ಜನಮನ

ಜಮದಗ್ನಿಯ ಅಗ್ಗಿಷ್ಠಿಕೆ ನಂದಿತು…

ಡಾ.ವಡ್ಡಗೆರೆ ನಾಗರಾಜಯ್ಯ


ಪ್ರಿಯ ಡಿ.ಎಸ್.ನಾಗಭೂಷಣ ಸರ್…,
ನೀವಿಂದು ಬಿಟ್ಟು ಹೋದಿರಿ ಕಾಯ..‌.
ಉಸಿರುಗೋಳವ ತಬ್ಬಿಕೊಂಡು,
ಬುದ್ಧ -ಗಾಂಧಿ ಲೋಹಿಯಾ ದಾರಿಯ ನಡೆಕಾರನಾಗಿ…

ಅವೊತ್ತು ಅಮಾನಿಕೆರೆ ಏರಿಯ ಮೇಲೆ
ಬಕಾಲಮುನಿಯು ಗಡ್ಡ ನೀವಿಕೊಂಡು ನಿರಭ್ರ ಆಕಾಶವೇ ಮಲ್ಲಿಗೆ ಸುರಿದಂತೆ ನಗುತ್ತಿದ್ದಾಗ,
ಕನ್ನಡಕ ಕಣ್ಣುಗಳ ಭಾಷ್ಪ ತೆಗೆದೊರೆಸಿ ಕವಿ ವೀಚಿಯೂ ನಗುತ್ತಿದ್ದಾಗ ನೀವು ಒಡನೆ ಇದ್ದಿರಿ ವೀಚಿಯ
ಸೈಕಲ್ ಹ್ಯಾಂಡಲ್ ಬಾರ್
ಹಿಡಿದುಕೊಂಡು ಮೌನವಾಗಿ…

ಬೆಳಗ್ಗೆ ರೈಲು ನಿಲ್ದಾಣದ ಬಳಿ ಪಲ್ಲವಿಯ ಮದುವೆಯಲಿ
ಕವಿ ಸಾಹಿತಿ ಹೋರಾಟಗಾರರದ್ದೇ ದಿಬ್ಬಣ ಸಂಭ್ರಮದ ನಡುವೆ
ಕುಳಿತಿದ್ದರು ನಿಮ್ಮ
ಮನೆದನ್ನೆ ಸವಿತಾ…
ಅತ್ತಲಿತ್ತ ಕೊನೆಯಂಚು ವಡ್ಡಗೆರೆ ಎಂಬ ನಾನು ಹಾಗೂ ಕವಯತ್ರಿ ಮಲ್ಲಿಕಾ ಬಸವರಾಜು…
ಜನರೆದುರುಗೋಳ ದೇವನೂರು, ಕಾರಮರಡಿಯ ಗುರು ಶಂಕರಪ್ಪ,
ಬೂದಾಳು, ನರಸೀಯಪ್ಪ, ದೊರೆರಾಜು, ಕುಂದೂರು ನಮ್ಮ ಕಲ್ಪತರು ಕರಿಗಿರಿ ತೆಂಗುಕಂಗು ಹಿಂಗಾರ ಜಾಲಗಿರಿ ಜಗಿ ಹಿಡಿದಂತೆ ನೀವು ಬುದ್ಧ ಗಾಂಧಿಯರ ಕಂಡ ಚಿಂತನೆಯ ನೆರಳಿತ್ತು, ಬೆವರ ಗಂಧ ಗಮಲಿತ್ತು…

ನಿಮ್ಮನ್ನು ಬಿಗಿದು ಕಟ್ಟಲು ಕೊಟ್ಟಿಗೆ ಹಗ್ಗ ಗೊಂತುಗೂಟ ರಂಜಣಿಗೆ ನಿಮಗೆದುರಿರಲಿಲ್ಲ
ಈ ನಾಡಿನಲ್ಲಿ

ನಿನಗೆ ನೀನೇ ದಾರಿ ನಿನಗೆ ನೀನೇ ದಿಕ್ಕೆಂದು ಹೇಳುತ್ತಲೇ
ಮದ್ದಾನೆಯು ಸರಪಳಿ ಹರಿದು
ಧೀಂಕಿಟ್ಟು ನುಗ್ಗಿ ಓಡಿದ ಹಾಗೆ ನೀವು
ಚಳವಳಿಗಳ ನಡುವೆ ಕುಂತ ಜಾಗದಿಂದಲೇ ನುಡಿವಕ್ಕರಗಳ ಮೂಲಕವೇ ನುಗ್ಗಿ
ಜಮದಗ್ನಿಯಾಗಿ ಸಿಡಿಯುತ್ತಿದ್ದಿರಿ..‌

ಅವೊತ್ತು ಪಂಚ ಗಣಾಧೀಶ ಹಟ್ಟಿತಿಪ್ಪಯ್ಯನ
ಬುಡಕಟ್ಟಿನ
ಕಾವ್ಯ ನಾಗಭೂಷಣರ ಕೂಡುಕಟ್ಟಿನಲ್ಲಿ ನೀವು ಸವಿತಾ ಅವರೊಂದಿಗಿದ್ದಿರಿ
ಚಿತ್ರದುರ್ಗದ
ಕೋಟೆ ನಾಡಿನಲ್ಲಿ
ನಿಮ್ಮನ್ನು ನೋಡಿದ್ದೇ ಕಡೇಲಾಸ್ಟು ಗಾಂಧಿ ಬುಕ್ಕಿನಲ್ಲಿ

ಇಂಥ ನೀವೀಗ ಹೋಗಿದ್ದೀರಿ ನಟ್ಟಿರುಳು ಮನೆಯಿಂದ ಸಿದ್ಧಾರ್ಥ ಎದ್ದು ನಡೆದಂತೆ ತಣ್ಣಗೆ…
ನೀವು ನಡೆದ ಸಂತೆ ದಾರಿಯ ಪಯಣಿಗರು ನಾವೆಲ್ಲಾ
ಸಂತೆ ವ್ಯಾಪಾರಕ್ಕೆ
ಜಾಡಿ ನೇಯುವ
ಕಾಯಕ ಜೀವಿಗಳು


ಲೇಖಕರು; *ಡಾ.ವಡ್ಡಗೆರೆ ನಾಗರಾಜಯ್ಯ*
*8722724174*

Comment here