ತುಮಕೂರು ಲೈವ್

ಜಮೀನು ಬಿಡಿಸಿಕೊಡುವಂತೆ ಎಸಿ ಕಾಲಿಗೆ ಬಿದ್ದು ಕಣ್ಣೀರಿಟ್ಟ ರೈತ

ಕೊರಟಗೆರೆ:

ತಾಲ್ಲೂಕಿನ ಅಕ್ಕಾಜಿಹಳ್ಳಿ ಸರ್ವೆ ನಂಬರ್ 33 ರಲ್ಲಿ ಸ್ಥಳೀಯ ರೈತರ ಜಮೀನನ್ನು ಬೇರೆಡೆಯಿಂದ ಬಂದವರಿಗೆ ಅಕ್ರಮವಾಗಿ ಸಾಗುವಳಿ ಚೀಟಿ ನೀಡಿರುವುದನ್ನು ಖಂಡಿಸಿ ತಾಲ್ಲೂಕು ಕಚೇರಿ ಎದುರು ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಜಿಲ್ಲಾಧ್ಯಕ್ಷ ಆನಂದ ಪಾಟೀಲ್ ಹುಲಿಕಟ್ಟೆ ಮಾತನಾಡಿ, ಅಕ್ಕಾಜಿಹಳ್ಳಿ ಸರ್ವೆ ನಂಬರ್ ನಲ್ಲಿ ಸುಮಾರು 30 ವರ್ಷಗಳಿಂದ ಉಳುಮೆ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದ ಸ್ಥಳೀಯ ರೈತರಾದ ಕಾಮಣ್ಣ ಹಾಗೂ ದಾಳಿನರಸಪ್ಪ ಎಂಬರ ಜಮೀನನ್ನು ಬೇರೆಡೆಯಿಂದ ಬಂದವರಿಗೆ ಏಕಾಏಕಿ ದಾಖಲಾತಿ ಸೃಷ್ಟಿಸಿ ಸಾಗುವಳಿ ಹಕ್ಕು ಪತ್ರ ನೀಡಲಾಗಿದೆ.

30 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬಂದ ರೈತರನ್ನು ಒಕ್ಕಲೆಬ್ಬಿಸಿ ಭೂಮಿ ಕಸಿದುಕೊಂಡು ರೈತರು ಇಟ್ಟಿದ್ದ ಬೆಳೆಯನ್ನು ಯಂತ್ರಗಳ ಮೂಲಕ ಹಾಳು ಮಾಡಿ ರಾತ್ರೋರಾತ್ರಿ ತಂತಿ ಬೇಲೆ ಹಾಕುವುದರೊಂದಿಗೆ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೂಡಲೇ ತನಿಖೆಯಾಗಬೇಕು. ನಕಲೀ ದಾಖಲೆ ಸೃಷ್ಟಿಸಿ ಏಕಾಏಕಿ ನೀಡಿರುವ ಸಾಗುವಳಿ ಹಕ್ಕುಪತ್ರವನ್ನು ವಜಾಮಾಡಿ 30 ವರ್ಷಗಳಿಂದ ಅನುಭವದಲ್ಲಿರುವ ಕಾಮಣ್ಣ, ದಾಳಿನರಸಪ್ಪ ಅವರಿಗೆ ಜಮೀನು ಬಿಡಿಸಿಕೊಡಬೇಕು ಹಾಗೂ ಈ ಸಂಬಂಧ ಅವರಿಗೆ ಹಕ್ಕು ಪತ್ರ ನೀಡಬೇಕು. ಏಕಾಏಕಿ ಜಮೀನಿನಲ್ಲಿ ನಿರ್ಮಾಣ ಮಾಡಿರುವ ಮನೆಯನ್ನು ತೆರವುಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ಇದರೊಂದಿಗೆ ಅಕ್ಕಾಜಿಹಳ್ಳಿ ಸರ್ವೆ ನಂಬರ್ 33 ರಲ್ಲಿ ಸಾಗುವಳಿ ಮಾಡುತ್ತಿರುವ ನಿಜವಾದ ರೈತರಿಗೆ ಭೂಮಿ ಮುಂಜೂರು ಮಾಡಿ ಕೂಡಲೇ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಸುಮಾರು 30 ವರ್ಷದಿಂದ ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿರುವ ಜಮೀನಿಗೆ ಬೇರೆಯವರು ಏಕಾಏಕಿ ಬಂದು ನಮ್ಮನ್ನು ಒಕ್ಕಲೆಬ್ಬಿಸಿದ್ದಾರೆ. ನಮ್ಮ ಜಮೀನು ನಮಗೆ ಬಿಡಿಸಿಕೊಡಿ ಎಂದು ರೈತ ಕಾಮಣ್ಣ ಉಪವಿಭಾಗಧಿಕಾರಿ ಕಾಲಿಗೆ ಬಿದ್ದು ಕಣ್ಣೀರಿಟ್ಟರು.

ರೈತರನ್ನು ಉದ್ದೇಶಿಸಿ ಮಾತನಾಡಿದ ಮಧುಗಿರಿ ಉಪವಿಭಾಗಾಧಿಕಾರಿ ಡಾ. ಕೆ. ನಂದಿನಿದೇವಿ, ಈಗಾಗಲೇ ಕಾಮಣ್ಣ ಹಾಗೂ ದಾಳಿ ನರಸಪ್ಪ ಅವರ ಸಾಗುವಳಿ ಜಮೀನು ಬೇರೆಯವರಿಗೆ ಹಕ್ಕು ಪತ್ರ ನೀಡಿರುವುದಕ್ಕೆ ಖಾತೆ ಮಾಡದಂತೆ ತಕಾರರು ಅರ್ಜಿ ಬಂಧಿದ್ದು, ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಈ ಬಗ್ಗೆ ತನಿಖೆ ಕೈಗೊಂಡು ದಾಖಲಾತಿಗಳನ್ನು ಪರಿಶೀಲಿಸಲಾಗುವುದು.

ಒಂದು ವೇಳೆ ಆ ಜಮೀನನ್ನು ಅಕ್ರಮವಾಗಿ ಮುಂಜೂರು ಮಾಡಿದ್ದರೆ ಅದನ್ನು ವಜಾ ಮಾಡಲು ಕ್ರಮವಹಿಸಲಾಗುವುದು. ಜಮೀನು ಆಕ್ರಮಿಸಿ ನಿರ್ಮಿಸಿರುವ ಮನೆಯನ್ನು ತೆರವು ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಇದರೊಂದಿಗೆ ಅಕ್ಕಾಜಿಹಳ್ಳಿ ಸರ್ವೆ ನಂಬರ್ 33 ಕ್ಕೆ ಬಂದಿರುವ ಸಾಗುವಳಿ ಅರ್ಜಿಗಳನ್ನು ಪರಿಶೀಲನೆ ನಡೆಸಿ ಸಾಗುವಳಿ ಹಕ್ಕು ಪತ್ರ ನೀಡಲು ಹಾಗೂ ಈಗಾಗಲೇ ನೀಡಿರುವ ಹಕ್ಕು ಪತ್ರಗಳನ್ನು ಖಾತೆ ಮಾಡಲು ಒಂದು ತಿಂಗಳ ಒಳಗಾಗಿ ಕ್ರಮ ವಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗೋವಿಂದರಾಜು, ಪಿಎಸ್ಐ ಎಚ್.ಮುತ್ತುರಾಜು, ಜಿಲ್ಲಾ ಕಾರ್ಯದರ್ಶಿ ರುದ್ರೇಶ್ ಗೌಡ, ತಾಲ್ಲೂಕು ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಕಾರ್ಯದರ್ಶಿ ಪ್ರಸನ್ನಕುಮಾರ್, ರೈತ ಮುಖಂಡರಾದ ಚಿಕ್ಕರಂಗಯ್ಯ, ಮಂಜುನಾಥ, ಲೋಕಣ್ಣ, ನಾಗರಾಜು, ಮಲ್ಲೇಶ್, ಬಸವರಾಜು, ರಾಘವೇಂದ್ರ, ಸಂಜೀವಯ್ಯ, ನರಸಿಂಹರಾಜು, ಗೋಪಾಲ್ ಇತರರು ಇದ್ದರು.

ರೈತರ ಪ್ರತಿಭಟನೆ ವೇಳೆ ಜಮೀನು ಕಳೆದುಕೊಂಡ ರೈತ ಕಾಮಣ್ಣ ಉಪವಿಭಾಗಾಧಿಕಾರಿ ನಂದಿನಿದೇವಿ ಅವರ ಕಾಲಿಗೆ ಬಿದ್ದು ಜಮೀನು ಬಿಡಿಸಿಕೊಡುವಂತೆ ಕಣ್ಣೀರಿಟ್ಟರು

Comment here