ತುಮಕೂರು ಲೈವ್

ಡಿ.ಕಲ್ಕೆರೆಯಲ್ಲಿ ಮಹಾನಾಯಕ ಫ್ಲೆಕ್ಸ್ ಹರಿದ ಕಿಡಿಗೇಡಿಗಳು, ಕ್ರಮಕ್ಕೆ ದಸಂಸ ಒತ್ತಾಯ

Publicstory


ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡಿ.ಕಲ್ಕೆರೆ ಗ್ರಾಮದಲ್ಲಿ ಅಳವಡಿಸಲಾಗಿದ್ದ ಮಹಾನಾಯಕ ಫ್ಲೆಕ್ಸ್ ಅನ್ನು ಹರಿದುಹಾಕಿರುವ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದ.ಸಂ.ಸ ಕೋಶಾಧಿಕಾರಿ ಡಾ.ಕೆ.ಟಿ.ಶ್ರೀನಿವಾಸ್ ಪೊಲೀಸರನ್ನು ಒತ್ತಾಯಿಸಿದರು.

ದಂಡಿನಶಿವರ ಪೊಲೀಸ್ ಠಾಣೆಯ ಎದುರು ಸುದ್ದಿಗಾರರೊಂದಿಗೆ ಮಾತನಾಡಿ, ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜೀವನ ಚರಿತ್ರೆ ಕುರಿತಾದ ಮಹಾನಾಯಕ ಧಾರಾವಾಹಿಗೆ ಶುಭಾಶಯ ಕೋರಿ ಗ್ರಾಮದಲ್ಲಿ ಫ್ಲೆಕ್ಸ್ ಅಳವಡಿಸಲಾಗಿತ್ತು.

ಸೋಮವಾರ ರಾತ್ರಿ ಯಾರೋ ಕಿಡಿಗೇಡಿಗಳು ಮಹಾನಾಯಕ ಫ್ಲೆಕ್ಸ್ ಹರಿದು ವಿರೂಪಗೊಳಿಸುವ ಮೂಲಕ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ರವರಿಗೆ ಅವಮಾನ ಮಾಡಿರುತ್ತಾರೆ.

ಈ ಘಟನೆಯಿಂದಾಗಿ ಸ್ಥಳಿಯ ನಿವಾಸಿಗಳ ನಮ್ಮ ಭಾವನೆಗೆ ಧಕ್ಕೆಯುಂಟಾಗಿರುತ್ತದೆ. ದಲಿತರ ಸ್ವಾಭಿಮಾನವನ್ನು ಕೆಣಕಿರುವ ಕಿಡಿಗೇಡಿಗಳಿಗೆ ತಕ್ಕ ಉತ್ತರ ನೀಡಲು ದ.ಸಂ.ಸ ಸಿದ್ದವಿದೆ ಎಂದು ಎಚ್ಚರಿಸಿದರು.
ತಾಲ್ಲೂಕು ದ.ಸಂ.ಸ ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ, ದಲಿತರ ಭಾವನೆಗಳನ್ನು ಕೆಣಕುವ ಕೃತ್ಯಗಳು ತೆರೆಮರೆಯಲ್ಲಿ ನಡೆಯುತ್ತಿದೆ.

ಇಂತಹ ಕಿಡಿಗೇಡಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕಾದ ಅಗತ್ಯವಿದೆ. ತಾಂತ್ರಿಕತೆಯಲ್ಲಿ ಪ್ರಗತಿ ಸಾಧಿಸಿರುವ ಈ ದಿನಗಳಲ್ಲಿ ಪೊಲೀಸರು ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ಮೂಲಕ ಕಾರ್ಯದಕ್ಷತೆಯನ್ನು ಪ್ರದರ್ಶಿಸಬೇಕು.

ಪೊಲೀಸರು ಯಾವುದೋ ರಾಜಕೀಯ ಒತ್ತಡಕ್ಕೆ ಒಳಗಾಗಿ ಈ ಪ್ರಕರಣವನ್ನು ಮೂಲೆಗುಂಪು ಮಾಡಬಾರದು ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ದಲಿತ ಮುಖಂಡರುಗಳಾದ ನಂಜಪ್ಪ, ಸುನಿಲ್, ಸುದೀಪ, ಭದ್ರಯ್ಯ, ರವೀಶ ಸೇರಿದಂತೆ ಅನೇಕರು ಇದ್ದರು.

Comment here