜರಿ ಊಟ( ಬೆಂಗಳೂರಿನ ಬಹುತೇಕ ಹೋಟೆಲ್‍ಗಳಲ್ಲಿ ಶನಿವಾರ, ಭಾನುವಾರ ಸಾಮಾನ್ಯ ಲಘು/ತಟ್ಟೆ ಊಟ ಹುಡುಕಿದರೂ ಸಿಗುವುದಿಲ್ಲ)ಮಾಡಿ ಸಿನಿಮಾ ನೋಡಿಕೊಂಡು ಮತ್ತೆ ಮನೆಗೆ ಬಂದು ಜೊಮೊಟೋಗೆ ಆರ್ಡರ್ ಮಾಡಿ ತಿಂಡಿ ತರಿಸಿಕೊಂಡು ತಿಂದು ನಿದ್ರೆ ಮಾತ್ರೆ ನುಂಗಿ ಮಲಗುವುದೇ ಭಾನುವಾರದ ಸಾರ್ಥಕತೆ ಎನಿಸಿಬಿಟ್ಟಿತ್ತು. ಆದರೆ ಇವತ್ತು ಅದೆಲ್ಲಾ ನಡೆಯುವುದಿಲ್ಲ.

ಅಡುಗೆ ಮನೆಯ ಸಾಸಿವೆ ಡಬ್ಬಿಯಿಂದ ಹಿಡಿದು ಬೇಳೆ ಡಬ್ಬಿಯವರೆಗೆ ಎಲ್ಲಾ ಹುಡುಕಿ, ತಡಕಿ, ಫ್ರಿಜ್ಜಲ್ಲಿ ಅಳಿದುಳಿದ ತರಕಾರಿ ಅವಶೇಷಗಳನ್ನು ಕತ್ತರಿಸಿ ಹಾಕಿ ಸಾರು, ಪಲ್ಯ ಮಾಡಿಕೊಂಡು ತಿನ್ನಬೇಕು. ಅದನ್ನೇ ಬೇಸರಿಸದೆ, ಗೊಣಗದೆ ಸ್ವಲ್ಪ ಖುಷಿ, ಸಂಭ್ರಮದಿಂದ ಮಾಡಬಹುದು. ಒಂದು ಪಾಯಸ ಮಾಡಿಕೊಂಡರೆ ಹಬ್ಬವೂ ಆಯಿತು.

ಮನೆ ಮಂದಿಯೆಲ್ಲಾ ಮಾತಾಡಿಕೊಂಡು ಖುಷಿಯಾಗಿ ಊಟ ಮಾಡಿ ಒಂದು ಚರಿತ್ರಾರ್ಹ ಸವಿನೆನಪಿನ ದಾಖಲೆ ಬರೆಯಬಹುದು.

ಊಟದ ನಂತರ ಮನೆಯಲ್ಲಿ ಚಿಕ್ಕ ಪುಟ್ಟ ಮಕ್ಕಳಿದ್ದರೆ ಅವುಗಳ ಜೊತೆ ಆಟವಾಡಿ, ನಿಮಗೆ ನೆನಪಿದ್ದರೆ ಅವಕ್ಕೆ ನಿಮ್ಮಜಿ/ ಅಜ್ಜ ಹೇಳಿದ ಕತೆ ಹೇಳಿ. ಅವುಗಳನ್ನು ಮಲಗಿಸಿ ನೀವು ಸಣ್ಣದೊಂದು ನಿದ್ದೆ ಮಾಡಿ

ಸಂಜೆ ಎದ್ದು ಮೊಬೈಲ್, ಲ್ಯಾಪ್‍ಟಾಪ್‍ಲ್ಲಿರುವ ಅನಗತ್ಯ ಸಂಪರ್ಕ, ಫೈಲ್‍ಗಳು( ಇವೂ ವೈರಸ್‍ಗಳೇ) ಇವನ್ನು ಡಿಲೀಟ್ ಮಾಡುವ ಯಜ್ಞ ಮಾಡಿ. ನಿಮ್ಮ ಮೊಬೈಲ್, ಲ್ಯಾಪ್‍ಟಾಪನ್ನು ಸ್ವಚ್ಛ ಮಾಡಿಕೊಳ್ಳಲು ಇದಕ್ಕಿಂತ ಉತ್ತಮ ಅವಕಾಶ ನಿಮಗೆ ಸಿಗಲಾರದು. ಹಾಗೆ ಮಾಡುವಾಗ ನಿಮ್ಮ ಹಳೇ ಸಂಬಂಧಗಳ, ಸ್ನೇಹಿತರ ನಂಬರ್ ನಿಮ್ಮ ಕಣ್ಣಿಗೆ ಬೀಳುತ್ತದೆ.

ಅವರಲ್ಲಿ ಕೆಲವರೊಂದಿಗೆ ಮಾತನಾಡಿ, ಸುಖ, ದುಃಖ ಹಂಚಿಕೊಳ್ಳಿ, ಮನಸ್ಸು ಹಗುರ ಮಾಡಿಕೊಳ್ಳಿ. ಹಾಗೇ ನಿಮ್ಮ ಸಂಪರ್ಕದಿಲ್ಲಿರುವ ಎಲ್ಲರೊಂದಿಗೆ ಕೊರೋನಾ ನಿಯಂತ್ರಣಕ್ಕೆ ಸಹಕರಿಸುವಂತೆ ಮನವಿ ಮಾಡಿ, ಜಾಗೃತಿ ಸಂದೇಶ ಕಳಿಸಿ.

ಇದಾದ ನಂತರ ಪ್ರಧಾನಿ ಮೋದಿಯವರು ಹೇಳಿರುವಂತೆ ನಿಮ್ಮ ಮನೆಯ ಕಿಟಕಿ, ಬಾಲ್ಕನಿಯಲ್ಲಿ ನಿಂತು ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಂಕೇತ ಹೊರಡಿಸಿ

ನಂತರ ಸಂಜೆ ನಿಮ್ಮ ಮನೆಯಲ್ಲಿರುವ ಗಿಡಗಳಿಗೆ, ಕುಂಡಗಳಿಗೆ ನೀರೆರೆಯಿರಿ. ಮನೆಯ ಹಿರಿಯರು ಮನೆಯ ಕಿರಿಯರು, ಯುವಕರೊಂದಿಗೆ ನಮ್ಮ ಸಂಸ್ಕøತಿ, ಧರ್ಮ ಕುರಿತು ಒಂದು ಪ್ರವಚನ, ಮಾತುಕತೆ, ನಡೆಸಬಹುದು. ಅವರಿಗೆ ಸಂಸ್ಕಾರ, ಮಾನವೀಯತೆ, ಸೇವೆಯ ಮಹತ್ವ ಕುರಿತ ಒಂದು ಸಂದೇಶ ನೀಡಬಹುದು. ಹಾಗೆಯೇ ಕೊರೋನಾ ವೈರಸ್ ತಡೆ ಬಗ್ಗೆ, ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಕೂಡ ಚಿಂತನ-ಮಂಥನ ನಡೆಸಹುದು.

ಭಾನುವಾರವಾದ್ದರಿಂದ ಯಾವುದೇ ಸೀರಿಯಲ್‍ಗಳು ಇರುವುದಿಲ್ಲ. ರಾತ್ರಿ ಮತ್ತೆ ಎಲ್ಲಾ ಜೊತೆಯಾಗಿ ಸೇರಿ ಊಟ ಮಾಡಿ. ತಡರಾತ್ರಿ ಸಿನಿಮಾಗಳು, ಮಿಡ್‍ನೈಟ್ ಮಸಾಲಾಗಳನ್ನು ನೋಡಲು ಅವಕಾಶ ಇರುವುದಿಲ್ಲ.ಏಕೆಂದರೆ ಮಕ್ಕಳು, ಮನೆಯವರೆಲ್ಲಾ ಜೊತೆಯಲ್ಲೇ ಇರುತ್ತಾರೆ. ಅವರೊಂದಿಗೆ ಟೆರೇಸ್ ಮೇಲೆ ಬಂದು ಅನಂತ ಆಕಾಶದ ಪ್ರಜ್ವಲಿಸುವ ನಕ್ಷತ್ರಗಳನ್ನು ನೋಡಿ.( ಕೃಷ್ಣಪಕ್ಷವಾದ್ದರಿಂದ ನಕ್ಷತ್ರಗಳು ಹೆಚ್ಚು ಪ್ರಜ್ವಲ್ಯಮಾನವಾಗಿ ಕಾಣುತ್ತವೆ).ಮಕ್ಕಳಿಗೆ ಮಹಾವ್ಯಾಧ, ನಕುಲ, ವಿಜಯಸಾರಥಿ ಇತರೆ ನಕ್ಷತ್ರಪುಂಜಗಳ ಪರಿಚಯ ಮಾಡಿಕೊಡಿ. ಹಾಯಾಗಿ ಮಲಗಿ. ಜೀವನದ ಒಂದು ದಿನವನ್ನು ಸಾರ್ಥಕವಾಗಿ ಕಳೆದ ಧನ್ಯತೆಯನ್ನು ಅನುಭವಿಸುತ್ತಾ ಕೊರೋನಾಗೊಂದು ಥ್ಯಾಂಕ್ಸ್ ಹೇಳಿ ನಿದ್ದೆಗೆ ಜಾರಿ.
~

Comment here